ದಿನಕ್ಕೊಂದು ಕಥೆ. 434
*🌻ದಿನಕ್ಕೊಂದು ಕಥೆ🌻 ಬದುಕಿನ ಆಟ ಬದಲಾಯಿಸಿದ ಒಂದು ಪುಟ್ಟ ಕಾದಾಟ!*
ಒಂದು ಪುಟ್ಟ ಕಾದಾಟವೇ ಬದುಕಿನ ಆಟ ಬದಲಾಗಲು ಕಾರಣವಾಯಿತು! ಸಾಮಾನ್ಯ ಬಾಲಕನೊಬ್ಬ ಮಹಾನುಭಾವನಾಗಲು ಕಾರಣವಾಯಿತು! ಅದು ಹೀಗಿದೆ. ಕಳೆದ ಶತಮಾನದಲ್ಲಿ ಜರ್ಮನಿಯ ಪುಟ್ಟ ಪಟ್ಟಣವೊಂದರ ಬೀದಿಯಲ್ಲಿ ಇಬ್ಬರು ಬಾಲಕರು ಆಟವಾಡುತ್ತಿದ್ದರು. ಒಬ್ಬಾತ ಶ್ರೀಮಂತರ ಮನೆಯವನು. ಅಮೂಲ್ಯವಾದ ಉಡುಗೆ- ತೊಡುಗೆಗಳನ್ನು ಧರಿಸಿದ್ದ. ಮೊದಲಿನಿಂದಲೂ ಪುಷ್ಟಿಕರವಾದ ಆಹಾರ ಸೇವಿಸುತ್ತಾ ಬಂದವನಾದುದರಿಂದ ಗಟ್ಟಿಮುಟ್ಟಾದ ಮೈಕಟ್ಟು ಹೊಂದಿದವನಾಗಿದ್ದ.
ಆದರೆ ಮತ್ತೊಬ್ಬ ಬಾಲಕ ಬಡವರ ಮನೆಯವನು. ಹರಕಲು ಬಟ್ಟೆ, ಬಡಕಲು ದೇಹ. ನಗು-ನಗುತ್ತಾ ಆಡಿಕೊಂಡಿದ್ದ ಅವರಿಬ್ಬರ ನಡುವೆ ಯಾವುದೋ ಸಣ್ಣ ವಿಷಯಕ್ಕೆ ಮನಸ್ತಾಪ ಉಂಟಾಯಿತು. ಇಬ್ಬರೂ ಒರಟೊರಟಾಗಿ ಮಾತನಾಡಿಕೊಂಡರು. ಕೊಂಚ ಹೊತ್ತಿನಲ್ಲಿ ಬಾಯಿ ಮಾತಿನಲ್ಲಿದ್ದ ಸಿಟ್ಟು ಸೆಡವುಗಳು ಮೈ-ಕೈಗಳಿಗೆ ಬಂದವು. ಇಬ್ಬರೂ ಹೊಡೆದಾಡಿಕೊಳ್ಳತೊಡಗಿದರು. ಇಬ್ಬರೂ ಆವೇಶದಲ್ಲಿದ್ದರು. ಮುಷ್ಠಿ ಕಾಳಗವು ಜಟ್ಟಿ ಕಾಳಗವಾಗಿ ಬದಲಾಯಿತು. ವೀರಾವೇಶದಿಂದಲೇ ಹೊಡೆದಾಡಿದರು. ಆದರೆ ಸಿರಿವಂತ ಬಾಲಕ ದೃಢಕಾಯನಾದುದರಿಂದ ಕಾಳಗದಲ್ಲಿ ಆತನ ಕೈ ಮೇಲಾಯಿತು.
ಆತ ಮತ್ತೊಬ್ಬನನ್ನು ಚೆನ್ನಾಗಿಯೇ ಹೊಡೆದುರುಳಿಸಿದ. ಕೆಳಗೆ ಬೀಳಿಸಿದ. ‘ನನ್ನ ತಂಟೆಗೆ ಬಂದರೆ ಹುಶಾರ್! ನಿನ್ನನ್ನು ಹುಡಿ-ಹುಡಿ ಮಾಡುತ್ತೇನೆ’ಎಂದು ಅಬ್ಬರಿಸಿ ನಿಂತುಕೊಂಡ. ಬಡವರ ಮನೆಯ ಬಾಲಕ ಸೋತಿದ್ದ. ಮೊದಲೇ ಹರಿದಿದ್ದ ಆತನ ಬಟ್ಟೆಗಳು ಮತ್ತಷ್ಟು ಹರಿದಿದ್ದವು. ಅಲ್ಪ-ಸ್ವಲ್ಪ ಗಾಯಗಳೂ ಆಗಿದ್ದವು. ಆತ ನಿಧಾನವಾಗಿ ಸಾವರಿಸಿಕೊಂಡು ಎದ್ದು ನಿಂತ. ಮೈಮೇಲಿನ, ಬಟ್ಟೆಗಳ ಮೇಲಿನ ಧೂಳನ್ನು ಒದರಿಕೊಂಡ.
ಸಿರಿವಂತರ ಬಾಲಕನತ್ತ ನೋಡುತ್ತಾ ‘ಇಂದು ನಮ್ಮಿಬ್ಬರ ಕಾದಾಟದಲ್ಲಿ ಗೆದ್ದು ಬಿಟ್ಟೆನೆಂದು ಬೀಗಬೇಡ. ನಾನು ಸೋತಿರಬಹುದು. ಆದರೆ ನಾನು ನಿನ್ನಷ್ಟೇ ಪೌಷ್ಟಿಕ ಆಹಾರ ಸೇವಿಸಿ ಬೆಳೆದಿದ್ದರೆ, ಇಂದಿನ ಕಾದಾಟದ ಫಲಿತಾಂಶ ಬೇರೆಯೇ ಆಗುತ್ತಿತ್ತು. ನಾನು ಗೆಲ್ಲುತ್ತಿದ್ದೆ. ನೀನು ಸೋಲುತ್ತಿದ್ದೆ. ಇಂದು ಗೆದ್ದಿದ್ದು ನೀನಲ್ಲ! ನಿನ್ನ ಸಿರಿವಂತಿಕೆಯ ಬದುಕಿನ ಶೈಲಿ! ನೆನಪಿಟ್ಟುಕೋ’ಎಂದು ಹೇಳಿ ಹೊರಟು ಹೋದ. ಆತನೇನೋ ಅಲ್ಲಿಂದ ಹೊರಟು ಹೋದ. ಆದರೆ ಈತ ಆ ಮಾತುಗಳನ್ನೇ ಮೆಲುಕು ಹಾಕುತ್ತಾ ಹೊರಟ. ಅದರಲ್ಲಿನ ಸತ್ಯ ಮುಖಕ್ಕೆ ಹೊಡೆದಂತೆ ಗೋಚರವಾಯಿತು.
ಇನ್ನು ಮುಂದೆ ಎಂದೆಂದಿಗೂ ತನಗಿರುವ ಸಿರಿವಂತಿಕೆಯ ಅನುಕೂಲವನ್ನು ಬದುಕಿನ ಹೋರಾಟಗಳಲ್ಲಿ ಗೆಲ್ಲಲು ಬಳಸಿಕೊಳ್ಳುವುದಿಲ್ಲ ಎಂಬ ತೀರ್ಮಾನಕ್ಕೆ ಬಂದ. ತನ್ನ ಬದುಕಿನ ಶೈಲಿಯನ್ನು ಬದಲಾಯಿಸಿಕೊಳ್ಳುವ ಸಂಕಲ್ಪವನ್ನು ತೊಟ್ಟ. ಅಂದಿನಿಂದಲೇ ಬೆಲೆ ಬಾಳುವ ಉಡುಗೆ-ತೊಡುಗೆಗಳನ್ನು ಧರಿಸುವುದನ್ನು ಬಿಟ್ಟುಬಿಟ್ಟ. ಸರಳಾತಿ ಸರಳ ಬದುಕಿನ ಶೈಲಿಯನ್ನು ಅಳವಡಿಸಿಕೊಂಡ. ಇವರ ಸಾಧಾರಣ ಉಡುಗೆ-ತೊಡುಗೆಗಳು ಮನೆಯವರಿಗೆ ಕಸಿವಿಸಿ ಉಂಟು ಮಾಡುತ್ತಿದ್ದವು. ಅವರು ಇವರನ್ನು ನಿಂದಿಸುತ್ತಿದ್ದರು. ಆದರೆ ಈತ ಬದಲಾಗಲಿಲ್ಲ. ತಮ್ಮ ಸಿರಿವಂತಿಕೆಯ ಅನುಕೂಲಗಳನ್ನು ಬಳಸಿಕೊಳ್ಳಲೇ ಇಲ್ಲ. ಆರ್ಥಿಕವಾಗಿಯೋ, ಸಾಮಾಜಿಕವಾಗಿಯೋ ಅನುಕೂಲಗಳಿಲ್ಲದೆ ಬದುಕು ನೂಕುವವರ ಸ್ಥಿತಿಯ ಸುಧಾರಣೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟ! ವೈದ್ಯಕೀಯ ವಿದ್ಯಾಭ್ಯಾಸ ಮಾಡಿ ವೈದ್ಯರಾದರು. ಅತೀ ಹಿಂದುಳಿದ ದೇಶವಾಗಿದ್ದ ಆಫ್ರಿಕಾಕ್ಕೆ ಹೋಗಿ ಅಲ್ಲಿ ಸೇವಾ ಕೈಂಕರ್ಯ ಕೈಗೊಂಡರು!
ಅಂದಿನ ಕಾಳಗದಲ್ಲಿ ಸೋತ ಆ ಬಡವರ ಮನೆಯ ಬಾಲಕನ ಹೆಸರು ಯಾರಿಗೂ ನೆನಪಿಲ್ಲ! ಆದರೆ ಬದುಕಿನ ಶೈಲಿಯನ್ನು ಬದಲಿಸಿಕೊಂಡ ಮತ್ತೊಬ್ಬರ ಹೆಸರು ಇತಿಹಾಸದಲ್ಲಿ ದಾಖಲೆಯಾಗಿ ಉಳಿದಿದೆ. ಅವರ ಹೆಸರು ಆಲ್ಬರ್ಟ್ ಶ್ವೀಟ್ಜರ್! (1875 -1965). ಆ ಘಟನೆಯ ನಂತರ ಅವರು ಆಯ್ದು ಕೊಂಡ ಕ್ಷೇತ್ರಗಳು ವೈದ್ಯಕೀಯ, ಸಂಗೀತ, ವೇದಾಂತ ಮತ್ತು ಜನಸೇವೆ! ಅವರು 1952ರ ನೋಬೆಲ್ ಶಾಂತಿ ಪುರಸ್ಕೃತರೂ ಹೌದು! ಅವರ ಪುಣ್ಯಸ್ಮರಣೆಗೆ ಪ್ರಣಾಮಗಳು. ಬದುಕು ಬದಲಾಗಲು ಒಂದು ಪುಟ್ಟ ಕಾದಾಟವೂ ಸಾಕಾದ ಪ್ರಸಂಗದ ಹಿಂದಿನ ಆಲೋಚನೆ ನಮಗೂ ಮಾರ್ಗದರ್ಶಿಯಾಗಬಹುದಲ್ಲವೇ?
ಕೃಪೆ :ವಿಶ್ವವಾಣಿ. ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment