ದಿನಕ್ಕೊಂದು ಕಥೆ 1125

*🌻ದಿನಕ್ಕೊಂದು ಕಥೆ🌻*
  *ಮಕ್ಕಳ ಮೇಲಿನ ವ್ಯಾಮೋಹ*

*ಪತಿಯ ಜೊತೆ 46 ವರ್ಷದ ಸುಧೀರ್ಘ ದಾಂಪತ್ಯದಲ್ಲಿ, ಪತಿಯನ್ನು ಪ್ರೀತಿಸುತ್ತಿದ್ದರು, ಗೌರವಿಸುತಿದ್ದರು ಜೊತೆಗೆ 72 ವರ್ಷದ ಶಾರದಮ್ಮ ಕೆಲವು  ವಿಷಯಗಳ ಬಗ್ಗೆ ರಾಜಿ ಮಾಡಿಕೊಳ್ಳದೆ ಗಲಾಟೆ ಕೂಡಾ ಮಾಡುತಿದ್ದರು.* 

*ಒಬ್ಬ ಮಗ ಒಬ್ಬ ಮಗಳು ಇಬ್ಬರೂ ಓದಿ ಲಂಡನ್ ಅಲ್ಲಿ ಸೆಟಲ್  ಆಗಿದ್ದರು. ಮಕ್ಕಳಿಗೆ ಎಷ್ಟೇ ಆಚಾರ ವಿಚಾರ ಕಲಿಸಿದರೂ ಅವರ ವಿದ್ಯೆಗನುಗುಣವಾದ ಕೆಲಸ ಹುಡುಕುತ್ತಾ ದೇಶ ಬಿಡುವುದು ಅನಿವಾರ್ಯವಾಗಿತ್ತು. ಮೊದ ಮೊದಲು ಮಕ್ಕಳು ಲಂಡನ್ ಅಲ್ಲಿರುವುದು ಪ್ರತಿಷ್ಠೆಯ ವಿಷಯವಾದರೆ ಇಗೀಗ ಎಲ್ಲೋ ಎಡವಿದ್ದೇವೆ ಎನ್ನುವ ಅರಿವಾಗುತ್ತಿತ್ತು ವೃದ್ಧ ದಂಪತಿಗಳಿಗೆ . ಮೊನ್ನೆ ಆಸ್ತಿಯ ವಿಷಯಕ್ಕೆ ಮನೆಯಲ್ಲಿ ದೊಡ್ಡ ಗಲಾಟೆಯೇ ಆಗಿತ್ತು. ಮಕ್ಕಳಿಬ್ಬರೂ 6 ಕೋಟಿಯ ಆಸ್ತಿ 2 ಪಾಲು ಮಾಡಿ ಇಬ್ಬರಿಗೆ ಕೊಡಿ, ಅಮ್ಮ ಮಗಳ ಮನೆಯಲ್ಲಿ ಅಪ್ಪ ಮಗನ ಮನೆಯಲ್ಲಿ  ಹಾಯಾಗಿ ಇರಬಹುದು ಎಂದಾಗ 80 ವರ್ಷದ ಅಪ್ಪ ಮರು ಮಾತಾಡದೆ  ಒಪ್ಪಿಕೊಂಡು ಬಿಟ್ಟರು. ಆದರೆ ಶಾರದಮ್ಮ ಒಪ್ಪಿರಲಿಲ್ಲ. ಆಸ್ತಿ 4 ಪಾಲು ಮಾಡಿ ಇಬ್ಬರೂ ಮಕ್ಕಳಿಗೆ ಒಂದೊಂದು ನಮ್ಮಿಬ್ಬರಿಗೆ ಒಂದೊಂದು ಇರಲಿ. ನಮ್ಮಿಬ್ಬರ ಕಾಲದ ಮೇಲೆ ಮಗ ಮಗಳಿಗೆ ವಿಲ್ ಬರೆದಿಡುವ ಎನ್ನುವುದು ಆಕೆಯ ವಾದವಾಗಿತ್ತು.*

*ಇದಕ್ಕೆ ಗಂಡ ಒಪ್ಪಿರಲಿಲ್ಲ ನನಗೆ ನನ್ನ ಮಕ್ಕಳ ಮೇಲೆ ನಂಬಿಕೆ ಇದೇ ಹಾಗೇ ಹೀಗೇ ಎಂದು ಗಲಾಟೆ ಮಾಡಿದ್ದರು. ಮಕ್ಕಳೂ ವಿರೋಧ  ವ್ಯಕ್ತ ಪಡಿಸಿದ್ದರು. ಕೊನೆಗೂ ಶಾರದಮ್ಮ ಹಠ ಬಿಡದಾಗ ಆಸ್ತಿಯನ್ನು 2 ಕೋಟಿ ಗಳಂತೆ 3 ಸಮ ಪಾಲು ಮಾಡುವುದಾಗಿ ನಿರ್ಧರಿಸಲಾಯಿತು. ಮಗಳಿಗೆ ಒಂದು ಪಾಲು ಮಗನಿಗೆ ಒಂದು ಪಾಲು, ಶಾರದಮ್ಮನಿಗೆ ಒಂದು ಪಾಲು. ಅಪ್ಪ 6 ತಿಂಗಳು ಲಂಡನ್ ಅಲ್ಲಿ ಮಗನ ಜೊತೆ ಇನ್ನೂ 6 ತಿಂಗಳು ಮಗಳ ಜೊತೆ ಎಂದು ಫೈನಲ್ ಮಾಡಿ ಆಸ್ತಿ ಪಾಲು ಮಾಡಲಾಯಿತು. ಮಕ್ಕಳ ಮುಖದಲ್ಲಿ ಮಂದಹಾಸವಿದ್ದರೆ ಯಜಮಾನರ ಮುಖದಲ್ಲಿ ಮುಂದಿನ ಜೀವನವನ್ನು ಲಂಡನ್ ನಲ್ಲಿ ಕಳೆಯುವ ಕನಸಿತ್ತು. ಇಲ್ಲೂ ತಮ್ಮ ಹಠ ಬಿಡದ ಶಾರದಮ್ಮ ವಿಲನ್ ಆಗಿದ್ದರು..*

 *ತಮ್ಮ ಗಂಡ 80 ರ ಇಳಿ ವಯಸ್ಸಲ್ಲಿ, ತಮ್ಮೆಲ್ಲ ಆಸ್ತಿ ಮಕ್ಕಳಿಗೆ ಹಂಚಿ, ಬರೆಯ ತೋಳಿಲ್ಲದ ಟೀ ಶರ್ಟ್ ಹಾಕಿ ಲಂಡನ್ ಗೆ ಹೋಗುವುದು ನೋಡಲು ಸಂಕಟವಾಗುತಿತ್ತು ಅವರಿಗೆ. ಇಷ್ಟು ದಿನ ಒಟ್ಟಿಗಿದ್ದ ತನ್ನವರನ್ನು ಕಳಿಸಲು ಮನಸ್ಸೇ ಬಂದಿರಲಿಲ್ಲ. ಆದರೆ ಮಗ ಮಗಳು ಅದಾಗಲೇ ತಾಯಿಯನ್ನು ವಿಲನ್ ಮಾಡಿ ಬಿಟ್ಟಿದ್ದರು. ತಾಯಿಯನ್ನ ಬಿಟ್ಟ ಅಪ್ಪ, ಹೋಗಿ ಬರುತ್ತೇನೆ ಎಂದು ಒಂದು ಮಾತೂ ಆಡದೆ ಮಕ್ಕಳ ಜೊತೆ ಲಂಡನ್ ಪಯಣ ಮಾಡಿದ್ದು ನೋಡುತಿದ್ದಂತೆ ಕಣ್ಣುಗಳು ಮಂಜಾಗಿದ್ದವು..  ಉಕ್ಕಿ ಹರಿಯುತಿದ್ದ ಕಣ್ಣೀರನ್ನು ಸೆರಗಲ್ಲಿ  ಮರೆಯಾಗಿಸಿದರು. ಮಕ್ಕಳ ಬಗ್ಗೆ ಅಲ್ಲ ತನ್ನ ಪತಿಯ ಬಗ್ಗೆ ಅಳುವಿತ್ತು ಆಕೆಗೆ. ದಿನಕ್ಕೆ 20 ಬಾರಿಯಾದರೂ ಶಾರೂ ಶಾರೂ ಎನ್ನುವ ಅವರ ಸ್ವರವಿಲ್ಲದೆ ಹೇಗಿರಲಿ ಎಂಬುದು ಆಕೆಯ ಚಿಂತೆಯಾಗಿತ್ತು.* *ಇನ್ನು ಆಕೆ ಒಬ್ಬಂಟಿಯಾಗಿ ಇರಲೇಬೇಕಿತ್ತು. ತಾನು ಮಾಡಿದ್ದು ತಪ್ಪ? ಸರಿಯಾ?ಗೊತ್ತಿಲ್ಲ ಆದರೂ ಈಗ ನಿತ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರು ಅವರು. ಹೀಗೇ 5 ತಿಂಗಳು ಕಳೆದಿತ್ತು. ಒಂದೆರಡು ಕಾಲ್ ಮಾತ್ರ ಮಾಡಿದ್ದರು ಈ ವರೆಗೆ. ಅಂದು ರಾತ್ರಿ 10 ಗಂಟೆಗೆ ಲಂಡನ್ ನಿಂದ ಕಾಲ್ ಬಂದಿತ್ತು. ಶಾರದಮ್ಮ ಹಲೋ ಎಂದರು... ಅಲ್ಲೊಂದು ಯಾರೂ ಊಹಿಸಿರದ ಹೃದಯ ವಿದ್ರಾವಕ ವಿಷಯ ವಿತ್ತು...*

*ಗಂಟೆ ಮದ್ಯಾಹ್ನ 12. ಲಂಡನ್ ನಲ್ಲಿ ಇಷ್ಟೊತ್ತಿಗೆ ರಾತ್ರಿ. ಈ ಸಮಯದಲ್ಲಿ ಎಂದೂ ಮಾಡದ ಕಾಲ್ ಮಾಡಿದ್ದರು. ಏನೋ ಆಶ್ಚರ್ಯದಿಂದ ಮೊಬೈಲ್ ನೋಡಿದರು ಶಾರದಮ್ಮ.  ಮತ್ತೆ ಆಶ್ಚರ್ಯವಾಗಿತ್ತು ಅದು ವಿಡಿಯೋ ಕಾಲ್ ಆಗಿತ್ತು. ಕಾಲ್ ಅಟೆಂಡ್ ಮಾಡಿದರೆ  ವಿಡಿಯೋದಲ್ಲಿ ದೃಶ್ಯ ನೋಡಿ ಹೌಹಾರಿ ಹೋದರು ಶಾರದಮ್ಮ.. ಆವರ ಪತಿ ಕತ್ತಿಗೆ ಉರುಳು ಹಾಕಿ ಕೊಂಡು ಕಣ್ಣೀರಿನಿಂದ ಮಾತಾಡುತಿದ್ದರು. ತಮ್ಮ ರೂಮೊಳಗೆ ಹೆದರಿಕೊಂಡು ಮೆಲ್ಲಗೆ ಮಾತಾಡುತಿದ್ದರು...* *"ಶಾರೂ ನನ್ನ ಕ್ಷಮಿಸಿ ಬಿಡು. ನಾನು ತಪ್ಪು ಮಾಡಿ ಬಿಟ್ಟೆ. ಇದು ನನ್ನ ಕೊನೆಯ ಕಾಲ್ ಮಕ್ಕಳು ಮಲಗಿದ್ದಾರೆ ಮೆಲ್ಲಗೆ ಅವರ ಫೋನ್ ಕದ್ದು ನಿನಗೆ ಫೋನ್ ಮಾಡುತಿದ್ದೇನೆ. ನನ್ನ ಕ್ಷಮಿಸಿ ಬಿಡು" ಎಂದಿದ್ದರು ಕಣ್ಣೀರು ಹಾಕಿಕೊಂಡು.. ಪತಿಯ ಕಣ್ಣಲ್ಲಿ ನೀರು ನೋಡಿ "ಏನಾಯಿತು ರಿ ಹೇಳಿ ಏನಾಯಿತು?" ಎಂದರು ಶಾರದಮ್ಮ. ಆತಂಕವಿತ್ತು ಅವರ ಮಾತಲ್ಲಿ.*

*"ನಾನು ಮೋಸ ಹೋಗಿ ಬಿಟ್ಟೆ ಕಣೆ. ಮಕ್ಕಳ ಮೇಲಿನ ಅತಿಯಾದ ಅಭಿಮಾನ ನನ್ನನ್ನು ಹುಚ್ಚನನ್ನಾಗಿಸಿದೆ. ನನ್ನ ಹುಚ್ಚು ನಿರ್ಧಾರ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಇಲ್ಲ ಇನ್ನು 1 ದಿನ ಕೂಡಾ ಇಲ್ಲಿರಲಾರೆ." ಎನ್ನುವಾಗ ಅವರ ಧ್ವನಿಯಲ್ಲಿ ಅಳು, ಅಂಜಿಕೆ ಎಲ್ಲವೂ ಉಕ್ಕಿ ಬರುತ್ತಿತ್ತು ಅಲ್ಲಿ .*

*ಅಲ್ಲಿ ಕರಾಳ ಕಥೆಯೊಂದು ತೆರೆದು ಕೊಂಡಿತ್ತು. ..*
*"ಶಾರೂ ಮನೆಯಿಂದ ಹೋದ ನಾನು ಖುಷಿಯಲ್ಲಿದ್ದದ್ದು ಒಂದು ವಾರ ಮಾತ್ರ. ಅಲ್ಲೀತನಕ ನನ್ನ ಮಗ, ನನ್ನ ಮಗಳು ಎಂದು ಇದ್ದ ನನ್ನ ಆ ಸಡಗರ 7 ದಿನಗಳಲ್ಲೇ ಕಡಿಮೆ ಆಗಹತ್ತಿತು. ಮೊದಲು ಮಗನ ಮನೆಯಲ್ಲಿ ಮಗ ಉಲ್ಟಾ ಮಾತಾಡಲು ಆರಂಭಿಸಿದ್ದ. ನಂತರ ಸೊಸೆ ನಿರ್ಲಕ್ಷಿಸಲು ಆರಂಭಿಸಿದಳು. ನಂತರ ಮೊಮ್ಮಕ್ಕಳು ಕೂಡಾ ನಿರ್ಲಕ್ಷಿಸಲು ಆರಂಭಿಸಿದರು. ಬರ ಬರುತ್ತಾ ನಾನು ಅಲ್ಲಿ ಪರಕೀಯನಾಗಿಬಿಟ್ಟಿದ್ದೆ. ನನ್ನ ಸ್ಥಾನ ಮನೆಯ ಮೂಲೆಯಲ್ಲಿದ್ದ ಒಂದು ರೂಮಿಗೆ ಸೀಮಿತವಾಯಿತು. ಹೊರಗೆ ಬರದಂತೆ ನಿರ್ಬಂದಿಸಲಾಯಿತು. ಕ್ರಮೇಣ ಊಟ, ತಿಂಡಿ ಎಲ್ಲದಕ್ಕೂ ತಟ್ಟೆ ಹಿಡಿದು ಕೈದಿಗಳಂತೆ ಬರಬೇಕು ಎಂಬ ನಿಯಮ ಬಂತು. ನಂತರ ಬಹಳ ಹೊತ್ತು ಕಾಯಿಸಿ ಊಟ ನೀಡಲಾಯಿತು. ಮೊಬೈಲ್ ನಿರ್ಬಂದಿಸಲಾಯಿತು. ಕೊನೆ ಕೊನೆಗೆ ಮನೆ ಒಳಗೆ ನನ್ನ ರೂಮ್ ಒಳಗೆ ಬೀಗ ಹಾಕಿ ಹೋಗಲು ಆರಂಭಿಸಿದರು. ತಂದೆಯ ಮನೆಯಲ್ಲಿ ಮಗನಿಗಿದ್ದ ಸ್ವತಂತ್ರ್ಯ ಮಗನ ಮನೆಯಲ್ಲಿ ತಂದೆಗಿರಲಿಲ್ಲ.*

*ನನ್ನ ಔಷದ ಕೂಡಾ ಹೇಳಿ ವಾರ ಕಳೆದ ನಂತರ ಸಿಗುತಿತ್ತು.*
*ಮಗಳ ಮನೆಯಲ್ಲoತೂ ಪರಿಸ್ಥಿತಿ ಇನ್ನೂ ಕೆಟ್ಟದಿತ್ತು. ಊಟಕ್ಕೆ ಪ್ಲೇಟ್ ಹಿಡಿದು ಕೈದಿಯಂತೆ ಗಂಟೆ ಕಟ್ಟಲೆ ಆಕೆ ಎದುರು ನಿಲ್ಲಬೇಕಿತ್ತು. ಅಳಿಯ ಮೊಮ್ಮಕ್ಕಳ ಊಟ ಆಗುವ ತನಕ ಕಾಯಬೇಕಿತ್ತು. ಮಾತಿಗೂ ಸ್ವಾತಂತ್ರ್ಯವಿಲ್ಲ. ಪ್ರತಿ ದಿನ ಬೈಗುಳ, ವ್ಯಂಗ್ಯ ಮಾತುಗಳನ್ನು ಕೇಳಬೇಕಾಗಿತ್ತು. ನಾನು ನನ್ನ ಎಲ್ಲಾ ಆಸ್ತಿ ಕೊಟ್ಟೂಅಷ್ಟು ಬೈಗುಳ ತಿನ್ನುತ್ತಿದ್ದೇನೆ ಇನ್ನೂ ಏನೂ ಆಸ್ತಿ ಕೊಡದ ನಿನಗೆ ಏನೆಲ್ಲ ಕೆಟ್ಟ ಪದ ಉಪಯೋಗಿಸುತ್ತಾರೆಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಶಾರೂ ಇವರೇನಾ ನಮ್ಮ ಮಕ್ಕಳು? ಎನ್ನುವಂತಾಗಿದೆ ನನಗೆ. ಮೊಬೈಲ್ ಅಂತೂ ಕೊಡುವುದಿಲ್ಲ ನನಗೆ ಕೊಟ್ಟರೆ ನಾನೆಲ್ಲಿ ಇಲ್ಲಿಯ ಪರಿಸ್ಥಿತಿ ನಿನಗೆ ಹೇಳಿ ಬಿಡುವೇನೋ ಎಂಬ ಭಯ ಇವರಿಗೆ , ಅದಿಕ್ಕೇ ಮೊಬೈಲ್ ಕದ್ದು ಮಾತಾಡುತ್ತಿದ್ದೇನೆ ದಯವಿಟ್ಟು ನನ್ನ ಕ್ಷಮಿಸು ಎಂದವರೇ ಕತ್ತಲ್ಲಿದ್ದ ನೇಣು ಗಟ್ಟಿ ಮಾಡುತಿದ್ದರು "..* *ಇದುವರೆಗೆ ಶಾಂತವಾಗಿದ್ದ ಶಾರದಮ್ಮ ಈಗ ರಣ ಚಂಡಿಯಾಗಿದ್ದರು. ಇನ್ನೂ ಏನಾದರೂ ಮುಂದುವರಿದರೆ ನನ್ನ ಮೇಲೇ ಆಣೆ ಎಂದುಬಿಟ್ಟರು. ಈ ಬಾರಿ ನೇಣಿನ ಕುಣಿಕೆ ಸಡಿಲು ಮಾಡುವುದು ಅನಿವಾರ್ಯ ವಾಗಿತ್ತು ರಾಯರಿಗೆ.* *ಮತ್ತೆ ಹೇಳಿದರು "ಈ ಇಳಿ ವಯಸ್ಸಲ್ಲಿ ನನಗ್ಯಾರಿದ್ದಾರೆ. ಇದ್ದ ಎಲ್ಲಾ ಆಸ್ತಿ ಬರೆದು ಕೊಟ್ಟಾಗಿದೆ ನಾನೀಗ ಭಿಕಾರಿ " ಎಂದು ಬಿಕ್ಕಿ ಬಿಕ್ಕಿ ಅತ್ತರು.* 
*ತಮ್ಮ ಕಣ್ಣೆದುರೇ ಪತಿ ಅಳುವಾಗ ಶಾರದಮ್ಮರ ಕರುಳು ಹಿಚುಕಿದಂತಾಗಿತ್ತು .*

*"ನಾನು ಯಾರು ನಿಮಗೆ?" ಮತ್ತೆ ಕೇಳಿದರು ಶಾರದಮ್ಮ..* *"ನಾನಿರುವಾಗ ನೀವು ಭಿಕಾರಿ ಹೇಗಾಗುತ್ತೀರಿ?" ಎನ್ನುವಾಗ ಆಕೆಯ ಸ್ವರ ಗಟ್ಟಿಯಾಗಿತ್ತು. ಇದೆಲ್ಲ ನನಗೆ ಗೊತ್ತಿದ್ದೇ ನಾನು ಆಸ್ತಿಯಲ್ಲಿ ಒಂದು ಪಾಲು ಇಟ್ಟು ಕೊಂಡಿದ್ದು. ನಿಮಗೂ ಅರ್ಥವಾಗಲಿ ಎಂದು ಸುಮ್ಮನಿದ್ದೆ ಇಷ್ಟು ದಿನ. ನೆನಪಿದೆಯೇ ಅಂದು ಸಪ್ತಪದಿ ತುಳಿಯುವಾಗ ಹೇಳಿದ್ದ ಮಾತು. ಸುಖ ದುಃಖದಲ್ಲಿ ಪಾಲುದಾರನಾಗುತ್ತೇನೆ ಎಂದು ಪ್ರತಿಜ್ಞೆ ಮಾಡಿರುವಾಗ ನಿಮ್ಮ ದುಃಖದಲ್ಲಿ ನಾನು ನಿಲ್ಲದೇ ಇರುತ್ತೇನೆಯೇ? ನಿಮ್ಮ ಮಕ್ಕಳಂತೆ ನಾಟಕ ಮಾಡುವ ವ್ಯಕ್ತಿ ನಾನಲ್ಲ. ನೋಡಿ ಮನೆ ಇದೆ. ಜೊತೆಗೆ 1 ಕೋಟಿಗೂ ಮಿಕ್ಕಿ ಆಸ್ತಿ ಇನ್ನೂ ನನ್ನ ಹೆಸರಲ್ಲಿ ಇದೆ. ಹೋದದ್ದು ಹೋಗಲಿ ನಾಳೆಯೇ ನನ್ನ ಹೆಸರಿನ ಅಷ್ಟೂ ಅಸ್ತಿಯನ್ನು ನಿಮ್ಮ ಹೆಸರಿಗೆ ಬರೆಯುತ್ತೇನೆ. ಇದೆಲ್ಲ ನೀವು ಕೊಟ್ಟ ಭಿಕ್ಷೆ ನೀವು ಭಿಕಾರಿಯಾಗಲು ಸಾಧ್ಯವೇ ಇಲ್ಲ. 1 ಕೋಟಿಯ ಜಾಗ ಮಾರಿ ಬ್ಯಾಂಕಲ್ಲಿಟ್ಟು ಸಿಗುವ ಬಡ್ಡಿ ಇಂದ ರಾಜ ರಾಣಿ ತರ ಬದುಕೋಣ. ಹೇಗೂ ಮನೆ ತೋಟ ಇದೆ ನಮ್ಮ ಬಳಿ. ನಾಳೆಯೇ ನಿಮ್ಮನ್ನೂ ಅಲ್ಲಿಯ ಬಾರತೀಯ ಅಂಬಾಸಿಡರ್ ಅಲ್ಲಿರುವ ನನ್ನ ಗೆಳತಿಗೆ ಫೋನ್ ಮಾಡಿ ಭಾರತಕ್ಕೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡುತ್ತೇನೆ. ನೀವು ಎಲ್ಲೂ ಯಾರ ಎದುರೂ ತಲೆ ತಗ್ಗಿಸಬಾರದು. ಕತ್ತಲು ಕಳೆದ ತಕ್ಷಣ ಹೊಸ ಹಗಲು, ಹೊಸ ಬೆಳಕು ಬರುತ್ತದೆ ತಾಳ್ಮೆ ಇರಲಿ ಎಂದಾಗ ರಾಯರ ಅಳು ಮಾಯವಾಗಿತ್ತು..*

*ಮುಂದಿನ ವಾರದೊಳಗೆ ಎಲ್ಲವೂ ಬದಲಾಗಿತ್ತು. ರಾಯರು ಮನೆಗೆ ವಾಪಸ್ ಬಂದಿದ್ದರು, ಹೇಳಿದಂತೆ 1 ಕೋಟಿ ಜಾಗ ಮಾರಿ ಬ್ಯಾಂಕ್ ಅಲ್ಲಿ ಇಡಲಾಯಿತು, ಬಡ್ಡಿ ತಿಂಗಳಿಗೆ ರಾಜ  ರಾಣಿಯರಂತೆ ಬದುಕಲು ಸಾಕಿತ್ತು. ಸಮೀಪದ ವೃದ್ಧಾಶ್ರಮದ ವೃದ್ಧರೊಂದಿಗೆ ಊಟ, ಆಟ, ಹರಟೆ, ಪಿಕ್ನಿಕ್ ಎಲ್ಲವೂ ಇವರ ಬಡ್ದಿದುಡ್ಡಲ್ಲೇ ನಡೆಯುತ್ತಿತ್ತು. ನಾಳೆ ತಮ್ಮನ್ನು ಮಣ್ಣು ಮಾಡುವ ಜವಾಬ್ದಾರಿಯನ್ನೂ ಅವರಿಗೆ ವಹಿಸಿ ಕೊಟ್ಟಿದ್ದರು. ತಮ್ಮ ಕಾಲಾ ನಂತರ ತಮ್ಮ ಆಸ್ತಿಯನ್ನು ಅದೇ ವೃದ್ಧಾಶ್ರಮಕ್ಕೆ ವಿಲ್ ಬರೆದಿಟ್ಟರು. ಪಾಪಿ ಮಕ್ಕಳಿಗೆ ಒಂದೇ ಒಂದು ಶಾಪ ಹಾಕದೆ, ಮಕ್ಕಳೇ ಇಲ್ಲ ಎಂಬಂತೆ ಬದುಕಿದರು ಮುಂದಿನ ಒಂದಿಷ್ಟು ವರುಷ. ಮಕ್ಕಳಿಗೆ ಮತ್ತೆ ತಂದೆ ತಾಯಿಯರಿಗೆ ಮುಖ ತೋರಿಸುವ ಯೋಗ್ಯತೆಯಾಗಲಿ ಮತ್ತೆ ಭಾರತಕ್ಕೆ ಮರಳಿ ಬರುವ ಧೈರ್ಯವಾಗಲಿ ಇರಲೇ ಇಲ್ಲ. ಇಂದಿಗೂ ಆ ವೃದ್ಧಾಶ್ರಮದಲ್ಲಿ ಅವರು ಸತ್ತ ದಿನದಂದು ಹಾಗು ಅವರ ಹುಟ್ಟಿದ ದಿನದಂದು ಹಾಗೇ ಮತ್ತೆರಡು ವಿಶೇಷ ದಿನ ಅವರ ಆಸೆಯಂತೆ ಹಬ್ಬದ ಊಟ ಸಿದ್ದವಾಗುತ್ತಿದೆ. ಆ ಎರಡು ದಿನ ಏನು ವಿಶೇಷ ಎಂಬುದನ್ನು ಅವರು ಯಾರಿಗೂ ಹೇಳಿರಲಿಲ್ಲ. ಅವರ ಡೈರಿ ಓದಿದಾಗ ತಿಳಿದಿತ್ತು ಅದು ಆ ಅಯೋಗ್ಯ ಮಕ್ಕಳ ಜನ್ಮದಿನ ಎಂದು... ಹೌದು ಮಕ್ಕಳು ರಾಕ್ಷಸರಾದರೂ ತಂದೆ, ತಾಯಿಯರ ಪಾಲಿಗೆ ಮಕ್ಕಳೇ ಆಗಿರುತ್ತಾರೆ.*

*ನನ್ನ ಮಗ ಅಮೇರಿಕದಲ್ಲಿ ಓದುತ್ತಾನೆ ನನ್ನ ಮಗಳು ಲಂಡನ್ ಅಲ್ಲಿ ಓದುತ್ತಾಳೆ ಎಂದು ಎದೆ ಉಬ್ಬಿಸಿ ಹೇಳುವ ತಂದೆತಾಯಿಗಳೇ, ಒಂದು ವಿಷಯ ನೆನಪಿಡಿ. ಮಕ್ಕಳ ಮೇಲೆ ಅತಿಯಾದ ವ್ಯಾಮೋಹ ಬೇಡ. ಆಸ್ತಿಯನ್ನ ನಿಮ್ಮ ಕಾಲಾನಂತರ ಹಂಚುವಂತೆ ವಿಲ್ ಬರೆದಿಡಿ. ನನ್ನ ಮಗ ಅಂಥವನಲ್ಲ ನನ್ನ ಮಗಳು ಅಂಥವಳಲ್ಲ ಎನ್ನುವ ಭ್ರಮೆಯಿಂದ ಹೊರಬನ್ನಿ. ಯಾಕಂದರೆ* 

*ಮೊಗ್ಗು ಮಲ್ಲಿಗೆಯ ನೋಡಿ ನಿರ್ಧರಿಸಬೇಡಿ, ಯಾಕೆಂದರೆ ಅದು ಅರಳಿದಾಗ ಅದರ ಸುವಾಸನೆ ಬೇರೆಯೇ ಆಗಿ ರುತ್ತದೆ.. *

ಕೃಪೆ ನಿತ್ಯ ಸತ್ಯ 
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097