ದಿನಕ್ಕೊಂದು ಕಥೆ. 93
*ದಿನಕ್ಕೊಂದು ಕಥೆ*
🌼🌼🌼🌼🌼🌼
*ನಮ್ಮ ಉದ್ಧಾರ ನಮ್ಮಿಂದಲೇ*
ನಟೇಶ್ ನರ್ಸಿಂಗ್ ಹೋಮ್ ಈಗ ನಮ್ಮ ಊರಿನಲ್ಲಿ ಅತ್ಯಂತ ಪ್ರಖ್ಯಾತವಾದ ಆಸ್ಪತ್ರೆ. ಅಲ್ಲಿ ಸುಮಾರು ನೂರು ಜನ ವೈದ್ಯರು ಕೆಲಸಮಾಡುತ್ತಿದ್ದಾರೆ. ಐದು ನೂರು ಹಾಸಿಗೆಗಳನ್ನು ಹೊಂದಿದೆ ಈ ಆಸ್ಪತ್ರೆ. ಅಲ್ಲಿ ಇಂತಹ ಸೇವೆ ಇಲ್ಲವೇ ಇಲ್ಲ ಎನ್ನುವ ಹಾಗೆಯೇ ಇಲ್ಲ.
ಆಸ್ಪತ್ರೆಗೆ ಸಹಕಾರಿಯಾಗಿ ನಿಂತಿವೆ ನಟೇಶ್ ವೈದ್ಯಕೀಯ ವಿದ್ಯಾಲಯ ಹಾಗೂ ನಟೇಶ ನರ್ಸಿಂಗ್ ಕಾಲೇಜು. ಈ ಕಾಲೇಜುಗಳಲ್ಲಿ ಸೀಟು ದೊರಕುವುದೇ ಕಷ್ಟ. ಹೀಗೆಲ್ಲ ಊರೆಲ್ಲ ಹಂಚಿಕೊಂಡಿರುವ ಸಂಸ್ಥೆಗಳ ಮುಖ್ಯಸ್ಥರು ಡಾ. ನಟೇಶರವರು. ಅವರ ದೂರದರ್ಶಿತ್ವದಿಂದಲೇ ಈ ಸಂಸ್ಥೆಗಳೆಲ್ಲ ತಲೆಎತ್ತಿ ನಿಂತಿವೆ.
ಅವರು ಈಗ ಇಡೀ ಪ್ರದೇಶಕ್ಕೆ ಅತ್ಯಂತ ಗೌರವಾನ್ವಿತ ವ್ಯಕ್ತಿ, ಎಷ್ಟೋ ಜನ ಅವರನ್ನು ದೇವರೆಂದೇ ಭಾವಿಸುತಾರೆ. ಅವರು ಕೈ ಮುಟ್ಟಿದರೆ ಸಾಕು ರೋಗ ಕಡಿಮೆಯಾಗುತ್ತೆಂದು ನಂಬುತ್ತಾರೆ. ಅವರಿಗೀಗ ಸುಮಾರು ಎಪ್ಪತ್ತೈದು ವರ್ಷ. ಡಾ. ನಟೇಶ್ ಈ ಊರಿಗೆ ಬಂದು ಐವತ್ತು ವರ್ಷಗಳೇ ಕಳೆದಿವೆ.
ಇಪ್ಪತ್ತೈದು ವರ್ಷದ ನಟೇಶ ತಮ್ಮ ಎಂ.ಬಿ.ಬಿ.ಎಸ್ ಮುಗಿಸಿದಾಗ ಅವರಿಗೆ ಯಾವ ಸಹಾಯ, ಸಹಕಾರವೂ ಇರಲಿಲ್ಲ. ಅವರ ತಂದೆ ತಾಯಿ ಅನಕ್ಷರಸ್ಥರು, ಊರಿನಲ್ಲಿ ಸಣ್ಣ ಒಕ್ಕಲುತನ ಮಾಡಿಕೊಂಡಿದ್ದವರು. ಅವರಿಗೆ ಮಗನಿಗಾಗಿ ಒಂದು ಆಸ್ಪತ್ರೆ ಹಾಕಿಕೊಡುವಷ್ಟು ಸಾಮರ್ಥ್ಯವಿರಲಿಲ್ಲ.
ಆಗ ನಟೇಶ ತಮ್ಮ ಊರುಬಿಟ್ಟು ಯಾರಾದರೂ ಪ್ರಾಕ್ಟೀಸ್ ಮಾಡುವುದಕ್ಕೆ ಅವಕಾಶ ಕೊಟ್ಟಾರೆಯೇ ಎಂದು ಬೇರೆ ಬೇರೆ ಊರುಗಳಿಗೆ ಹೋಗಿ ಹಿರಿಯ ವೈದ್ಯರನ್ನು ಕಂಡು ಕೇಳಿಕೊಳ್ಳುತ್ತಿದ್ದರು.
ಯಾರೂ ಸಹಾಯ ಮಾಡಲಿಲ್ಲ. ಆಗ ನಮ್ಮ ಊರಿಗೆ ಬಂದರಂತೆ. ನಮ್ಮ ಊರಲ್ಲಿ ಡಾ. ಗುರುಪಾದಪ್ಪ ಎಂಬ ಹಿರಿಯ ವೈದ್ಯರೊಬ್ಬರಿದ್ದರು. ವಯಸ್ಸಾದ್ದರಿಂದ ಹೆಚ್ಚು ಕೆಲಸ ಮಾಡಲು ಆಗುತ್ತಿರಲಿಲ್ಲ. ಅವರಿಗೆ ಮಕ್ಕಳಿರಲಿಲ್ಲ. ತಮ್ಮ ನಂತರ ತಾವು ಆರಂಭಿಸಿದ ದವಾಖಾನೆಯನ್ನು ಏನು ಮಾಡುವುದು ಎಂದು ಯೋಚಿಸುತ್ತಿದ್ದರು.
ಆಗ ಬಂದ ನಟೇಶರನ್ನು ನಂಬಿಕೊಂಡು, ನೋಡಪ್ಪಾ, ಈ ದವಾಖಾನೆಯನ್ನೇ ನೀನು ನಡೆಸಿಕೊಂಡು ಹೋಗು. ನಿನಗೆ ಸಂಬಳ ಕೊಡಲಾರೆ. ನೀನಾಗಿಯೇ ಗಳಿಸಿಕೊಂಡದ್ದೇ ನಿನ್ನ ಸಂಬಳ. ಆಗಬಹುದೇ ಎಂದು ಕೇಳಿದರು. ಈ ಅವಕಾಶ ಭಗವಂತನ ಕೃಪೆ ಎಂದೇ ಭಾವಿಸಿದರು ನಟೇಶ.
ನಂತರ ಅತ್ಯಂತ ಶ್ರಮವಹಿಸಿ ಕೆಲಸ ಮಾಡತೊಡಗಿದರು ನಟೇಶ್. ಊರಿಗೆ ಹೊಸಬನಾದ ಈ ಹುಡುಗನ ಮೇಲೆ ಯಾರು ನಂಬಿಕೆ ಇಟ್ಟಾರು. ಆಗ ಡಾ. ನಟೇಶ ಮಾಡಿದ ಸೃಜನಶೀಲ ಪ್ರಯೋಗ ಅದ್ಭುತ.
ಯಾರದಾರೂ ಮನೆಯಲ್ಲಿ ಅನಾರೋಗ್ಯವಾಗಿದ್ದರೆ ತಾವೇ ಅವರ ಮನೆಗೆ ಹೋಗುವುದಾಗಿ ತಿಳಿಸಿದ್ದರು. ಆಗ ರೋಗಿಗಳ ಮನೆಗೆ ನೇರವಾಗಿ ಹೋಗದೇ ಅವರ ಪಕ್ಕದವರ ಮನೆಗೆ ಹೋಗಿ ರೋಗಿಯ ಮನೆ ಇದೇನಾ ಎಂದು ಕೇಳುತ್ತಿದ್ದರು.
ಆಗ ಅವರು ಪಕ್ಕದವರ ಮನೆಯನ್ನು ತೋರಿಸುವರು. ಆಗಲೂ ಇವರು ರೋಗಿಯ ಮನೆಗೆ ಹೋಗದೇ ಇನ್ನೊಂದು ಪಕ್ಕದ ಮನೆಗೆ ಹೋಗುವರು ಅಂದರೆ ಒಬ್ಬರ ಮನೆಗೆ ಹೋಗಬೇಕಾದಾಗ ಮೂರು ಮನೆಗೆ ಹೋಗಿ ಜನರನ್ನು ಕಾಣುವರು.
ತಮ್ಮ ಮೃದುಮಾತುಗಳಿಂದ, ವಿಶ್ವಾಸದಿಂದ ಮಾತನಾಡಿ ಅವರ ಪ್ರೀತಿಯನ್ನು ಗೆಲ್ಲುವರು. ಹೀಗೆ ಆರು ತಿಂಗಳಾಗುವುದರೊಳಗೆ ಊರಿನ ಜನರೆಲ್ಲರ ಪ್ರೀತಿಯನ್ನು ಗಳಿಸಿ ದವಾಖಾನೆಯನ್ನು ದೊಡ್ಡದನ್ನಾಗಿ ಮಾಡಿದರು.
ಮುಂದೆ ಎರಡು ವರ್ಷಗಳಲ್ಲಿ ಡಾ! ಗುರುಪಾದಪ್ಪ ತೀರಿಕೊಂಡರು. ನಟೇಶರವರು ತಮ್ಮ ಸಹಾಯಕ್ಕಾಗಿ ಇನ್ನೊಂದಿಬ್ಬರು ವೈದ್ಯರನ್ನು ನಿಯಮಿಸಿಕೊಂಡು ನಂತರ ತಾವು ಮತ್ತೆ ಉನ್ನತ ಶಿಕ್ಷಣ ಪಡೆಯಲು ಬೇರೆ ದೇಶಕ್ಕೆ ಹೋಗಿ ಬಂದರು.
ನಂತರ ಆಸ್ಪತ್ರೆ ಬೆಳೆದದ್ದು ಪವಾಡ. ಅದರೊಂದಿಗೆ ಮೆಡಿಕಲ್ ಕಾಲೇಜು ಮತ್ತಿತರ ಸಂಸ್ಥೆಗಳು ಬಂದವು. ಆದರೆ, ಡಾ ನಟೇಶ ಮಾತ್ರ ಊರಿನ ಪ್ರತಿಯೊಬ್ಬರ ವಿಶ್ವಾಸ ಗಳಿಸುತ್ತಲೇ ಬೆಳೆದರು, ತ್ರಿವಿಕ್ರಮನಾದರು.
ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಡಾ ನಟೇಶ ಉದಾಹರಣೆಯಾಗುತ್ತಾರೆ. ನಮಗೆ ಸಹಾಯ ಮಾಡುವವರು ಯಾರೂ ಇಲ್ಲ ಎಂದು ಗೊಣಗಿಕೊಂಡು ನಿರಾಸೆಯ ಹೊದಿಕೆ ಹೊದ್ದು ಮರೆಯಾಗುವವರೇ ಹೆಚ್ಚು ಜನ. ನಮ್ಮ ಉದ್ಧಾರ ನಮ್ಮಿಂದ ಮಾತ್ರ ಸಾಧ್ಯ ಎಂದು ಉತ್ಸಾಹದಿಂದ ಇರುವ ಸವಲತ್ತುಗಳನ್ನೇ ಬಳಸಿಕೊಂಡು ನಡೆದರೆ ಎಂಥ ಎತ್ತರದ ಸ್ಥಾನವನ್ನಾದರೂ ತಲುಪಬಹುದು.
ನಮ್ಮಲ್ಲಿ ಇರುವುದು ಎರಡೇ ತರಹದ ಜನ. ಒಬ್ಬರು ಸದಾ ಗೊಣಗುತ್ತ ಕೊರಗುವವರು. ಮತ್ತೊಬ್ಬರು ಮುನ್ನುಗ್ಗಿ ಸಾಧಿಸುವವರು. ಎರಡನೆಯ ಗುಂಪಿನ ಜನರಿಂದ ಸಮಾಜದ, ದೇಶದ ಅಭಿವೃದ್ಧಿಯಾಗುತ್ತದೆ.
🌹🌹🌹🌹🌹
*ಕೃಪೆ:ಕರುಣಾಳು ಬಾ ಬೆಳಕೆ*
*ಸಂಗ್ರಹ:ಕೆ.ಎಂ.ಶಿವಶಂಕರಯ್ಯ*
ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment