ದಿನಕ್ಕೊಂದು ಕಥೆ 298
*🌻ದಿನಕ್ಕೊಂದು ಕಥೆ🌻 *ಯಾರಿಗೆ ಗೊತ್ತು ಆಕೆಗದು ಜೀವನದ ಕೊನೆಯ ಡ್ರೈವ್ ಇರಬಹುದು!*
ಇದು ಟ್ಯಾಕ್ಸಿ ಡ್ರೈವರ್‌ನೊಬ್ಬ ತನ್ನ ಡೈರಿಯಲ್ಲಿ ಬರೆದುಕೊಂಡ ಘಟನೆ.
ಅವತ್ತು ಆಗಲೇ ಸಂಜೆಗತ್ತಲು ಕವಿದಿತ್ತು. ಬೆಳಗ್ಗೆಯಿಂದ ಡ್ರೈವ್ ಮಾಡಿ, ಬೇರೆ ಬೇರೆ ರೀತಿಯ ಜನರೊಂದಿಗೆ ವ್ಯವಹರಿಸಿ ದೇಹಕ್ಕೆ, ಮನಸ್ಸಿಗೆ ದಣಿವಾಗಿತ್ತು. ಇನ್ನೇನು ಮನೆಗೆ ಹೊರಡಬೇಕು ಅನ್ನುವಷ್ಟರಲ್ಲಿ ಯಾರೋ ಫೋನ್ ಮಾಡಿ ಬರ ಹೇಳಿದರು. ‘ಇಲ್ಲ ಬೇರೆ ಟ್ಯಾಕ್ಸಿಗೆ ಹೇಳಿ. ಇವತ್ತಿನ ಟ್ರಿಪ್ ಮುಗಿದಿದೆ’ ಎಂದು ಹೇಳಬೇಕೆನಿಸಿದರೂ ಯಾಕೋ ಹೇಳಲಿಲ್ಲ. ಅವರು ಹೇಳಿದ ಅಡ್ರೆಸ್‌ಗೆ ಹೋದೆ. ಅದೊಂದು ಹಳೆಯ ಮನೆ. ಅಲ್ಲಿ ಜನವಾಸವಿದೆ ಎಂದು ಹೇಳಿದರೆ ನಂಬುವುದೇ ಕಷ್ಟ. ನಾನು ಕಾರ್ ನಿಲ್ಲಿಸಿ ಒಂದೆರಡು ಬಾರಿ ಹಾರ್ನ್ ಮಾಡಿದೆ. ಯಾರೂ ಬಾಗಿಲು ತೆರೆಯಲಿಲ್ಲ. ಇದು ತಪ್ಪು ಅಡ್ರೆಸ್ ಇರಬಹುದೇ, ವಾಪಸ್ ಹೋಗಿಬಿಡೋಣವೇ ಅನಿಸಿತು. ಏನಾದರಾಗಲಿ ನೋಡೋಣ ಎಂದು ಕಾರಿನಿಂದಿಳಿದು ಮನೆ ಬಾಗಿಲು ತಟ್ಟಿದೆ. ಒಳಗಿನಿಂದ ಯಾರೋ ಕ್ಷೀಣ ದನಿಯಲ್ಲಿ ‘ಒಂದು ನಿಮಿಷ’ ಎಂದರು. ಒಳಗಿನಿಂದ ಅಸ್ಪಷ್ಟವಾಗಿ ಸದ್ದು ಕೇಳಿ ಬರುತ್ತಿತ್ತು. ಕೆಲ ಕ್ಷಣಗಳ ಮೌನದ ನಂತರ 90-95 ವರ್ಷದ ಮುದುಕಿಯೊಬ್ಬರು ನಿಧಾನವಾಗಿ ಬಾಗಿಲು ತೆರೆದರು. ಆಕೆಯ ಪಕ್ಕದಲ್ಲಿ ಸಾಧಾರಣ ಗಾತ್ರದ ಸೂಟ್‌ಕೇಸ್ ಒಂದಿತ್ತು. ಮನೆಯೊಳಗಿದ್ದ ಎಲ್ಲ ಫರ್ನಿಚರ್‌ಗಳ ಮೇಲೆ ಹೊದಿಕೆ ಹೊದೆಸಲಾಗಿತ್ತು. ಗೋಡೆಯ ಮೇಲೆ ಯಾವುದೇ ಫೋಟೊ ಅಥವಾ ಗಡಿಯಾರ ಇರಲಿಲ್ಲ. ಪಕ್ಕದಲ್ಲಿದ್ದ ಒಂದು ಮರದ ಪೆಟ್ಟಿಗೆಯಲ್ಲಿ ಒಂದಿಷ್ಟು ವಸ್ತುಗಳನ್ನು, ಫೋಟೊಗಳನ್ನು ತುಂಬಿಸಿಟ್ಟಿದ್ದು ಕಾಣಿಸುತ್ತಿತ್ತು.
‘ಈ ಸೂಟ್‌ಕೇಸನ್ನು ಕಾರಿನವರೆಗೆ ತೆಗೆದುಕೊಂಡು ಬರುತ್ತೀಯ?’ ಎಂದು ದೀನಳಾಗಿ ಕೇಳಿದಳು ಆ ಮುದುಕಿ.
ಸೂಟ್‌ಕೇಸನ್ನು ಕಾರಿನೊಳಗಿಟ್ಟು ಬಂದೆ. ನಂತರ ಆಕೆಯ ಹೆಗಲು ಹಿಡಿದು ಸಹಾಯಕ್ಕೆ ಮುಂದಾದೆ. ‘ನೀನು ತುಂಬಾ ಒಳ್ಳೆಯವನಪ್ಪ’ ಎಂದು ಹೇಳುತ್ತ ಆಕೆ ನನ್ನನ್ನು ಹಿಡಿದುಕೊಂಡು ಕಾರಿನವರೆಗೆ ನಡೆದು ಬಂದಳು. ‘ಏನಿಲ್ಲ ಅಜ್ಜಿ. ನನ್ನಮ್ಮನನ್ನು ಬೇರೆಯವರು ಯಾವ ರೀತಿ ನಡೆಸಿಕೊಳ್ಳಬೇಕೆಂದು ಬಯಸುತ್ತೇನೋ ಅದೇ ರೀತಿ ನಾನು ನನ್ನೆಲ್ಲ ಪ್ರಯಾಣಿಕರ ಜತೆ ನಡೆದುಕೊಳ್ಳುತ್ತೇನೆ’ ಎಂದೆ. ಆಕೆ ಮತ್ತೊಮ್ಮೆ, ಮಗದೊಮ್ಮೆ ನನಗೆ ಥ್ಯಾಂಕ್ಸ್ ಹೇಳುತ್ತಲೇ ಇದ್ದಳು. ಕಾರಿನಲ್ಲಿ ಕುಳಿತ ಮೇಲೆ ಆಕೆ ನನಗೆ ಅಡ್ರೆಸ್ ಒಂದನ್ನು ನೀಡಿ ‘ಇಲ್ಲಿಗೆ ಕರೆದುಕೊಂಡು ಹೋಗುತ್ತೀಯಾ?’ ಎಂದು ಕೇಳಿಕೊಂಡಳು. ಅಜ್ಜಿ ಕೊಟ್ಟ ಅಡ್ರೆಸ್‌ಗೆ ಹೋಗಲು ಬಹಳ ಸಮಯ ಬೇಕಾಗಿತ್ತು. ‘ಇದು ಬಹಳ ದೂರವಿದೆ. ಇಲ್ಲಿಗೆ ಹೋಗಲು 1-2 ಗಂಟೆ ಬೇಕಾಗುತ್ತದೆ’ ಎಂದೆ. ದಣಿದಿದ್ದ ದೇಹ ‘ಆಗುವುದಿಲ್ಲ’ ಎಂದು ಹೇಳಿಬಿಡು ಎನ್ನುತ್ತಿತ್ತು. ಆದರೆ ಮನಸ್ಸು ಕೇಳಲಿಲ್ಲ. ‘ಪರವಾಗಿಲ್ಲ. ನನಗೆ ಗಡಿಬಿಡಿಯೇನಿಲ್ಲ. ಅಲ್ಲಿರುವ ವಿಶ್ರಾಂತಿಗೃಹಕ್ಕೆ ತೆರಳುತ್ತಿದ್ದೇನೆ’ ಎಂದಳು ಅಜ್ಜಿ. ‘ನನಗೆ ನನ್ನವರೆಂದು ಹೇಳಿಕೊಳ್ಳಲು ಯಾರೂ ಉಳಿದಿಲ್ಲ. ಡಾಕ್ಟರ್ ಹೇಳುವ ಪ್ರಕಾರ ನನಗೆ ಹೆಚ್ಚು ಸಮಯವೂ ಉಳಿದಿಲ್ಲವಂತೆ’ ಆಕೆ ಕ್ಷೀಣವಾಗಿ ಹೇಳತೊಡಗಿದಳು. ನಾನು ಮೀಟರ್ ಆಫ್ ಮಾಡಿದೆ.
‘ಅಜ್ಜಿ, ನೀವು ಯಾವ ದಾರಿಯಲ್ಲಿ ಹೋಗಬೇಕು?’ ಎಂದು ಕೇಳಿದೆ. ಮುಂದಿನ ಎರಡು ಗಂಟೆಗಳು ನಾವು ನ್ಯೂಯಾರ್ಕ್ ನಗರದಲ್ಲೆಲ್ಲ ಸುತ್ತಾಡಿದೆವು. ಆಕೆ ತಾನು ಮೊದಲು ಕೆಲಸ ಮಾಡುತ್ತಿದ್ದ ಆಫೀಸಿನ ಕಟ್ಟಡವನ್ನು ತೋರಿಸಿದಳು. ಅಲ್ಲಿ ಆಕೆ ಸುಮಾರು 20-25 ವರ್ಷ ರಿಸೆಪ್ಶನಿಸ್ಟ್ ಆಗಿ ದುಡಿದಿದ್ದಳಂತೆ. ಆಕೆ ಮದುವೆಯಾದ ಹೊಸತರಲ್ಲಿ ಗಂಡನೊಂದಿಗೆ ವಾಸವಿದ್ದ ಮನೆಯ ಬೀದಿಯಲ್ಲಿ ಹೋದೆವು. ಆಕೆ ಒಂದೊಂದೇ ನೆನಪುಗಳನ್ನು ಹೆಕ್ಕಿ ಹೆಕ್ಕಿ ಹೇಳತೊಡಗಿದಳು. ಅಲ್ಲಿದ್ದ ಫರ್ನಿಚರ್ ಅಂಗಡಿಯ ಜಾಗದಲ್ಲಿ ಮೊದಲು ನೃತ್ಯಶಾಲೆ ನಡೆಯುತ್ತಿಂತೆ. ಆಕೆ ಅಲ್ಲಿ ಡಾನ್ಸ್ ಮಾಡಲು ಹೋಗುತ್ತಿದ್ದಳಂತೆ. ಇವನ್ನೆಲ್ಲ ಹೇಳುವಾಗ ಆಕೆಯ ಕಣ್ಣುಗಳನ್ನು ನೋಡಬೇಕಿತ್ತು. ಒಂದೆರಡು ಜಾಗಗಳಲ್ಲಿ ಆಕೆ ಕಾರು ನಿಲ್ಲಿಸುವಂತೆ ಕೇಳಿಕೊಂಡಳು. ಕಾರಿನ ಗಾಜು ಇಳಿಸಿ ಸುಮ್ಮನೆ ನೋಡುತ್ತಾ ಕುಳಿತುಬಿಟ್ಟಳು. ಏನೂ ಹೇಳಲಿಲ್ಲ, ನಾನೂ ಕೇಳಲಿಲ್ಲ. ಅಷ್ಟರಲ್ಲಿ ಸಾಕಷ್ಟು ಕತ್ತಲಾಗಿಬಿಟ್ಟಿತ್ತು. ‘ಸಾಕು ಇನ್ನು ಹೋಗೋಣ, ನನಗೆ ಆಯಾಸವಾಗುತ್ತಿದೆ’ ಎಂದಳು ಅಜ್ಜಿ. ಕೊನೆಗೆ ನಾನು ನಿಶ್ಶಬ್ದವಾಗಿ, ಆಕೆ ಹೇಳಿದ ಜಾಗದತ್ತ ಕಾರು ಚಲಾಯಿಸಿದೆ. ಅದೊಂದು ವೃದ್ಧಾಶ್ರಮವಿರಬೇಕು. ಆ ಕಟ್ಟಡದ ರೂಪುರೇಷೆಗಳನ್ನು ನೋಡಿದರೆ ಹಾಗೆ ಅನಿಸುತ್ತಿತ್ತು. ಆಕೆ ಬರುವುದನ್ನೇ ಎದುರು ನೋಡುತ್ತಿದ್ದ ಯಾರೋ ಇಬ್ಬರು ಹೆಂಗಸರು ಹೊರಗಡೆಯೇ ನಿಂತು ಕಾಯುತ್ತಿದ್ದರು. ನಾನು ಕಾರು ನಿಲ್ಲಿಸಿ, ಡಿಕ್ಕಿಯಿಂದ ಆಕೆಯ ಸೂಟ್‌ಕೇಸ್ ಹೊರತೆಗೆದು ಕೊಟ್ಟೆ. ಹೆಂಗಸರಿಬ್ಬರು ಆಕೆಯನ್ನು ವೀಲ್‌ಚೇರ್ ಮೇಲೆ ಕೂರಿಸಿದರು. ‘ನಾನು ಎಷ್ಟು ಹಣ ಕೊಡಬೇಕು?’ ಎಂದು ಕೇಳಿದಳು ಆಕೆ ಮುಗ್ಧವಾಗಿ. ‘ಏನನ್ನೂ ಕೊಡುವುದು ಬೇಡ’ ಎಂದೆ. ‘ತಲೆ ಕೆಟ್ಟಿದೆಯೇ ಹುಡುಗಾ. ನೀನೂ ಬದುಕಬೇಕಲ್ಲ’ ಎಂದಳು. ‘ಬೇರೆ ಪ್ರಯಾಣಿಕರೂ ಬರುತ್ತಾರೆ ನನ್ನ ಕಾರಿನಲ್ಲಿ’ ಎಂದೆ.
ಒಂದು ಕ್ಷಣವೂ ಯೋಚಿಸದೆ ನಾನು ಬಾಗಿ ಆಕೆಯನ್ನು ತಬ್ಬಿಕೊಂಡೆ. ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡ ಆಕೆ ನನ್ನ ತೋಳಿನ ಮೇಲೆ ಎರಡು ಹನಿ ಕಣ್ಣೀರು ಸುರಿಸಿದಳು. ನನ್ನ ಕಣ್ಣಿನಲ್ಲೂ ನೀರು ಜಿನುಗಿತ್ತು. ‘ಇನ್ನೇನು ಸಾಯಲಿರುವ ಮುದುಕಿಗೆ ನೀನು ಒಂದಷ್ಟು ಸಂತೋಷ ನೀಡಿದೆ. ನನಗಾದ ಖುಷಿಯನ್ನು, ನೆಮ್ಮದಿಯನ್ನು ಮಾತಿನಲ್ಲಿ ಹೇಳಲಾರೆ. ದೇವರು ನಿನಗೆ ಒಳ್ಳೆಯದು ಮಾಡಲಿ’ ಎಂದಳು. ನಾನು ಆಕೆಯ ಕೈಗಳನ್ನು ಮೃದುವಾಗಿ ಹಿಡಿದು ಹೊರಡುತ್ತೇನೆಂದು ಹೇಳಿದೆ. ನಾನು ಬೆನ್ನು ತಿರುಗಿಸಿ ಹೊರಟ ಮೇಲೆ ಬಾಗಿಲೊಂದು ಮುಚ್ಚಿಕೊಂಡ ಶಬ್ದ ಕೇಳಿಸಿತು. ಅದು ಮುಗಿಯುತ್ತಿರುವ ಬದುಕಿನ ಶಬ್ದದಂತೆ ಭಾಸವಾಯಿತು.
ನಾನು ಗುರಿ ಮರೆತವನಂತೆ ಮನೆ ಕಡೆಗೆ ಡ್ರೈವ್ ಮಾಡಿಕೊಂಡು ಬಂದೆ. ತಲೆಯಲ್ಲಿ ನೂರಾರು ಯೋಚನೆಗಳು ಮೂಡುತ್ತಿದ್ದವು. ಅವತ್ತು ನಾನು ಯಾರೊಂದಿಗೂ ಮಾತನಾಡಲಿಲ್ಲ. ಒಂದಷ್ಟು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಗಿರಕಿ ಹೊಡೆಯಲಾರಂಭಿಸಿದವು. ಒಂದು ವೇಳೆ ಆಕೆಗೆ ನನ್ನ ಬದಲು ನಿಷ್ಕರುಣಿ ಚಾಲಕನೊಬ್ಬ ಸಿಕ್ಕಿದ್ದರೆ?, ಸಂಜೆಯಾಗುತ್ತಿದ್ದಂತೆ ತಾಳ್ಮೆ ಕಳೆದುಕೊಳ್ಳುವ, ಹೇಳಿದಲ್ಲಿಗೆ ಹೋಗಲು ಕೇಳದ ಚಾಲಕನೊಬ್ಬ ಸಿಕ್ಕಿದ್ದರೆ?, ನಾನು ಆಕೆಯ ಕರೆಯನ್ನು ತಿರಸ್ಕರಿಸಿದ್ದರೆ? ಒಂದೇ ಒಂದು ಬಾರಿ ಹಾರ್ನ್ ಮಾಡಿ ಹೊರಟು ಬಿಟ್ಟಿದ್ದರೆ?, ಮನೆಯ ಬಾಗಿಲನ್ನು ತಟ್ಟದೇ ಇದ್ದಿದ್ದರೆ?, ನೀವು ಹೋಗಬೇಕಾದಲ್ಲಿಗೆ ನಾನು ಬರುವುದಿಲ್ಲ ಎಂದು ದಬಾಯಿಸಿದ್ದರೆ?….
ಅವತ್ತು ನನಗನಿಸಿದ್ದೇನೆಂದರೆ, ಜೀವನದಲ್ಲಿ ಅಲ್ಲಿಯವರೆಗೆ ಇಂಥ ಒಂದು ಒಳ್ಳೆಯ ಕೆಲಸವನ್ನು ನಾನು ಮಾಡಿಯೇ ಇರಲಿಲ್ಲ. ನನಗದು ಆ ದಿನದ ಕೊನೆಯ ಡ್ರೈವ್ ಆಗಿತ್ತು. ಯಾರಿಗೆ ಗೊತ್ತು ಆ ಅಜ್ಜಿಗೆ ಅದು ಜೀವನದ ಕೊನೆಯ ಡ್ರೈವ್ ಆಗಿದ್ದಿರಬಹುದು.
ನಮ್ಮ ಜೀವನ ಮಹತ್ವದ ಕ್ಷಣಗಳ ಸುತ್ತ ಸುತ್ತುತ್ತಿರುತ್ತದೆ ಎಂದು ನಾವು ಯೋಚಿಸುತ್ತೇವೆ. ಆದರೆ ಬದುಕಿನ ಸುಂದರ ಕ್ಷಣಗಳು ಅನಿರೀಕ್ಷಿತವಾದ, ಬೇರೆಯವರಿಗೆ ಅತಿ ಮಾಮೂಲು ಎಂದೆನಿಸುವ ಸಂಗತಿಗಳಲ್ಲಿರುತ್ತವೆ. ಅದು ನನ್ನ ಪಾಲಿನ Best drive. ಇಲ್ಲಿಯವರೆಗೂ ಅಂಥ ಇನ್ನೊಂದು ಕ್ಷಣ ನನಗೆ ಸಿಕ್ಕಿಲ್ಲ. ಇವತ್ತಿಗೂ ನಾನು ಸಂಜೆಯಾದ ಮೇಲೆ ಯಾರೇ ಕರೆದರೂ ಇಲ್ಲ ಅನ್ನುವುದಿಲ್ಲ, ಒಂದು ಬಾರಿ ಹಾರ್ನ್ ಮಾಡಿ ವಾಪಸಾಗುವುದಿಲ್ಲ, ಯಾರದ್ದೋ ಲಗೇಜನ್ನು ನಾನ್ಯಾಕೆ ಎತ್ತಿಡಲಿ ಎಂದು ಅಸಡ್ಡೆ ತೋರುವುದಿಲ್ಲ. ಕೃಪೆ: ಅಂತರ್ಜಾಲ. ಸಂಗ್ರಹ: ವೀರೇಶ್ ಅರಸಿಕೆರೆ.ದಾವಣಗೆರೆ.
Comments
Post a Comment