ದಿನಕ್ಕೊಂದು ಕಥೆ 191
ಮನೋನಿಗ್ರಹ ಸುಲಭವಲ್ಲ
ಹಿಂದೆ ವಾರಾಣಸಿಯಲ್ಲಿ ಬೋಧಿಸತ್ವ ಒಬ್ಬ ಶ್ರೀಮಂತ ಬ್ರಾಹ್ಮಣನ ಮಗನಾಗಿ ಹುಟ್ಟಿದ. ಬೆಳೆದು ಸಕಲ ವಿದ್ಯೆಗಳಲ್ಲಿ ಪಾರಂಗತನಾದ. ತಾನು ಎಲ್ಲ ಪ್ರಾಪಂಚಿಕ ಸುಖಗಳನ್ನು ತ್ಯಜಿಸಿ ವಿರಾಗಿಯಾಗಬೇಕೆಂದು ನಿರ್ಧರಿಸಿ ಮನೆಬಿಟ್ಟು ಹೊರಟ. ಹಿಮಾಲಯ ಸೇರಿ ಯೋಗಾಭ್ಯಾಸ ಮಾಡಿ, ಮನಸ್ಸನ್ನು ನಿಗ್ರಹಿಸಿ ಧ್ಯಾನದಿಂದ ಅಲ್ಲೇ ಉಳಿದ.
ಕೆಲ ವರ್ಷಗಳ ನಂತರ ಪ್ರಪಂಚ ಸುತ್ತಿ ಬರಬೇಕೆಂದು ತೀರ್ಮಾನಿಸಿ ಎಲ್ಲೆಡೆ ತಿರುಗಾಡಿ ಕೊನೆಗೆ ವಾರಾಣಸಿಗೆ ಬಂದ. ಅರಮನೆಯ ರಾಜೋದ್ಯಾನದಲ್ಲಿ ಮರದ ಕೆಳಗೆ ನೆಲೆಸಿದ. ಬೆಳಿಗ್ಗೆ ಸ್ನಾನ ಮಾಡಿ ವಲ್ಕಲಗಳನ್ನು ಧರಿಸಿ, ಭಿಕ್ಷಾಪಾತ್ರೆ ಹಿಡಿದು, ನಗರದಲ್ಲಿ ಭಿಕ್ಷೆ ಬೇಡಲು ಹೋದ. ಅರಮನೆಯ ಮುಂದೆ ಹೋದಾಗ ಇವನ ಚಹರೆ, ಮುಖದಲ್ಲಿದ್ದ ಶಾಂತಿಗಳನ್ನು ಕಂಡು ರಾಜ ಬ್ರಹ್ಮದತ್ತ ಇವನನ್ನು ಒಳಗೆ ಕರೆದು ಅಗ್ರಪೀಠದಲ್ಲಿ ಕುಳ್ಳಿರಿಸಿ ಸತ್ಕರಿಸಿದ. ರುಚಿರುಚಿಯಾದ ಭೋಜನದಿಂದ ತೃಪ್ತಿಪಡಿಸಿದ. ರಾಜನ ಅಪೇಕ್ಷೆಯಂತೆ ಬೋಧಿಸತ್ವ ಈ ಅರಮನೆಯ ರಾಜೋದ್ಯಾನದಲ್ಲೇ ಉಳಿದ.
ಒಮ್ಮೆ ಗಡಿನಾಡಿನಲ್ಲಿ ಉಂಟಾದ ಅಶಾಂತಿಯನ್ನು ನಿವಾರಿಸಲೆಂದು ರಾಜ ಪ್ರವಾಸ ಮಾಡಬೇಕಾಯಿತು. ಆತ ತನ್ನ ಹಿರಿಯ ಹೆಂಡತಿ ಮೃದುಲಕ್ಷಣೆಯನ್ನು ಕರೆದು ಯಾವ ಕಾರಣಕ್ಕೂ ಸನ್ಯಾಸಿ ಬೋಧಿಸತ್ವನ ಆರೈಕೆಯಲ್ಲಿ ಕಡಿಮೆಯಾಗದಂತೆ ನೋಡಿಕೊಳ್ಳಲು ತಿಳಿಸಿದ. ಬೋಧಿಸತ್ವ ತನಗೆ ಬೇಕಾದ ಸಮಯಕ್ಕೆ ರಾಜಭವನಕ್ಕೆ ಬಂದು ಭಿಕ್ಷೆ ಪಡೆದುಕೊಂಡು ಹೋಗುತ್ತಿದ್ದ. ಒಂದು ದಿನ ಮೃದುಲಕ್ಷಣೆ ಸನ್ಯಾಸಿಗೆ ಭೋಜನದ ವ್ಯವಸ್ಥೆ ಮಾಡಿ ಕಾಯ್ದುಕೊಂಡಿದ್ದಳು. ಅವನು ಬರುವುದು ತಡವಾಯಿತು. ಕುಳಿತಲ್ಲಿಯೇ ಅವಳಿಗೆ ನಿದ್ದೆಯ ಮಂಪರು ಆವರಿಸಿತ್ತು. ಸನ್ಯಾಸಿ ಬಂದು ಶಬ್ದಮಾಡಿದಾಗ ಧಡಬಡಿಸಿಕೊಂಡು ಮೃದುಲಕ್ಷಣೆ ಗಾಬರಿಯಿಂದ ಮೇಲೆದ್ದಳು.
ಆಗ ಅವಳು ಹೊದೆದುಕೊಂಡಿದ್ದ ಸೆರಗು ಜಾರಿಬಿದ್ದಿತು. ಅವಳು ಎಷ್ಟೇ ಬೇಗ ಸಾವರಿಸಿಕೊಂಡು ಹೊದೆದುಕೊಂಡರೂ ಸನ್ಯಾಸಿಯ ದೃಷ್ಟಿ ಅವಳ ಮೇಲೆ ಬಿತ್ತು. ಅವಳು ಮೊದಲೇ ಅಸಾಮಾನ್ಯ ಸುಂದರಿ. ಮೇಲೆ ಅವಳ ಈ ಅವಸ್ಥೆ ಸನ್ಯಾಸಿಯ ಮನಸ್ಸನ್ನು ಕ್ಷಣಕಾಲ ಚಂಚಲಿಸಿತು. ಅವಳು ಸುಂದರಿ ಎಂಬ ಭಾವ ಮೂಡಿತು. ಸನ್ಯಾಸಿಗೆ ಈ ಭಾವ ತಕ್ಕುದಲ್ಲ ಎಂದು ಹೊಳೆದು ಆತ ಮರಳಿ ತನ್ನ ಗುಡಿಸಲಿಗೆ ಬಂದು ಕುಳಿತುಕೊಂಡ. ಏನಾದರೂ ರಾಣಿಯ ಆ ಚಿತ್ರ ಮನದಿಂದ ಹೋಗದು. ನಿರಾಹಾರಿಯಾಗಿ ಕಾಮದಲ್ಲಿ ಕುದಿಯುತ್ತ ಕುಳಿತ.
ರಾಜ ಮರಳಿ ಬಂದು ಸನ್ಯಾಸಿಯನ್ನು ಕಂಡರೆ ಆತ ಅರ್ಧವಾಗಿ ಹೋಗಿದ್ದಾನೆ! ಕಣ್ಣುಗಳಲ್ಲಿ ಯಾವ ಹೊಳಪೂ ಇಲ್ಲ. ‘ತಮಗೆ ಏನು ತೊಂದರೆ’ ಎಂದು ಕೇಳಿದ ರಾಜನಿಗೆ ಸನ್ಯಾಸಿ ಹೇಳಿದ, ‘ನನಗೆ ದೈಹಿಕವಾಗಿ ಯಾವ ತೊಂದರೆಯೂ ಇಲ್ಲ. ಆದರೆ ನನ್ನ ಚಿತ್ತವಿಕಾರವಾಗಿದೆ. ಅದು ಕಾಮವಾಗಿ ಸುಡುತ್ತಿದೆ’. ‘ನಿಮಗೆ ಯಾರ ಮೇಲೆ ಮನಸ್ಸಾಗಿದೆ?’ ಎಂದು ರಾಜ ಕೇಳಿದ. ಸನ್ಯಾಸಿ, ‘ನೀವು ತಪ್ಪು ತಿಳಿಯಬಾರದು. ನನಗೆ ನಿಮ್ಮ ರಾಣಿ ಮೃದುಲಕ್ಷಣೆಯ ಮೇಲೆ ಮನಸ್ಸಾಗಿದೆ’ ಎಂದ. ರಾಜನಿಗೆ ಕೋಪ ಬರಲಿಲ್ಲ ಬದಲಾಗಿ, ‘ಅಷ್ಟೇ ತಾನೇ. ಆಕೆಯನ್ನು ನಾನೇ ನಿಮ್ಮ ಸೇವೆಗೆ ಕಳಿಸುತ್ತೇನೆ’ ಎಂದ.
ಅರಮನೆಗೆ ಹೋಗಿ ಮೃದುಲಕ್ಷಣೆಗೆ ಇದನ್ನು ತಿಳಿಸಿ, ಆತ ದೊಡ್ಡ ಸನ್ಯಾಸಿ, ಏನೋ ವಿಕಾರವಾಗಿದೆ. ಅವನ ಸದಾಚಾರವನ್ನು ಕಾಪಾಡುವುದು ನಿನ್ನ ಜವಾಬ್ದಾರಿ ಎಂದ. ಆಕೆ ಒಪ್ಪಿ ಬಂದಳು. ಸನ್ಯಾಸಿಯ ಹತ್ತಿರ ಬಂದು. ‘ನಾನು ನಿಮ್ಮ ಸೇವೆಗೆ ಬಂದಿದ್ದೇನೆ. ಆದರೆ, ನಿಮ್ಮನ್ನು ಸೇರುವ ಮೊದಲು ನನ್ನ ಅಪೇಕ್ಷೆಗಳನ್ನು ತೀರಿಸಬೇಕು’ ಎಂದಳು. ಆತ ಎಲ್ಲದಕ್ಕೂ ಸಿದ್ಧವಿದ್ದ. ಆಕೆ ಅವನಿಂದ ಕುದುರೆ ಲಾಯ, ಗಜಶಾಲೆಯನ್ನು ಶುದ್ಧಗೊಳಿಸಿದಳು. ಮನುಷ್ಯರ ಮಲ ಮೂತ್ರಗಳನ್ನು ತೆಗೆಯಿಸಿದಳು.
ಆತ ಯಾವ ಮುಜುಗರವೂ ಇಲ್ಲದೇ ಕೆಲಸ ಮಾಡಿದ. ಕೊನೆಗೆ ರಾತ್ರಿ ಹಾಸಿಗೆಯ ಮೇಲೆ ತವಕದಿಂದ ಕುಳಿತ ಸನ್ಯಾಸಿಯ ಗಡ್ಡವನ್ನು ಹಿಡಿದೆಳೆದು ಅವನ ಕಣ್ಣಲ್ಲಿ ಕಣ್ಣಿಟ್ಟು, ‘ನೀವೊಬ್ಬ ದೊಡ್ಡ ಸನ್ಯಾಸಿ ಎಂಬುದು ಮರೆತುಹೋಯಿತೇ! ಒಂದು ಹೆಣ್ಣಿನ ಆಕರ್ಷಣೆಯಿಂದ ನೀವು ಎಂತೆಂಥ ಹೊಲಸು ಕೆಲಸವನ್ನು ನಾಚಿಕೆಯಿಲ್ಲದೇ ಮಾಡಿದಿರಲ್ಲವೇ? ಇದಕ್ಕಾಗಿಯೇ ನೀವು ಶಾಸ್ತ್ರಗಳನ್ನು ಓದಿದ್ದು, ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿದ್ದು?’ ಎಂದು ಕೇಳಿದಳು. ಬೋಧಿಸತ್ವನಿಗೆ ಸಿಡಿಲು ಬಡಿದಂತಾಯಿತು.
ಅಷ್ಟು ವರ್ಷಗಳಿಂದ ಕಾಪಾಡಿಕೊಂಡು ಬಂದ ನಿಷ್ಠೆ ಒಂದು ಗಳಿಗೆಯಲ್ಲಿ ಕರಗಿಹೋಯಿತೇ ಎಂದು ಮೇಲೆದ್ದು ಮರಳಿ ಹಿಮಾಲಯಕ್ಕೆ ಹೋದ. ಮುಂದೆ ಮನ ಚಂಚಲವಾಗದಂತೆ ಬದುಕಿ ಸಾಧಕನಾದ. ಹಿಮಾಲಯದಲ್ಲಿ ಶಾಂತಿ ಇದೆ. ಅದು ಹಿಮಾಲಯದ ಶಾಂತಿ. ನಾವು ಇದ್ದಲ್ಲಿಯೇ ನಮಗೆ ಶಾಂತಿ ದೊರೆತರೆ ಅದು ನಮ್ಮ ಶಾಂತಿ. ಆಕರ್ಷಣೆಗಳೇ ಇಲ್ಲದಿದ್ದಲ್ಲಿ ಮನೋನಿಗ್ರಹ ಸುಲಭ. ಆದರೆ, ಆಕರ್ಷಣೆಗಳ ಮಧ್ಯವೇ ಇದ್ದು ಅವುಗಳಿಂದ ಪಾರಾಗುವುದು ನಿಜವಾದ ಮನೋನಿಗ್ರಹ. ಅದಕ್ಕೆ ತುಂಬ ಪರಿಶ್ರಮಬೇಕು, ಸತತ ಪ್ರಯತ್ನವೂ ಬೇಕು. ಕೃಪೆ:ನೆಟ್. ಸಂಗ್ರಹ :ವೀರೇಶ್ ಅರಸಿಕೆರೆ ದಾವಣಗೆರೆ
Comments
Post a Comment