ದಿನಕ್ಕೊಂದು ಕಥೆ 301

*🌻ದಿನಕ್ಕೊಂದು ಕಥೆ🌻*                                                                       ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯು ತನ್ನ ಹೃದಯದ ಭಾವನೆಗಳನ್ನು ಇನ್ನೊಬ್ಬ ವ್ಯಕ್ತಿಗೆ ತಲುಪಿಸಲು ಭಾಷೆಯನ್ನು ಬಳಸುತ್ತಾನೆ. ಒಂದೊಂದು ದೇಶದಲ್ಲಿ ಜನರು ಒಂದೊಂದು ಭಾಷೆಯನ್ನು ಬಳಸುತ್ತಾರೆ. ಕೆಲವು ಜನರು ತಮ್ಮ ದೇಶದ ಭಾಷೆಯನ್ನು ಮಾತ್ರ ಭಾಷೆ ಎನ್ನುತ್ತಾರೆ. ಕೆಲವು ಜನರು ತಮ್ಮ ಮಾತೃ ಭಾಷೆಯನ್ನಲ್ಲದೆ ನೆರೆಯ ಪ್ರಾಂತ್ಯದ ಹಾಗೂ ನೆರೆಯ ರಾಜ್ಯ ಮತ್ತು ರಾಷ್ಟ್ರಗಳ ಭಾಷೆಗಳನ್ನು ಕುರಿತು ಬಹುಭಾಷಾ ವಿದ್ವಾಂಸರು ಎನಿಸುತ್ತಾರೆ. ಇಂತಹ ವಿದ್ವಾಂಸರ ಮಾತೃ ಭಾಷೆಯನ್ನು ಗುರುತಿಸುವ ಬಗ್ಗೆ ಸ್ವಾರಸ್ಯಕರ ಪ್ರಸಂಗವೊಂದು ಹೀಗಿದೆ.

ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ಗೋಪಾಲ ಭಾಂಡರೆಂಬ ಸುಪ್ರಸಿದ್ಧ ವಿದ್ವಾಂಸರ ಪ್ರಸಂಗಗಳು ಬಹು ಪ್ರಚಲಿತವಾಗಿವೆ. ಅವರು ತಮ್ಮ ಬುದ್ಧಿವಂತಿಕೆಯ ಬಲದಿಂದ ಅಲ್ಲಿಯ ರಾಜನಾದ ಕೃಷ್ಣಚಂದ್ರನ ಆಸ್ಥಾನದ ನವರತ್ನಗಳಲ್ಲಿ ಒಬ್ಬರೆಂದು ಮನ್ನಣೆ ಗಳಿಸಿದ್ದರಲ್ಲದೆ ರಾಜನಿಗೆ ಇಲ್ಲವೇ ಪ್ರಜೆಗಳಿಗೆ ಯಾವುದೇ ಸಮಸ್ಯೆ ಎದುರಾದಾಗ ಬಹು ಜಾಣ್ಮೆಯಿಂದ ನಿವಾರಿಸುತ್ತಿದ್ದರು.

ಒಮ್ಮೆ ರಾಜಾ ಕೃಷ್ಣಚಂದ್ರನ ಆಸ್ಥಾನಕ್ಕೆ ಬಹು ಭಾಷಾಕೋವಿದರಾದ ವಿದ್ವಾಂಸರೊಬ್ಬರ ಆಗಮನವಾಯಿತು. ಅನೇಕ ಭಾಷೆಗಳನ್ನು ಧಾರಾಕಾರವಾಗಿ ಬಳಸುತ್ತಿದ್ದ ಆ ಘನ ವಿದ್ವಾಂಸರ ಮಾತೃ ಭಾಷೆ ಯಾವುದೆಂದು ಯಾರಿಗೂ ತಿಳಿಸಿರಲಿಲ್ಲ. ಆ ಮಾತೃ ಭಾಷೆಯನ್ನು ಕಂಡು ಹಿಡಿಯಬೇಕೆಂದು ರಾಜ ಕೃಷ್ಣಚಂದ್ರರು ವಿದ್ವಾಂಸರಾದ ಗೋಪಾಲ ಭಾಂಡರಿಗೆ ಆದೇಶಿಸಿದರು. ಗೋಪಾಲ ಭಾಂಡರು ಹೀಗೆಂದರು - ‘ಮಹಾರಾಜರೇ, ನಾನು ಬಹು ಭಾಷಾ ವಿದ್ವಾಂಸನಲ್ಲ. ಆದರೆ ನೀವು ಅನುಮತಿ ನೀಡಿದರೆ ನಾನು ಅವರ ಮಾತೃ ಭಾಷೆಯ ರಹಸ್ಯವನ್ನು ಗುರುತಿಸ ಬಲ್ಲೆನು.

ರಾಜ ಕೃಷ್ಣಚಂದ್ರರು ಅನುಮತಿ ನೀಡಿದರು. ರಾಜನ ಆಸ್ಥಾನ ಸಭೆಯಿಂದ ವಿದ್ವಾಂಸರು ಹೊರಹೋಗುತ್ತಿದ್ದರು. ಆಗ ಗೋಪಾಲ ಭಾಂಡರು ಬಹುಭಾಷಾ ವಿದ್ವಾಂಸರನ್ನು ಜೋರಾಗಿ ಹಿಂದಿನಿಂದ ಮುಂದಕ್ಕೆ ತಳ್ಳಿಬಿಟ್ಟರು. ಅನೀರೀಕ್ಷಿತವಾದ ಈ ತಳ್ಳಾಟದಿಂದ ಗಾಬರಿಯಾದ ವಿದ್ವಾಂಸರು ತಮ್ಮ ಮಾತೃ ಭಾಷೆಯಲ್ಲೇ ಬಯ್ಯತೊಡಗಿದರು.

ಆಗ ಗೋಪಾಲ ಭಾಂಡರು ‘ವಿದ್ವಾಂಸರೆ, ಗಿಳಿಗೆ ರಾಮ-ರಾಮ ಎಂಬ ಭಾಷೆ ಕಲಿಸಬಹುದು. ಆದರೆ ಬೆಕ್ಕು ಬಂದು ಆಕ್ರಮಿಸಿದಾಗ ‘ಟೇಂ-ಟೇಂ’ ಎಂದು ಮಾತೃ ಭಾಷೆಯಲ್ಲೇ ಪ್ರತಿಕ್ರಿಯಿಸುತ್ತದೆ ಎಂದಾಗ ರಾಜನೂ ಸಭಾಸದರೂ ಕರತಾಡನ ಮಾಡಿದರು. ಬಹು ಭಾಷಾ ವಿದ್ವಾಂಸರು ಲಜ್ಜಿತರಾದರು.
ಘನ ವಿದ್ವಾಂಸರೂ, ಬಹು ಭಾಷಾ ವಿದ್ವಾಂಸರೂ ಆದ ಜನರು ಆಪತ್ತಿನ ಹೃದಯಸ್ಪರ್ಶಿ ಪ್ರಸಂಗಗಳಲ್ಲಿ ಅನಿವಾರ್ಯವಾಗಿ ಮಾತೃ ಭಾಷೆಯಲ್ಲೇ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಾರೆ. ಆದ್ದರಿಂದಲೇ ಶಿಕ್ಷ ಣ ರಂಗದಲ್ಲೇ ವಿಷಯಗಳ ಅಧ್ಯಯನ ಪ್ರಭಾವಶಾಲಿಯಾಗಿರಬೇದರೆ ಮಾತೃ ಭಾಷೆಯ ಬಳಕೆ ಅನಿಯಾರ್ಯ.

ಕೃಪೆ:ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ.                                                  ಸಂಗ್ರಹ: ವೀರೇಶ್ ಅರಸಿಕೆರೆ.ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059