ದಿನಕ್ಕೊಂದು ಕಥೆ 1119

*🌻ದಿನಕ್ಕೊಂದು ಕಥೆ🌻*
*ಒಂದೊಂದೇ ಹೆಜ್ಜೆ*

    ಒಂದು ಹಳ್ಳಿಯ ತಪ್ಪಲಲ್ಲಿ ಒಂದು ಸುಂದರವಾದ ಬೆಟ್ಟ. ಆ ಬೆಟ್ಟದ ಮೇಲೊಂದು ದೇವಸ್ಥಾನ. ಆ ಹಳ್ಳಿಯ ಜನರಿಗೆ ಆ ಬೆಟ್ಟ ಹತ್ತು ಮೈಲಿ ದೂರದಿಂದಲೇ ಕಾಣುತ್ತಿತ್ತು. ಆ ಬೆಟ್ಟ ನೋಡಲೆಂದು ಬಹಳ ದೂರ ದೂರದಿಂದ  ಜನ ಬರುತ್ತಿದ್ದರು. ಅದನ್ನು ನೋಡಿ ಅದೇ ಹಳ್ಳಿಯಲ್ಲಿದ್ದ  ಒಬ್ಬ ಯುವಕ, ತಾನು  ಒಮ್ಮೆಯೂ ,ಆ ಬೆಟ್ಟ ಹತ್ತುವ ಪ್ರಯತ್ನವನ್ನೇ  ಮಾಡಿಲ್ಲವಲ್ಲಾ, ಎಂದುಕೊಂಡು,  ತಾನೂ  ಒಮ್ಮೆ ಆ ಬೆಟ್ಟಕ್ಕೆ ಹೋಗಿ ಬರಬೇಕು ಎಂದುಕೊಂಡ. ಆದರೆ ಇಲ್ಲೇ ಹತ್ತಿರವಿದೆಯಲ್ಲಾ  ಯಾವಾಗಲಾದರೂ ಹೋದರಾಯಿತು, ಎಂದು  ಹಾಗೇ ಮುಂದೂಡುತ್ತಿದ್ದ.

    ಆದರೆ ಒಂದು ದಿನ ಅವನಿಗೆ, ತಾನು ಎಷ್ಟು ದಿನವೆಂದು  ಹೀಗೇ ಮುಂದೂಡುತ್ತಿರುವುದು? , ಏನಾದರೂ ಆಗಲಿ, ಈ ರಾತ್ರಿ ನಾನು ಹೋಗಲೇ‌ಬೇಕೆಂದು ನಿರ್ಧರಿಸಿದ. ಬೆಳಕು ಹರಿದ ಮೇಲೆ ಬಿಸಿಲಿನ ತಾಪ ಹೆಚ್ಚಾಗುವುದೆಂದು,  ಆತ ರಾತ್ರಿ ಎರಡು ಗಂಟೆಯ ಸಮಯದಲ್ಲಿ ಎದ್ದು, ತನ್ನ ಬಳಿ ಇದ್ದ ಲ್ಯಾಟಿನ್ ಹಚ್ಚಿಕೊಂಡು , ಬೆಟ್ಟದ ಬುಡಕ್ಕೆ ಬಂದು ತಲುಪಿದ. ಬಹಳ ಕತ್ತಲೆ ಇತ್ತು .ಅದನ್ನು ಕಂಡು ಅವನಿಗೆ  ಬೆಟ್ಟ ಹತ್ತಲು ಹೆದರಿಕೆಯಾಯಿತು. ಅವನ ಮನದಲ್ಲಿ ಅನೇಕ ಚಿಂತೆಗಳು ಕಾಡ ತೊಡಗಿದವು. ತನ್ನ ಬಳಿ ಇರುವುದು ಪುಟ್ಟ ದೀಪ, ಎರಡು ಮೂರು ಹೆಜ್ಜೆಯಷ್ಟು ದೂರಕ್ಕೆ ಮಾತ್ರ ಇದರ ಬೆಳಕು ಬೀಳುವುದು, ಬೆಟ್ಟ ಹತ್ತಿ ತಲುಪಲು ಹತ್ತು ಮೈಲಿ ದೂರ ನಡೆಯಬೇಕು, ನನ್ನ ಬಳಿ ಇರುವ ಚಿಕ್ಕ ಬೆಳಕಿನಿಂದ ಅಷ್ಟು ದೂರ ಹೋಗಲು ಹೇಗೆ ಸಾಧ್ಯ? ಅಮಾವಾಸ್ಯೆಯ ಕತ್ತಲು ಬೇರೆ, ಈ ಚಿಕ್ಕ ಬೆಳಕಿನ ಸಹಾಯದಿಂದ ಅಷ್ಟು ದೂರದ ತನಕ ತನಗೆ ಹೋಗಲಾಗುವುದಿಲ್ಲ, ಸೂರ್ಯ ಹುಟ್ಟುವ ವರೆಗೂ ಕಾಯುವುದೇ ಸರಿ ಎಂದು ಅಲ್ಲಿಯೇ ಕುಳಿತ.

    ಇವನು ಹಾಗೆ ಕಾಯುತ್ತಾ ಕುಳಿತಿದ್ದಾಗ, ಅದೇ ದಾರಿಯಲ್ಲಿ ವೃದ್ಧರೊಬ್ಬರು, ಈತನ ಬಳಿ ಇರುವ ಲ್ಯಾಟಿನ್ ಗಿಂತಲೂ, ಚಿಕ್ಕದಾದ ಬುಡ್ಡಿಯ ಬೆಳಕಿನ ಸಹಾಯದಿಂದ ಬೆಟ್ಟದೆಡೆಗೆ  ನಿಧಾನವಾಗಿ ನೆಡೆಯುತ್ತಿದ್ದರು. ಈ ಯುವಕ ಅವರನ್ನು ಕರೆದು, ತಾತ, ನಿಮಗೇನಾದರೂ ತಲೆ ಕೆಟ್ಟಿದೆಯೇ!ಅದೂ ಈ ವಯಸ್ಸಿನಲ್ಲಿ ! ಹತ್ತು ಮೈಲಿ ಎಂದರೆ ಬಹಳ ಹತ್ತಿರವೆಂದು ತಿಳಿದಿದ್ದೀರಾ? ನಿಮ್ಮಲ್ಲಿರುವ ಈ  ಚಿಕ್ಕ ಬುಡ್ಡಿಯ ಬೆಳಕಿನಿಂದ, ಒಂದು ಹೆಜ್ಜೆ ಮುಂದಿಡಬಹುದು ಅಷ್ಟೇ! ಬೆಳಗಾಗುವವರೆಗೂ, ಕಾದು ಹೊರಡಿ ಎಂದು ಹೇಳಿದ. 

     ಅಯ್ಯೋ ಮೂರ್ಖ, ಒಂದು ಹೆಜ್ಜೆಗಿಂತ ಹೆಚ್ಚಿಗೆ  ಹೆಜ್ಜೆ ಯಾರಿಂದಲಾದರೂ,  ಇಡಲಾದಿತೇನು? ಬೆಳಕು ಸಾವಿರ ಮೈಲಿ ದೂರಕ್ಕೆ ಬೇಕಾದರೂ ಕಾಣಬಹುದು, ಆದರೆ ನಿನ್ನಿಂದ ಕೇವಲ ಒಂದೊಂದೇ ಹೆಜ್ಜೆ  ಇಡಲು ಮಾತ್ರ ಸಾಧ್ಯವಾಗುವುದು.  ನೀನು ಒಂದು ಹೆಜ್ಜೆ ಇಟ್ಟು , ಇನ್ನೊಂದು ಹೆಜ್ಜೆ  ಇಡುವಷ್ಟರಲ್ಲಿ, ಬೆಳಕು, ಮುಂದಿನ ಹೆಜ್ಜೆಗೆ ಬಿದ್ದಾಗಿರುತ್ತದೆ, ಹತ್ತು ಮೈಲಿ ಏನು ಮಹಾ!  ಇದೇ ರೀತಿಯಲ್ಲಿ  ಈ ವಯಸ್ಸಿನಲ್ಲಿ ನಾನು ,ಹತ್ತು ಸಾವಿರ ಮೈಲಿ ಕೂಡಾ ನಡೆಯಬಲ್ಲೆ, ಏಳು, ಏಳು!  ಯುವಕನಾಗಿ ಹೀಗೆ ಹೆದರಿ, ನೀನೇತಕ್ಕೆ ಇಲ್ಲಿ ಕುಳಿತಿರುವೆ? ನಿನ್ನ ಬಳಿ ನನಗಿಂತಲೂ ಉತ್ತಮವಾದ ಲ್ಯಾಟಿನ್ ಬೆಳಕು ಇರುವಾಗ ಹೆದರುವುದೇತಕ್ಕೆ? ನೀನು ಒಂದೊಂದೇ ಹೆಜ್ಜೆ ಇಡುವಷ್ಟರಲ್ಲಿ ಬೆಳಕು ಮುಂದಿನ ಹೆಜ್ಜೆಗೆ ಬಿದ್ದಾಗಿರುತ್ತದೆ, ಎಂದರು. 

     ವೃದ್ಧರ ಮಾತಿನಿಂದ  ಯುವಕನಿಗೆ ತನ್ನ ಆಲಸ್ಯ ಹಾಗೂ ಹೆದರಿಕೆಯ ಬಗ್ಗೆ , ನಾಚಿಕೆಯಾಯಿತು, ಲಾಟಿನ್ನಿನ ಬೆಳಕಿನಲ್ಲಿ ಒಂದೊಂದೇ ಹೆಜ್ಜೆ ಇಟ್ಟು ಬೆಟ್ಟದ ತನಕ ಮುನ್ನೆಡೆದ.

    ಜೀವನದಲ್ಲಿ  ಎಲ್ಲದಕ್ಕೂ ಮೊದಲೇ  ಲೆಕ್ಕಾಚಾರ ಹಾಕಿ , ಯಾರು  ಭಯದಿಂದ ಕುಳಿತಲ್ಲೇ ಕುಳಿತಿರುವರೋ, ಅವರು ಅಲ್ಲೇ  ಕುಳಿತಿರಬೇಕಷ್ಟೆ. ಯಾರು, ಎಷ್ಟೇ ಅಶಕ್ತರಾಗಿದ್ದರೂ ಪ್ರತಿಯೊಬ್ಬರಲ್ಲೂ ಒಂದು ಹೆಜ್ಜೆ ಇಡುವಷ್ಟು ಶಕ್ತಿ  ಇದ್ದೇ ಇರುತ್ತದೆ. ಒಟ್ಟಿಗೆ ಸಾವಿರಾರು ಹೆಜ್ಜೆ ಎತ್ತಿಡುವಷ್ಟು ಸಾಮರ್ಥ್ಯ ಇಲ್ಲದೇ  ಇರಬಹುದು. ಪ್ರಯತ್ನವನ್ನೇ ಪಡೆದೇ ಕುಳಿತಲ್ಲೇ ಕುಳಿತಿದ್ದರೆ, ಅಂತವರು ಅಲ್ಲೇ, ಹೂತು  ಹೋಗುತ್ತಾರೆ. ಯಾರು ಒಂದೊಂದೇ ಹೆಜ್ಜೆಯನ್ನು ಎತ್ತಿಡಲು  ಪ್ರಯತ್ನಿಸುತ್ತಾರೋ , ಅವರು, ನಿಧಾನವಾಗಿಯಾದರೂ , ಗುರಿಯನ್ನು ತಲುಪಿಯೇ ತಲುಪುತ್ತಾರೆ . ಏಕೆಂದರೆ ಯಾರೂ ಎರಡು ಹೆಜ್ಜೆಯನ್ನು ಒಟ್ಟಿಗೆ ಇಡಲು ಸಾಧ್ಯವಿಲ್ಲ, ಹೆದರಿ  ಕುಳಿತರೆ, ಜೀವನ ಅಲ್ಲಿಗೆ ಮುಗಿದು ಹೋಗುತ್ತದೆ.  ಧೈರ್ಯದಿಂದ ನಿಧಾನವಾಗಿಯಾದರೂ  ಮುನ್ನೆಡೆದರೆ, ಖಂಡಿತವಾಗಿ ಗುರಿಯನ್ನು ತಲುಪಲು  ಸಾಧ್ಯವಾಗುತ್ತದೆ.

 ಕೃಪೆ:ಸುವರ್ಣಾ ಮೂರ್ತಿ.
ಸಂಗ್ರಹ: ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097