ದಿನಕ್ಕೊಂದು ಕಥೆ. 256

*🌻ದಿನಕ್ಕೊಂದು ಕಥೆ🌻                                            ಹೆತ್ತ ತಾಯಿಯ ಮುತ್ತೇ ಸ್ಫೂರ್ತಿ!*

ಇಲ್ಲಿರುವ ಅಪರೂಪದ ಚಿತ್ರದಲ್ಲಿ ತತ್ತ್ವಜ್ಞಾನಿ ಸಾಕ್ರೆಟಿಸರಿಗೆ ವಿಷಪ್ರಾಶನದಿಂದ ಸಾಯಿಸುವ ಶಿಕ್ಷೆ ಕೊಟ್ಟಾಗಿನ ಮನೋಜ್ಞವಾದ ದೃಶ್ಯವಿದೆ. ಎರಡು ಶತಮಾನಗಳ ಹಿಂದೆ ರಚಿಸಲ್ಪಟ್ಟ ಇದು ಇಂದು ಲಕ್ಷಾಂತರ ಡಾಲರುಗಳಷ್ಟು ಬೆಲೆಬಾಳುತ್ತದಂತೆ. ಇದನ್ನು ರಚಿಸಿದವರು ಇಂಗ್ಲೆಂಡಿನಲ್ಲಿ ನೆಲೆಸಿದ್ದ ಬೆಂಜಮಿನ್ ವೆಸ್ಟ್ ಎಂಬ ಚಿತ್ರಕಾರರು. ಇಂಗ್ಲೆಂಡಿನ ರಾಯಲ್ ಅಕ್ಯಾಾಡೆಮಿ ಆಫ್ ಆರ್ಟ್ ಸಂಸ್ಥೆಯ ಅಧ್ಯಕ್ಷರಾಗಿದ್ದವರು. ಆಗಿನ ಇಂಗ್ಲೆಂಡ್ ದೊರೆಗಳ ಆಪ್ತಮಿತ್ರರಾಗಿದ್ದವರು.

ಅವರ ಚಿತ್ರಗಳು ಲಕ್ಷಗಟ್ಟಲೆ ಬೆಲೆಯನ್ನು ಗಳಿಸುತ್ತಿದ್ದವು. ಆಶ್ಚರ್ಯವೇನೆಂದರೆ ಬೆಂಜಮಿನ್ನರು ಯಾವುದೇ ಕಲಾಶಾಲೆಯ ವಿದ್ಯಾರ್ಥಿಯಾಗಿ ಕಲೆಯನ್ನು ಕಲಿತವರಲ್ಲ. ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದಾಗ ಯಾವುದೇ ಚಿತ್ರಕಲಾ ಶಾಲೆಗೂ ಹೋಗದೆ ಯಾರಿಂದಲೂ ಪಾಠ ಹೇಳಿಸಿಕೊಳ್ಳದೆ ಇಷ್ಟೊಂದು ಪ್ರಖ್ಯಾತ ಚಿತ್ರಕಾರರಾಗಲು ಸ್ಫೂರ್ತಿ ಯಾರೆಂದು ಕೇಳಿದಾಗ ಅವರು ನನ್ನ ಹೆತ್ತ ತಾಯಿ ನನಗೆ ಕೊಟ್ಟ ಒಂದು ಸಿಹಿಮುತ್ತು ನಾನು ಈ ಮಟ್ಟಕ್ಕೇರಲು ಕಾರಣವಾಯಿತು! ಎಂದರಂತೆ. ಅದು ಹೇಗೆಂದು ಕೇಳಿದಾಗ ಅವರು ಹೇಳಿಕೊಂಡ ಘಟನೆ ಹೀಗಿದೆ.

ಬಡ ಕುಟುಂಬದವರಾದ ಅವರ ತಾಯಿ ಸಂಸಾರ ನಿರ್ವಹಣೆಗಾಗಿ ಸಿರಿವಂತರ ಮನೆಗಳಲ್ಲಿ ಕೆಲಸ ಮಾಡಬೇಕಾಗಿತ್ತಂತೆ. ಒಮ್ಮೆ ಯಾವುದೋ ಮನೆಯವರು ಆಕೆಗೆ ಬರೆಯಲು ಉಪಯೋಗಿಸುವ ಕಪ್ಪು, ನೀಲಿ, ಕೆಂಪು ಮತ್ತು ಹಸಿರು ಶಾಯಿಯ ಶೀಷೆಗಳನ್ನು ತರಲಿಕ್ಕೆ ಕಳುಹಿಸಿದ್ದರಂತೆ. ಅವನ್ನೆಲ್ಲ ಆಕೆ ಕೊಂಡುಕೊಳ್ಳುವಷ್ಟರಲ್ಲಿ ಕತ್ತಲಾಗಿತ್ತು. ಮರುದಿನ ಅದನ್ನು ಕೊಂಡೊಯ್ದರಾದೀತು ಎಂದುಕೊಂಡು ಆಕೆ ಅವೆಲ್ಲವನ್ನು ಮನೆಗೆ ತಂದಿಟ್ಟರು. ಆಕೆಗೆ ಬೆಂಜಮಿನ್ ವೆಸ್ಟ್ ಒಬ್ಬ ಏಳೆಂಟು ವರ್ಷದ ಮಗ ಮತ್ತು ಎರಡು ವರ್ಷ ವಯಸ್ಸಿನ ಸ್ಯಾಲಿ ಎಂಬ ಹೆಣ್ಣು ಮಗಳು ಇದ್ದರು. ಮರುದಿನ ಮುಂಜಾನೆ ಆಕೆ ಕೆಲಸಕ್ಕೆ ಹೋಗುವಾಗ ಬಣ್ಣಬಣ್ಣದ ಶಾಯಿಯ ಶೀಷೆಗಳನ್ನು ತೆಗೆದುಕೊಂಡು ಹೋಗಲು ಮರೆತುಬಿಟ್ಟರು.

ಆಕೆ ಮಗ ಬೆಂಜಮಿನನಿಗೆ ನಿನ್ನ ತಂಗಿ ಸ್ಯಾಾಲಿಯನ್ನು ನಾನು ಬರುವವರೆಗೂ ನೋಡಿಕೋ ಎಂದು ಹೇಳಿ ಹೋದರು. ತಂಗಿಯನ್ನು ಆಟವಾಡಿಸುತ್ತಿದ್ದ ಬೆಂಜಮಿನ್ನನ ಕಣ್ಣಿಗೆ ಬಣ್ಣಬಣ್ಣದ ಶಾಯಿಯ ಶೀಶೆಗಳು ಕಂಡವು. ಆತ ಅವನ್ನು ತನಗೆತಿಳಿದಂತೆ ಮಿಶ್ರಣ ಮಾಡಿದ. ಅವನ್ನು ಬಳಸಿಕೊಂಡು ತನ್ನ ಮುದ್ದು ತಂಗಿ ಸ್ಯಾಲಿಯ ಚಿತ್ರವನ್ನು ಗೋಡೆಯ ಮೇಲೆ ಬಿಡಿಸತೊಡಗಿದ.  ಹಾಗೆ ಮಾಡುವಾಗ ಮನೆಯ ನೆಲದ ಮೇಲೆ, ಅಲ್ಲಿದ್ದ ಕುರ್ಚಿ-ಮೇಜು-ಮಂಚಗಳ ಮೇಲೆ ಮತ್ತು ಗೋಡೆಯ ಮೇಲೆ ಬಣ್ಣ ಚೆಲ್ಲಾಪಿಲ್ಲಿಯಾಗಿ ಚೆಲ್ಲಿತ್ತು. ನೋಡಲು ಅಲ್ಲೇನೋ  ರಾದ್ಧಾಂತವಾದಂತೆ ಕಾಣುತ್ತಿತ್ತು!

ಬೆಂಜಮಿನರ ತಾಯಿ ಮನೆಗೆ ಬಂದಾಗ, ಮನೆಯ ನೆಲ, ಗೋಡೆಗಳು, ಮೇಜು-ಮಂಚಗಳ ಮೇಲೆ ಬಿದ್ದಿದ್ದ ಬಣ್ಣದೋಕುಳಿಯ ರಾದ್ಧಾಂತವನ್ನು ನೋಡಿದರು. ಬೇರೆ ಯಾರಾದರೂ ತಾಯಿ ಆ ರಾದ್ಧಾಂತವನ್ನು ನೋಡಿ ಏನು ಮಾಡಿತಿದ್ದರೋ ಏನೋ? ಆದರೆ ಆಕೆ ಮಗನ ಮೇಲೆ ಸಿಟ್ಟುಗೊಳ್ಳಲಿಲ್ಲ. ಮಗನಿಗೆ ಪೆಟ್ಟು ಕೊಡಲಿಲ್ಲ. ಗೋಡೆಯ ಮೇಲೆ ಮುಸುಕು ಮುಸುಕಾಗಿ ಬಿಡಿಸಲಾಗಿದ್ದ ಮಗಳು ಸ್ಯಾಲಿಯ ಚಿತ್ರವನ್ನು ನೋಡಿದರು. ಮಗನನ್ನು ಹತ್ತಿರ ಕರೆದು ಈ ಚಿತ್ರವನ್ನು ಬಿಡಿಸಿದ್ದು ನೀನೇನಾ? ಎಂದು ಕೇಳಿದರು. ಆತ ಅಂಜುತ್ತಲೇ ಹೌದೆಂದ. ತಕ್ಷಣ ತಾಯಿ ಮಗನನ್ನು ತಬ್ಬಿಕೊಂಡರು. ಕೆನ್ನೆಗೆ ಮುತ್ತು ಕೊಟ್ಟರು. ಎಷ್ಟು ಅದ್ಭುತವಾಗಿ ನಿನ್ನ ತಂಗಿಯ ಚಿತ್ರವನ್ನು ಬಿಡಿಸಿದ್ದೀಯ ಎಂದು ಉದ್ಘಾರ ತೆಗೆದರು!

ಮುಂದೊಂದು ದಿನ ಹೆಸರಾಂತ ಚಿತ್ರಕಾರನಾದ ಬೆಂಜಮಿನ್ ವೆಸ್ಟ್ ಅಂದು ಹುಟ್ಟಿಕೊಂಡ! ಆ ಮುತ್ತು ಮತ್ತು ಪ್ರೋತ್ಸಾಹದ ಮಾತುಗಳೇ ಆತನಿಗೆ ಸ್ಫೂರ್ತಿ ಎಂದು ಬೆಂಜಮಿನ್ನರು ಹೇಳಿಕೊಂಡರಂತೆ! ಅಂದಿನ ಪರಿಸ್ಥಿತಿಯಲ್ಲಿ ಬೆಂಜಮಿನರ ತಾಯಿಯ ಸ್ಥಳದಲ್ಲಿ ನಾವಿದ್ದಿದ್ದರೆ ನಾವೇನು ಮಾಡುತ್ತಿದ್ದೆವು? ಮುಂದೊಂದು ದಿನ ಪ್ರಖ್ಯಾತನಾಗುವ ಚಿತ್ರಕಾರನನ್ನು ಹುಟ್ಟು ಹಾಕುತ್ತಿದ್ದೆವೋ ಅಥವಾ ಮಗನ ಮೇಲೆ ಸಿಟ್ಟು ಮಾಡಿಕೊಂಡು, ಅವನಿಗೊಂದು ಪೆಟ್ಟು ಕೊಟ್ಟು ಅವನನ್ನು ಅಳಿಸಿ, ಅವನ ಸುಪ್ತ ಪ್ರತಿಭೆಯನ್ನು
ಅಳಿಸಿ ಹಾಕುತ್ತಿದ್ದೆವೋ?

ಕೃಪೆ:ಎಸ್.ಷಡಕ್ಷರಿ.                                   ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059