ದಿನಕ್ಕೊಂದು ಕಥೆ. 194
🌻🌻 *ದಿನಕ್ಕೊಂದು ಕಥೆ*🌻🌻 *ಯಜಮಾನರನ್ನೇ ಸುಡುವ ಬೆಂಕಿ*
ಕೆಲವರಿಗೆ ಒಂದು ರೋಗವಿರುತ್ತದೆ. ತಾವು ಎಷ್ಟೇ ದೊಡ್ಡವರಾಗಿದ್ದರೂ, ಬಹಳ ಶ್ರೇಷ್ಠ ಸ್ಥಾನದಲ್ಲಿದ್ದರೂ ಮತ್ತೊಬ್ಬರ ಬಗ್ಗೆ ಯಾರಾದರೂ ಒಳ್ಳೆಯ ಮಾತು ಹೇಳಿದರೆ ಹೊಟ್ಟೆ ಉರಿದು ಹೋಗುತ್ತದೆ, ತಳಮಳವಾಗುತ್ತದೆ, ಅದನ್ನು ತಡೆದುಕೊಳ್ಳುವುದು ಆಗುವುದಿಲ್ಲ. ಹೀಗೆ ಇರುವವರ ಬದುಕು ಹೇಗಾಗುತ್ತದೆ ಎಂದು ಹೇಳುವ ಸುಂದರವಾದ ಕಥೆಯನ್ನು ನೇಪಾಳದಲ್ಲಿ ಜನ ಹೇಳುತ್ತಾರೆ.
ದೇಶದ ರಾಜನಿಗೆ ಯಾರೋ ಪರದೇಶದವರು ವಿಶೇಷ ಲಕ್ಷಣದ ಆನೆಮರಿಯನ್ನು ಕಾಣಿಕೆಯಾಗಿ ಕೊಟ್ಟರು. ಅದು ಬೆಳೆದಂತೆಲ್ಲ ಮತ್ತಷ್ಟು ವಿಶೇಷವಾಗಿ ಕಾಣತೊಡಗಿತು. ಅದರ ಮೈಕಾಂತಿ ಅಪರೂಪವಾಗಿತ್ತು. ಅದರ ದೊಡ್ಡ ಗಾತ್ರ, ಗಂಭೀರವಾದ ನಡೆ, ಸೌಮ್ಯ ವರ್ತನೆ ಎಲ್ಲರಿಗೂ ಪ್ರಿಯವಾಗಿತ್ತು. ಅದನ್ನು ನೋಡಿಕೊಳ್ಳುತ್ತಿದ್ದ ಮಾವುತನಿಗೂ ಅದು ತುಂಬ ವಿಶೇಷ ಎನ್ನಿಸಿತು.
ಅವನು ಮೆಲುವಾಗಿ ಏನು ಹೇಳಿದರೂ ತಕ್ಷಣವೇ ಮಾಡಿಬಿಡುತ್ತಿತ್ತು. ರಾಜನಿಗೆ ಅದರ ಮೇಲೆ ಬಲು ಪ್ರೀತಿ. ಅದಕ್ಕೆ ಚೆನ್ನಾಗಿ ಅಲಂಕಾರ ಮಾಡಿಸಿ ಅದರ ಮೇಲೆ ಅಂಬಾರಿಯನ್ನು ಬಿಗಿಸಿ ತಾನು ಅದರಲ್ಲಿ ಕುಳಿತು ನಗರ ಪ್ರದಕ್ಷಿಣೆಗೆ ಹೋಗುತ್ತಿದ್ದ. ನಗರದ ಜನರಿಗೆ ಇದೊಂದು ಸುಂದರ ದೃಶ್ಯ. ಒಂದು ತಿಂಗಳು ಈ ರೀತಿ ಮೆರವಣಿಗೆಯಾದ ಮೇಲೆ ಅವನಿಗೆ ಜನರು ಮಾತನಾಡಿಕೊಳ್ಳುವುದು ಕಿವಿಗೆ ಬಿತ್ತು. ಅವರು ಸುಂದರವಾದ ಅನೆಯನ್ನು ಹೊಗಳುವಾಗ ಅವನ ಬಗ್ಗೆ ಒಳ್ಳೆಯ ಮಾತನ್ನಾಡುತ್ತಿರಲಿಲ್ಲ.
ಇಷ್ಟು ಅದ್ಭುತವಾದ ಆನೆ ನಿಜವಾಗಿಯೂ ಚಕ್ರವರ್ತಿಯ ಬಳಿಗೆ ಇರಬೇಕು, ನಮ್ಮ ಸಾಮಂತ ರಾಜನ ಬಳಿ ಅಲ್ಲ ಎಂದು ಕೆಲವರೆಂದರೆ ಮತ್ತೆ ಕೆಲವರು, ಅಯ್ಯೋ, ಅಷ್ಟು ದೊಡ್ಡ ಆನೆಯ ಮೇಲೆ ನಮ್ಮ ರಾಜ ಒಣಗಿದ ಮರದ ಬೊಂಬೆಯಂತೆ ಕಾಣುತ್ತಾನೆ ಎಂದರು. ತನಗಿಂತ ಹೆಚ್ಚಾಗಿ ಜನ ಆನೆಯನ್ನು ಹೊಗಳಿದಾಗ ರಾಜ ಕೋಪದಿಂದ ಕುದಿದು ಹೋದ. ಒಂದು ದಿನ ಮಾವುತನನ್ನು ಕರೆದು ಕೇಳಿದ, ‘ನಮ್ಮ ಪಟ್ಟದಾನೆ ನಿಜವಾಗಿಯೂ ವಿಶೇಷವಾಗಿದೆಯೇ?’ ಆತ, ‘ಪ್ರಭೂ, ನಾವು ತಲೆತಲಾಂತರದಿಂದ ಆನೆಗಳನ್ನೇ ನೋಡಿಕೊಂಡವರು. ಆದರೆ ಇಂಥ ಆನೆಯನ್ನು ನಾವು ಕಂಡೇ ಇಲ್ಲ.
ಇದೆಲ್ಲೋ ದೇವತೆಯೇ ಇರಬೇಕು’ ಎಂದ. ರಾಜನಿಗೆ ಮತ್ತಷ್ಟು ರೋಷ ಉಕ್ಕಿತು. ‘ಹಾಗಾದರೆ ಅದು ನೀನು ಹೇಳಿದ್ದನ್ನೆಲ್ಲ ಮಾಡುತ್ತದೆಯೇ?’ ಎಂದು ಕೇಳಿದ. ಮಾವುತ, ‘ಸ್ವಾಮೀ, ಅದಕ್ಕೆ ನಾನು ಬಾಯಿ ಬಿಟ್ಟು ಯಾವ ಆಜ್ಞೆಯನ್ನೂ ಮಾಡುವ ಕಾರಣವಿಲ್ಲ. ನನ್ನ ಮನಸ್ಸಿಗೆ ಹೊಳೆದದ್ದನ್ನೇ ತಕ್ಷಣ ಮಾಡುತ್ತದೆ’ ಎಂದ. ಹಾಗಾದರೆ ನಾಳೆ ಅದನ್ನು ಪರ್ವತದ ತುದಿಗೆ ಕರೆದುಕೊಂಡು ನಡೆ ಎಂದು ಆಜ್ಞೆ ಮಾಡಿದ ರಾಜ.
ಅವನ ಬುದ್ಧಿವಂತನಾದ ಮಂತ್ರಿಗೆ ರಾಜನ ಕುತಂತ್ರ ಹೊಳೆಯಿತು. ಮರುದಿನ ರಾಜ ಮತ್ತು ಮಂತ್ರಿ ಕೂಡ ಪರ್ವತದ ಕೋಡಿಗೆ ನಡೆದರು. ಆನೆ ಅಲ್ಲಿಗೆ ಸರಾಗವಾಗಿ ನಡೆದುಬಂತು. ಅದು ಪ್ರಪಾತಕ್ಕೆ ಎದುರಾಗಿ ಅಂಚಿಗೇ ನಿಲ್ಲುವಂತೆ ರಾಜ ಹೇಳಿದ. ಅದು ತೀರ ಅಂಚಿಗೇ ಹೋಗಿ ನಿಂತಿತು. ನಂತರ ಮುಂದಿನ ಎರಡು ಕಾಲುಗಳನ್ನು ಎತ್ತಿ ಹಿಂಗಾಲುಗಳ ಮೇಲೆ ನಿಲ್ಲುವಂತೆ ಹೇಳಿದ. ಅದು ಹಾಗೆ ಮಾಡಿತು. ಆಮೇಲೆ ಒಂದೇ ಕಾಲಿನ ಮೇಲೆ ನಿಲ್ಲು ಎಂದ. ಅದು ಅಂತೆಯೇ ನಿಂತಿತು.
ಈರ್ಷೆಯಿಂದ ರಾಜ ಹೇಳಿದ, ಪ್ರಪಾತದಲ್ಲಿ ಹಾರಿಕೋ. ಆನೆ ತಕ್ಷಣ ತಿರುಗಿ ಅವನಿದ್ದಲ್ಲಿಗೆ ಬಂದು ಆತನನ್ನು ಸೊಂಡಿಲಿನಲ್ಲಿ ಹಿಡಿದು ಗರಗರನೇ ತಿರುಗಿಸಿ ಪ್ರಪಾತಕ್ಕೆ ಎಸೆದುಬಿಟ್ಟಿತು. ನಂತರ ಜ್ಞಾನಿ ಮಂತ್ರಿಯನ್ನು ಬೆನ್ನಮೇಲೆ ಕೂಡ್ರಿಸಿಕೊಂಡು ನಗರಕ್ಕೆ ಬಂದು ಸಿಂಹಾಸನದ ಮೇಲೆ ಕೂಡ್ರಿಸಿತು. ಜನರೂ ಆನೆಯ ತೀರ್ಮಾನವನ್ನು ಒಪ್ಪಿದರು. ಈರ್ಷೆ, ದ್ವೇಷಗಳು ಬೆಂಕಿ ಇದ್ದಂತೆ. ಅದನ್ನು ಹೊಟ್ಟೆಯಲ್ಲಿ ತುಂಬಿಕೊಂಡ ಯಜಮಾನರನ್ನೇ ಮೊದಲು ಬಲಿ ತೆಗೆದುಕೊಳ್ಳುತ್ತವೆ. ಕೃಪೆ : ಮುಖ ಪುಸ್ತಕ. ಸಂಗ್ರಹ :ವೀರೇಶ್ ಅರಸಿಕೆರೆ .ದಾವಣಗೆರೆ.
Comments
Post a Comment