ದಿನಕ್ಕೊಂದು ಕಥೆ. 368
*🌻ದಿನಕ್ಕೊಂದು ಕಥೆ🌻 *ಖಂಡಿತವಾಗಿಯೂ ಕಾಪಾಡಿ! ಆದರೆ ಕಾಪಾಡಿದೆವೆಂದು ಕಾಡಬೇಡಿ !*
ಕಾಪಾಡುವುದು ಎಂದರೆ ಅರ್ಥವಾಗುತ್ತದೆ. ಯಾರೋ ಅಪಾಯದಲ್ಲಿದ್ದಾಗ, ಪ್ರಾಣ ಕಳೆದುಕೊಳ್ಳುವಂಥ ಆಪತ್ತಿನಲ್ಲಿದ್ದಾಗ, ಅವರ ಸಹಾಯಕ್ಕೆ ಹೋಗುವುದೂ, ಅವರ ಪ್ರಾಣ ಉಳಿಸುವುದೂ ಕಾಪಾಡುವುದು ಎನಿಸಿಕೊಳ್ಳುತ್ತದೆ ಅಲ್ಲವೇ? ಆದರೆ ಕಾಪಾಡಿದೆವೆಂದು ಕಾಡುವುದು ಎಂದರೇನು ಎಂಬುದು ಅರ್ಥವಾಗುವುದಿಲ್ಲ ಅಲ್ಲವೇ? ಇದನ್ನು ವಿವರಿಸುವ ಮುಲ್ಲಾ ನಸರುದ್ದೀನರ ಬದುಕಿನ ಘಟನೆಯೊಂದು ಇಲ್ಲಿದೆ.
ಒಮ್ಮೆ ನಸರುದ್ದೀನರು ಸರೋವರದ ಮೆಟ್ಟಿಲುಗಳ ಮೇಲೆ ನಿಂತು ಕೈ ಕಾಲು ತೊಳೆದುಕೊಳ್ಳುತ್ತಿದ್ದರು. ಆಕಸ್ಮಿಕವಾಗಿ ಕಾಲು ಜಾರಿ ನೀರಿನೊಳಕ್ಕೆ ಬಿದ್ದುಬಿಟ್ಟರು. ನೀರಿಗೆ ಬಿದ್ದಾಗ ಗಾಬರಿಗೊಂಡ ಅವರು ತಮಗೆ ಈಜು ಬರುತ್ತದೆಂಬುದನ್ನೂ ಮರೆತು ಬಿಟ್ಟರು. ‘ಕಾಪಾಡಿ! ಕಾಪಾಡಿ!’ ಎಂದು ಕೂಗಿಕೊಂಡರು. ಆಗ ಅಲ್ಲಿಯೇ ನಡೆದು ಹೋಗುತ್ತಿದ್ದ ಒಬ್ಬ ಪಂಡಿತರಿಗೆ ಇವರ ಕಿರುಚಾಟ ಕೇಳಿಸಿತು. ಅವರು ಧಾವಿಸಿ ಬಂದು ತಮ್ಮ ಕೈ ಚಾಚಿದರು.
ನಸರುದ್ದೀನರಿಗೆ ನೀರಿನಿಂದ ಹೊರಕ್ಕೆ ಬರಲು ಸಹಾಯ ಮಾಡಿದರು. ಆನಂತರ ಪಂಡಿತರಿಗೆ ತಾವು ಸಹಾಯ ಮಾಡಿ ಕಾಪಾಡಿದ್ದು ಊರಿನವರಿಗೆಲ್ಲ ಪರಿಚಿತರಾದ ನಸರುದ್ದೀನರನ್ನು ಎಂಬುದರ ಅರಿವಾಯಿತು. ಅವರ ಮತ್ತು ನಸರುದ್ದೀನರ ನಡುವೆ ಅಂಥ ಮಧುರ ಬಾಂಧವ್ಯವೇನೂ ಇರಲಿಲ್ಲ. ಏಕೆಂದರೆ ಪಂಡಿತ- ಪಂಡಿತರ ನಡುವೆ ಇರಬಹುದಾದಂಥ ಅಹಮ್ಮಿನ ಶೀತಲ ಸಮರವಿತ್ತು. ನಸರುದ್ದೀನರು ಪಂಡಿತರಿಗೆ ಧನ್ಯವಾದ ಹೇಳಿ ಹೋದರು. ಆದರೆ ಪಂಡಿತರು ಈ ಘಟನೆಯನ್ನು ಮರೆಯಲಿಲ್ಲ. ಊರಿನಲ್ಲಿ ಸಿಕ್ಕಸಿಕ್ಕವರಿಗೆಲ್ಲ, ‘ನಸರುದ್ದೀನರು ಸರೋವರದಲ್ಲಿ ಸಾಯುವ ಅಪಾಯದಲ್ಲಿದ್ದಾಗ ಅವರ ಕೈ ಹಿಡಿದು ಕಾಪಾಡಿದ್ದುಪಂಡಿತನಾದ ನಾನು! ನಾನಿಲ್ಲದಿದ್ದರೆ ಅವರು ಬದುಕುಳಿಯುತ್ತಲೇ ಇರಲಿಲ್ಲ’ ಎಂದೆಲ್ಲ ಹೇಳಿಕೊಳ್ಳತೊಡಗಿದರು.
ಪಂಡಿತರ ಮಾತುಗಳನ್ನು ಕೇಳಿಸಿಕೊಂಡ ಊರಿನವರೆಲ್ಲ ನಜರುದ್ದೀನರ ಬಳಿ ಬಂದು ‘ನಿಮ್ಮ ಪ್ರಾಣವನ್ನುಳಿಸಿ ಕಾಪಾಡಿದವರು ಪಂಡಿತರಂತೆ! ಹೌದಾ?’ ಎಂದು ಕೇಳತೊಡಗಿದರು. ಹತ್ತಾರು ಜನ ಹೀಗೆ ಕೇಳಿದಾಗ, ನಸರುದ್ದೀನರಿಗೆ ಬಹಳ ಕಸಿವಿಸಿಯಾಯಿತು. ಕ್ರಮೇಣ ಬೇಸರವೂ ಉಂಟಾಯಿತು. ಅವರು ನೇರವಾಗಿ ಪಂಡಿತರನ್ನು ಭೇಟಿಯಾದರು. ಪಂಡಿತರನ್ನು ಒತ್ತಾಯದಿಂದ ಮತ್ತೆ ಸರೋವರದ ಬಳಿ ಕರೆದೊಯ್ದರು. ಅವರನ್ನು ಸರೋವರದ ದಡದಲ್ಲಿ ನಿಲ್ಲಿಸಿ ತಾವು ನೀರಿಗೆ ಧುಮುಕಿದರು. ನಿರಾಳವಾಗಿ ಈಜು ಹೊಡೆದರು. ಮತ್ತೆ ದಡಕ್ಕೆ ಬಂದು ಸೇರಿದರು. ಪಂಡಿತರನ್ನುದ್ದೇಶಿಸಿ ‘ನೋಡಿ, ಅಂದು ನಾನು ದಡ ಸೇರಲು ನೀವು ಸಹಾಯ ಮಾಡಿರಬಹುದು. ಆದರೆ ಅದನ್ನೇ ಎಲ್ಲರೊಂದಿಗೆ ಹೇಳಿಕೊಂಡು ಬರುತ್ತಿದ್ದೀರಿ. ನಿಮ್ಮಿಂದ ಏಕೆ ಕಾಪಾಡಲ್ಪಟ್ಟೆನೋ ಎನ್ನುವಷ್ಟು ಬೇಸರವನ್ನುಂಟು ಮಾಡಿದ್ದೀರಿ. ಈಗ ನೀವೇ ನೋಡಿದ್ದೀರಿ. ನನಗೆ ಈಜು ಬರುತ್ತದೆ. ಅಂದು ನೀವಿಲ್ಲದಿದ್ದರೂ ನಾನು ಹೇಗೋ ಬಚಾವಾಗುತ್ತಿದ್ದೆ ಎಂಬುದು ನಿಮ್ಮ ಗಮನಕ್ಕೆ ಬಂದಿರಬೇಕು.
ದಯವಿಟ್ಟು ಇನ್ನು ಮುಂದೆ ಊರಿನವರಿಗೆಲ್ಲ ನಸರುದ್ದೀನರ ಪ್ರಾಣ ಉಳಿಸಿದ್ದು ನಾನೇ, ಅವರನ್ನು ಕಾಪಾಡಿದ್ದು ನಾನೇ ಎಂದು ಹೇಳಿಕೊಳ್ಳುತ್ತ ತಿರುಗಬೇಡಿ’ ಎಂದು ಗದರಿಸಿ ಹೇಳಿದರು. ಪಂಡಿತರು ಏನೂ ಮಾತನಾಡದೆ ಅಲ್ಲಿಂದ ಹೊರಟು ಹೋದರು. ಆದರೆ ಇದಾದ ನಂತರ ಪಂಡಿತರು ಊರಿನ ಜನರ ಬಳಿ ‘ನಸರುದ್ದೀನರು ನನ್ನ ಮುಂದೆಯೇ ಮತ್ತೊಮ್ಮೆ ನೀರಿಗೆ ಬಿದ್ದುಬಿಟ್ಟರು. ಆದರೆ ಹಿಂದೊಮ್ಮೆ ಅವರು ನೀರಿಗೆ ಬಿದ್ದಾಗ ನಾನು ಕಾಪಾಡಿದ್ದೆ. ಆದರೆ ನಸರುದ್ದೀನರು ಮತ್ತೆ ಮತ್ತೆ ನೀರಿಗೆ ಬೀಳುವುದನ್ನೇ ಹವ್ಯಾಸ ಮಾಡಿಕೊಂಡರೆ, ನಾನು ಮತ್ತೆ ಅವರನ್ನು ಕಾಪಾಡಲು ಹೋಗಲು ಸಾಧ್ಯವೇ? ನನಗೆ ಮಾಡಲು ಬೇರೆ ಏನೂ ಕೆಲಸವಿಲ್ಲವೇ? ಎರಡ ನೆಯ ಬಾರಿ ನಾನು ಅವರನ್ನು ಕಾಪಾಡಲಿಲ್ಲ. ಅವರ ಅದೃ ಷ್ಟ ಚೆನ್ನಾಗಿತ್ತು. ಹೇಗೋ ಏನೋ ಬದುಕಿಕೊಂಡರು’ ಎಂದು ಹೇಳಿಕೊಳ್ಳುತ್ತಾ ಬಂದರಂತೆ.
ಊರಿನ ಜನರು ಈ ಮಾತುಗಳನ್ನು ನಸರುದ್ದೀನರ ಗಮನಕ್ಕೆ ತಂದಾಗ, ನಸರುದ್ದೀನರು ಹಣೆ ಚೆಚ್ಚಿಕೊಂಡರಂತೆ. ನಾವೂ ನಮಗೆ ಸಾಧ್ಯವಿದ್ದರೆ ಕಷ್ಟದಲ್ಲಿರುವವರಿಗೆ ಖಂಡಿತಾ ಸಹಾಯ ಮಾಡಬೇಕು. ಕಾಪಾಡಬೇಕು. ಆದರೆ ಕಾಪಾಡಿದೆ ವೆಂಬುದನ್ನು ಎಲ್ಲರೊಂದಿಗೆ ಹೇಳಿಕೊಳ್ಳುತ್ತಾ ಬಂದರೆ ಅದು ಅವರನ್ನು ಕಾಡಿದಂತೆಯೇ ಅಲ್ಲವೇ? ನಾವು ಆ ಪಂಡಿತರಂತೆ ಮಾಡುವುದಿಲ್ಲಾ ಅಲ್ಲವೇ? ಕೃಪೆ:ವಿಶ್ವ ವಾಣಿ. ಸಂಗ್ರಹ :ವೀರೇಶ್ ಅರಸಿಕೆರೆ. ದಾವಣಗೆರೆ.
Comments
Post a Comment