ದಿನಕ್ಕೊಂದು ಕಥೆ 1117

*🌻ದಿನಕ್ಕೊಂದು ಕಥೆ🌻*
*ಹುಲ್ಲು ಕಡ್ಡಿಯ ಆಸರೆ...*

ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಸರೆಯಾಗುವುದಂತೆ, ಅದು ಹೇಗೆ ಸಾಧಾರಣ ಹುಲ್ಲು ಮುಳುಗುತ್ತಿರುವವನ ಕಾಪಾಡುವುದು ಎಂದು ಹಲವು ಬಾರಿ ನಾನು ಯೋಚಿಸಿದ್ದಿದೆ. ಅಜ್ಜಿ ಕತೆ ಹೇಳುವಾಗಲೆಲ್ಲ ಈ ಒಂದು ವಾಕ್ಯವನ್ನು ನಿಯಮಿತವಾಗಿ ಹೇಳುತ್ತಲೇ ಇದ್ದರು. 

ನನಗೊ ಈ ಮಾತೇ ವಿಚಿತ್ರವಾಗಿ ತೋರುತ್ತಿತ್ತು, ಒಂದು ದಿನ ಅಜ್ಜಿಯನ್ನು ನೇರವಾಗಿ ಕೇಳಿದೆ ಹುಲ್ಲು ಹೇಗೆ ಪ್ರವಾಹದಲ್ಲಿ ಕೊಚ್ಚಿ ಹೋಗುವಾಗ ಆಸರೆ ಕೊಡಲು ಸಾಧ್ಯ ? ಮನುಷ್ಯ ಸುಲಭವಾಗಿ ಹುಲ್ಲನ್ನು ಕೀಳಬಲ್ಲವನು. ಅಂತಹವನಿಗೆ ಹುಲ್ಲು ಅದೂ ಪ್ರವಾಹದಲ್ಲಿ ಆಸರೆಯಾಗುವುದೆ ? 

ಅಜ್ಜಿ ನಕ್ಕು, 

" ನಿನಗೆ ಇದು ನಿಜವಾಗಿಯೂ ಅನುಭವಕ್ಕೆ ಬಂದಾಗ ಇದರ ಒಳಾರ್ಥ ತಿಳಿಯುವುದು " ಎಂದು ಮಾರ್ಮಿಕವಾಗಿ ನುಡಿದಿದ್ದರು. 

ಬೆಳೆಯುತ್ತ ಹೋದಂತೆ ನನಗೆ ಈ ವಾಕ್ಯ ಬಹಳ ಯೊಚನೆಗೀಡು ಮಾಡಿತ್ತು. ಕಾಲೇಜು ಡಿಗ್ರಿ ಎಂದು ಎಲ್ಲ ಮುಗಿಸುವ ಹೊತ್ತಿಗೆ ಅದನ್ನು ಮರೆತಿದ್ದೆ, ಕತೆ ಹೇಳುತ್ತಿದ್ದ ಅಜ್ಜಿ ಈಗ ಇಲ್ಲ. ಆದರೂ ಅವರು ಹೇಳಿದ ಎಲ್ಲ ವಾಕ್ಯಗಳು ನನಗೆ ಇನ್ನೂ ನೆನಪಿನಲ್ಲಿ ಉಳಿದಿವೆ. 

ನಾನು ದೊಡ್ಡ ಹೋಟೆಲೊಂದರ ಮಾಲೀಕನಾಗುವ ಕನಸು ಕಂಡಿದ್ದರಿಂದ ಅದನ್ನು ಆರಂಭಿಸಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು, ಹೋಟೆಲ್ ಮ್ಯಾನೇಜ್ ಮೆಂಟ್ ಕಲಿತಿದ್ದರಿಂದ ಮತ್ತು ಕುಕ್ಕಿಂಗ್ ನ ಕೆಲ ಕೋರ್ಸುಗಳು ನನಗೆ ಸಹಾಯಕವಾಗಿದ್ದವು. 

ನನ್ನ ಕೈಯಡುಗೆ ಎಲ್ಲರಿಗೂ ಮೆಚ್ಚುಗೆಯಾಗಿ ಬಹಳಷ್ಟು ಗ್ರಾಹಕರು ಬರುತ್ತಿದ್ದರಲ್ಲದೆ ತಮ್ಮ ಬಂಧುಗಳು ಸ್ನೇಹಿತರಿಗೂ ನಮ್ಮ ಹೋಟೆಲ್ ಬಗ್ಗೆ ತಿಳಿಸಿ ಅವರನ್ನು ಕರೆ ತರುತ್ತಿದ್ದರು. 

ಒಂದು ವರ್ಷದಲ್ಲಿ ಸಣ್ಣ ಹೋಟೆಲ್ ದೊಡ್ಡದಾಗಿ ತಲೆ ಎತ್ತಿ ನಿಂತಿತು. ನನ್ನ ಹೋಟೆಲ್ ನಲ್ಲಿ ಸಿಗುವ ಖಾದ್ಯಗಳನ್ನು ಇನ್ನಷ್ಟು ವೈವಿಧ್ಯ ಮಯವಾಗಿಸಿದೆನಲ್ಲದೆ ಹೊಸ ಹೊಸ ರುಚಿಗಳನ್ನು ತಯಾರಿಸಿ ಹೊಸ ಹೆಸರಿನಲ್ಲಿ ಉಣ ಬಡಿಸುತ್ತಿದ್ದೆ. 

ನನ್ನ ಕೈ ಕೆಳಗೆ ಹಲವಾರು ಶೆಫ್ ಗಳು ಕೆಲಸ ಮಾಡುತ್ತಿದ್ದರು ನನ್ನ ಮಾರ್ಗದರ್ಶನ ವಿಲ್ಲದೆ ಅವರು ಯಾರೂ ಕೆಲಸ ಮಾಡುತ್ತಿರಲಿಲ್ಲ. ಹಿರಿಯ ಶೆಫ್ ಮಾರ್ಗದರ್ಶಕ ಎಂಬ ಹೆಗ್ಗಳಿಕೆ ನನ್ನದಾಗಿತ್ತು. 

ಗ್ರಾಹಕರ ಮೆಚ್ಚಿನ ಹೋಟೆಲ್ ಮಾಲೀಕ ನಾನಾದೆ, ಇನ್ನೊಂದು ಬ್ರಾಂಚ್ ಕೂಡ ಬೆರೊಂದು ಜಾಗದಲ್ಲಿ ಆರಂಭಿಸಿದೆ. ಹೀಗೆ ಎರಡೆರಡು ಕಡೆ ನನ್ನ ಕೆಲಸವನ್ನು ವಿಸ್ತರಿಸಿ ಚೆನ್ನಾಗಿ ನಡೆಯುವಂತೆ ನೋಡಿಕೊಂಡೆ. 

ನಾಲ್ಕು ವರ್ಷಗಳು ಉರುಳಿದವು, ಹೋಟೆಲ್ ತೆರೆಯಲು ಪಡೆದಿದ್ದ ಲೋನ್ ಅನ್ನು ಸಮರ್ಪಕವಾಗಿ ತೀರಿಸಿದ್ದೆ. ಎಲ್ಲ ಸಾಲ ತೀರಿಸಿದವನ ಕೈಗೆ ಉತ್ತಮ ಲಾಭದ ಮೊತ್ತವೇ ಸೇರಿತ್ತು. 

ದಿನಗಳು ಹೀಗೆ ಸಾಗುತ್ತಿದ್ದರೆ ಎಷ್ಟು ಚೆನ್ನ ಎಂದು ಎನಿಸುತ್ತಿತ್ತು, ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ನನ್ನ ಜೀವನದಲ್ಲೂ ನಡೆಯಿತು. ವ್ಯವಹಾರ ಎಂದರೆ ಲಾಭ ನಷ್ಟ ಎರಡೂ ಇರುವುದೆ, ಹಾಗೆಯೇ ಈ ಹೋಟೆಲ್ ವ್ಯವಹಾರದಲ್ಲೂ ನಾನು ಇಲ್ಲಿಯ ವರೆಗೆ ಲಾಭವನ್ನೆ ಕಂಡಿದ್ದೆ. 

ಈಗ ನಷ್ಟವನ್ನು ಕಾಣುವ ಸಮಯ ಎನಿಸುತ್ತದೆ, ಇದ್ದಕ್ಕಿದ್ದ ಹಾಗೆ ನನ್ನ ಒಂದು ಬ್ರಾಂಚ್ ನಲ್ಲಿ ಬೆಂಕಿಯ ಅವಗಢ ಸಂಭವಿಸಿ ಪೀಠೋಪಕರಣಗಳು ಮತ್ತು ಅಡುಗೆ ಮನೆ ಬೆಂಕಿಗೆ ಆಹುತಿಯಾದವು. ನನ್ನ ಪುಣ್ಯಕ್ಕೆ ಯಾವ ಪ್ರಾಣ ಹಾನಿಯೂ ಆಗದೆ ಇದ್ದುದೆ ದೊಡ್ಡದು. 

ತಾತ್ಕಾಲಿಕವಾಗಿ ಹೋಟೆಲ್ ಅನ್ನು ಮುಚ್ಚಿ ದುರಸ್ತಿ ಕಾರ್ಯ ಆರಂಭಿಸಿದೆ. ಕಾರ್ಮಿಕರಿಗೆ ಎರಡು ತಿಂಗಳ ಸಂಬಳ ಕೊಟ್ಟು ನಂತರ ಬರಲು ಹೇಳಿ ಕಳುಹಿಸಿದೆ. ದುರಸ್ತಿ ಕೆಲಸದಲ್ಲಿ ಬಹಳ ಹಣ ಸಮಯ ನನ್ನದು ಹೋಗುತ್ತಿದ್ದರಿಂದ ಬೇರೊಂದು ಬ್ರಾಂಚಿನಲ್ಲಿ ಏನಾಗುತ್ತಿದೆ ಏನಿಲ್ಲ ಎಂದು ನೋಡಲು ಆಗದೆ ಅಲ್ಲಿಯೂ ನಷ್ಟವಾಗುತ್ತ ಹೋಯಿತು. 

ನಾನು ಮತ್ತೊಮ್ಮೆ ಸಾಲ ಮಾಡಬೇಕಾಯಿತು, ಮನೆಯ ಮೇಲೂ ಸಾಲ ಹೋಟೆಲ್ ಮೇಲೆ ಸಾಲ ಹೀಗೆ ಸಾಲ ಬೆಳೆಯಿತೆ ಹೊರತು ಆದಾಯ ಕಡಿಮೆಯಾಯಿತು. ದುರಸ್ತಿ ಮುಗಿಯುವ ಹೊತ್ತಿಗೆ ಇನ್ನೊಂದು ಬ್ರಾಂಚ್ ಮುಚ್ಚುವ ಹಂತಕ್ಕೆ ಬಂದಾಗ ಅನಿವಾರ್ಯವಾಗಿ ಇನ್ನೊಬ್ಬರಿಗೆ ಮಾರಾಟ ಮಾಡಿ ಸ್ವಲ್ಪ ಸಾಲ ತೀರಿಸಿದೆ. 

ಇನ್ನು ಸಾಲ ಇತ್ತು ಆದರೆ ಆದಾಯ ಗಳಿಸಲು ಬಂಡವಾಳಕ್ಕೆ ಹಣ ಸಾಕಾಗಲಿಲ್ಲ. ಈಗಾಗಲೇ ಇರುವ ಸಾಲದಿಂದಾಗಿ ಹೆಚ್ಚಿನ ಸಾಲ ಸಿಗದೆ ಕಂಗಾಲಾದೆ. ದುರಸ್ತಿ ಗೊಳಿಸಿದ ಹೋಟೆಲ್ ನಲ್ಲಿ ಏನುಂತ ಆದಾಯ ಗಳಿಸುವುದು ತಿಳಿಯದೆ ಹೋಯಿತು. 

ಬಡ್ಡಿ ಸಾಲಗಳ ನಡುವೆ ಸಿಕ್ಕು ನನ್ನ ಜೀವನ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಅನುಭವವಾಗಿ ಸೋತಂತಹ ಸ್ಥಿತಿ ತಲುಪಿದ್ದೆ. ಸೋತ ಹೆಜ್ಜೆಗಳನ್ನು ಇಡುತ್ತ ನಾನು ಡ್ಯಾಮ್ ಬಳಿಗೆ ಬಂದಿದ್ದೆ. 

ನನ್ನ ಕಷ್ಟಕ್ಕೆ ಯಾರೊಬ್ಬರ ಸಹಾಯ ಸಿಗದೆ ಇರುವಾಗ ಜೀವನಕ್ಕೆ ಆಧಾರವಿಲ್ಲದಂತಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸಿದೆ. ಡ್ಯಾಮ್ ನಲ್ಲಿ ಹರಿಯುವ ನೀರನ್ನು ನೋಡುತ್ತ ಮೈ ಮರೆತಿದ್ದೆ. ನಿಧಾನವಾಗಿ ಡ್ಯಾಮ್ ನಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಹಾರಕು ಹತ್ತಿರವಾಗುತ್ತ ಹೋದೆ... 

ಇನ್ನೇನು ನೀರಿಗೆ ಬೀಳಬೇಕು ಆಗ ನನ್ನ ಜೀವನದ ಪ್ರತಿಯೊಂದು ಹಂತವೂ ನೆನಪಾಯಿತು. ಈಗ ತನ್ನ ಜೀವನ ಸಾಲಬಡ್ಡಿಗಳೆಂಬ ಪ್ರವಾಹಕ್ಕೆ ಸಿಲುಕಿ ಅಲ್ಲೋಲ ಕಲ್ಲೋಲ ವಾಗಿದೆ. ತನಗೆ ಯಾರೊಬ್ಬರ ಆಸರೆಯೂ ಇಲ್ಲ ಎಂದು ನೆನೆದವನಿಗೆ ಕಣ್ಣಲ್ಲಿ ನೀರು ಜಿನುಗಿತು. 

ನಿಟ್ಟುಸಿರು ಬಿಟ್ಟವನು ನೀರಿಗೆ ಧುಮುಕಲು ಬಾಗುವ ಮೊದಲೇ ಯಾರೊ ನನ್ನ ಭುಜ ಹಿಡಿದು ತಡೆದರು. ಯಾರೆಂದು ನೋಡಿದಾಗ ನನ್ನ ಹಳೆಯ ಗ್ರಾಹಕರೊಬ್ಬರಿದ್ದರು, ಅವರಿಗೆ ನನ್ನ ಬಗ್ಗೆ ತಿಳಿದಿದ್ದರಿಂದ ನನಗೆ ಸಹಾಯ ಮಾಡಲು ಮುಂದಾದರು. 

" ನನ್ನ ಬಳಿ ನಿಮಗೆ ಸಹಾಯ ಮಾಡಲು ಹೆಚ್ಚು ಅಲ್ಲದೆ ಹೋದರೂ ಎರಡು ಸಾವಿರದಷ್ಟು ಹಣವಿದೆ ತೊಗೊಳಿ ಯಾವುದಾದರೂ ಸಣ್ಣದರಿಂದ ಆರಂಭಿಸಿ ಹತಾಶರಾಗ ಬೇಡಿ " ಎಂದು ಧೈರ್ಯ ತುಂಬಿದರು. 

ನಾನು ಸಂತಸದಿಂದ ಆ ಎರಡು ಸಾವಿರದಿಂದ ಕಡಲೆ ಹಿಟ್ಟು, ಎಣ್ಣೆ, ಮತ್ತಿತರ ಮಸಾಲೆ ಪದಾರ್ಥಗಳನ್ನು ಕೊಂಡು ತಂದು ದುರಸ್ತಿ ಮಾಡಿದ್ದ ಹೋಟೆಲ್ ನಲ್ಲಿ ಬಜ್ಜಿ ಬೋಂಡಾ ಮಾಡಿ ಮಾರತೊಡಗಿದೆ. ನನ್ನ ಆದಾಯ ನಿಧಾನವಾಗಿ ಹೆಚ್ಚುತ್ತ ಹೋಗಿ ಎಲ್ಲ ಸಾಲವನ್ನು ತೀರಿಸುವಂತಾದೆ. 

ಮನೆಯ ಮೇಲಿನ ಸಾಲವನ್ನು ಸಹ ತೀರಿಸಿದೆ, ಮದುವೆಯಾದೆ ಮಕ್ಕಳಾದವು... ಈಗ ಅಜ್ಜಿಯ ಆ ಮಾತು ನನಗೆ ಅಕ್ಷರಶಃ ನಿಜ ಎಂದೆನಿಸಿತು..‌ ಎಲ್ಲ ಮುಗಿಯಿತು ಸಾವು ಒಂದೇ ಎದುರಿಗಿರುವ ಪರಿಹಾರ ಎಂದು ಹೊರಟವನಿಗೆ ಬರಿ ಎರಡು ಸಾವಿರ ನನ್ನ ಸಾಲದ ಮೊತ್ತದ ಎದುರು ಒಂದು ತೃಣಕ್ಕೆ ಸಮಾನವಾದರೂ ಅದೇ ಎರಡು ಸಾವಿರದಿಂದ ಬಜ್ಜಿ ಬೋಂಡ ಮಾಡುತ್ತ ಮತ್ತೆ ಎರಡು ಮೂರು ಹೋಟೆಲ್ ಗಳ ಮಾಲಿಕನಾದೆ. 

ಇದೆ ಅಲ್ಲವೇ ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯ ಆಸರೆ ಎಂದರೆ...!

ಲೇಖಕರು: ಬನಶಂಕರಿ ಕುಲಕರ್ಣಿ 
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097