ದಿನಕ್ಕೊಂದು ಕಥೆ 335

*🌻ದಿನಕ್ಕೊಂದು ಕಥೆ🌻                                         ಸಮಸ್ಯೆಗಳು ಮಗ್ಗಲು ಮುಳ್ಳುಗಳಲ್ಲ ಮೇಲೇರಿಸುವ ಏಣಿಗಳು*

ಜೀವನವೆನ್ನುವುದು ಸಮಸ್ಯೆಗಳ ಗೂಡು. ಇದನ್ನು ಬಿಡಿಸಲು ಅರಿತವನೇ ಜಾಣ. ಅಂಥವನು ಜಗವನ್ನೇ ಗೆಲ್ಲಬಲ್ಲ ಎಂಬುದು ಸಾಮಾನ್ಯ ಜನರ ಅಂಬೋಣ. ಆಲೋಚೆಗಳನ್ನು ಪಡೆಯುವುದು ಶೇವ್ ಮಾಡಿಕೊಂಡಂತೆ. ನೀವು ಅದನ್ನೇ ಪ್ರತಿದಿನ ಮಾಡದಿದ್ದಲ್ಲಿ ನೀವು ಒಬ್ಬ ದಡ್ಡರು ಎನ್ನುವುದು ಜ್ಞಾನಿಗಳ ಮಾತು.

ಒಮ್ಮೆ ಒಬ್ಬ ಪಾದ್ರಿಯನ್ನು ‘ಒಳ್ಳೆಯ ಜನರಿಗೆ ಕೆಟ್ಟ ಸಂಗತಿಗಳು ಯಾಕೆ ಆಗುತ್ತವೆ?’ ಎಂದು ಒಬ್ಬ ಸಾಧಕನು ಕೇಳಿದ. ಅದಕ್ಕೆ ಪಾದ್ರಿ ಉತ್ತರಿಸಿದ ರೀತಿ ನಿಮ್ಮನ್ನು ಬೆರಗುಗೊಳಿಸುತ್ತದೆ. ಪ್ರಶ್ನೆಯನ್ನೇ ತಪ್ಪಾಗಿ ಕೇಳಲಾಗಿದೆ. ನೀವು ಅದಕ್ಕೆ ಸರಿಯಾದ ಉತ್ತರವನ್ನು ಹೇಗೆ ತಾನೆ ನಿರೀಕ್ಷಿಸಬಲ್ಲಿರಿ? ಪ್ರಶ್ನೆ ಹೀಗಿರಬೇಕಿತ್ತು. ‘ಒಳ್ಳೆಯ ವ್ಯಕ್ತಿಗಳಿಗೆ ಕೆಟ್ಟ ಸಂಗತಿಗಳು ಬಂದಾಗ ಅವರಿಗೆ ಏನಾಗುತ್ತದೆ?’ ಅದಕ್ಕೆ ಅವರು ಕೊಟ್ಟಿರುವ ಉತ್ತರವೂ ಬೆರಗು ತರುವಂಥದ್ದು. ಒಳ್ಳೆಯ ವ್ಯಕ್ತಿಗಳಿಗೆ ಕೆಟ್ಟದ್ದಾದರೆ ಅವರು ಇನ್ನಷ್ಟು ಒಳ್ಳೆಯವರಾಗುತ್ತಾರೆ. ಸ್ವಾಮಿ ಶಿವಾನಂದರ ಪ್ರಕಾರ ‘ನಿಮ್ಮ ವಿಚಾರಗಳನ್ನು ಗೆದ್ದರೆ ನೀವು ಜಗತ್ತನ್ನೇ ಗೆಲ್ಲಬಲ್ಲಿರಿ.’ ಜೀವನವೆನ್ನುವುದು ಸಮಸ್ಯೆಗಳ ಗೂಡು ಇದನ್ನು ಬಿಡಿಸಲು ಅರಿತವನೇ ಜಾಣ. ಅಂಥವನು ಜಗವನ್ನೇ ಗೆಲ್ಲಬಲ್ಲ ಎಂಬುದು ಸಾಮಾನ್ಯ ಜನರ ಅಂಬೋಣ.

ಆಲೋಚೆಗಳನ್ನು ಪಡೆಯುವುದು ಶೇವ್ ಮಾಡಿಕೊಂಡಂತೆ. ನೀವು ಅದನ್ನೇ ಪ್ರತಿದಿನ ಮಾಡದಿದ್ದಲ್ಲಿ ನೀವು ಒಬ್ಬ ದಡ್ಡರು ಎನ್ನುವುದು ಜ್ಞಾನಿಗಳ ಮಾತು. ಸಮಸ್ಯೆಗಳಿಲ್ಲದ ಜೀವನ ಜೀವನವೇ ಅಲ್ಲ. ಅದು ನೀರಸವೆನಿಸುತ್ತದೆ. ಸಮಸ್ಯೆಗಳಿದ್ದಷ್ಟೂ ಮನುಷ್ಯ ಪ್ರಗತಿ ಪಥದತ್ತ ದಾಪುಗಾಲು ಹಾಕುತ್ತಾನೆ ಎನ್ನುವುದು ಇತಿಹಾಸದ ಪುಟಗಳಲ್ಲಿ ಮುದ್ರಿತವಾಗಿದೆ. ಇವೆಲ್ಲ ಸಮಸ್ಯೆಗಳ ಕುರಿತಾದ ವಿಶ್ಲೇಷಣೆ. ಸಮಸ್ಯೆಗಳ ಪರಿಹಾರಕ್ಕೆ ಅನುಸರಿಸಿ ಈ ಮಾರ್ಗ: ಶಾಂತ ಚಿತ್ತರಾಗಿ ಮನೋಸ್ಥೆರ್ಯದ ಅಭ್ಯಾಸ ಮಾಡಿ ನಿಮಗೆಲ್ಲ ತಿಳಿದಿರುವಂತೆ ಪ್ರಚಂಡ ಬಿರುಗಾಳಿ ಎದ್ದಾಗ ಗಾಳಿ ಸುರುಳಿಯಾಕಾರದಲ್ಲಿ ಸುತ್ತುತ್ತದೆ. ಅದರ ಭೀಕರತೆಗೆ ರಭಸಕ್ಕೆ ಪ್ರಬಲವೆನಿಸಿಕೊಂಡಿದ್ದ ವಸ್ತುಗಳೂ ಬುಡ ಮೇಲಾಗುತ್ತವೆ. ಇಷ್ಟಾದರೂ ಈ ರುದ್ರನರ್ತನದಲ್ಲಿ ಗಾಳಿ ಸುರುಳಿ ಗಾಳಿಯ ಮಧ್ಯದ ಭಾಗ ಪ್ರಶಾಂತವಾಗಿರುತ್ತದೆ.

ಅದನ್ನು ಬಿರುಗಾಳಿಯ ಕಣ್ಣು ಎಂದು ಕರೆಯುತ್ತಾರೆ. ಬಿರುಗಾಳಿಯ ಹೊಡೆತಕ್ಕೆ ಅನಾದಿಕಾಲದಿಂದ ಬೇರು ಬಿಟ್ಟ ಬೃಹದಾಕಾರವಾಗಿ ಬೆಳೆದ ಮರವೂ ಬೇರು ಕಿತ್ತುಕೊಂಢು ಸಾವನ್ನಪ್ಪುತ್ತದೆ. ಆದರೆ ಬಿರುಗಾಳಿಯ ಹೊಡೆತದಲ್ಲೂ ಅತಿ ಸಣ್ಣದೆನಿಸುವ ಹುಲ್ಲು ಮಂದಹಾಸದಿಂದ ಮಿನುಗುತ್ತಿರುತ್ತದೆ. ಹುಲ್ಲು ಮತ್ತು ಬಿರುಗಾಳಿಯ ಕಣ್ಣು ನಮಗೆ ಅತ್ಯದ್ಭುತ ಪಾಠ ಕಲಿಸಿ ಕೊಡುತ್ತವೆ. ಬದುಕಿನಲ್ಲಿ ಎಷ್ಟೇ ಸಮಸ್ಯೆಗಳು ಬೆನ್ನು ಹತ್ತಿದರೂ ಶಾಂತಚಿತ್ತರಾಗಿರಬೇಕು ಎನ್ನುವ ತತ್ವವನ್ನು ಪ್ರಕೃತಿಯು ಸಾರಿ ಹೇಳುತ್ತದೆ. ಹಲವು ಬಾರಿ ಸಮಸ್ಯೆಗಳು ಮುನ್ಸೂಚನೆ ನೀಡದೇ ಧುತ್ತೆಂದು ಬಂದು ಕಣ್ಮುಂದೆ ಬಂದು ನಿಂತುಕೊಳ್ಳುತ್ತವೆ. ಆಗ ಗೊಂದಲಕ್ಕೀಡಾಗದೇ ಅವುಗಳ ಹೊಡೆತಕ್ಕೆ ಕುಸಿದು ಬೀಳದೇ ಸುರಕ್ಷಿತವಾಗಿ ಹೊರಬರುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಅದಕ್ಕೆ ಬೇಕಾಗಿರುವುದು ಮನೋಸ್ಥೆರ್ಯದ ಅಭ್ಯಾಸ. ಅನುಚಿತ ಟೀಕೆಗಳಿಗೆ ಕಿವಿಗೊಡದಿರಿ ‘ಉತ್ತರಗಳಿಂದ ನೀವು ಸ್ವತಂತ್ರರಾಗಲಾರಿರಿ.

ಪ್ರಶ್ನೆಗಳು ನಾಶವಾದಾಗ ಮಾತ್ರ ಸ್ವಾತಂತ್ರ್ಯ ಸಾಧ್ಯ.’ ಎಂಬ ಯು ಜಿ ಕೃಷ್ಣಮೂರ್ತಿಯವರ ಮಾತು ಅದೆಷ್ಟು ಅರ್ಥಪೂರ್ಣ ಅನಿಸುತ್ತವೆಯಲ್ಲವೇ? ಬದುಕಿನಲ್ಲಿ ನಮಗೆ ಬಂದೊದಗುವ ಸಮಸ್ಯೆೆಗಳು ಹೆಚ್ಚಾಗಿ ಮಾನಸಿಕ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿರುತ್ತವೆ. ಮನಸ್ಸು ತಿಳಿಯಾಗಿದ್ದಾಗ ಬದುಕು ಸುಂದರವಾಗಿರುತ್ತದೆ. ಬದುಕು ಅದ್ಭುತವೆನಿಸುವಾಗ ನೋವು ನಿರಾಸೆಗಳು ನಮ್ಮ ಬಳಿ ಸುಳಿಯುವುದೇ ಇಲ್ಲ. ಬೆಟ್ಟದಂಥ ಸಮಸ್ಯೆಗಳು ಮಂಜಿನಂತೆ ಕರಗುತ್ತವೆ. ಮತ್ತೆ ಅಷ್ಟೆ ವೇಗವಾಗಿ ಕರಗುತ್ತವೆ.

ಅಷ್ಟೇ ಅಲ್ಲ ನಾವು ಇತರರೊಂದಿಗೆ ನಡೆದುಕೊಳ್ಳುವ ರೀತಿಯೂ ಸೊಗಸಾಗಿರುತ್ತದೆ. ಇತರರು ಟೀಕಿಸಿದರೂ ಕಿವಿಗೊಡದೇ ಮುನ್ನುಗ್ಗುತ್ತೇವೆ. ಮನಸ್ಸು ಕದಡಿದ ಕೊಳದಂತಿದ್ದರೆ ಸಣ್ಣ ಸಣ್ಣ ವಿಚಾರಗಳು ದೊಡ್ಡ ದೊಡ್ಡ ಸಮಸ್ಯೆಗಳಂತೆ ಕಾಡಿಸಲಾರಂಭಿಸುತ್ತವೆ. ಅನುಚಿತ ಟೀಕೆಗಳಿಗೂ ಕಿವಿಗೊಟ್ಟು ತಲೆಕೆಡಿಸಿಕೊಳ್ಳುತ್ತೇವೆ. ಏನನ್ನೂ ಸಹಿಸಲು ಅಸಾಧ್ಯವಾದ ವೇದನೆ ಅಸಂತೋಷ. ಯಾರು ಏನು ಮಾತನಾಡಿದರೂ ಅದು ನನ್ನನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ ಎನ್ನುವ ಭಾವನೆ. ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳದಿದ್ದರೆ ಸಮಸ್ಯೆಗಳನ್ನು ನಾವಾಗಿಯೇ ಆಹ್ವಾನಿಸಿಕೊಂಡಂತೆಯೇ ಸರಿ. ಬದುಕು ನಮಗೆ ಹಿಂದೆಂದೂ ನೀಡದಷ್ಟು ಕಷ್ಟ ಕೋಟಲೆಗಳನ್ನು ನೀಡುತ್ತದೆ ಎನ್ನುವ ಭಾವ ಕಾಡುವುದೂ ನಿಜ.

ಸಮಸ್ಯೆಗಳು ಎದುರಾದಾಗ ಕೆಟ್ಟ ದೃಷ್ಟಿಕೋನದಿಂದ ನೋಡುವ ಬದಲು ವಾಸ್ತವತೆಯನ್ನು ಆಧಾರವಾಗಿಟ್ಟುಕೊಳ್ಳುವ ಪ್ರಯತ್ನ ಮಾಡಬೇಕು. ಒಳ್ಳೆಯ ಮನಸ್ಥಿತಿಯಲ್ಲಿದ್ದಾಗ ಬದುಕನ್ನು ಪ್ರೀತಿಸುವ ಮತ್ತು ಗೊಂದಲ ದಲ್ಲಿದ್ದಾಗ ಬದುಕನ್ನು ದೂಷಿಸುವ ಪ್ರವೃತ್ತಿ ನಮ್ಮಲ್ಲಿ ಸರ್ವೇಸಾಮಾನ್ಯ. ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಬಗೆಗೆ ಮಾತನಾಡುವಾಗ ನನಗೆ ನೆನಪಾಗುವ ಮಹಾನ್ ವ್ಯಕ್ತಿಯ ಬಗ್ಗೆ ತಮಗೆ ಹೇಳಲೇಬೇಕು. ಆತ ತನ್ನ 21ನೇ ವಯಸ್ಸಿನಲ್ಲಿ ವ್ಯಾಪಾರಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡ. 22ನೇ ವಯಸ್ಸಿನಲ್ಲಿ ಶಾಸಕ ಸ್ಪರ್ಧೆಗೆ ಸೋಲು ಅನುಭವಿಸಿದ. ಇಪ್ಪತ್ನಾಲ್ಕನೇ ವಯಸ್ಸಿನಲ್ಲಿ ಮತ್ತೆ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ. ಇಪ್ಪತ್ತಾರನೇ ವಯಸ್ಸಿನಲ್ಲಿ ಪ್ರೇಯಸಿಯ ಅಕಾಲಿಕ ಮರಣ ನೋಡಿದ. ಇಪ್ಪತ್ತೇಳನೇ ವಯಸ್ಸಿಗೆ ನರವ್ಯಾಧಿಗೆ ತುತ್ತಾಗಿ ಹೋದ. ಮೂವತ್ನಾಲ್ಕನೇ ವಯಸ್ಸಿನಲ್ಲಿ ಪುನಃ ಚುನಾವಣೆಯಲ್ಲಿ ಸೋತ. ನಲವತ್ತೈದನೇ ವಯಸ್ಸಿನಲ್ಲಿ ಸೆನೆಟ್ ಚುನಾವಣೆಯಲ್ಲೂ ಸೋಲಾಯಿತು. ನಲವತ್ತೇಳನೇ ವಯಸ್ಸಿಗೆ ಉಪಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿ ದಯನೀಯವಾಗಿ ಪರಾಭವಗೊಂಡ.

49ನೇ ವಯಸ್ಸಿನಲ್ಲಿ ಸೆನೆಟ್ ಚುನಾವಣೆಯಲ್ಲಿ ಮತ್ತೆ ಸೋಲು. 52ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷರಾಗಿ ಚುನಾಯಿತನಾದ ಆತನೇ ಅಬ್ರಹಾಂ ಲಿಂಕನ್. ಇಷ್ಟೆಲ್ಲ ಸಮಸ್ಯೆಗಳ ಸುಳಿಯಲ್ಲಿ ಬಿದ್ದು ಸೋಲುಂಡ ಜಗದ್ವಿಖ್ಯಾತ ಅಬ್ರಹಾಂ ಎಂದು ಹುಬ್ಬೇರಿಸುತ್ತೀರೇನು? ಲಿಂಕನ್ ಅನುಭವಿಸಿದ ಸಮಸ್ಯೆಗಳು ಅಷ್ಟಿಷ್ಟಲ್ಲ. ಆತನ ಜಾಗದಲ್ಲಿ ಬೇರೆ ಯಾರು ಇದ್ದಿದ್ದರೂ ಕುಸಿದು ಹೋಗುತ್ತಿದ್ದರು. ಸಮಸ್ಯೆಗಳಿಂದ ಓಡಿ ಹೋಗಲು ಹರಸಾಹಸ ಪಡುತ್ತಿದ್ದರು. ಸೋತು ಸುಣ್ಣವಾಗುತ್ತಿದ್ದರು. ಆದರೆ ಲಿಂಕನ್ ಪ್ರತಿ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಬೇಸರ ದುಃಖ ಒತ್ತಡದಿಂದ ಕಂಗಾಲಾಗಿದ್ದ ಬದುಕಿನಿಂದ ಹೊರಬಂದ. ಸಮಸ್ಯೆ ಎಂಬ ಕತ್ತಲೆಯ ಕಾರ್ಮೋಡಗಳು ಸ್ವಲ್ಪ ಸಮಯದ ನಂತರ ಚದುರಿ ಹೋಗುತ್ತವೆ. ಅಲ್ಲಿಯವರೆಗೂ ಭರವಸೆಯೊಂದಿಗೆ ಮುನ್ನಡೆಯಬೇಕು. ಎನ್ನುವ ಸಂದೇಶವನ್ನು ನೀಡಿದರು.

ಪ್ರಯತ್ನದ ಕೀಲಿಕೈ ಬಳಸಿ ಹುಟ್ಟಿನಿಂದಲೇ ಯಾರೂ ಸಮರ್ಥರಾಗಿರುವದಿಲ್ಲ. ಹಾಗೆ ಅಸಮರ್ಥರಾಗಿಯೂ ಯಾರೂ ಜನಿಸುವುದಿಲ್ಲ. ಬೆಳೆದ ವಾತಾವರಣ ಪ್ರೇರಣೆ ಪರಿಸರಗಳ ಪ್ರಭಾವ ವ್ಯಕ್ತಿಯನ್ನು ರೂಪಿಸುತ್ತವೆ. ಸಮಸ್ಯೆಗೆ ಪರಿಹಾರ ವರಪ್ರಸಾದವಾಗಿಯೋ ಅದೃಷ್ಟವಾಗಿಯೋ ಲಭಿಸುವಂಥದ್ದಲ್ಲ. ನಿರಂತರ ಉತ್ತಮ ಆಲೋಚನೆಗಳ ಪ್ರಯತ್ನದ ಸಹಜ ಫಲವಾಗಿ ಲಭಿಸುತ್ತವೆ. ಜನರನ್ನು ನಿಮ್ಮ ಸಮಸ್ಯೆಗಳಿಂದ ಬೇಸರ ಮಾಡದಿರಿ. ನಿಮ್ಮನ್ನು ಯಾರಾದರೂ ಹೇಗಿದ್ದೀರಿ ಎಂದು ಕೇಳಿದರೆ ತುಂಬಾ ಚೆನ್ನಾಗಿದ್ದೀನಿ ಹಿಂದೆಂದೂ ಇಷ್ಟು ಸಂತೋಷವಾಗಿರಲಿಲ್ಲ ಎನ್ನಿ. ಕೆಲಸ ಹೇಗೆ ನಡೆಯುತ್ತಿದೆ ಎಂದು ಕೇಳಿದರೆ ಅತ್ಯುತ್ತಮ. ದಿನ ದಿನವೂ ಅಭಿವೃದ್ಧಿ ಹೊಂದುತ್ತಿದೆ. ಎಂದು ಉತ್ತರಿಸಿ. ಹೀಗೆ ಉತ್ತರಿಸುವುದರಿಂದ ನಿಮ್ಮಲ್ಲಿ ಧನಾತ್ಮಕ ಚಿಂತನೆ ಜಾಗೃತಗೊಂಡು ಕೆಲಸ ನಿರ್ವಹಿಸುತ್ತದೆ. ಶ್ರೇಷ್ಠವಾದ ಆಲೋಚನೆಗಳಿಂದ ಪ್ರಜ್ಞಾವಂತರಾಗಿ ಶಕ್ತಿಯುತ ಜೀವಿಗಳಾಗಿ ತನ್ನ ಚಿಂತನೆಗಳ ಒಡೆಯರಾಗುವ ಮನುಷ್ಯರ ಹತ್ತಿರ ಪ್ರತಿ ಸಮಸ್ಯೆಯೊಂದರ ಬೀಗವನ್ನು ತೆಗೆಯುವ ಪ್ರಯತ್ನದ ಕೀಲಿಕೈ ಇರುತ್ತದೆ. ಕೀಲಿಕೈ ಬಳಿಸಿ ಸಮಸ್ಯೆ ಪರಿಹರಿಸಿ ಜೀವನ ಸುಂದರಗೊಳಿಸಿಕೊಳ್ಳಿ.

ಸಲಹೆ ಪಡೆದುಕೊಳ್ಳಿ ಪ್ರತಿಯೊಂದು ಸಮಸ್ಯೆ ಹಿಂದೆಯೂ ಒಂದು ಕಾರಣವಿದ್ದೇ ಇರುತ್ತದೆ. ಅಂತಹ ಕಾರಣವೇ ನಮ್ಮನ್ನು ದಿನದಿಂದ ದಿನಕ್ಕೆ ಹಿಂದಕ್ಕೆ ಹೆಜ್ಜೆ ಇಡುವಂತೆ ಮಾಡುತ್ತದೆ. ಸಮಸ್ಯೆಗಳಿಗೆ ನೀವು ಪರಿಹಾರ ಕಂಡುಕೊಳ್ಳಲಾಗದಿದ್ದಲ್ಲಿ ಹೆತ್ತವರಿಂದ ಸ್ನೇಹಿತರಿಂದ ಆತ್ಮೀಯರಿಂದ ಮತ್ತು ನುರಿತವರಿಂದ ಸಲಹೆ ಪಡೆದುಕೊಳ್ಳಲು ಹಿಂಜರಿಯದಿರಿ. ‘ಸಲಹೆಗಳು ಹಿತವಾದ ಮಂಜಿನಂತದ್ದು. ಮೆಲ್ಲ ಮೆಲ್ಲನೆ ಹಿಮಪಾತ ನಡೆದಾಗ ಆ ಇಬ್ಬನಿ ಬಹಳ ಹೊತ್ತು ಇರುತ್ತದೆ. ಅದೇ ರೀತಿ ಮೆಲ್ಲನೆ ನೀಡಿದ ಸಲಹೆ ಮನುಷ್ಯನ ಮನಸ್ಸಿನಾಳಕ್ಕೆ ಇಳಿದು ಹೋಗುತ್ತವೆ’. ಎಂದು ಕಾಲರಿಡ್ಜ್ ಹೇಳಿದ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ಲವೆ? ಯಶಸ್ಸಿನತ್ತ ತಿರುಗಿಸಿ ನಾವೆಲ್ಲ ತಿಳಿದಂತೆ ಸಮಸ್ಯೆಗಳು ಮಗ್ಗುಲ ಮುಳ್ಳುಗಳಲ್ಲ ಅವು ನಮ್ಮನ್ನು ಮೇಲೇರಿಸುವ ಏಣಿಗಳು ಎಂಬುದನ್ನು ಮನಗಂಡು ಎಲ್ಲಾ ಸಮಸ್ಯೆಗಳನ್ನು ತಪ್ಪಿಸಿ ಬಿಡುವ ಬದಲು ಎದುರಿಸಿದರೆ ಅವು ಚಿಕ್ಕದಾಗುತ್ತವೆ ಹಾಗೂ ಸೋತು ಹೋಗುತ್ತವೆ.

ಷೇಕ್ಸ್‌ಪಿಯರ್ ಹೇಳಿದಂತೆ ‘ “To thine own self be true.’ ಇದರರ್ಥ ಸಮಸ್ಯೆಗಳನ್ನು ನಿರಾಕರಿಸುವುದಲ್ಲ, ಒಪ್ಪಿಕೊಳ್ಳುವುದು ಮತ್ತು ಪರಿಹಾರಗಳತ್ತ ಗಮನಹರಿಸುವುದು. ಎಲ್ಲ ಸಮಸ್ಯೆಗಳಿಗೂ ಪರಿಹಾರವಿದ್ದೇ ಇದೆ. ಪರಿಹಾರವಿಲ್ಲ ಅಂದರೆ ಅದು ಸಮಸ್ಯೆ ಅಲ್ಲವೇ ಅಲ್ಲ.  ಸಮಸ್ಯೆಗಳನ್ನು ವಿಫಲತೆಗೆ ದಾರಿ ಎಂದೆನ್ನಬೇಡಿ. ಅವು ನಿಮ್ಮ ಬಾಳಿನ ಯಶಸ್ಸಿನ ತಿರುವುಗಳು. ತಿರುವುಗಳಲ್ಲಿ ಜೀವನವನ್ನು ತಿರುವು ಮುರುವು ಮಾಡಿಕೊಳ್ಳದೇ ಜೀವನದ ಬಂಡಿಯನ್ನು ಯಶಸ್ಸಿನತ್ತ ತಿರುಗಿಸಿಕೊಂಡು ಬಿಡಿ.

ಉತ್ತಮವಾದುದನ್ನು ನಿರೀಕ್ಷಿಸಿ
ಯಶಸ್ಸಿಗಿಂತ ಹೆಚ್ಚಾಗಿ ಸಮಸ್ಯೆಗಳು ನಮಗೆ ಚೆನ್ನಾಗಿ ಪಾಠ ಕಲಿಸುತ್ತವೆ. ಸಮಸ್ಯೆಗಳು ಗೆಲುವಿನತ್ತ ಕರೆದುಕೊಂಡು ಹೋಗುತ್ತವೆ. ನಾವು ಅವುಗಳಿಂದ ಕಲಿಯಲು ಸಾಧ್ಯವಾದರೆ ಉದುರಿಹೋದ ಹೂವುಗಳು ಸುಗಂಧವನ್ನು ಬೀರುತ್ತವೆ. ಸಮಸ್ಯೆಗಳನ್ನು ಜೀವನದ ಅವಿಭಾಜ್ಯವಾಗಿ ಸ್ವೀಕರಿಸಿ ಮತ್ತು ಅವುಗಳನ್ನು ತಲೆಯೆತ್ತಿ ಕಣ್ಣುಗಳಲ್ಲಿ ನೋಡುತ್ತ ಹೇಳಿ.. ನಾನು ನಿಮಗಿಂತ ದೊಡ್ಡವನು ನೀವು ನನ್ನನ್ನು ಸೋಲಿಸಲಾರಿರಿ ಎಂದು.

ಉತ್ತಮವಾದುದನ್ನು ನಿರೀಕ್ಷಿಸಿ ಮತ್ತು ಅದನ್ನು ನೀವು ಪಡೆಯುವಿರಿ. ಒಂದು ದತ್ತೂರಿ ಗಿಡವನ್ನು ಮೃದುವಾಗಿ ಸ್ಪರ್ಶಿಸಿದರೆ ಅದು ಚುಚ್ಚುತ್ತದೆ. ಧೈರ್ಯವಾಗಿ ಕೈಯಿಂದ ಹಿಡಿದರೆ ಅದರ ಮುಳ್ಳುಗಳು ಮುದುರುತ್ತವೆ. ದೇವರಲ್ಲಿ ಪ್ರಾರ್ಥಿಸುವುದು ಮತ್ತು ಬಾಹ್ಯ ಶಕ್ತಿಗಳಲ್ಲಿ ಶ್ರದ್ಧೆಯಿಡುವುದು ಕೂಡ ಸಹಾಯಕ. ನೀವು ಹಾಗೆ ಮಾಡಿದಾಗಲೂ ಅದು ನಿಮ್ಮ ಅಂತರ್ಗತವಾಗಿರುವ ಸಾಮರ್ಥ್ಯವನ್ನು ಹೆಚ್ಚಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಮಾಡಬಲ್ಲದು.

ಸಿಂಹದಂತೆ ಯೋಜಿಸಿ
ಸಮಸ್ಯೆಗಳನ್ನು ದೂರವಾಗಿಸಲು ಮನಸ್ಸಿಗೆ ಶರೀರದಂತೆ ವ್ಯಾಯಾಮ ಅಗತ್ಯ. ಅವುಗಳೆಂದರೆ ಸಕಾರಾತ್ಮಕ ಆಲೋಚನೆ ಮತ್ತು ಧೈರ್ಯ. ಧೈರ್ಯವೆಂದ ಕೂಡಲೆ ತಟ್ಟನೆ ನೆನಪಿಗೆ ಬರುವ ಹೆಸರು ಚಂದ್ರಶೇಖರ ಆಜಾದ. ಬ್ರಿಟಿಷರನ್ನು ಎದುರಿಸಿ ಅವರ ಗುಂಡೇಟಿಗೆ ಎದೆಯೊಡ್ಡಿದ ಧೀರ ಆತ. ಭಯ ಪಡುವವನು ಕಷ್ಟಗಳಿಂದ ಪಾರಾಗಲಾರ ಮತ್ತು ಸಮಸ್ಯೆಗಳಿಂದ ಮುಕ್ತವಾಗಲಾರ. ಚಾಣಕ್ಯನ ಉಕ್ತಿಯಂತೆ ‘ಸಿಂಹ ಬೇಟೆಗೆಂದು ಯೋಜಿಸಿಕೊಂಡು ತಾನು ಬೇಟೆಯಾಡಬೇಕಾದ ಪ್ರಾಣಿಯ ಮೇಲೆ ಹಾರುತ್ತದೆ. ಅದನ್ನು ಸಾಯಿಸುವವರೆಗೂ ಬಿಡುವದಿಲ್ಲ.’ ಸಮಸ್ಯೆ ಸಣ್ಣದಿರಲಿ ದೊಡ್ಡದಿರಲಿ ಅದನ್ನು ಪರಿಹರಿಸಲು ಮನುಷ್ಯ ಸಿಂಹದಂತೆ ಮೊದಲೇ ಯೋಚಿಸಿಕೊಂಡು ಪರಿಹಾರ ಸಿಗುವವರೆಗೂ ಬಿಡಬಾರದು.

ಸಮಸ್ಯೆಯ ಮೂಲ ಹುಡುಕಿ 
ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಾವೆಷ್ಟು ಶ್ರಮಿಸುತ್ತಿದ್ದೇವೆ ಎನ್ನುವದನ್ನು ಪರಾಮರ್ಶಿಸಬೇಕು. ನಾವು ಸಮಸ್ಯೆಯೆಡೆಗೆ ಮಾತ್ರ ನೋಡಿ ಹೆದರುತ್ತೇವೆ ಹೊರತು ಅದನ್ನು ಅರ್ಥೈಸಿಕೊಳ್ಳುವ ಗೋಜಿಗೆ ಹೋಗುವುದೇ ಇಲ್ಲ. ಹೀಗಾಗಿ ಸಮಸ್ಯೆಯನ್ನು ತೀಕ್ಷ್ಣವಾಗಿ ಪರಿಶೀಲಿಸಲು ಸಾಧ್ಯವಾಗುವದಿಲ್ಲ. ಸಮಸ್ಯೆಯಿಂದ ದೂರ ಓಡಿಹೋಗಲು ಪ್ರಯತ್ನಿಸಿದರೆ ಪರಿಹಾರ ಸಿಕ್ಕುವುದೇ ಇಲ್ಲ. ಸಂಪೂರ್ಣ ಬಿಡುಗಡೆ ದೊರೆಯುವುದೇ ಇಲ್ಲ. ಪರಿಹಾರ ಕಂಡುಕೊಳ್ಳಲು ಸಮಸ್ಯೆಯ ಮೂಲ ಹುಡುಕುವುದು ಅನಿವಾರ್ಯ. ಮೂಲ ಗ್ರಹಿಸದೇ ಹೋದರೆ ಸಮಸ್ಯೆ ಯಿಂದ ಮುಕ್ತವಾಗುವುದು ದುರ್ಲಭ. ಸಮಸ್ಯೆಗಳಿಂದ ಹೊರ ಬರದಿದ್ದರೆ ಶಾಂತಿ ಕನ್ನಡಿಯಲ್ಲಿನ ಗಂಟಿದ್ದಂತೆ. ಜೋರಾದ ಗಾಳಿ ಬೀಸುವುದು ನಿಂತಾಗ ಕೊಳದ ನೀರು ನಿಶ್ಚಲವಾಗುತ್ತದೆ. ಹಾಗೆಯೇ ಸಮಸ್ಯೆಗೆ ಪರಿಹಾರ ದೊರೆತಾಗ ಮನಸ್ಸು ನಿಶ್ಚಿಂತೆಯಿಂದ ಪ್ರಸನ್ನವಾಗುವುದು.

ಕೃಪೆ :ಜಯಶ್ರೀ. ಜೆ. ಅಬ್ಬಿಗೇರಿ, ಉಪನ್ಯಾಸಕರು.                                      ಸಂಗ್ರಹ:ವೀರೇಶ್ ಅರಸಿಕೆರೆ.ದಾವಣಗೆರೆ.

 

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097