ದಿನಕ್ಕೊಂದು ಕಥೆ. 154
🌻🌻 *ದಿನಕ್ಕೊಂದು ಕಥೆ*🌻🌻 💐 *ನಾಣ್ಯದ ಎರಡು ಮುಖಗಳು*💐
ಇದು ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ಗವರ್ನರ ಅಗಿದ್ದ ಮಾರ್ಕ ವೈಟ್ ಅವರ ಬದುಕಿನಲ್ಲಿ ಆದದ್ದು ಎಂದು ಹೇಳುತ್ತಾರೆ. ಅದು ಸತ್ಯ ಹೌದೋ, ಅಲ್ಲವೋ ಎನ್ನುವುದಕ್ಕೆ ಯಾವ ದಾಖಲೆಯೂ ಇಲ್ಲ. ಆದರೂ ಕಥೆಯಾಗಿಯೂ ಈ ಘಟನೆ ಚೆನ್ನಾಗಿದೆ.
ಮಾರ್ಕ ವೈಟ್ ಅವರ ಜವಾಬ್ದಾರಿ ದೊಡ್ಡದು. ಸಾರ್ವಜನಿಕ ಕೆಲಸಗಳಲ್ಲಿ ತೊಡಗಿದ್ದ ಅವರಿಗೆ ಮನೆಯಲ್ಲಿ ವಿರಾಮವಾಗಿ ಕುಳಿತು ಮಾತನಾಡಲು ಸಮಯವೇ ದೊರಕುತ್ತಿರಲಿಲ್ಲ. ಅವರ ಹೆಂಡತಿ ಒಂದು ದಿನವಾದರೂ ಸ್ವಲ್ಪ ಬಿಡುಗಡೆ ಪಡೆದು ಮನೆಯಲ್ಲಿ ಆರಾಮವಾಗಿರುವಂತೆ ಒತ್ತಾಯಿಸುತ್ತಿದ್ದರು.
ಅಂತೂ ಒಂದು ದಿನ ಕಚೇರಿಗೆ ಹೋಗದೇ ಇಡೀ ದಿನ ಹೆಂಡತಿಯ ಜೊತೆಗೆ ಸಮಯ ಕಳೆಯುವುದಾಗಿ ತೀರ್ಮಾನಿಸಿದರು. ಅಂದು ಮನೆಯಲ್ಲೇ ಉಳಿದು ಹೆಂಡತಿಯ ಜೊತೆಗೆ ಊಟ ಮಾಡಿದರು. ವೈಟ್ ಒಂದು ವಿಚಾರ ಮಾಡಿದರು. ಸಂಜೆಯ ಹೊತ್ತಿಗೆ ಹೆಂಡತಿಯನ್ನು ಕರೆದುಕೊಂಡು ಕಾರಿನಲ್ಲಿ ಹೊರಟರು.
ಡ್ರೈವರ್‌ನಿಗೆ ಬೇಡವೆಂದು ಹೇಳಿ ತಾವೇ ಕಾರು ನಡೆಸಿದರು. ಗಂಡ-ಹೆಂಡತಿ ಇಬ್ಬರೇ ಹರಟೆ ಹೊಡೆಯುತ್ತ, ಹಳೆಯ ವಿಷಯಗಳನ್ನು ನೆನಪಿಸಿಕೊಳ್ಳುತ್ತ ನಿಧಾನವಾಗಿ ಸಾಗಿದರು. ಯಾವ ವಿಶೇಷವಾದ ಕೆಲಸವಿಲ್ಲದ್ದರಿಂದ ನಗರ ಪ್ರದೇಶವನ್ನು ದಾಟಿ ಪಕ್ಕದ ಊರಿನ ಕಡೆಗೆ ನಡೆದರು. ಸ್ವಲ್ಪ ದೂರ ಸಾಗಿದಾಗ ಅವರ ಹೆಂಡತಿಯ ಕಣ್ಣುಗಳು ಅಗಲವಾದವು, ಅವುಗಳಲ್ಲಿ ಕಾಂತಿ ತುಂಬಿತು.
ಮುಂದೆ ಬರುವ ನಗರ ಆಕೆ ಹುಟ್ಟಿ ಬೆಳೆದ ನಗರ. ಎಷ್ಟು ದಿನವಾಯಿತಲ್ಲ ನನ್ನ ಊರು ನೋಡಿ ಎಂದು ಆಶ್ಚರ್ಯವಾಯಿತು, ಮತ್ತೆ ಬಂದೆನಲ್ಲ ಎಂದು ಸಂತೋಷವೂ ಆಯಿತು. ಮಾರ್ಕ ವೈಟ್ ಈ ನಗರದ ರಸ್ತೆಗಳಲ್ಲಿ ಕಾರನ್ನು ಸುತ್ತಾಡಿಸಿದರು. ತಾನು ಕಲಿತ ಶಾಲೆ, ಬೆಳೆದ ಪರಿಸರವನ್ನು ನೋಡಿ ಆಕೆಗೆ ಬಹಳ ಹಿಗ್ಗಾಯಿತು. ಎಷ್ಟೋ ಹೊತ್ತಿನಿಂದ ಕಾರು ಓಡುತ್ತಲೇ ಇದೆಯಲ್ಲ, ಪೆಟ್ರೋಲ್ ಎಷ್ಟಿದೆ ಎಂದು ವೈಟ್ ನೋಡಿದರು.
ಟ್ಯಾಂಕ್ ಬಹುತೇಕ ಖಾಲಿಯಾಗಿದೆ ಎಂದು ಮೀಟರ್ ತೋರಿಸುತ್ತಿತ್ತು. ಸರಿ, ಎಂದುಕೊಂಡು ಹತ್ತಿರವೇ ಇದ್ದ ಬಂಕ್‌ಗೆ ಹೋದರು. ಪೆಟ್ರೋಲ್ ತುಂಬಿಸಲು ಅಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಓಡಿ ಬಂದ, ಕಾರಿನಲ್ಲಿ ಕುಳಿತಿದ್ದ ಮಹಿಳೆಯನ್ನು ನೋಡಿದ. ಅವನ ಮುಖ ಅರಳಿತು. ‘ಹೇ, ಹಲೋ ಹೇಗಿದ್ದೀ?’ ಎಂದ. ಅವನನ್ನು ನೋಡಿದ ಈಕೆಯಲ್ಲಿ ಸಂತಸ ನುಗ್ಗಿ ಬಂದದ್ದು ಕಾಣುತ್ತಿತ್ತು, ‘ಹಲೋ, ನೀನು ಹೇಗಿದ್ದೀ?’ ಎನ್ನುತ್ತ ಕೆಳಗಿಳಿದಳು ಆಕೆ. ಇಬ್ಬರೂ ಕೈ ಕುಲುಕಿದರು.
ಆತ ಪೆಟ್ರೋಲ್ ಹಾಕುತ್ತಲೇ ಮಾತನಾಡಿದ. ವೈಟ್ ನೋಡುತ್ತಲೇ ಇದ್ದರು. ಅವರು ಮಾತನಾಡುವ, ಮಾತನಾಡುತ್ತಲೇ ನಗುವ ಪರಿ ನೋಡಿದರೆ ಇಬ್ಬರೂ ಬಹಳ ಅನ್ಯೋನ್ಯವಾಗಿದ್ದರು ಎಂದೆನಿಸಿತು. ಪೆಟ್ರೋಲ್ ತುಂಬಿಸುವುದು ಮುಗಿಯಿತು. ಆತ, ‘ಹೇ ನೀನು ಭಾರಿ ದೊಡ್ಡವಳಾಗಿ ಬಿಟ್ಟಿದ್ದೀ. ನಮ್ಮನ್ನೆಲ್ಲ ಮರೆಯಬೇಡ. ಮತ್ತೆ ಭೆಟ್ಟಿಯಾಗೋಣ’ ಎಂದ. ಆಕೆ, ‘ಅದಕ್ಕೇನಂತೆ, ಸ್ನೇಹ ಮರೆಯುವುದಕ್ಕೆ ಆಗುತ್ತದೆಯೇ?’ ಎಂದಳು.
ಆಕೆ ಮತ್ತೆ ಕಾರು ಏರಿದಳು. ವೈಟ್ ಗಾಡಿ ನಡೆಸಿದರು. ವೈಟ್ ಅವರ ಗಂಡಸಿನ ಅಹಂಕಾರಕ್ಕೆ ಸ್ವಲ್ಪ ಬರೆ ಬಿದ್ದಂತಾಗಿತ್ತು. ತನ್ನಂತಹ ಗವರ್ನರ್‌ನ ಹೆಂಡತಿ ಪೆಟ್ರೋಲ್ ಬಂಕ್‌ನ ಸೇವಕನೊಡನೆ ಸ್ನೇಹವನ್ನಿಟ್ಟುಕೊಂಡಿದ್ದಾಳೆಯೇ? ಅವರು ಚಿಕ್ಕವರಿದ್ದಾಗ ಈ ಸ್ನೇಹ ಯಾವ ಮಟ್ಟಿಗೆ ಹೋಗಿತ್ತೋ? ಹೀಗೆಯೇ ಸುತ್ತುತ್ತಿತ್ತು ಅವರ ವಿಚಾರ.
ಆಕೆಯೂ ಕಿಟಕಿಯಾಚೆ ನೋಡುತ್ತ ಕುಳಿತಿದ್ದಳು. ಮೌನ ಅಸಹನೀಯವಾಯಿತು. ವೈಟ್ ಹೇಳಿದರು, ‘ನನಗರ್ಥವಾಗುತ್ತದೆ, ನೀವಿಬ್ಬರೂ ತುಂಬ ಆತ್ಮೀಯ ಸ್ನೇಹಿತರಾಗಿದ್ದಿರಿ ಅಲ್ಲವೇ?’. ಆಕೆ ಮೌನವಾಗಿ ತಲೆ ಅಲ್ಲಾಡಿಸಿದಳು. ಆಕೆಯನ್ನು ಚುಚ್ಚಲೆಂದೇ ವೈಟ್, ‘ಈಗ ನಿಮ್ಮಿಬ್ಬರ ಜೀವನ ಎಷ್ಟು ಬದಲಾಗಿ ಹೋಯಿತಲ್ಲವೇ? ನನ್ನ ಬದಲು ಅವನನ್ನೇ ಮದುವೆಯಾಗಿದ್ದರೆ ನಿನ್ನ ಜೀವನ ಎಷ್ಟು ದುರ್ಭರವಾಗುತ್ತಿತ್ತು? ನೀನೊಬ್ಬ ಪೆಟ್ರೋಲ್ ಬಂಕ್‌ನ ಸೇವಕನ ಹೆಂಡತಿಯಾಗಿರುತ್ತಿದ್ದೆ’ ಎಂದರು.
ಆಕೆ ಕ್ಷಣಕಾಲ ವೈಟ್‌ರ ಕಣ್ಣುಗಳನ್ನೇ ದಿಟ್ಟಿಸಿ ನೋಡಿ ಹೇಳಿದಳು ‘ನಾನು ಅದನ್ನು ಯೋಚಿಸುತ್ತಿರಲಿಲ್ಲ. ಅವನನ್ನು ಮದುವೆಯಾಗಿದ್ದರೆ ಆತನೇ ಇಂದು ಟೆಕ್ಸಾಸ್‌ನ ಗವರ್ನರ್ ಆಗಿರುತ್ತಿದ್ದನಲ್ಲವೇ ಎಂದುಕೊಳ್ಳುತ್ತಿದ್ದೆ’. ವೈಟ್‌ರ ಗಂಡಸಿನ ಅಹಂಕಾರದ ಹೆಡೆಗೆ ಸರಿಯಾದ ಪೆಟ್ಟು ಬಿದ್ದಿತ್ತು. ಎಲ್ಲ ತನ್ನಿಂದಲೇ ಅಗುತ್ತದೆ, ತಾನೇ ಮಾರ್ಗದರ್ಶಕ, ಹೆಣ್ಣು ಅಬಲೆ, ತಾನೇ ಅವಳನ್ನು ಹಿಡಿದೆತ್ತಬೇಕು, ಅವಳು ಕೇವಲ ಉಪಕರಣ ಮಾತ್ರ ಎಂಬ ಇಂಥ ಗಂಡಸರ ಚಿಂತನೆಗಳು ಶತಮಾನಗಳಿಂದ ನಡೆದು ಬಂದು ಗಂಡು-ಹೆಣ್ಣುಗಳಲ್ಲಿ ಸಮಾನತೆಯನ್ನು ತರುವುದರಲ್ಲಿ ಅಡ್ಡವಾಗಿವೆ. ಅವುಗಳನ್ನು ಬದಿಗೊತ್ತಿ ಇಬ್ಬರೂ ನಾಣ್ಯದ ಎರಡು ಮುಖಗಳು, ಯಾವ ಮುಖವಿಲ್ಲದಿದ್ದರೂ ನಾಣ್ಯ ಚಲಾವಣೆಯಾಗದು ಎನ್ನುವ ಕಾಲ ಈಗ ಬಂದಿದೆ. ಕೃಪೆ : ಮುಖ ಪುಟ. ಸಂಗ್ರಹ: ವೀರೇಶ್ ಅರಸಿಕೆರೆ ದಾವಣಗೆರೆ.
Comments
Post a Comment