ದಿನಕ್ಕೊಂದು ಕಥೆ. 398
*🌻ದಿನಕ್ಕೊಂದು ಕಥೆ🌻 ಮನೆಗೋ? ಮಸಣಕೋ? ಪೋಗೆಂದ ಕಡೆಗೆ ಓಡಿಸುವುದು ಮನಸ್ಸು!*
ಅದ್ಭುತವಾದ ಶಕ್ತಿಯು ನಮ್ಮೆಲ್ಲರ ಮನಸ್ಸಿನಲ್ಲಿದೆ! ಅದನ್ನು ವಿವರಿಸುವ ನಿಜಜೀವನದ ಪುಟ್ಟ ಘಟನೆಯೊಂದು ಇಲ್ಲಿದೆ! 1957ರಲ್ಲಿ ಅಮೆರಿಕದಲ್ಲಿ ನಡೆದ ಘಟನೆ. ಅಲ್ಲೊಬ್ಬ ಕ್ಯಾನ್ಸರ್ ಪೀಡಿತರಿದ್ದರು. ಅವರು ಚಿಕಿತ್ಸೆ ಪಡೆಯುತ್ತಿದ್ದರು. ಒಂದು ದಿನ ಅವರ ವೈದ್ಯರು ‘ಕ್ಯಾನ್ಸರನ್ನು ಗುಣ ಪಡಿಸುವ ‘ಕ್ರೆಬಿಯೋಜೆನ್’ಎಂಬ ಹೊಸ ಮದ್ದು ಕಂಡು ಹಿಡಿಯಲಾಗಿದೆ. ಇಂದಿನಿಂದ ನಿಮಗೆ ಹೊಸ ಮದ್ದನ್ನು ನೀಡಲಾಗುವುದು’ಎಂದು ಹೇಳಿದರು. ಅದನ್ನು ರೋಗಿಗೆ ನೀಡಲಾರಂಭಿಸಿದರು.
ರೋಗಿಗೆ ವೈದ್ಯರ ಮಾತಿನಲ್ಲಿ ಅಪಾರ ನಂಬಿಕೆಯಿತ್ತು. ಅವರಿಗೆ ಆ ಹೊಸ ಮದ್ದಿನಲ್ಲೂ ನಂಬಿಕೆ ಉಂಟಾಯಿತು. ಅವರು ಸಕಾರಾತ್ಮಕವಾಗಿ ಚಿಂತಿಸಲು ಆರಂಭಿಸಿದರು. ಕೆಲವೇ ದಿನಗಳಲ್ಲಿ ಅವರ ಕ್ಯಾನ್ಸರ್ ಬಹುತೇಕ ವಾಸಿಯಾಗಿಬಿಟ್ಟಿತ್ತು! ಅವರು ಆಸ್ಪತ್ರೆಯಿಂದ ಮನೆಗೆ ಹೋದರು. ಆರೋಗ್ಯಕರ ಜೀವನವನ್ನಾರಂಭಿಸಿದರು. ಒಂದು ದಿನ, (ಅವರ ಪಾಲಿನ ದುರ್ದಿನ!) ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಯೊಂದರಲ್ಲಿ ಕ್ಯಾನ್ಸರನ್ನು ಗುಣ ಪಡಿಸುತ್ತದೆಂದು ಹೇಳಲಾಗುವ ‘ಕ್ರೆಬಿಯೋಜೆನ್’ಮದ್ದು ಅಂಥ ಪರಿಣಾಮಕಾರಿಯಾದ ಫಲಿತಾಂಶಗಳನ್ನು ಕೊಟ್ಟಿಲ್ಲ ಎಂದು ಬರೆದಿತ್ತು.
ಅದನ್ನು ಓದಿದ ಅವರು ಸುದ್ದಿ ನಿಜವಿರಬಹುದೇ ಎಂದು ಚಿಂತಾಕ್ರಾಂತರಾದರು. ಅದೇ ಚಿಂತೆಯಲ್ಲಿ ಮುಳುಗಿದ ಅವರ ಆರೋಗ್ಯ ಒಂದೆರಡು ವಾರಗಳಲ್ಲಿ ಹದಗೆಟ್ಟಿತು. ಅವರು ಮತ್ತೆ ಆಸ್ಪತ್ರೆಗೆ ದಾಖಲಾದರು. ಅವರ ಕ್ಯಾನ್ಸರ್ ಮತ್ತೆ ಮರುಕಳಿಸಿರುವುದನ್ನು ಕಂಡು ಆಶ್ಚರ್ಯಗೊಂಡ ವೈದ್ಯರು ಅವರನ್ನು ಹೀಗೇಕಾಯಿತೆಂದು ಕೇಳಿದರು. ರೋಗಿ ತಾನು ದಿನಪತ್ರಿಕೆಯಲ್ಲಿ ಓದಿದ ಸುದ್ದಿಯನ್ನು ವಿವರಿಸಿದರು. ವೈದ್ಯರಿಗೆ ಎಲ್ಲ ಅರ್ಥವಾಯಿತು. ಅವರು ಗಟ್ಟಿಯಾಗಿ ನಕ್ಕು ‘ದಿನಪತ್ರಿಕೆಯಲ್ಲಿ ಬಂದಿರುವ ಸುದ್ದಿ ಬಹಳ ಹಳೆಯದ್ದು. ಇದೀಗ ಸುಧಾರಿತ ಕ್ರೆಬಿಯೋಜೆನ್ ಮದ್ದು ಬಿಡುಗಡೆಯಾಗಿದೆ. ಹಿಂದಿದ್ದ ಮದ್ದಿನಲ್ಲಿದ್ದ ಲೋಪದೋಷಗಳನ್ನೆಲ್ಲ ನಿವಾರಿಸಿದ್ದಾರೆ’ಎಂದು ಹೇಳಿದರು.
ರೋಗಿಯಲ್ಲೂ ಶ್ರದ್ಧೆ ತುಂಬಿದರು, ಮತ್ತೆ ಚಿಕಿತ್ಸೆಯನ್ನಾರಂಭಿಸಿದರು. ಆದರೆ ಅವರು ರೋಗಿಗೆ ಕೇವಲ ಶುದ್ಧೀಕರಿಸಿದ ನೀರನ್ನು ಸೂಜಿಮದ್ದಾಗಿ ಕೊಡುತ್ತಿದ್ದರಂತೆ! ಅದು ರೋಗಿಗೆ ಗೊತ್ತಾಗಲಿಲ್ಲ. ಆದರೆ ಆಶ್ಚರ್ಯಕರ ರೀತಿಯಲ್ಲಿ ಅವರ ಆರೋಗ್ಯ ಸುಧಾರಿಸಿತು. ಅವರ ಕ್ಯಾನ್ಸರ್ ಎರಡನೆಯ ಬಾರಿಯೂ ಕಡಿಮೆಯಾಗಿತ್ತು. ಶೇ. 99ರಷ್ಟು ಗುಣಮುಖರಾಗಿದ್ದ ಅವರು ಮತ್ತೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಜೀವನವನ್ನು ನಡೆಸಲಾರಂಭಿಸಿದರು!
ಇದಾದ ನಂತರ ಹಲವಾರು ವರ್ಷಗಳಷ್ಟು ಸಮಯ ಅವರು ಸುಖಮಯ ಜೀವನ ನಡೆಸಿದರು. ಆದರೆ ದಿನಪತ್ರಿಕೆಯ ಸುದ್ದಿಯೊಂದು ಮತ್ತೆ ಅವರ ಬದುಕಿನಲ್ಲಿ ಚೆಲ್ಲಾಟವಾಡಿತು. ಇದೀಗ ಆ ಸುದ್ದಿಯಲ್ಲಿ ಅಮೆರಿಕ ಸರಕಾರದ ಔಷಧ ನಿಯಂತ್ರಣ ಇಲಾಖೆಯವರು (ಎಫ್.ಡಿ.ಏ) ಕ್ರೆಬಿಯೋಜೆನ್ ಮದ್ದಿನ ತಯಾರಿಕೆಗೆ ಕೊಟ್ಟಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಏಕೆಂದರೆ ಆ ಮದ್ದಿನಿಂದ ಬಹುತೇಕ ಜನರಿಗೆ ಏನೂ ಪ್ರಯೋಜನವಾಗಿಲ್ಲ ಎಂದು ಬರೆಯಲಾಗಿತ್ತು. ಅದನ್ನು ಓದಿದ ಅವರು ಈ ದುರದೃಷ್ಟಶಾಲಿ ಕ್ಯಾನ್ಸರ್‌ನಿಂದ ನನ್ನನ್ನು ಯಾವ ಮದ್ದೂ ಪಾರು ಮಾಡಲಾರದು ಎಂದು ತೀವ್ರವಾಗಿ ಚಿಂತಿಸತೊಡಗಿರಬೇಕು! ಅವರ ಆರೋಗ್ಯ ಮತ್ತೆ ಕ್ಷೀಣಿಸಿತು. ಎರಡೇ ದಿನಗಳಲ್ಲಿ ಅವರು ಸತ್ತೇ ಹೋದರಂತೆ!
ನಿಜಜೀವನದ ಈ ಘಟನೆಯನ್ನು ಅಹಮದಾಬಾದಿನ ಸ್ವಾಮಿನಾರಾಯಣ ಅಕ್ಷರಪೀಠದವರು ಪ್ರಕಟಿಸಿರುವ ‘ಟರ್ನಿಂಗ್ ಪಾಯಿಂಟ್’ ಎಂಬ ಉತ್ಕೃಷ್ಠ ಗ್ರಂಥದಲ್ಲಿ ಸಾಧು ಮುಕುಂದ ಚರಣದಾಸಜೀಯವರು ಬರೆದ ‘ಸಶಕ್ತತೆಗೆ ಮತ್ತು ಆರೋಗ್ಯಕ್ಕೆ ಮಾನ್ಸೀ ಪೂಜ’ಎಂಬ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ. ಮನಸ್ಸು ಪ್ರಕ್ಷುಬ್ಧಗೊಂಡಾಗ, ಅದು ನಕಾರಾತ್ಮಕ ಚಿಂತೆಗಳನ್ನುಂಟು ಮಾಡುತ್ತದೆ. ಅಂಥ ಚಿಂತೆಗಳು ದೇಹವನ್ನು ಅನಾರೋಗ್ಯದತ್ತ, ಅಷ್ಟೇ ಏಕೆ ಸಾವಿನತ್ತಲೂ ಕೊಂಡೊಯ್ಯಬಹುದು ಎಂದು ಅವರು ಬರೆಯುತ್ತಾರೆ.
ಪೂಜ್ಯ ಸಾಧು ಮುಕುಂದ ಚರಣದಾಸರಿಗೆ ಪ್ರಣಾಮಗಳನ್ನು ಸಲ್ಲಿಸೋಣ. ನಮ್ಮ ಮನಸ್ಸೇ ನಮ್ಮ ಶತ್ರು, ನಮ್ಮ ಮನಸ್ಸೇ ನಮ್ಮ ಮಿತ್ರ ಎಂಬರ್ಥದ ಭಗವದ್ಗೀತೆಯ ವಾಕ್ಯಗಳನ್ನು ನೆನಪಿಸಿಕೊಳ್ಳೋಣ. ಮನೆಗೋ, ಮಸಣಕ್ಕೋ ಓಡುವಂತೆ ಮಾಡುವುದು ನಮ್ಮ ಮನಸ್ಸೇ ಎನ್ನುವುದರ ಬಗ್ಗೆ ಚಿಂತಿಸೋಣ.
*ಕೃಪೆ: ಷಡಕ್ಷರಿ*. ಸಂಗ್ರಹ:ವೀರೇಶ್ ಅರಸಿಕೆರೆ.
Comments
Post a Comment