ದಿನಕ್ಕೊಂದು ಕಥೆ. 403

*🌻ದಿನಕ್ಕೊಂದು ಕಥೆ🌻                                                    ಮನೆ ಚಿಕ್ಕದು! ಮನಸ್ಸು ದೊಡ್ಡದು!*

ಮನೆಗೂ ಮನಸ್ಸಿಗೂ ವಿಚಿತ್ರವಾದ, ಇದು ಹೀಗೆಯೇ ಎಂದು ಹೇಳಲಾಗದ ಸಂಬಂಧವಿದೆಯಂತೆ! ದೊಡ್ಡ ಮನೆಯಲ್ಲಿರುವವರ ಮನಸ್ಸು ದೊಡ್ಡದಿಲ್ಲದಿರಬಹುದು. ಚಿಕ್ಕ ಮನೆಯಲ್ಲಿರುವವರ ಮನಸ್ಸು ಚಿಕ್ಕದಾಗಿರದೆ ದೊಡ್ಡದಾಗಿ ಇರಬಹುದು. ಅದನ್ನು ನಿರೂಪಿಸುವ ಪುಟ್ಟ ಕತೆಯೊಂದು ಇಲ್ಲಿದೆ. ಒಂದು ದಟ್ಟಡವಿ. ಅಲ್ಲೊಂದು ಪುಟ್ಟ ಗುಡಿಸಲು. ಗುಡಿಸಲಿನಲ್ಲಿದ್ದವರು ಒಬ್ಬ ಬಡ ಸೌದೆಗಾರರು ಮತ್ತವರ ಹೆಂಡತಿ. ಸೌದೆಗಾರ ಪ್ರತಿದಿನ ಅಡವಿಯಲ್ಲಿ ಸೌದೆ ಕಡಿಯುತ್ತಿದ್ದರು.

ಅದನ್ನು ತಮ್ಮ ಸೊಣಕಲು ಕತ್ತೆಯ ಮೇಲೆ ಹೇರಿಕೊಂಡು ನಗರಕ್ಕೆ ಹೋಗಿ, ಸೌದೆ ಮಾರುತ್ತಿದ್ದರು. ಬಂದ ಹಣದಲ್ಲಿ ಗಂಡ-ಹೆಂಡತಿಗೆ ಎರಡು ಹೊತ್ತು ಊಟಕ್ಕಾಗುವಷ್ಟು ಹಿಟ್ಟು-ಸೊಪ್ಪು ತರುತ್ತಿದ್ದರು.  ಹೀಗೆಯೇ ಅವರ ಬದುಕು ಸಾಗುತ್ತಿತ್ತು. ಒಂದು ಮಳೆಗಾಲದ ರಾತ್ರಿ. ಧಾರಾಕಾರ ಮಳೆ ಸುರಿಯುತ್ತಿತ್ತು. ಗಂಡ ಹೆಂಡತಿ ಇಬ್ಬರೂ ಗುಡಿಸಲಿನಲ್ಲಿ ಮಲಗಿದ್ದರು. ಮಧ್ಯರಾತ್ರಿ ಗುಡಿಸಲಿನ ಬಾಗಿಲನ್ನು ಯಾರೋ ಬಡಿದು ‘ಮಳೆಯಲ್ಲಿ ನೆನೆಯುತ್ತಿದ್ದೇನೆ. ಕಷ್ಟವಾಗುತ್ತಿದೆ. ಈ ರಾತ್ರಿ ನಿಮ್ಮ ಗುಡಿಸಲಿನಲ್ಲಿ ಕಳೆಯಬಹುದೇ?’ಎಂದು ಗೋಗರೆದರು. ಸೌದೆಗಾರ ಬಾಗಿಲು ತೆಗೆಯಲು ಎದ್ದು ನಿಂತಾಗ, ಹೆಂಡತಿ ‘ನಮ್ಮದು ಪುಟ್ಟ ಗುಡಿಸಲು ನಮ್ಮಿಬ್ಬರಿಗೆ ಮಲಗುವಷ್ಟು ಮಾತ್ರ ಸ್ಥಳವಕಾಶವಿದೆ. ಮತ್ತೊಬ್ಬರು ಬಂದರೆ ನಾವು ಮಲಗುವುದು ಹೇಗೆ?’ ಎಂದು ಕೇಳಿದರು.

ಸೌದೆಗಾರ ‘ಯಾರೋ ಯಾತ್ರಿಗಳು ಮಳೆಯಲ್ಲಿ ಕಷ್ಟಪಡುತ್ತಿದ್ದಾರೆ. ಬಾಗಿಲು ತೆಗೆಯೋಣ. ನಾವಿಬ್ಬರೂ ಮಲಗಿರುವ ಬದಲು, ಉಳಿದಿರುವ ರಾತ್ರಿಯನ್ನು ಕುಳಿತುಕೊಂಡು ಕಳೆದರಾಯಿತು’ಎನ್ನುತ್ತಾ ಬಾಗಿಲು ತೆರೆದರು. ಯಾತ್ರಿಯನ್ನು ಒಳಗೆ ಕರೆದುಕೊಂಡರು. ಮೂವರೂ ಕುಳಿತುಕೊಂಡರು. ಚಳಿ ಸ್ವಲ್ಪ ಕಡಿಮೆಯಾದಂತೆ ಅನಿಸುತ್ತಿತ್ತು.  ಸ್ವಲ್ಪ ಹೊತ್ತಿನಲ್ಲಿ ಮತ್ತೆ ಬಾಗಿಲು ಬಡಿದ ಸದ್ದಾಯಿತು. ಸೌದೆಗಾರ ಬಾಗಿಲು ತೆಗೆಯಲು ಎದ್ದು ನಿಂತಾಗ, ಅವರ ಪತ್ನಿ ಸುಮ್ಮನಿದ್ದರು. ಆದರೆ ಅಲ್ಲಿದ್ದ ಯಾತ್ರಿ ‘ನಿನ್ನ ಪುಟ್ಟ ಗುಡಿಸಲಿನಲ್ಲಿ ನಾವೀಗ ಮೂರು ಜನ ಕುಳಿತಿದ್ದೇವೆ. ಈಗ ನೀನು ಬಾಗಿಲು ತೆರೆದು, ಮತ್ತೊಬ್ಬರು ಬಂದರೆ ಅನನುಕೂಲವಲ್ಲವೇ?’ಎಂದರು. ಸೌದೆಗಾರರು ‘ಯಾರೋ ನಿಮ್ಮಂತೆಯೇ ಮಳೆಯಲ್ಲಿ ಕಷ್ಟಪಡುತ್ತಿದ್ದಾರೆ. ಅವರನ್ನೂ ಒಳಕ್ಕೆ ಬರಮಾಡಿಕೊಳ್ಳೋಣ.

ನಾವು ಮೂರು ಜನ ಕುಳಿತಿರುವ ಬದಲು ನಾಲ್ಕು ಜನ ನಿಂತು ಕೊಂಡು ರಾತ್ರಿ ಕಳೆದರಾಯಿತು’ ಎನ್ನುತ್ತ ಬಾಗಿಲು ತೆಗೆದರು. ನಾಲ್ಕನೆಯವರನ್ನೂ ಒಳಕ್ಕೆ ಕರೆದುಕೊಂಡರು. ನಾಲ್ಕೂ ಜನ ಪುಟ್ಟ ಗುಡಿಸಲಿನಲ್ಲಿ ಹತ್ತಿರ-ಹತ್ತಿರ ನಿಂತುಕೊಂಡಿದ್ದರು. ಚಳಿ ಮತ್ತಷ್ಟು ಕಡಿಮೆಯಾಗಿತ್ತು. ಹೊರಗಡೆ ಮಳೆ ಸುರಿಯುತ್ತಲೇ ಇತ್ತು. ಮತ್ತೆ ಗುಡಿಸಲಿನ ಬಾಗಿಲನ್ನು ಯಾರೋ ಪರಪರ ಕೆರೆಯುತ್ತಿರುವ ಸದ್ದು ಕೇಳಿಸಿತು. ಸೌದೆಗಾರರು ಮತ್ತವರ ಹೆಂಡತಿ ಸುಮ್ಮನಿದ್ದರು. ಆದರೆ ಅತಿಥಿಗಳಿಬ್ಬರೂ ‘ಮತ್ಯಾರೋ ಗುಡಿಸಲಿನ ಬಾಗಿಲಲ್ಲಿ ನಿಂತಂತಿದೆ. ಬಾಗಿಲು ತೆರೆಯಬೇಡ. ಇಲ್ಲಿ ನಾಲ್ವರು ನಿಂತು ಕೊಳ್ಳುವಷ್ಟು ಮಾತ್ರ ಸ್ಥಳವಿದೆ. ಮತ್ತೊಬ್ಬರು ಬಂದರೆ ಕಷ್ಟವಾಗುತ್ತದೆ’ ಎಂದರು.

ಆದರೆ ಸೌದೆಗಾರರು ‘ಈಗ ಬಾಗಿಲು ಕೆರೆಯುತ್ತಿರುವುದು ನನ್ನ ಸೊಣಕಲು ಕತ್ತೆಯೆಂಬುದು ನನಗೆ ಗೊತ್ತು. ಪಾಪ! ಮಳೆಯಲ್ಲಿ ಕಷ್ಟಪಡುತ್ತಿರುವ ಅದೂ ಒಳಕ್ಕೆ ಬರಲೆತ್ನಿಸುತ್ತಿದೆ’ಎನ್ನುತ್ತಾ ಬಾಗಿಲು ತೆಗೆದರು. ಹೊರಗೆ ನಡುಗುತ್ತ ನಿಂತಿದ್ದ ಕತ್ತೆಯನ್ನು ಬರಮಾಡಿಕೊಂಡರು. ಈಗ ಕತ್ತೆಯ ಮೈಗೆ ಒರಗಿಕೊಂಡು ನಾಲ್ವರೂ ನಿಂತುಕೊಂಡಿದ್ದರು. ಕತ್ತೆಯ ಮೈಶಾಖದಿಂದ ಅವರಿಗೆಲ್ಲ ಚಳಿ ಇಲ್ಲವಾದಂತೆ ಅನಿಸುತ್ತಿತ್ತು.  ಈ ಕತೆಯನ್ನು ತಮ್ಮ ಉಪನ್ಯಾಸವೊಂದರಲ್ಲಿ ಹೇಳಿರುವ ಪೂಜ್ಯ ಓಶೋರವರು ಬಡವರ ಗುಡಿಸಲುಗಳಲ್ಲಿ ಸ್ಥಳಾವಕಾಶ ಎಂದೂ ಕಡಿಮೆಯಾಗುವುದೇ ಇಲ್ಲ. ಏಕೆಂದರೆ ಅವರ ಗುಡಿಸಲುಗಳು ಚಿಕ್ಕದಾಗಿದ್ದರೂ, ಅವರ ಮನಸ್ಸುಗಳು ದೊಡ್ಡದಾಗಿರುತ್ತವೆ ಎನ್ನುತ್ತಾರೆ. ಇಂತಹ ಹೃದಯಸ್ಪರ್ಶಿ ಕತೆ ಹೇಳಿದ ಪೂಜ್ಯ ಓಶೋರವರಿಗೆ ಪ್ರಣಾಮಗಳು.

ನಮ್ಮ ಗುಡಿಸಲನ್ನೋ, ಮನೆಯನ್ನೋ ದೊಡ್ಡದು ಮಾಡಿಕೊಳ್ಳುವುದು ಕಷ್ಟವಿರಬಹುದು! ಸುಲಭವಿರಬಹುದು! ಆದರೆ ನಮ್ಮ ಮನಸ್ಸುಗಳನ್ನು ದೊಡ್ಡದು ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ ಅಲ್ಲವೇ?

*ಕೃಪೆ: ಷಡಕ್ಷರಿ*.                                          ಸಂಗ್ರಹ :ವೀರೇಶ್ ಅರಸಿಕೆರೆ. ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097