ದಿನಕ್ಕೊಂದು ಕಥೆ. 433

*🌻ದಿನಕ್ಕೊಂದು ಕಥೆ🌻                 ಹೊಗಳುವುದನ್ನು ಕಲಿತವರು ತಂಗಳನ್ನ ತಿನ್ನಬೇಕಾಗಿಲ್ಲ !*

ಇದೇನಿದು? ಹೊಗಳುವಿಕೆಗೂ ತಂಗಳನ್ನಕ್ಕೂ ಎಲ್ಲಿಗೆಲ್ಲಿಯ ಸಂಬಂಧ ಎನಿಸುತ್ತದೆಯೇ? ಕ್ರಿ.ಪೂ. 4ನೆಯ ಶತಮಾನದಲ್ಲಿ ನಡೆದ ಒಂದು ಪ್ರಸಂಗವು ಮೇಲಿನ ಮಾತುಗಳನ್ನು ಎತ್ತಿ ತೋರಿಸುತ್ತದೆ. ಆಗ ಗ್ರೀಸ್‌ನಲ್ಲಿ ಡಯೋಜಿನಿಸ್ ಎಂಬ ತತ್ತ್ವಜ್ಞಾನಿ ಇದ್ದರು. ಸರಳ ಜೀವನದ ಉದಾತ್ತ ಚಿಂತನೆಯ ಡಯೋಜಿನಿಸ್ ಆಗಿನ ಕಾಲದ ಸಾಧಕರಿಗೆ ಮಾರ್ಗದರ್ಶಿಯಾಗಿದ್ದರು. ಅಧಿಕಾರದಲ್ಲಿರುವವರಿಂದ ಎಂದೂ ಏನನ್ನೂ ಅಪೇಕ್ಷಿಸದ ಅವರು ಅಧಿಕಾರದಲ್ಲಿರುವವರನ್ನು ಟೀಕಿಸಲು, ಅವರ ತಪ್ಪುಗಳನ್ನು ತಿದ್ದಲು ಹಿಂದೆಮುಂದೆ ನೋಡುತ್ತಿರಲಿಲ್ಲ. ಆದರೆ ಡಯೋಜಿನಿಸ್‌ರ ಕಟುಟೀಕೆಗಳು ಕುರ್ಚಿಯಲ್ಲಿ ಕುಳಿತವರಿಗೆ ಹಿಡಿಸುತ್ತಿರಲಿಲ್ಲ. ಹಾಗಾಗಿ ಅಧಿಕಾರಸ್ಥರು ಡಯೋಜಿನಿಸ್‌ರಿಂದ ದೂರವೇ ಉಳಿಯುತ್ತಿದ್ದರು.

ಅದೇ ಸಮಯದಲ್ಲಿ ಅರಿಸ್ಟಿಪ್ಪಸ್ ಎಂಬ ಮತ್ತೊಬ್ಬ ತತ್ತ್ವಜ್ಞಾನಿ ವಿದ್ವಾಂಸರು ಇದ್ದರು. ಅವರು ತತ್ತ್ವಜ್ಞಾನಕ್ಕಿಂತ ಹೆಚ್ಚಾಗಿ ಕುರ್ಚಿಯಲ್ಲಿ ಕುಳಿತಿರುವವರ ಮರ್ಜಿಯನ್ನನುಸರಿಸಿ ನಡೆಯುವವರಾಗಿದ್ದರು. ಅಧಿಕಾರದಲ್ಲಿದ್ದವರನ್ನು ‘ನೀನೇ ಇಂದ್ರ, ನೀನೇ ಚಂದ್ರ’ಎಂದೆಲ್ಲ ಹೊಗಳುತ್ತಿದ್ದರು. ಹಾಗೆ ಮಾಡಿ ಸಾಕಷ್ಟು ಹಣ ಗಳಿಸಿಕೊಳ್ಳುತ್ತಿದ್ದರು. ಸಿರಿವಂತ ಜೀವನ ನಡೆಸುತ್ತಿದ್ದರು. ಸಾರ್ವಜನಿಕ ಚರ್ಚೆಗಳಲ್ಲಿ ಅರಿಸ್ಟಿಪ್ಪಸ್‌ರು ಹಾಜರಾಗುತ್ತಿದ್ದರು. ರಾಜರ ಪರವಾಗಿ ವಾದಿಸುತ್ತಿದ್ದರು. ತಮ್ಮ ವಾದ ರಾಜರ ಕಿವಿಗೆ ಬೀಳುವಂತೆ ನೋಡಿಕೊಳ್ಳುತ್ತಿದ್ದರು. ಸಹಜವಾಗಿಯೇ ರಾಜರು ಅರಿಸ್ಟಿಪ್ಪಸ್ಸರ ಕಿಸೆ ತುಂಬಿಸುತ್ತಿದ್ದರು.

ಓಡಾಡಲು ಕುದುರೆಗಳು, ಬಿರುದು ಬಾವಲಿ ಗಳು ಅವರಿಗೆ ಸರಾಗವಾಗಿ ದೊರೆಯುತ್ತಿದ್ದವು. ಈ ಸಿರಿಸಂಪದ ಗಳಿಂದಾಗಿ ಅರಿಸ್ಟಿಪ್ಪಸ್‌ರು ಅಹಂಕಾರದಿಂದ ಬೀಗುತ್ತಿದ್ದರು. ಇನ್ನುಳಿದ ತತ್ತ್ವಜ್ಞಾನಿಗಳನ್ನು ಬದುಕಲು ಬಾರದ ಬುದ್ಧಿಗೇಡಿಗಳು ಎಂದು ಹೀಗಳೆಯುತ್ತಿದ್ದರು. ಪಂಡಿತರ ವಲಯಗಳಲ್ಲಿ ಅರಿಸ್ಟಿಪ್ಪಸ್‌ರಿಗೆ ಯಾರೂ ಬೆಲೆ ಕೊಡುತ್ತಿರಲಿಲ್ಲ. ಆದರೆ ಅವರ ವಿರುದ್ಧವಾಗಿ ಏನು ಹೇಳಲೂ ಹಿಂಜರಿಯುತ್ತಿದ್ದರು. ಹಾಗಾಗಿ ಅರಿಸ್ಟಿಪ್ಪಸ್‌ಗೆ ತಮ್ಮ ಸಮಾನರು ಯಾರೂ ಇಲ್ಲ ಎಂಬ ದುರಭಿಮಾನವಿತ್ತು. ವಿದ್ಯೆಯೊಂದಿಗೆ ಬುದ್ಧಿವಂತಿಕೆಯೂ ಇರಬೇಕು. ಇಲ್ಲದಿದ್ದವರು ಹಣ್ಣು ಕೊಡದ ಮರದಂತೆ, ಯಾರಿಗೂ ಪ್ರಯೋಜನವಿಲ್ಲ, ತತ್ತ್ವಜ್ಞಾನದ ಏಕಮಾತ್ರ ಉಪಯೋಗವೆಂದರೆ ಅದನ್ನು ಬಲ್ಲವರು ಯಾರೊಂದಿಗೆ ಬೇಕಾದರೂ ಧೈರ್ಯವಾಗಿ ಮಾತನಾಡಬಹುದು ಇತ್ಯಾದಿಗಳು ಅರಿಸ್ಟಿಪ್ಪಸ್‌ರ ಹೆಸರಾಂತ ಹೇಳಿಕೆಗಳು.

ಒಂದು ದಿನ ಅರಿಸ್ತಿಪ್ಪಸ್‌ರು ಡಯೋಜಿನಿಸರ ಮನೆ ಮುಂದೆ ಕುದುರೆಯನ್ನೇರಿ ಹೋಗುತ್ತಿದ್ದರು. ಅದೇ ಸಮಯಕ್ಕೆ ಡಯೋಜಿನಿಸ್ ತಮ್ಮ ಜಗುಲಿಯ ಮೇಲೆ ಕುಳಿತು ಒಂದಷ್ಟು ತಂಗಳನ್ನವನ್ನು, ಅದರೊಟ್ಟಿಗೆ ಹಸಿ ತರಕಾರಿಯನ್ನು ತಿನ್ನುತ್ತಿದ್ದರು. ಭೂರಿ ಭೋಜನ ಮಾಡುವಷ್ಟು ಆರ್ಥಿಕ ಅನುಕೂಲಗಳು ಡಯೋಜಿನಿಸ್‌ಗೆ ಇರಲಿಲ್ಲ. ಅವರು ಅದನ್ನು ಬಯಸಿದವರೂ ಅಲ್ಲ. ಅದು ಇಲ್ಲವೆಂದು ಕೊರಗಿದವರೂ ಅಲ್ಲ! ಅರಿಸ್ಟಿಪ್ಪಸ್ಸರು ಡಯೋಜಿನಿಸರನ್ನು ‘ತತ್ತ್ವಜ್ಞಾನಿಗಳು ತಂಗಳನ್ನ, ತರಕಾರಿಗಳನ್ನು ತಿನ್ನುತ್ತಿರುವಂತೆ ಕಾಣುತ್ತಿದೆಯಲ್ಲಾ?’ಎಂದು ಕೆಣಕಿದರು.

ಡಯೋಜಿನಿಸರು ‘ಹೌದು ಅರಿಸ್ಟಿಪ್ಪಸ್ಸರೇ, ನಿಮ್ಮ ಮಾತು ನಿಜ. ನಾನು ತಂಗಳನ್ನವನ್ನೇ ತಿನ್ನುತ್ತಿದ್ದೇನೆ’ಎಂದು ಸ್ವಲ್ಪವೂ ಸಂಕೋಚ ವಿಲ್ಲದೆ ಹೇಳಿದರು. ಆಗ ಅರಿಸ್ಟಿಪ್ಪಸ್ ಗಟ್ಟಿಯಾಗಿ ಗಹಗಹಿಸಿ ನಕ್ಕು ‘ನೀವೂ ದೊರೆಗಳನ್ನು ಹೊಗಳುವುದನ್ನ ಕಲಿತುಕೊಂಡರೆ ತಂಗಳನ್ನ ತಿನ್ನಬೇಕಾಗಿಲ್ಲ! ಇದನ್ನು ಅರ್ಥ ಮಾಡಿಕೊಳ್ಳಿ’ಎಂದರು.  ಡಯೋಜಿನಿಸರೂ ಗಟ್ಟಿಯಾಗಿ ನಕ್ಕು, ‘ಅರಿಸ್ಟಿಪ್ಪಸ್ಸರೇ, ನೀವು ತಂಗಳನ್ನವನ್ನು ತಿಂದು ಬದುಕುವುದನ್ನು ಕಲಿತುಕೊಂಡರೆ ದೊರೆಗಳನ್ನು ಹೊಗಳುತ್ತ ಬದುಕಬೇಕಿಲ್ಲ! ನೀವೂ ಇದನ್ನು ಅರ್ಥಮಾಡಿಕೊಳ್ಳಿ’ಎಂದಾಗ ಅರಿಸ್ಟಿಪ್ಪಸ್ ನಿರುತ್ತರರಾದರು. ತಲೆತಗ್ಗಿಸಿ ಅಲ್ಲಿಂದ ಹೊರಟು ಹೋದರು. ಈ ಘಟನೆ ನಡೆದು ಸುಮಾರು ಎರಡೂವರೆ ಸಾವಿರ ವರ್ಷಗಳಾಗಿವೆ. ಈ ಅವಧಿಯಲ್ಲಿ ಅರಿಸ್ಟಿಪ್ಪಸ್ಸಿನಂಥ ಲಕ್ಷಾಂತರ ಮಂದಿ ಆಗಿ ಹೋಗಿದ್ದಾರೆ. ಆದರೆ ಡಯೋಜಿನಿಸಿನಂಥವರು ಕೈ ಬೆರಳಲ್ಲಿ ಎಣಿಸುವಷ್ಟು ಮಂದಿ ಮಾತ್ರ ಆಗಿ ಹೋಗಿರಬಹುದು. ಜಗತ್ತು ಡಯೋಜಿನಿಸ್‌ನಂಥವರನ್ನು ನೆನಪಿನಲ್ಲಿಟ್ಟುಕೊಂಡಿದೆ.

ಅರಿಸ್ಟಿಪ್ಪಸ್ ಅಂತಹವರನ್ನು ಮರೆತು ಹೋಗಿದೆ. ಈಗಿನ ಇಪ್ಪತ್ತೊಂದನೆಯ ಶತಮಾನದಲ್ಲೂ ಅರಿಸ್ಟಿಪ್ಪಸ್ಸಿನಂಥವರೂ, ಡಯೋಜಿನಿಸಿನಂಥವರೂ ಇರುವುದು ನಾವು ಗಮನಿಸಿದ್ದೇವಲ್ಲವೇ?

ಕೃಪೆ :ಷಡಕ್ಷರಿ.                                  ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059