ದಿನಕ್ಕೊಂದು ಕಥೆ 297

*🌻ದಿನಕ್ಕೊಂದು ಕಥೆ*🌻
ಹಣ್ಣು ಹಣ್ಣು ಮುದುಕನೊಬ್ಬ ಮಗ-ಸೊಸೆ, ನಾಲ್ಕು ವರ್ಷದ ಮೊಮ್ಮಗನೊಂದಿಗೆ ವಾಸವಾಗಿದ್ದ. ಹೆಂಡತಿ ತೀರಿಹೋಗಿ ವರ್ಷಗಳೇ ಕಳೆದು ಹೋಗಿದ್ದವು. ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಮಡದಿ ತೀರಿದ ಮೇಲೆ ಈ ಮುದುಕಪ್ಪ ಯಾರಿಗೂ ಬೇಡದವನಾಗಿದ್ದ. ವಯೋಸಹಜವಾಗಿ ಆತನಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲ, ನಡೆಯಲು ಆಗುತ್ತಿರಲಿಲ್ಲ, ಊಟ ಮಾಡುವಾಗ ಕೈ ನಡುಗುತ್ತಿತ್ತು.  ಪ್ರತಿ ರಾತ್ರಿ ನಾಲ್ಕೂ ಜನರು ಒಟ್ಟಿಗೆ ಊಟ ಮಾಡುತ್ತಿದ್ದರು. ಆದರೆ ನಡುಗುವ ಕೈಗಳ ಅಜ್ಜ ಊಟ ಮಾಡುವಾಗ ಆಹಾರ ಕೆಳಗೆ ಬೀಳುತ್ತಿತ್ತು, ಗಾಜಿನ ಲೋಟ ಬಿದ್ದು ಒಡೆದು ಹೋಗುತ್ತಿತ್ತು, ಊಟದ ಮೇಜು ಪ್ರತಿದಿನವೂ ಆತನಿಂದ ಗಲೀಜಾಗುತ್ತಿತ್ತು. ಸೊರ ಸೊರ ಶಬ್ದ ಮಾಡುತ್ತಾ ಊಟ ಮಾಡುವ ಅವನಿಂದ ಮಗ-ಸೊಸೆಗೆ ಕಿರಿಕಿರಿಯಾಗುತ್ತಿತ್ತು. ಅತಿಥಿಗಳು ಮನೆಗೆ ಬಂದರೆ ಮುದುಕನನ್ನು ವಿಚಿತ್ರವಾಗಿ ನೋಡುತ್ತಿದ್ದರು.

‘ಅಪ್ಪನಿಗೆ ವಯಸ್ಸಾಗಿದೆ. ಎಷ್ಟೊಂದು ಗಲೀಜಾಗಿ ಊಟ ಮಾಡುತ್ತಾರೆ. ನನಗಂತೂ ಸಾಕಾಗಿ ಹೋಗಿದೆ’ ಎಂದು ಒಂದು ದಿನ ಮಗ ಹೆಂಡತಿಗೆ ಹೇಳಿದ.‘ಅಯ್ಯೋ ದಿನವೂ ಹಾಲು ಚೆಲ್ಲಿಕೊಳ್ಳುತ್ತಾರೆ, ಅವರಿಂದ ಒಡೆದು ಹೋದ ಗಾಜಿನ ಪಾತ್ರೆಗಳಿಗೆ ಲೆಕ್ಕವೇ ಇಲ್ಲ’ ಎಂದಳು ಹೆಂಡತಿ. ಅಂದಿನಿಂದ ಅಡುಗೆ ಮನೆಯ ಮೂಲೆಯಲ್ಲಿ ಮುದುಕನಿಗೆ ಪ್ರತ್ಯೇಕವಾಗಿ ಊಟದ ಟೇಬಲ್ ಹಾಕಿಕೊಡಲಾಯಿತು. ಗಾಜಿನ ಪಾತ್ರೆ ಬಿದ್ದರೆ ಒಡೆಯುತ್ತದೆ, ಸ್ಟೀಲ್ ಪಾತ್ರೆ ಬಿದ್ದರೆ ಶಬ್ದವಾಗಿ ರಗಳೆಯಾಗುತ್ತದೆ ಎಂದು ಆತನಿಗೆ ಮರದ ಪಾತ್ರೆಯೊಂದರಲ್ಲಿ ಊಟ ನೀಡುವ ವ್ಯವಸ್ಥೆ ಮಾಡಿದರು. ಅಂದಿನಿಂದ ಮುದುಕ ಒಂಟಿಯಾಗಿ ಮೂಲೆಯಲ್ಲಿ ಕುಳಿತು ಊಟ ಮಾಡತೊಡಗಿದ. ಉಳಿದವರು ಒಟ್ಟಿಗೆ ಕುಳಿತು ನಗು ನಗುತ್ತಾ ಊಟ ಮಾಡುತ್ತಿದ್ದರು. ದಿನವೂ ಹೆಂಡತಿಯನ್ನು ನೆನೆದು, ತನ್ನ ಪರಿಸ್ಥಿತಿಗೆ ಮರುಗಿ ಮುದುಕ ಕಣ್ಣೀರಾಗುತ್ತಿದ್ದ. ನಾಲ್ಕು ವರ್ಷದ ಮೊಮ್ಮಗ ಇವೆಲ್ಲವನ್ನೂ ಮೌನವಾಗಿಯೇ ನೋಡಿಕೊಂಡಿದ್ದ.

ಒಂದು ದಿನ ಸಂಜೆ ಹುಡುಗ ಮರದ ತುಂಡುಗಳನ್ನು ತಂದು ಗುಡ್ಡೆ ಹಾಕಿಕೊಂಡು ಏನೋ ಮಾಡುತ್ತಿದ್ದ. ಅಲ್ಲಿಗೆ ಬಂದ ಅವನ ತಂದೆ ‘ಏನು ಮಾಡುತ್ತಿದ್ದೀಯಾ ಮಗು?’ ಎಂದು ಕೇಳಿದ. ‘ಓಹ್ ಅದಾ, ನಾನು ಎರಡು ಪುಟ್ಟ ಪುಟ್ಟ ಪಾತ್ರೆಗಳನ್ನು ಮಾಡುತ್ತಿದ್ದೇನೆ. ಈಗ ನಮ್ಮಲ್ಲಿ ಒಂದೆರಡು ಪಾತ್ರೆಗಳಷ್ಟೇ ಇವೆ. ಅವು ಅಜ್ಜನಿಗೆ ಆಗುತ್ತವೆ. ಆದರೆ ನೀವು ದೊಡ್ಡವರಾದ ಮೇಲೆ ನಾನು ನಿಮಗೆ ಊಟ ಹಾಕಲು ಮರದ ಬೌಲ್ ಬೇಕಲ್ಲ’ ಎಂದು ಹೇಳಿ ಮತ್ತೆ ಕೆಲಸದಲ್ಲಿ ಮಗ್ನನಾದ. ಅಪ್ಪನಿಗೆ ಯಾರೋ ಕೆನ್ನೆಗೆ ಬಾರಿಸಿದಂತಾಯಿತು. ನಾಲ್ಕು ವರ್ಷದ ಮಗನ ಮಾತನ್ನು ಅರಗಿಸಿಕೊಳ್ಳಲಾಗಲಿಲ್ಲ. ಹಿಂದೆಯೇ ನಿಂತಿದ್ದ ಹೆಂಡತಿಯ ಕಣ್ಣುಗಳಲ್ಲೂ ಪಶ್ಚಾತ್ತಾಪದ ನೀರಿತ್ತು. ಅಂದು ರಾತ್ರಿ ಅಜ್ಜನ ಕೈ ಹಿಡಿದು ನಡೆಸಿಕೊಂಡು ಬಂದ ಮಗ, ಅವನನ್ನು ಎಲ್ಲರೊಂದಿಗೆ ಊಟಕ್ಕೆ ಕೂರಿಸಿದ. ಆತನ ಕೈ ನಡುಗಿದಾಗ, ಹಾಲು ಚೆಲ್ಲಿದಾಗ, ಅವನಿಂದ ಊಟದ ಟೇಬಲ್ ಗಲೀಜಾದಾಗ ಯಾರೂ ಅವನನ್ನು ಅಪಹಾಸ್ಯ ಮಾಡಲಿಲ್ಲ, ಮುಖ ಸಿಂಡರಿಸಲಿಲ್ಲ.  ನಿಮ್ಮ ಮಕ್ಕಳು ನಿಮ್ಮಿಂದ ಕಲಿಯುತ್ತಾರೆ. ನೀವು ಕಲಿಸಬೇಕೆಂದೇನಿಲ್ಲ ನಿಮ್ಮ ಪ್ರತಿ ಮಾತು, ವರ್ತನೆ, ಹಾವ-ಭಾವ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಮಕ್ಕಳೊಂದಿಗೆ ವ್ಯವಹರಿಸುವಾಗ ಗಮನವಿರಲಿ. ನೀವು ನಿಮ್ಮ ಹೆತ್ತವರೊಂದಿಗೆ ಹೇಗೆ ನಡೆದುಕೊಳ್ಳುತ್ತೀರೋ ಹಾಗೆಯೇ ನಿಮ್ಮ ಮಕ್ಕಳು ಮುಂದೆ ನಿಮ್ಮನ್ನು ನಡೆಸಿಕೊಳ್ಳುತ್ತಾರೆ. ನೀವೇನು ಬಿತ್ತುತ್ತೀರೋ ಅದೇ ಬೆಳೆಯುತ್ತದೆ, ಅದನ್ನೇ ಪಡೆಯುತ್ತೀರಿ!

***
ರೈತನೊಬ್ಬ ಪ್ರತಿನಿತ್ಯ ಬೇಕರಿಯವನಿಗೆ ಒಂದು ಪೌಂಡ್ ಬೆಣ್ಣೆಯನ್ನು ಮಾರುತ್ತಿದ್ದ. ಒಂದು ದಿನ ಅಂಗಡಿಯವನು ಬೆಣ್ಣೆಯನ್ನು ತೂಕ ಮಾಡಿ ನೋಡಿ, ಅದು ಒಂದು ಪೌಂಡ್ ಇದೆಯೇ ಎಂದು ಪರೀಕ್ಷಿಸಿದ. ಆದರೆ ಬೆಣ್ಣೆ ಒಂದು ಪೌಂಡ್ ತೂಗಲಿಲ್ಲ, ಸ್ವಲ್ಪ ಕಡಿಮೆಯೇ ಇತ್ತು. ಅದರಿಂದ ಕೋಪಗೊಂಡ ಬೇಕರಿಯವನು ರೈತನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ. ನ್ಯಾಯಾಧೀಶರು ‘ನೀನು ಯಾವ ಮಾದರಿಯ ತಕ್ಕಡಿಯಲ್ಲಿ ಬೆಣ್ಣೆಯನ್ನು ಅಳತೆ ಮಾಡುತ್ತೀಯಾ?’ ಎಂದು ರೈತನನ್ನು ಕೇಳಿದರು. ಅದಕ್ಕೆ ರೈತ ‘ಸ್ವಾಮಿ ನಾನು ರೈತ. ನನಗೆ ಓದು-ಬರಹ ಗೊತ್ತಿಲ್ಲ, ವ್ಯವಹಾರ ಜ್ಞಾನವೂ ಅಷ್ಟಕ್ಕಷ್ಟೆ. ನನಗೆ ಈ ಅಳತೆಯ ಲೆಕ್ಕವೆಲ್ಲ ತಿಳಿಯದು, ಆದರೆ ನನ್ನ ಬಳಿ ತಕ್ಕಡಿಯೊಂದಿದೆ’ ಎಂದ. ‘ಹಾಗಾದರೆ ನೀನು ಬೆಣ್ಣೆಯನ್ನು ಹೇಗೆ ತೂಕ ಮಾಡುತ್ತೀಯ?’ ಎಂದು ಕೇಳಿದರು ನ್ಯಾಯಾಧೀಶರು.

‘ಮಹಾಸ್ವಾಮಿ, ಈ ಬೇಕರಿಯಾತ ಬಹಳ ಹಿಂದಿನಿಂದಲೂ ನನ್ನಿಂದ ಬೆಣ್ಣೆ ಖರೀದಿಸುತ್ತಿದ್ದಾರೆ. ನಾನೂ ಕೂಡ ಇವರ ಅಂಗಡಿಯಿಂದ ಒಂದು ಪೌಂಡ್ ಬ್ರೆಡ್ ಖರೀದಿಸುತ್ತಾ ಬಂದಿದ್ದೇನೆ. ಪ್ರತಿದಿನ ಇವರು ಬ್ರೆಡ್ ತಂದುಕೊಟ್ಟಾಗ ನಾನು ಅದನ್ನು ತಕ್ಕಡಿಯ ಮೇಲಿಟ್ಟು ಅಷ್ಟೇ ತೂಕದ ಬೆಣ್ಣೆಯನ್ನು ಅವರಿಗೆ ಕೊಡುತ್ತಿದ್ದೇನೆ. ನೀವು ಶಿಕ್ಷಿಸುವುದಾದರೆ ಮೊದಲು ಅಂಗಡಿಯವನನ್ನೇ ಶಿಕ್ಷಿಸಿ’ ಎಂದ. ಇಲ್ಲಿ ಯಾರು ತಪ್ಪಿತಸ್ಥರು? ಬದುಕಿನಲ್ಲಿ ನೀವೇನು ಕೊಡುತ್ತೀರೋ, ಅದೇ ನಿಮಗೆ ವಾಪಸ್ ಬರುತ್ತದೆ. ನೀವು ಪ್ರಾಮಾಣಿಕರಾಗಿದ್ದರೆ ಜಗತ್ತು ನಿಮ್ಮೊಂದಿಗೆ ಪ್ರಾಮಾಣಿಕವಾಗಿಯೇ ವರ್ತಿಸುತ್ತದೆ. ಕೆಲವರು ಮೋಸ, ವಂಚನೆ, ಸುಳ್ಳು ಹೇಳುವುದನ್ನೇ ಅಭ್ಯಾಸವನ್ನಾಗಿಸಿಕೊಂಡಿರುತ್ತಾರೆ. ಅವರು ಎಷ್ಟು ಸುಳ್ಳು ಹೇಳುತ್ತಾರೆಂದರೆ ಅವರಿಗೂ ಸತ್ಯ ಏನೆಂಬುದು ತಿಳಿದಿರುವುದಿಲ್ಲ. ಹಾಗಾದರೆ ಅವರು ನಿಜಕ್ಕೂ ಯಾರಿಗೆ ಮೋಸ ಮಾಡುತ್ತಿರುತ್ತಾರೆ?                                      ಕೃಪೆ:ವಿಶ್ವ ವಾಣಿ.                                            ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059