ದಿನಕ್ಕೊಂದು ಕಥೆ. 1122

*🌻ದಿನಕ್ಕೊಂದು ಕಥೆ🌻*
*ವಿಶ್ವಾಸದ ಮೌಲ್ಯ*

ನಂಬಿಕೆ ಮೇಲೆ ಜಗತ್ತು ನಿಂತಿದೆ. ಒಂದು ಹಳ್ಳಿಯಲ್ಲಿ ಒಬ್ಬ ರೈತ ವ್ಯವಸಾಯ ಮಾಡಿಕೊಂಡಿದ್ದ. ಹಸು ಕರು, ಎತ್ತು ಅವನ ಬಳಿ ಇದ್ದವು. ಬಳಕೆಗೆ ಬೇಕಾದ ನೀರನ್ನು ದೂರದ ಹಳ್ಳದಿಂದ ತರಬೇಕಿತ್ತು. ಅವನು ಒಂದು ಕೋಲಿಗೆ ಎರಡು ಹಗ್ಗವನ್ನು ನೆಲುವಿನಂತೆ ಕಟ್ಟಿ ನೀರು ತುಂಬಿಸಿ ನೀರು ತುಂಬಿದ ಎರಡು ಮಡಿಕೆ ಇಟ್ಟಿರುವ ಕೋಲನ್ನು ಎರಡೂ ಭುಜದ ಮೇಲಿಟ್ಟುಕೊಂಡು ತರುತ್ತಿದ್ದ. ಒಮ್ಮೆ ಅವನು ನೀರು ತರುತ್ತಿದ್ದಾಗ ಒಂದು ಮಡಿಕೆ ಮರಕ್ಕೆ ತಗಲಿ ಒಂದು ಕಡೆ ತೂತಾಯಿತು. ಆಗಿನಿಂದ ಎರಡು ಮಡಿಕೆ ತುಂಬಾ ನೀರು ತಂದರೆ ಅವನಿಗೆ ಒಂದೂವರೆ ಮಡಿಕೆ ನೀರು ಸಿಗುತ್ತಿತ್ತು. ಆದರೂ ರೈತ ಬೇಸರಿಸದೆ ಸಂತೋಷದಿಂದ ತರುತ್ತಿದ್ದ. ಹೀಗೆ ಒಂದು ವರ್ಷ ಕಳೆಯಿತು. 

ಈ ಮಧ್ಯೆ ಚೆನ್ನಾಗಿದ್ದ ಮಡಿಕೆಗೆ ತನ್ನಿಂದ ರೈತನಿಗೆ ತುಂಬಾ ನೀರು ಸಿಗುತ್ತದೆ ಎಂದು ಜಂಬ ಬಂದಿತು, ಆದರೆ ಒಡೆದ ಮಡಿಕೆಗೆ, ನಿನ್ನಿಂದಾಗಿ ರೈತನಿಗೆ ಅರ್ಧ ಮಡಿಕೆ ಮಾತ್ರ ನೀರು ಸಿಗುತ್ತದೆ ಎಂದು ಬೇಸರ ಪಡುತ್ತಿತ್ತು. ಅದರ ನೋವನ್ನು ಮುಚ್ಚಿಟ್ಟು ಕೊಳ್ಳಲಾಗದೆ ಒಂದು ದಿನ ರೈತನ ಮುಂದೆ ನಿಂತು ತಲೆತಗ್ಗಿಸಿ ಹೇಳಿತು. ನನ್ನ ಮೇಲೆ ನನಗೆ ಜಿಗುಪ್ಸೆ ಬಂದಿದೆ ಅದಕ್ಕಾಗಿ ನಾನು ನಿನ್ನಲ್ಲಿ ಕ್ಷಮೆ ಕೇಳುತ್ತೇನೆ. ರೈತನು ಆಶ್ಚರ್ಯದಿಂದ ಯಾಕೆ ಕ್ಷಮೆ ಕೇಳುವೆ? ಯಾಕೆ ನಿನ್ನಿಂದ ಏನು ತಪ್ಪಾಗಿದೆ ಎಂದು ಕೇಳಿದ. ಮಡಿಕೆ ಹೇಳಿತು, ನೀನೊಬ್ಬ ಮುಗ್ದ ರೈತ ನಿನಗೆ ತಿಳಿದಿಲ್ಲ. ಕಳೆದ ಒಂದು ವರ್ಷದಿಂದ ನಾನು ಅರ್ಧ ಮಡಿಕೆ ನೀರನ್ನು ಮಾತ್ರ ನಿನಗೆ ಕೊಡುತ್ತಿದ್ದೇನೆ ನಿನ್ನ ಶ್ರಮವೆಲ್ಲ ವ್ಯರ್ಥವಾಗುತ್ತಿದೆ. ಇದು ನನ್ನಿಂದ ಆಗುತ್ತಿರುವ ತಪ್ಪು ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ. 

ಒಡೆದ ಮಡಿಕೆ ಹೇಳಿದ ಮಾತನ್ನು ಕೇಳಿ ರೈತನ ಮನಸ್ಸಿಗೆ ನೋವಾಯಿತು.ಬೇಸರಪಡುವಂತದ್ದು ಏನೂ ಇಲ್ಲ. ನಾಳೆ ಬೆಳಿಗ್ಗೆ ನೀನಗೊಂದು ಅದ್ಭುತ ತೋರಿಸುತ್ತೇನೆ ಎಂದನು. ಬೆಳಿಗ್ಗೆ ಎದ್ದು ನೀರು ತರಲು ಹೊರಡುವಾಗ ಒಡೆದ ಮಡಿಕೆಗೆ ಹೇಳಿದ ನಾನು ನೀರು ತುಂಬಿಸಿಕೊಂಡು ಬರುವಾಗ ನೀನು ಬರುವ ದಾರಿ ಪಕ್ಕದಲ್ಲಿ ನೋಡುತ್ತಾ ಬಾ ಎಂದನು. ನೀರು ತುಂಬಿಸಿ ತೆಗೆದು ಕೊಂಡು ಮನೆಗೆ ಹೊರಡುವಾಗ ಒಡೆದ ಮಡಿಕೆ ದಾರಿಯ ಬದಿ ನೋಡಿತು. ಅದಕ್ಕೆ ಬಹಳ ಖುಷಿಯಾಯಿತು. ಏಕೆಂದರೆ ಬಣ್ಣ ಬಣ್ಣದ ಸುಂದರವಾದ ಹೂಗಳು ಅರಳಿದ್ದು ಎಲ್ಲರನ್ನೂ ಕೈಬೀಸಿ ಕರೆಯುವಂತ್ತಿತ್ತು. ಒಡೆದ ಮಡಿಕೆಯು ಅಂದು ಆ ರಸ್ತೆ ಯುದ್ಧಕ್ಕೂ ಬಣ್ಣ ಬಣ್ಣದ ಅರಳಿದ ಸುಂದರವಾದ ಹೂವಿನ ಗಿಡಗಳನ್ನು ನೋಡುತ್ತಾ ತನ್ನ ಯೋಚನೆಗಳನ್ನು ಮರೆಯಿತು. ಆದರೆ ಮನೆಗೆ ಬಂದ ಮೇಲೆ ರೈತನಿಗೆ ತನ್ನಿಂದಾಗಿ ಅರ್ಧ ಮಡಿಕೆ ನೀರು ಮಾತ್ರ ಸಿಕ್ಕುತ್ತಿದೆ ಎಂದು ಮತ್ತೆ ಬೇಜಾರಾಯ್ತು ಅದು ರೈತನ ಮುಂದೆ ತಲೆತಗ್ಗಿಸಿ ಕುಳಿತಿತು. 

ರೈತ ಹೇಳಿದ ನೀನು ದಾರಿಯಲ್ಲಿ ಬರುವಾಗ ಸುಂದರವಾದ ಹೂ ಗಿಡಗಳನ್ನು ನೋಡಲಿಲ್ಲವೇ? ನೀನು ನಿತ್ಯವೂ ನಡೆದು ಬರುವ ರಸ್ತೆಯ ಬದಿಯಲ್ಲಿ ಎಷ್ಟೊಂದು ಹೂವುಗಳು ಅರಳಿ ನಿಂತಿವೆ. ರಸ್ತೆಯ ಇನ್ನೊಂದು ಬದಿಯಲ್ಲಿ ಯಾವುದೇ ಸಸ್ಯಗಳು ಇರಲಿಲ್ಲ. ಏಕೆಂದರೆ, ನೀನು ಪ್ರತಿನಿತ್ಯ ಪೂರ್ತಿ ನೀರು ತರಲಾಗುತ್ತಿಲ್ಲ ಎಂಬ ನಿನ್ನ ನೋವು ನನಗೆ ಅರ್ಥವಾಗಿತ್ತು. ಆದ್ದರಿಂದ ನಾನು ನೀನು ಬರುವ ಹಾದಿಯ ಎಡ ಭಾಗದ ಬದಿಗೆ ಕಳೆದ ವರ್ಷ ಹೂವಿನ ಬೀಜಗಳನ್ನು ತಂದು ಹಾಕಿದ್ದೆ. ನೀರು ತುಂಬಿಸಿಕೊಂಡು ನಿನ್ನನ್ನು ಹೊತ್ತು ತರುವಾಗ ಒಡೆದ ಜಾಗದಿಂದ ನಿನಗೆ ತಿಳಿಯದಂತೆ ಆ ಬೀಜಗಳ ಮೇಲೆ ನೀರು ಚೆಲ್ಲುತ್ತಿದ್ದೆ ಇದರಿಂದ ಬೀಜಗಳು ಮೊಳೆತು ಸಸಿಯಾಗಿ ಗಿಡವಾಗಿ ಅಷ್ಟೊಂದು ಸುಂದರವಾದ ಹೂಗಳು ಅರಳಿ ನಿಂತಿವೆ. ನಿತ್ಯ ರಸ್ತೆಯಲ್ಲಿ ಹೋಗಿ ಬರುವವರೆಲ್ಲ ಸುಂದರವಾದ ಹೂಗಳನ್ನು ನೋಡಿ ಸಂತೋಷ ಪಡುತ್ತಾರೆ ಆ ಕ್ಷಣದ ನೋವನ್ನು ಮರೆಯುತ್ತಾರೆ. ನೀನು, ಒಡೆದು ಹೋದ ಮಡಿಕೆ ನನ್ನಿಂದ ಏನು ಆಗುವುದಿಲ್ಲ ಎಂದು ಸುಮ್ಮನಿದ್ದರೆ ನಿನ್ನಿಂದ ಏನೂ ಆಗುತ್ತಿರಲಿಲ್ಲ. ಆದರೆ ನೀನು, ನನ್ನಿಂದ ಅರ್ಧ ನೀರು ಮಾತ್ರ ರೈತನಿಗೆ ಸಿಗುತ್ತದೆ ಇನ್ನು ಹೆಚ್ಚು ಸಿಗಲು ಏನು ಮಾಡ ಬೇಕು ಎಂದು ಚಿಂತಿಸುತ್ತಿದ್ದೆ. ಇದು ನಿನ್ನ ಮೌಲ್ಯವನ್ನು ಹೆಚ್ಚಿಸಿತು. ಎಂದು ರೈತ ಹೇಳಿದಾಗ ಒಡೆದ ಮಡಿಕೆಗೆ ತನ್ನ ವಿಶ್ವಾಸದ ಮೌಲ್ಯದ ಬಗ್ಗೆ ಅರಿವು ಮೂಡಿ ಹಿಗ್ಗಿತು. 

ಹೊಟ್ಟೆ ಕಿಚ್ಚು ,ದ್ವೇಷ ದುರುದ್ದೇಶಗಳಿಂದ ಕೂಡಿರುವವ, 
ಅಸಂತುಷ್ಟನಾದವ, ಮುಂಗೋಪಿ, ಸದಾ ಅನುಮಾನಪಡುವವ  
ಮತ್ತು ಇತರರ ಭಾಗ್ಯವನ್ನು ಆದರಿಸಿ ಜೀವಿಸುವವ - 
ಈ ಆರೂ ಜನರು ಸದಾ ದುಃಖದಿಂದ ಕೂಡಿರುತ್ತಾರೆ. 

ಕೃಪೆ,ಬರಹ:- ಆಶಾ ನಾಗಭೂಷಣ.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097