ದಿನಕ್ಕೊಂದು ಕಥೆ 296

*🌻ದಿನಕ್ಕೊಂದು ಕಥೆ🌻                                                                            ಮೇಡಂ! ಹೊಟ್ಟೆ ಹಸಿಯುತ್ತಿದೆ, ಆದರೆ ನಾನು ಭಿಕ್ಷುಕನಲ್ಲ!*

ವಿಚಿತ್ರವೆನಿಸಬಹುದಾದ ಈ ಮಾತುಗಳು ಕುತೂಹಲಕರವಲ್ಲವೇ? ಬನ್ನಿ, ಅದರ ಹಿಂದೆ ಇರುವ ಹೃದಯ– ಸ್ಪರ್ಶಿಯಾದ, ನಿಜಜೀವನದ ಪ್ರಸಂಗವನ್ನು ನೋಡೋಣ. ಕೆನಡಾದಲ್ಲಿ ಮಾರ್ಕ್ ರೈಟ್ ಎಂಬ ಆರೇಳು ವರ್ಷದ ಬಾಲಕನಿದ್ದ. ಆರ್ಥಿಕವಾಗಿ ಏನೇನೂ ಅನುಕೂಲವಿಲ್ಲದ ಕುಟುಂಬದಿಂದ ಬಂದವನು. ಆದರೆ ಆತನ ತಾಯಿ ಆತ್ಮವಿಶ್ವಾಸದಲ್ಲಿ ಮತ್ತು ಸ್ವಪ್ರಯತ್ನದಲ್ಲಿ ನಂಬಿಕೆಯುಳ್ಳವರು.

ಆರೇಳು ವರ್ಷದ ಮಾರ್ಕ್‌ನಿಗೆ ತಾನೂ ಒಂದಷ್ಟು ಸಂಪಾದಿಸಿ ತಾಯಿಗೆ ಸಹಾಯ ಮಾಡಬೇಕೆನ್ನುವ ಆಸೆ!  ಒಮ್ಮೆ ಆತ ಆ ಊರಿನಲ್ಲಿ ನಡೆಯುತ್ತಿದ್ದ ಕಲಾ ಪ್ರದರ್ಶನವೊಂದನ್ನು ನೋಡಲು ಹೋದ. ಅಲ್ಲಿ ವಿವಿಧ ಬಗೆಯ ಬಣ್ಣದ ಚಿತ್ರಗಳ ಪ್ರದರ್ಶನವಿತ್ತು. ಆ ಚಿತ್ರಗಳನ್ನು ನೋಡಿ ಮಾಕ್ ನಿರ್ಗೆ ಸ್ಫೂರ್ತಿ ಬಂತು. ತಾನೂ ಚಿತ್ರಗಳನ್ನು ರಚಿಸಬೇಕೆನಿಸಿತು. ಮನೆಗೆ ಬಂದ ನಂತರ ತಾಯಿಯನ್ನು ಕಾಡಿ-ಬೇಡಿ ಒಂದಷ್ಟು ದುಡ್ಡು ಪಡೆದು ಬಿಳಿ ಹಾಳೆಗಳನ್ನೂ, ವಿವಿಧ ಬಣ್ಣಗಳನ್ನೂ, ಬ್ರಶ್ಶನ್ನೂ ತಂದ. ಒಂದಷ್ಟು ಚಿತ್ರಗಳನ್ನು ಬರೆದ.

ತಾಯಿಗೆ ತೋರಿಸಿದ. ತಾಯಿ ಅವನ್ನೆಲ್ಲ ನೋಡಿ ‘ಮಗು, ನಿನ್ನಲ್ಲಿ ಪ್ರತಿಭೆ ಇದೆ. ಪ್ರಾಮಾಣಿಕ ಪ್ರಯತ್ನವೂ ಇದೆ. ಆದರೆ ಯಾವ್ಯಾವುದೋ ದೊಡ್ಡ ವಿಷಯಗಳನ್ನು ತೆಗೆದುಕೊಂಡು ಚಿತ್ರಗಳನ್ನು ಬಿಡಿಸುವ ಬದಲು, ನೀನು ನೋಡಿರುವ ವಸ್ತುಗಳ, ಪ್ರಾಣಿಗಳ ಚಿತ್ರಗಳನ್ನು ಬಿಡಿಸು. ಇಷ್ಟೊಂದು ದೊಡ್ಡ ಹಾಳೆಗಳಲ್ಲಿ ಬರೆಯುವ ಬದಲು ಪೋಸ್ಟ್ -ಕಾರ್ಡ್ ಗಾತ್ರದ ಡ್ರಾಯಿಂಗ್ ಕಾಗದಗಳನ್ನು ತೆಗೆದುಕೋ. ಅದರಲ್ಲಿ ಚಿತ್ರ ಬರಿ. ಆನಂತರ ಅವನ್ನು ಗ್ರೀಟಿಂಗ್ ಕಾರ್ಡ್‌ಗಳಂತೆ ಮಾರಲು ಪ್ರಯತ್ನಿಸು’ ಎಂಬ ಸಲಹೆಯನ್ನಿತ್ತರು.

ಮಾರ್ಕ್ ಹಾಗೆಯೇ ಮಾಡಿದ. ನಾಯಿಮರಿ, ಗಿಡದಲ್ಲೇ ಅರಳಿದಂಥ ಹೂ, ಕಾಮನಬಿಲ್ಲು ಮುಂತಾದ ಚಿತ್ರಗಳನ್ನು ಬರೆದು ಗ್ರೀಟಿಂಗ್ ಕಾರ್ಡ್‌ಗಳನ್ನು ತಯಾರಿಸಿದ. ತಾಯಿಯ ಮಾರ್ಗದರ್ಶನ ಪಡೆದು ಗ್ರೀಟಿಂಗ್ ಕಾರ್ಡ್‌ಗಳನ್ನು ಮಾರಲು ಹೊರಟ. ತನ್ನ ಬೀದಿಯಲ್ಲಿದ್ದ ಮನೆಗಳ ಬಾಗಿಲುಗಳನ್ನು ತಟ್ಟುತ್ತಿದ್ದ. ಮನೆಯೊಡತಿ ಬಾಗಿಲು ತೆರೆದಾಗ ‘ಆಂಟಿ! ಗುಡ್ ಮಾರ್ನಿಂಗ್. ನಾನು ಇದೇ ಬೀದಿಯಲ್ಲಿ ವಾಸಿಸುತ್ತೇನೆ. ನನಗೆ ಹೊಟ್ಟೆ ಹಸಿಯುತ್ತಿದೆ. ಆದರೆ ನಾನು ಭಿಕ್ಷೆ ಬೇಡಲು ಬಂದಿಲ್ಲ. ನಾನೇ ರಚಿಸಿದ ಗ್ರೀಟಿಂಗ್-ಕಾರ್ಡ್‌ಗಳನ್ನು ಮಾರಲು ಬಂದಿದ್ದೇನೆ. ಅಂಗಡಿಗಿಂತ ಬಹಳ ಕಡಿಮೆ ದರದಲ್ಲಿರುವ ಇವನ್ನು ನೀವು ಕೊಂಡುಕೊಂಡರೆ ನನಗೆ ಒಂದಷ್ಟು ದುಡ್ಡು ಸಿಗುತ್ತದೆ.

ನೋಡಿ ಇವೇ ನಾನು ರಚಿಸಿರುವ ಕಾರ್ಡುಗಳು. ಇವನ್ನೆಲ್ಲ ನೋಡಿ. ನಿಮಗಿಷ್ಟವಾದರೆ ಕೊಂಡುಕೊಳ್ಳಿ, ಇದರಲ್ಲಿ ನನ್ನ ಒತ್ತಾಯವೇನೂ ಇಲ್ಲ. ನೀವದನ್ನು ಕೊಂಡುಕೊಳ್ಳದಿದ್ದರೆ ನನಗೇನೂ ಬೇಸರವಿಲ್ಲ. ನಿಮ್ಮಂಥ ಒಳ್ಳೆ ಯ ಆಂಟಿಯನ್ನು ಭೇಟಿ ಮಾಡಿದ ಖುಷಿಯೇ ಸಾಕು’ ಎಂದು ದೃಢವಾದ ದನಿಯಲ್ಲಿ, ಆದರೆ ಕೇಳುವವರ ಕಿವಿಗೆ ಹಿತವಾಗುವ ರೀತಿಯಲ್ಲಿ ಹೇಳುತ್ತಿದ್ದ. ಆ ಪುಟ್ಟ ಪೋರನ ಸವಿ-ಮಾತುಗಳನ್ನು ಕೇಳಿದ ನಂತರ ಯಾವ ಮನೆಯಾಕೆಯೂ ಬೇಡವೆನ್ನುತ್ತಿರಲಿಲ್ಲ.

ಒಂದೋ ಎರಡೋ ಗ್ರೀಟಿಂಗ್ ಕಾರ್ಡ್‌ಗಳನ್ನು ಕೊಂಡುಕೊಂಡು ದುಡ್ಡು ಕೊಟ್ಟು ಕಳುಹಿಸುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ಮಾರ್ಕ್ ಐದಾರು ಡಾಲರ್ ಗಳಿಸುತ್ತಿದ್ದ. ವಾರಕ್ಕೆ ಮೂರು ದಿನ ಮಾತ್ರ ಮಾರಾಟ, ಉಳಿದಂತೆ ಓದು-ಬರಹದತ್ತ ಗಮನ ಹರಿಸುತ್ತಿದ್ದ. ಆತನ ಗ್ರೀಟಿಂಗ್ ಕಾರ್ಡ್‌ಗಳು ಮತ್ತು ಮಾರಾಟದ ಶೈಲಿ ಎಷ್ಟು ಜನಪ್ರಿಯವಾದವೆಂದರೆ ಆತನಿಗೆ ಹತ್ತು ವರ್ಷ ವಯಸ್ಸಾಗುವ ಹೊತ್ತಿಗೆ ಮೂರು ಸಾವಿರ ಡಾಲರ್‌ಗಳನ್ನು ಸಂಪಾದಿಸಿದ್ದ. ತನ್ನ ತಾಯಿಯನ್ನು ಕರೆದುಕೊಂಡು ಡಿಸ್ನಿ ವಲ್ಡರ್ ತೋರಿಸಿಕೊಂಡು ಬಂದ! ಮುಂದೆ ಕಾಲೇಜಿಗೆ ಹೋಗುವ ದಿನಗಳಲ್ಲಿ ‘ಕಿಡ್ಡಿ ಕಾರ್ಡ್ ಕಂಪನಿ’ ಎಂಬ ಗ್ರೀಟಿಂಗ್ ಕಾರ್ಡ್‌ಗಳನ್ನು ತಯಾರಿಸಿ ಮಾರಾಟ ಮಾಡುವ ಸಂಸ್ಥೆಯನ್ನೇ ಸ್ಥಾಪಿಸಿದ, ಅತೀ ಚಿಕ್ಕ ವಯಸ್ಸಿನ ಚೀಫ್ ಎಕ್ಸಿಕಿಟಿವ್ ಎಂಬ ಹೆಗ್ಗಳಿಕೆ ಸಂಪಾದಿಸಿದ.

ಕನಸೊಂದಿದ್ದರೆ, ಅದನ್ನು ನನಸು ಮಾಡಿಕೊಳ್ಳುವ ಛಲವಿದ್ದರೆ ಯಶಸ್ಸು ಪಡೆಯಲು ವಯಸ್ಸು ಅಡ್ಡವಾಗುವುದಿಲ್ಲ ಅಲ್ಲವೇ? ನಮಗೂ ನಮ್ಮ ಮಕ್ಕಳಿಗೂ, ಮಾರ್ಕ್ ರೈಟ್ ಮಾದರಿಯಾಗುವನಲ್ಲವೇ?

ಕೃಪೆ:ಎಸ್.ಷಡಕ್ಷರಿ.                                        ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059