ದಿನಕ್ಕೊಂದು ಕಥೆ. 192

*🌻🌻ದಿನಕ್ಕೊಂದು ಕಥೆ*🌻🌻                              *ಅಪ್ರಿಯವಾದ ಸತ್ಯ*

ನಮ್ಮ ಗುಂಡಣ್ಣ ಬಹುದೊಡ್ಡ ಕಂಪನಿಯ ಪುಟ್ಟ ಕೆಲಸದಲ್ಲಿದ್ದ. ಅವನ ಕಾರ್ಯ­ವೆಂದರೆ ದಿನನಿತ್ಯ ಆಡಳಿತ ವಿಭಾಗದ ಕಚೇರಿಯ ಕಿಟಕಿಯ ಗಾಜು­ಗಳನ್ನು ಒರೆಸಿ ಶುದ್ಧವಾಗಿ­ಡುವುದು, ಮೇಜುಗಳನ್ನು ಸ್ವಚ್ಛವಾಗಿಡುವುದು ಮತ್ತು ಕೆಲಸಗಾರರಿಗೆ ಆಗಾಗ ಚಹಾ, ಕಾಫಿ ತಂದುಕೊಡುವುದು. ಒಂದು ದಿನ ಎತ್ತರದ ಕಿಟಕಿಯ ಗಾಜನ್ನು ಒರೆಸಲು ಏಣಿ ಹತ್ತಿ ನಿಂತಿದ್ದ. ಬಾಗಿ ಮೇಲಿನ ಗಾಜನ್ನು ಒರೆ­ಸು­ವಾಗ ಏಣಿ ಜಾರಿತು. ಗುಂಡಣ್ಣ ಮುಂದೆ ಗಾಜಿನ ಮೇಲೆ ಬಿದ್ದ. ಬೀಳುವಾಗ ಗಾಜು ಒಡೆದು ತಲೆ­ಯೊಳಗೆ ತೂರಿತು. ಸುಮಾರು ಇಪ್ಪತ್ತು ಅಡಿ ಎತ್ತರದಿಂದ ನೆಲಕ್ಕೆ ದೊಪ್ಪನೇ ಬಿದ್ದ. ಅವನನ್ನು ಆಸ್ಪತ್ರೆಗೆ ಸೇರಿಸಿದರು.

ಬಲಗಾಲು ಮುರಿ­ದಿತ್ತು ಆದರೆ ಜೀವ ಉಳಿಯಿತು. ಅವನಿಗೆ ಎಚ್ಚರವಾದಾಗ ತಲೆ ತುಂಬ ಬ್ಯಾಂಡೇಜು. ನನ್ನ ತಲೆಗೇನಾಗಿದೆ ಎಂದು ಕೇಳಿದ. ಅವನ ಹೆಂಡತಿ ಹೋ ಎಂದು ಅಳುತ್ತ, ‘ಪುಣ್ಯಕ್ಕೆ ಜೀವ ಉಳಿಯಿತು. ಕಿವಿ ಹೋದರೆ ಹೋಗಲಿ ಬಿಡಿ’ ಎಂದು ಮೂಗು ಒರೆಸಿಕೊಂಡಳು. ‘ಕಿವಿ ಹೋಯಿತು ಎಂದರೆ ಏನರ್ಥ?’ ಕೇಳಿದ ಗಾಬರಿ­ಯಾದ ಗುಂಡಣ್ಣ. ಮತ್ತೆರಡು ಬಕೆಟ್ ಕಣ್ಣೀರು ಸುರಿಸಿ ಆಕೆ ಹೇಳಿದಳು, ‘ನೀವು ಗಾಜಿನ ಮೂಲಕ ಬೀಳುವಾಗ ನಿಮ್ಮ ಎರಡೂ ಕಿವಿಗಳು ಪೂರ್ತಿ ಕತ್ತರಿಸಿ ಹೋಗಿವೆ’. ಗುಂಡಣ್ಣನಿಗೆ ಕಿವಿಗಳಿಲ್ಲದ ತನ್ನ ಮುಖವನ್ನು ಕಲ್ಪ್ಪಿಸಿಕೊಳ್ಳಲೂ ಅಸಹ್ಯ­ವೆನಿಸಿತು. ಆದರೆ ಏನು ಮಾಡುವುದು? ಗುಂಡಣ್ಣನ ದೈವ ಚೆನ್ನಾಗಿತ್ತು. ಎರಡೂ ಕಿವಿ ಹೋದರೂ ಲಕ್ಷ್ಮಿ ಒಲಿದು ಬಂದಳು.

ದೊಡ್ಡ ಕಂಪನಿಯವರು ಮತ್ತು ವಿಮಾ ಕಂಪನಿ­ಯವರು ಸೇರಿ ಅವನಿಗೆ ಪರಿಹಾರ ಧನವೆಂದು ಎರಡು ಕೋಟಿ ರೂಪಾಯಿ­ಗಳನ್ನು ಕೊಟ್ಟರು. ಗುಂಡಣ್ಣನಿಗೆ ನಂಬಲಿಕ್ಕೇ ಆಗಲಿಲ್ಲ. ಇನ್ನು ತನಗೆ ಯಾಕೆ ಕಿಟಕಿಗಳನ್ನು ಒರೆಸುವ ಕೆಲಸ, ತಾನೇ ಒಂದು ಕಂಪನಿ ಮಾಡುತ್ತೇ­ನೆಂದು ತೀರ್ಮಾನಿಸಿದ. ಆದರೆ ತನಗೆ ಅದರ ಕೆಲಸ ತಿಳಿದಿಲ್ಲವಲ್ಲ. ಅದಕ್ಕೆ ಮುಖ್ಯಸ್ಥ­ರನ್ನು ನೇಮಿಸಬೇಕೆಂದು ಜಾಹೀರಾತು ನೀಡಿದ. ಅವನೇ ನೇಮಿಸಿದ್ದ ಆಯ್ಕೆ ಸಮಿತಿಯವರು ಕೊನೆಗೆ ಮೂರು ಜನರನ್ನು ಆರಿಸಿ ಗುಂಡಣ್ಣನಿಗೇ ಒಬ್ಬರನ್ನು ಆಯ್ಕೆ ಮಾಡುವಂತೆ ತಿಳಿಸಿದರು.  ಮೊದಲ­ನೆಯ ಅಭ್ಯರ್ಥಿ ಒಳಗೆ ಬಂದ. ಅವನಿಗೆ ವಿಷಯ ತುಂಬ ಚೆನ್ನಾಗಿ ತಿಳಿದಿದೆ ಎನ್ನಿಸಿತು ಗುಂಡಣ್ಣನಿಗೆ. ಕೊನೆಗೆ ಒಂದು ಪ್ರಶ್ನೆ ಕೇಳಿದ, ‘ನನ್ನನ್ನು ನೋಡಿದರೆ ಏನಾದರೂ ವಿಶೇಷ ಕಾಣು­ತ್ತ­ದೆಯೇ?’ ಆತ ಥಟ್ಟನೇ ಹೇಳಿದ, ‘ಹೌದು, ವಿಚಿತ್ರವೆಂದರೆ ನಿಮಗೆ ಕಿವಿಗಳೇ ಇಲ್ಲ’. ಗುಂಡಣ್ಣನಿಗೆ ಕೋಪ ನುಗ್ಗಿ ಬಂದು ಅವನನ್ನು ಹೊರಗೆ ಹಾಕಿದ.

ನಂತರ ಎರಡನೆಯವನು ಬಂದ. ಅವನು ಸ್ವಲ್ಪ ವಯಸ್ಸಿನಲ್ಲಿ ಹಿರಿಯ, ಅನು­ಭವಿಕ. ಅವನು ಮೊದಲನೆಯವ­ನಿಗಿಂತ ಹೆಚ್ಚು ತಿಳುವಳಿಕೆ ಉಳ್ಳವನು. ಎಲ್ಲ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿ­ಸಿದ. ಮತ್ತೆ ಗುಂಡಣ್ಣ ಕೊನೆಗೆ ಕೇಳಿದ, ‘ನನ್ನಲ್ಲಿ ಏನಾದರೂ ವಿಶೇಷ ಕಂಡಿರಾ?’ ಆತ ನಸು ನಕ್ಕು ಹೇಳಿದ, ‘ವಿಶೇಷವೇನೂ ಇಲ್ಲ, ಆದರೆ ನಿಮ್ಮ ಕಿವಿಗಳು ಕಾಣುತ್ತಿಲ್ಲ. ಅಪರೂಪಕ್ಕೆ ಕೆಲವೊಮ್ಮೆ ಹಾಗಾಗು­ತ್ತದೆ. ಆನುವಂಶಿಕವಾಗಿಯೋ, ಅಪ­ಘಾತ­ದಿಂದಲೋ ಹೀಗೆ ವಿಕೃತಿ ಕಾಣಿಸಿ­ಕೊಳ್ಳು­ತ್ತದೆ’. ಗುಂಡಣ್ಣನಿಗೆ ಮೊದಲಿ­ನಷ್ಟು ಕೋಪ ಬರದಿದ್ದರೂ ಉತ್ತರ ಇಷ್ಟ­ವಾಗ­ಲಿಲ್ಲ, ಅವನನ್ನೂ ಕಳಿಸಿಬಿಟ್ಟ. ಮೂರನೆಯವಳು ತರುಣಿ. ಆಕೆ ತುಂಬ ಬುದ್ಧಿ­ವಂತೆ. ಮೊದಲಿನ ಇಬ್ಬರಿಗಿಂತ ಪಟಪಟನೇ ಉತ್ತರಗಳನ್ನು ನೀಡಿದಳು. ಆಕೆ ಕಂಪನಿಯನ್ನು ಚೆನ್ನಾಗಿ ನಡೆಸಬ­ಹುದು ಎಂಬ ನಂಬಿಕೆ ಬಂತು ಗುಂಡಣ್ಣ­ನಿಗೆ. ಆದರೂ ತನ್ನ ಮೆಚ್ಚಿನ ಪ್ರಶ್ನೆಯನ್ನು ಕೇಳಿಯೇ ಬಿಟ್ಟ, ‘ನನ್ನ ಮುಖದಲ್ಲೇ­ನಾದರೂ ವಿಶೇಷ ಕಾಣುತ್ತದೆಯೇ?’ ಆಕೆ ಒಂದು ಕ್ಷಣ ಅವನ ಮುಖವನ್ನೇ ನೋಡಿ, ‘ಸರ್, ನೀವು ಅತ್ಯಂತ ಗುಣ­ಮಟ್ಟದ ಕಾಂಟಾಕ್ಟ ಲೆನ್ಸ್ ಬಳಸುತ್ತೀರಿ’ ಎಂದಳು. ಗುಂಡಣ್ಣನಿಗೆ ಆಶ್ಚರ್ಯ.

‘ಶಹಬಾಷ್‌, ನಿಮ್ಮ ದೃಷ್ಟಿ ತುಂಬ ನಾಜೂ­ಕಾ­ಗಿದೆ. ನಿಮಗೆ ಹೇಗೆ ಅದು ಗೊತ್ತಾಯಿತು?’ ಎಂದು ಕೇಳಿದ. ಆಕೆ, ‘ನಿಮ್ಮ ವಯಸ್ಸಿಗೆ ಕನ್ನಡಕ ಬರದೇ ಇರುತ್ತ­ದೆಯೇ? ಕಾಂಟಾಕ್ಟ ಲೆನ್ಸ್ ತುಂಬ ಒಳ್ಳೆಯ­ದಾದ್ದರಿಂದ ಹಾಕಿ­ಕೊಂಡದ್ದು ಗೊತ್ತೇ ಆಗುವುದಿಲ್ಲ. ಕನ್ನಡಕ ಹಾಕಿಕೊಳ್ಳ­ಬೇಕಾದರೆ, ಕಿವಿಗಳು ಬೇಕಲ್ಲವೇ?’ ಎಂದಳು. ಗುಂಡಣ್ಣನಿಗೆ ತುಂಬ ಹಿತವಾ­ಯಿತು. ಆಕೆಯನ್ನೇ ಆಯ್ಕೆ ಮಾಡಿಕೊಂಡ. ಆಕೆ ಸತ್ಯ ಹೇಳಿದ್ದರೂ ಮನಸ್ಸಿಗೆ ನೋವಾಗದಂತೆ ಹೇಳಿದ್ದಳು. ಕೆಲವರು ಒರಟು ಮಾತ­ನಾಡು­ವುದನ್ನೇ ನೇರವಾಗಿ ಮಾತನಾ­ಡುವುದು ಎಂದುಕೊಳ್ಳುತ್ತಾರೆ. ನೇರ­ವಾದ ಮಾತನ್ನು ಮೃದುವಾ­ಗಿಯೂ ಹೇಳಬಹುದು. ಅದಕ್ಕೇ ಒಂದು ಸುಭಾಷಿತ ಹೇಳುತ್ತದೆ, ‘ಸತ್ಯವನ್ನೇ ಹೇಳು, ಆದರೆ ಪ್ರಿಯವಾಗುವಂತೆ ಹೇಳು. ಸತ್ಯವನ್ನು ಅಪ್ರಿಯವೆನಿಸುವ ಹಾಗೆ ನುಡಿಯಬೇಡ’. ಹಾಗೆ ಮನಸ್ಸಿಗೆ ನೋವಾಗದಂತೆ ಆದರೆ ಸತ್ಯವನ್ನು ಮರೆ­ಮಾಚದಂತೆ ಹೇಳುವುದೂ ಒಂದು ವಿಶೇಷ ಕಲೆ. ಅದನ್ನು ನಾವು ಸಾಧಿಸಿ­ಕೊಳ್ಳಬೇಕು.         ಕೃಪೆ :ಮುಖ ಪುಸ್ತಕ.                               ಸಂಗ್ರಹ : ವೀರೇಶ್ ಅರಸಿಕೆರೆ .ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059