ದಿನಕ್ಕೊಂದು ಕಥೆ. 432

*🌻ದಿನಕ್ಕೊಂದು ಕಥೆ🌻                               ಸಾವರ್ಕರ್ ಎಂಬ ಸ್ಪೂರ್ತಿ ಕಿಡಿಗೆ ಎದೆಗೂಡಲ್ಲಿ ಜಾಗವಿಡಿ!*

ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಹನ್ನೆರಡು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ. ‘ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್‌ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ ‘ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ ಬಾಲಕ ವಿನಾಯಕ ದಾಮೋದರ ಸಾವರ್ಕರ್ ಮನಸ್ಸಿಗೆ ಬಹಳ ನೋವಾಗುತ್ತದೆ. ಮನೆಗೆ ಓಡೋಡಿ ಬಂದ ಆತ ದೇವರ ಕೋಣೆಯ ಬಾಗಿಲು ತೆರೆದು ದೇವಿಯ ಮುಂದೆ ಕುಳಿತು ಕೇಳುತ್ತಾನೆ. ‘ಅಮ್ಮಾ?

ಛಾಫೇಕರ್ ಸಹೋದರರು ಮಾಡಿದ್ದು ‘ಕೊಲೆ’ಯೋ, ‘ಸಂಹಾರ’ವೋ, ನಾವು ‘ದುರುಳರ ಸಂಹಾರ’ ಎನ್ನುತ್ತೇವೆ. ಪುಣೆಗೆ ಪ್ಲೇಗ್ ಬಡಿದಾಗ ಉಸ್ತುವಾರಿ ವಹಿಸಿ ಬಂದ ರಾಂಡ್ ಮಾಡಿದ್ದೇನು? ಪ್ಲೇಗ್ ಪೀಡಿತರನ್ನು ಪತ್ತೆ ಹಚ್ಚುವ ಸಲುವಾಗಿ ಜನರನ್ನು ಬೀದಿಗೆಳೆದ. ಮಹಿಳೆಯರು ಮನೆ ಮುಂದೆ ಅರೆಬೆತ್ತಲಾಗಿ ನಿಲ್ಲುವಂತೆ ಮಾಡಿದ, ಕೆಲ ಮಹಿಳೆಯರ ಮೇಲೆ ಅತ್ಯಾಚಾರ ಕೂಡ ನಡೆಯಿತು. ಅಂತಹ ಪ್ರಜಾಪೀಡಕ ರಾಂಡ್‌ನನ್ನು ಕೊಂದರೆ ಅದು ಹೇಗೆ ಕೊಲೆಯಾಗುತ್ತದೆ? ಅದು ದುಷ್ಟ ಸಂಹಾರವಲ್ಲವೆ ದೇವಿ?’ ಒಂದು ಕಡೆ ವಿದ್ಯಾನಂದ ಶೆಣೈ ಅವರ ಭಾಷಣ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತಿದ್ದರೆ ಮತ್ತೊಂದೆಡೆ ಸಾವರ್ಕರರು ಮನವನ್ನೆಲ್ಲ ಆವರಿಸಿ ಬಿಡುತ್ತಾರೆ. ವಿನಾಯಕ ದಾಮೋದರ ಸಾವರ್ಕರ್ ಎಂಬ ವ್ಯಕ್ತಿತ್ವವೇ ಅಂಥದ್ದು. ಅವರ ಪ್ರಭಾವಕ್ಕೆ ಒಳಗಾಗದವರು ಯಾರಿದ್ದಾರೆ?

ಇಂಡಿಯಾ ಹೌಸ್.
ಆ ಕಾಲದಲ್ಲಿ ಉನ್ನತ ವ್ಯಾಸಂಗಕ್ಕೆಂದು ಬ್ರಿಟನ್‌ಗೆ ತೆರಳಿದ ಭಾರತೀಯ ವಿದ್ಯಾರ್ಥಿಗಳೆಲ್ಲ ತಂಗುತ್ತಿದ್ದುದೇ ಅಲ್ಲಿ. ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿಲಾ ಓದಲು ಬ್ರಿಟನ್ನಿನ ಪ್ರತಿಷ್ಠಿತ Gray’s Inn ಕಾಲೇಜಿಗೆ ಸೇರಿದಾಗ ಸಾವರ್ಕರ್ ಕೂಡ ಆಶ್ರಯ ಪಡೆದುಕೊಂಡಿದ್ದು ಅದೇ ಇಂಡಿಯಾ ಹೌಸ್‌ನಲ್ಲಿ. ಅವರು ಕಾನೂನು ಪದವಿ ಕಲಿಯುವುದಕ್ಕೆಂದು ಬಂದಿದ್ದರೂ ಅದು ನೆಪಮಾತ್ರವಾಗಿತ್ತು. ಅಪ್ಪಟ ದೇಶಪ್ರೇಮಿಯಾದ ಅವರಿಗೆ ಬ್ರಿಟಿಷರಿಂದ ಪದವಿ ಪಡೆದು ಕೊಳ್ಳುವುದಕ್ಕಿಂತ ಸ್ವಾತಂತ್ರ್ಯ ಗಳಿಸಿಕೊಳ್ಳುವುದು ಮುಖ್ಯವಾಗಿತ್ತು. ಇಂಡಿಯಾ ಹೌಸ್‌ನಲ್ಲೇ ವಿದ್ಯಾರ್ಥಿಗಳನ್ನು ಕಲೆಹಾಕಿ ದಾಸ್ಯದಿಂದ ಬಳಲುತ್ತಿರುವ ದೇಶದ ಪರಿಸ್ಥಿತಿಯನ್ನು ವಿವರಿಸತೊಡಗಿದರು.

ಅದು ನಿತ್ಯ ಕಾಯಕವಾಯಿತು. ಸಮ್ಮೋಹನಗೊಳಿಸುವಂಥ ಅವರ ಭಾಷಣವನ್ನು ಕೇಳಲು ಬರುವವರ ಸಂಖ್ಯೆಯೂ ಹೆಚ್ಚಾಗತೊಡಗಿತು. ಅದೊಂದು ದಿನ ಲಂಡನ್ನಿನಲ್ಲಿ ಅಲೆಯುತ್ತಿದ್ದ ಶೋಕಿಲಾಲನೊಬ್ಬ ತನ್ನ ಮಾರ್ಗ ಮಧ್ಯದಲ್ಲಿ ಕಂಡ ಇಂಡಿಯಾ ಹೌಸ್‌ಗೆ ಆಗಮಿಸಿದ. ಅದೇ ವೇಳೆಗೆ ಸಾವರ್ಕರ್ ಭಾಷಣ ನಡೆಯುತಿತ್ತು. ಅವರು ತಾಯ್ನಾಡಿನ ಪರಿಸ್ಥಿತಿಯನ್ನು ವಿವರಿಸುತ್ತಿದ್ದರೆ ದೇಶಕ್ಕೆ ಎದುರಾಗಿರುವ ಹೀನಾತಿಹೀನ ಸ್ಥಿತಿಯನ್ನು ಕೇಳಿ ಆ ಶೋಕಿಲಾಲನ ರಕ್ತ ಕುದಿಯತೊಡಗಿತು. ಆ ದಿನದಿಂದ ಶೋಕಿಲಾಲ ಕೂಡ ಇಂಡಿಯಾ ಹೌಸ್‌ಗೆ ಕಾಯಂ ಬರಲಾರಂಭಿಸಿದ. ವಿನಾಯಕ ದಾಮೋದರ ಸಾವರ್ಕರ್ ಅವನನ್ನು ಆವಾಹನೆ ಮಾಡಿಬಿಟ್ಟರು. ಆತ ಅವರ ಭಕ್ತನಾಗಿಬಿಟ್ಟ.

ಆ ಶೋಕಿಲಾಲ ಮತ್ತಾರೂ ಅಲ್ಲ, ಮದನ್ ಲಾಲ್ ಧಿಂಗ್ರಾ! 1908ರಲ್ಲಿ ಸಾವರ್ಕರ್ ಲಂಡನ್‌ನಲ್ಲೊಂದು ಕಾರ್ಯಕ್ರಮವನ್ನು ಆಯೋಜಿಸಿದರು. ಅದು 1857ರಲ್ಲಿ ನಡೆದಿದ್ದ ಮೊದಲ ಭಾರತ ಸ್ವಾತಂತ್ರ್ಯ ಸಂಗ್ರಾಮದ ವಾರ್ಷಿಕ ದಿನ ಸ್ಮರಣೆಯಾಗಿತ್ತು. ಬಹುತೇಕ ಭಾರತೀಯ ವಿದ್ಯಾರ್ಥಿಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾವರ್ಕರ್ ಭಾಷಣ ಅವರನ್ನು ಅದೆಷ್ಟು ಪ್ರಭಾವಿತಗೊಳಿಸಿತ್ತೆಂದರೆ ತಮ್ಮ ಕೋಟಿನ ಮೇಲೆ ‘1857ರ ಸ್ಮರಣೆ’ ಎಂದು ಬರೆದಿರುವ ಬ್ಯಾಡ್ಜ್ ಹಾಕಿಕೊಂಡು ತಮ್ಮ ತಮ್ಮ ತರಗತಿಗಳಿಗೆ ಹೋಗಿದ್ದರು. ಬ್ರಿಟಿಷ್ ಅಧಿಪತ್ಯದ ಬಗ್ಗೆ ಅತಿಯಾದ ಹೆಮ್ಮೆ ಇಟ್ಟುಕೊಂಡಿದ್ದ ಇಂಗ್ಲಿಷರಿಗೆ ಇದನ್ನು ಸಹಿಸಲಾಗಲಿಲ್ಲ. ಬ್ರಿಟನ್ನಿನಲ್ಲೇ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಸೆಡ್ಡುಹೊಡೆಯುವುದೇನು ಸಾಮಾನ್ಯ ಮಾತೆ?

ಇದು ಇಂಗ್ಲಿಷರನ್ನು ಕುಪಿತಗೊಳಿಸಿತು. ಬಹಳ ಚಂದವಾಗಿ ಧಿರಿಸು ಮಾಡಿಕೊಂಡು, ಅದರ ಮೇಲೆ ಬ್ಯಾಡ್ಜ್ ಅಂಟಿಸಿಕೊಂಡು ಹೋಗುತ್ತಿದ್ದ ಧಿಂಗ್ರಾನತ್ತ ಧಾವಿಸಿದ ಇಂಗ್ಲಿಷನೊಬ್ಬ ಬ್ಯಾಡ್ಜನ್ನು ಕಿತ್ತೊಗೆಯಲು ಕೈಚಾಚಿದ. ಅಷ್ಟರಲ್ಲಿ ಅವನ ಕೈ ತಡೆದು ಕಪಾಳಮೋಕ್ಷ ಮಾಡಿದ ಧಿಂಗ್ರಾ, ಆತನನ್ನು ನೆಲಕ್ಕುರುಳಿಸಿ ಎದೆ ಮೇಲೆ ಕುಳಿತು, ‘ನನ್ನ ದೇಶದ ಚಿಹ್ನೆ ಮೇಲೆ ಕೈಹಾಕಿದರೆ ಜೋಕೆ’ ಎಂದು ಧಮಕಿ ಹಾಕಿದ. ಭಾರತೀಯ ವಿದ್ಯಾರ್ಥಿಗಳಲ್ಲಿ ಅಂಥ ತೀವ್ರ ದೇಶಪ್ರೇಮವನ್ನು ತುಂಬಿದ್ದರು ಸಾವರ್ಕರ್. ಮದನ್ ಲಾಲ್ ಧಿಂಗ್ರಾ 1909ರಲ್ಲಿ ಕರ್ಝನ್ ವೇಯ್ಲಿಯನ್ನು ಕೊಂದುಹಾಕಿದ್ದು ಸಾವರ್ಕರ್ ಆದೇಶದಂತೆಯೇ. ಆತ ವಿದೇಶದಲ್ಲಿ ನೇಣಿಗೇರಿದ ಮೊದಲ ಭಾರತೀಯ ಕ್ರಾಂತಿಕಾರಿ.

ಸಾವರ್ಕರ್ ಅಂದರೆ ಒಂದು ಪ್ರೇರಕ ಶಕ್ತಿಯಾಗಿತ್ತು. ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರನ್ನು ಹೊಡೆದೋಡಿಸಬೇಕು ಎನ್ನುತ್ತಿದ್ದರು. ಅಭಿನವ ಭಾರತ, ಫ್ರೀ ಇಂಡಿಯಾ ಸೊಸೈಟಿಗಳನ್ನು ಸ್ಥಾಪಿಸಿದ್ದ ಸಾವರ್ಕರ್ ಒಬ್ಬ ಮಹಾನ್ ಚಿಂತಕ ಕೂಡ ಹೌದು. 1857ರಲ್ಲಿ ನಡೆದಿದ್ದ ಕ್ರಾಂತಿಯನ್ನು ಬ್ರಿಟಿಷರು ‘ಸಿಂಪಾಯಿ ದಂಗೆ’ ಎಂದು ಕರೆಯುತ್ತಿದ್ದರು. ಉಳಿದವರೂ ಹಾಗೆಂದೇ ಭಾವಿಸಿದ್ದರು. ಅದು ಸಿಪಾಯಿ ದಂಗೆಯಲ್ಲ, ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಮೊದಲು ಹೇಳಿದ್ದೇ ಸಾವರ್ಕರ್.  The Indian War Of Independence ಎಂಬ ಪುಸ್ತಕವನ್ನೇ ಬರೆದರು. ಆ ಪುಸ್ತಕ ಬ್ರಿಟಿಷರನ್ನು ಯಾವ ರೀತಿ ಭೀತಿಗೊಳಿಸಿತೆಂದರೆ ಅದರ ಮಾರಾಟವನ್ನೇ ನಿಷೇಧ ಮಾಡಿದರು.

ಇಂತಹ ಸಾವರ್ಕರ್ ಅವರನ್ನು ಬ್ರಿಟನ್ ಆಡಳಿತ 1910ರಲ್ಲಿ ಇಂಡಿಯಾ ಹೌಸ್‌ನಲ್ಲೇ ಬಂಧಿಸಿತು. ಅವರ ಬಗ್ಗೆ, ಅವರ ಚಟುವಟಿಕೆಯ ಬಗ್ಗೆ ಬ್ರಿಟಿಷರಿಗೆ ಎಂತಹ ಭಯವಿತ್ತೆಂದರೆ ಎರಡು ಜೀವಾವಧಿ ಶಿಕ್ಷೆ (50 ವರ್ಷ) ವಿಧಿಸಿ ಅಂಡಮಾನ್ ಜೈಲಿಗೆ ದಬ್ಬಿತು. ಸಾವರ್ಕರ್ ಅಲ್ಲೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಧರ್ಮದ ಆಧಾರದ ಮೇಲೆ ದೇಶ ಒಡೆಯಲು ಹೊರಟ ಮುಸ್ಲಿಮರನ್ನು ಮಟ್ಟ ಹಾಕುವ ಸಲುವಾಗಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂದು ಸಾರ್ವಜನಿಕವಾಗಿ ಪ್ರತಿಪಾದಿಸಿದರು. ಹಿಂದೂ ರಾಷ್ಟ್ರವಾದವನ್ನು ಪ್ರತಿಪಾದಿಸಿ ಜೈಲಿನಲ್ಲೇ  “Hindutva: Who is a hindu?’ ಎಂಬ ಪುಸ್ತಕ ಬರೆದರು. ಹಿಂದುಯಿಸಂ, ಜೈನಿಸಂ, ಬುದ್ಧಿಸಂ ಹಾಗೂ ಸಿಖ್ಖಿಸಂ ಇವೆಲ್ಲವೂ ಒಂದೇ ಎಂದು ಮೊದಲು ಪ್ರತಿಪಾದಿಸಿದ್ದು, ‘ಅಖಂಡ ಭಾರತ’ದ ಕಲ್ಪನೆಯನ್ನು ಮೊದಲು ಕೊಟ್ಟಿದ್ದೂ ಇವರೇ.

1921ರಲ್ಲಿ ಷರತ್ತಿನ ಆಧಾರದ ಮೇಲೆ ಬಿಡುಗಡೆಯಾದ ಸಾವರ್ಕರ್, ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ಸ್ವಧರ್ಮೀಯರನ್ನು ಒಗ್ಗೂಡಿಸಲು ಹೊರಟರು. ಕಾಂಗ್ರೆಸ್ ಮಾಡುತ್ತಿದ್ದ ಮುಸ್ಲಿಮರ ಓಲೈಕೆ ಹಾಗೂ ಮುಸ್ಲಿಮರ ವಿಭಜನಾವಾದಿ ಮನಸ್ಥಿತಿಯನ್ನು ಸಾವರ್ಕರ್ ಬಹಳ ಕಟುವಾಗಿ ವಿರೋಧಿಸಿದರು. ನೀವು ಬಂದರೆ ನಿಮ್ಮ ಜತೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ಅಡ್ಡವಾದರೆ ಮೊದಲು ನಿಮ್ಮನ್ನೇ ಮೆಟ್ಟಿ ಸ್ವಾತಂತ್ರ್ಯ ಗಳಿಸುತ್ತೇವೆ? ಎಂದು ಎಚ್ಚರಿಕೆಯನ್ನೇ ನೀಡಿದ್ದರು. ಅವರನ್ನು ನೀವು ಒಪ್ಪಿಬಿಡಿ, ಆದರೆ ತಾವು ನಂಬಿದ್ದ ಸಿದ್ಧಾಂತಗಳಿಗೆ ಅವರು ನಿಷ್ಠರಾಗಿದ್ದರು. ಬಹುತೇಕ ಟೋಪಿಧಾರಿ ಕಾಂಗ್ರೆಸ್ಸಿಗರ ಸ್ವಾತಂತ್ರ್ಯ ಹೋರಾಟಕ್ಕೆ ರಾಜಕೀಯ ಅಧಿಕಾರದ ಗುರಿಯಿತ್ತು. ಆದರೆ ಸಾವರ್ಕರ್ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆ ಎಂದೂ ಇರಲಿಲ್ಲ. ಅವರಿಗಿದ್ದ ಜನಪ್ರಿಯತೆಯ ಅಲೆಯಲ್ಲಿ ಚುನಾವಣೆಯಲ್ಲಿ ಆರಿಸಿ ಬರಬಹುದಿತ್ತು. ಸಾವರ್ಕರ್ ಗುರಿ ಈ ದೇಶದ ಸ್ವಾತಂತ್ರ್ಯ, ಈ ನೆಲದ ನಂಬಿಕೆ, ಸಂಸ್ಕೃತಿಯ ರಕ್ಷಣೆಯಷ್ಟೇ ಆಗಿತ್ತು.

ಸಾವರ್ಕರ್ ಜನಿಸಿದ್ದು 1883, ಮೇ 28ರಂದು. ನಾಳೆ ಅವರ ಜನ್ಮದಿನ. ಇಂಗ್ಲೆಂಡಿನ ಐತಿಹಾಸಿಕ ಕಟ್ಟಡ ಹಾಗೂ ಸ್ಮಾರಕಗಳ ಆಯೋಗ ‘ಇಂಡಿಯಾ ಹೌಸ್’ ಮೇಲೆ ತೂಗುಹಾಕಿರುವ ನೀಲಿ ಫಲಕದ ಮೇಲೆ ‘ಭಾರತದ ರಾಷ್ಟ್ರಪ್ರೇಮಿ, ದಾರ್ಶನಿಕ ವಿನಾಯಕ ದಾಮೋದರ ಸಾವರ್ಕರ್ (1883-1966) ಇಲ್ಲಿ ನೆಲೆಸಿದ್ದರು’ ಎಂದು ಬರೆಯಲಾಗಿದೆ. ಅವರು ನಮ್ಮ ಹೃದಯದಲ್ಲೂ ಶಾಶ್ವತವಾಗಿ ನೆಲೆಸಲಿ.

ಕೃಪೆ :ವಿಶ್ವವಾಣಿ.                                ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059