ದಿನಕ್ಕೊಂದು ಕಥೆ. 190
🌻🌻 *ದಿನಕ್ಕೊಂದು ಕಥೆ*🌻🌻 *ತಪ್ಪಿನಿಂದಾದ ಮಹೋನ್ನತ ಆವಿಷ್ಕಾರ*
ಒಂದು ಸಾಧನೆಯೆಡೆಗೆ ಎಡೆಬಿಡದೆ ಪ್ರಯತ್ನಿಸಿದಾಗ ನಡೆದ ಅಚಾತುರ್ಯ ಕೂಡ ಹೇಗೆ ಮತ್ತೊಂದು ಅನಿರೀಕ್ಷಿತವಾದ ವಿಶೇಷ ಸಾಧನೆಯ ಕಡೆಗೆ ಕರೆದೊಯ್ಯಬಹುದೆಂಬುದಕ್ಕೆ ಅಲೆಗ್ಸಾಂಡರ್ ಬೆಲ್‌ನ ಜೀವನವೇ ಸಾಕ್ಷಿ. ಅಲೆಗ್ಸಾಂಡರ್ ಗ್ರಹಾಂ ಬೆಲ್ ಹುಟ್ಟಿದ್ದು ಸ್ಕಾಟ್‍ಲಂಡ್‌ನ ಎಡಿನ್ಬರೋದಲ್ಲಿ.
ಈತನ ತಂದೆ ಎಡಿನ್‌ಬರೋ ವಿಶ್ವವಿದ್ಯಾಲಯದಲ್ಲಿ ಮಾತನಾಡುವ, ಧ್ವನಿಯನ್ನು ಬಳಸುವ ಕಲೆಯನ್ನು ಕಲಿಸುತ್ತಿದ್ದರು. ಮಗ ಗ್ರಹಾಂ ಬೆಲ್ ವಿಜ್ಞಾನದಲ್ಲಿ ಅಸಕ್ತಿ ತೋರಿಸಿದರೂ ಶಾಲೆಯ ಕಲಿಕೆಯಲ್ಲಿ ಉತ್ಸಾಹ ತೋರಲಿಲ್ಲ. ಆದರೆ, ಸದಾ ಕಾಲ ಹೊಸ ಅನ್ವೇಷಣೆಯಲ್ಲಿ ಅವನ ಮನಸ್ಸು ವ್ಯಸ್ತವಾಗಿರುತ್ತಿತ್ತು. ಆತ ತನ್ನ ಹನ್ನೆರಡನೇ ವಯಸ್ಸಿಗೆ ಹಿಟ್ಟಿನ ಗಿರಣಿಯನ್ನು ಕಂಡುಹಿಡಿದಿದ್ದ.
ಅದು ಎಷ್ಟೋ ವರ್ಷ ನಡೆಯಿತು. ಅವನ ಇಬ್ಬರು ಅಣ್ಣಂದಿರು ಕ್ಷಯರೋಗದಿಂದ ಸಾವನ್ನಪ್ಪಿದ ಮೇಲೆ ಆತನ ಆರೋಗ್ಯವೂ ಹದಗೆಟ್ಟಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದರೂ ಆತ ಕೆನಡಾಕ್ಕೆ ತೆರಳಿದೆ. ಅಲ್ಲಿ ಅವನ ಅರೋಗ್ಯ ಸುಧಾರಿಸಿತು. ಅಷ್ಟು ಹೊತ್ತಿಗೆ ಅವನ ತಾಯಿಯ ಕಿವಿ ಸಂಪೂರ್ಣವಾಗಿ ಕೇಳದಂತಾದವು. ಆಗ ಅವನ ತಂದೆ ಕಿವುಡರಿಗೆ ಮಾತನಾಡುವ ರೀತಿಯನ್ನು ಕಲಿಸಿಕೊಡುವ ಸಂಸ್ಥೆಯನ್ನು ಸ್ಥಾಪಿಸಿದ್ದರು. ಗ್ರಹಾಂ ಅದನ್ನೇ ಮುಂದುವರೆಸಿದ.
ಕಿವುಡರಿಗೆ ಮಾತು ಕಲಿಸುವ ಸುಲಭ ವಿಧಾನವನ್ನು ಕಂಡುಹಿಡಿಯುವುದೇ ಅವನ ಜೀವನದ ಗುರಿಯಾಯಿತು. ಹಗಲು ರಾತ್ರಿ ಅದೇ ಚಿಂತೆ ಆವರಿಸಿತು. ಆಗ ಅವನ ವಯಸ್ಸು ಕೇವಲ ಹತ್ತೊಂಬತ್ತು ವರ್ಷ. ಗ್ರಹಾಮ ಬೆಲ್ ಅಂದಿನ ಶ್ರೇಷ್ಠ ಭಾಷಾಶಾಸ್ತ್ರಜ್ಞನಾಗಿದ್ದ
ಅಲೆಗ್ಸಾಂಡರ್ ಎಲ್ಲಿಸ್ ಎಂಬವರನ್ನು ಭೇಟಿಯಾಗಿ ತಾನು ಮಾಡಿದ ಪ್ರಯೋಗಗಳನ್ನು ತಿಳಿಸಿದ. ಆತ ಅದನ್ನು ಮೆಚ್ಚಿಕೊಂಡು ಜರ್ಮನಿಯಲ್ಲಿ ಇದೇ ವಿಷಯದಲ್ಲಿ ಸಾಧನೆ ಮಾಡಿದ ಹೆಲ್‍ಮಾಲ್ಡ್ ಎಂಬವನ ಕೃತಿಗಳನ್ನು ಓದಲು ಹೇಳಿದ.
ಹೆಲ್‍ಮಾಲ್ಡ್‌ನ ಕೃತಿಗಳು ಜರ್ಮನ್ ಭಾಷೆಯಲ್ಲಿದ್ದವು. ಆತನಿಗೆ ಜರ್ಮನ್ ಭಾಷೆ ಬರುತ್ತಿರಲಿಲ್ಲ. ಆದರೂ ಆ ಜರ್ಮನ್ ವಿಜ್ಞಾನಿ ತಯಾರು ಮಾಡಿದ ಯಂತ್ರಗಳ ಚಿತ್ರಗಳನ್ನು ನೋಡುತ್ತ ತನಗೆ ತೋಚಿದಂತೆ ಅರ್ಥೈಸಿಕೊಂಡ. 1874 ರಲ್ಲಿ ಆಗ ತಾನೇ ಟೆಲಿಗ್ರಾಫ್‌ಗೆ ವಿದ್ಯುತ್ ತಂತಿಗಳನ್ನು ಹಾಕಲಾಗಿತ್ತು. ಗ್ರಹಾಂ ಬೆಲ್, ಮಾತಿನ ಧ್ವನಿ ತರಂಗಗಳು ವಿದ್ಯುತ್ ತರಂಗಗಳಾಗುವ ವಿಧಾನವನ್ನು ಕಂಡುಹಿಡಿದು ಧ್ವನಿಯನ್ನು ದೂರದವರೆಗೆ ತೆಗೆದುಕೊಂಡು ಹೋಗಬಹುದಾದ ಸಾಧ್ಯತೆಗಳನ್ನು ನೋಡುತ್ತಿದ್ದ. ಆಗ ಒಂದಿಬ್ಬರು ಹಣ ಸಹಾಯ ಮಾಡಿದಾಗ ಥಾಮಸ್ ವಾಟ್ಸ್ನ್ ಎಂಬ ಎಲೆಕ್ಟ್ರಿಕಲ್ ಎಂಜನಿಯರನನ್ನು ಸಹಾಯಕನನ್ನಾಗಿ ಪಡೆದ.
ಹೊಸ ಆವಿಷ್ಕಾರಕ್ಕೆ ಅವನ ಸಹಾಯವೂ ದೊಡ್ಡದು. 1875ರ ಜೂನ್ ಎರಡರಂದು, “ವಾಟ್ಸ್‍ನ್ ಇಲ್ಲಿ ಬಾ, ನಿನ್ನ ಹತ್ತಿರ ಮಾತನಾಡಬೇಕು” ಎಂದಿದ್ದೇ ಮೊಟ್ಟಮೊದಲ ಟೆಲಿಫೋನ್ ಸಂದೇಶವಾಯಿತು. ಈ ಆವಿಷ್ಕಾರಕ್ಕೆ ಹಣ ಹೂಡಿದವರು ಇದನ್ನು ಕೇವಲ ಒಂದು ಲಕ್ಷ ಡಾಲರಿಗೆ ಮಾರುವುದಾಗಿ ಹೇಳಿ ವೆಸ್ಟರ್ನ್ ಯೂನಿಯನ್ ಕಂಪನಿಯನ್ನು ಕೇಳಿದರು.
ಆಗ ಕಂಪನಿಯ ಯಜಮಾನರು, “ಇದೊಂದು ಹುಚ್ಚು ಪ್ರಯೋಗ, ಇದನ್ನಾರು ಬಳಸುತ್ತಾರೆ? ಟೆಲಿಗ್ರಾಫ್ ಇರುವಾಗ ಈ ಆಟದ ಸಾಮಾನು ಟೆಲಿಫೋನನ್ನು ಯಾರು ಕೊಂಡುಕೊಳ್ಳುತ್ತಾರೆ?” ಎಂದು ತಿರಸ್ಕರಿಸಿದರಂತೆ. ಮುಂದೆ ಎರಡು ವರ್ಷಕ್ಕೆ ಗ್ರಹಾಂ ತನ್ನದೇ ಬೆಲ್ ಕಂಪನಿಯನ್ನು ಪ್ರಾರಂಭಿಸಿ ಕೋಟಿ, ಕೋಟಿ ಹಣ ಗಳಿಸಿದ. ಇಂದು ನಾವು ಟೆಲಿಫೋನ್ ಇಲ್ಲದ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ. ಗ್ರಹಾಂ ಬೆಲ್ ಪ್ರಯತ್ನಿಸಿದ್ದು ಕಿವುಡರಿಗೆ ಮಾತು ಕಲಿಸುವ ವಿಧಾನವನ್ನು ಕಂಡುಹಿಡಿಯಲು.
ಆದರೆ ಅದೇ ಮುಂದುವರೆದು ಒಂದು ಯಂತ್ರವಾಗಿ ಮನುಷ್ಯನ ಜೀವನ ವಿಧಾನವನ್ನೇ ಬದಲಿಸಿತು. ಈ ಯಂತ್ರದ ಅನ್ವೇಷಣೆಗೆ ಕಾರಣ ಗ್ರಹಾಂ ತನಗರ್ಥವಾಗದ ಜರ್ಮನ್ ಪುಸ್ತಕದಲ್ಲಿಯ ಯಂತ್ರದ ಚಿತ್ರಗಳನ್ನು ತಪ್ಪಾಗಿ ತಿಳಿದದ್ದು. ಮನದಲ್ಲಿ ಪರೋಪಕಾರ ಸಾಧನೆಯ ಗುರಿ ಇದ್ದರೆ ತಪ್ಪು ಕೂಡ ಮತ್ತೊಂದು ಸಾರ್ಥಕ ಗುರಿ ತಲುಪುತ್ತದೆ. ಕೃಪೆ ಮುಖ ಪುಸ್ತಕ. ಸಂಗ್ರಹ: ವೀರೇಶ್ ಅರಸಿಕೆರೆ .ದಾವಣಗೆರೆ.
Comments
Post a Comment