ದಿನಕ್ಕೊಂದು ಕಥೆ. 436
*🌻ದಿನಕ್ಕೊಂದು ಕಥೆ🌻 ಮಾತೃ ದಿವಸ - ತಂದೆಯೂ ಅಮ್ಮನ ಪಾತ್ರವನ್ನು ವಹಿಸಬಲ್ಲನೇ? - ಒಂದು ಹೃದಯಸ್ಪರ್ಶಿ ಪ್ರಸಂಗ*
ಅಂತರ ರಾಷ್ಟ್ರೀಯ ಶಾಲೆಯೊಂದರಲ್ಲಿ ಅದರ ತೋಟದ ಮಾಲಿ - ಗಂಗಾದಾಸನು ಬಿಸಿಲಿನ ಝಳವನ್ನು ಲೆಕ್ಕಿಸದೇ ಗಿಡಗಳನ್ನು ಒಪ್ಪ ಮಾಡುತ್ತಿದ್ದನು.
"ಗಂಗಾದಾಸ್, ತಕ್ಷಣವೇ ನಿನ್ನನ್ನು ಪ್ರಿನ್ಸಿಪಾಲ್ ಮೇಡಂ ಬರಲು ತಿಳಿಸಿದ್ದಾರೆ", ಎಂಬ ಜೋರಿನ ಧ್ವನಿಯನ್ನು ಕೇಳಿ ಗಂಗಾದಾಸ್ ಕಂಗಾಲಾದ. ಕೂಡಲೇ ಎದ್ದು ತನ್ನ ಕೈಗಳನ್ನು ತೊಳೆದುಕೊಂಡು ಪ್ರಾಂಶುಪಾಲರ ಕೊಠಡಿಯ ಕಡೆಗೆ ಅವರು ತನ್ನನ್ನು ಏತಕ್ಕೆ ಕರೆದಿರಬಹುದು, ತಾನು ಏನು ತಪ್ಪನ್ನು ಮಾಡಿರಬಹುದು ಎಂದು ಏರುತ್ತಿರುವ ಹೃದಯ ಬಡಿತವನ್ನೂ ಲೆಕ್ಕಿಸದೇ ಧಾವಿಸಿದನು.
"ಮೇಡಂ, ನೀವು ನನ್ನನ್ನು ಕರೆದಿರಂತೆ?"
"ಒಳಗೆ ಬಾ" ಎಂಬ ಅಧಿಕಾರಯುತ ಹಾಗೂ ಕರ್ಕಶ ಧ್ವನಿಯು ಗಂಗಾದಾಸನನ್ನು ಮತ್ತಷ್ಟು ಅಸ್ಥಿರನನ್ನಾಗಿ ಮಾಡಿತು.
ಪ್ರಾಂಶುಪಾಲರು ಮೇಜಿನ ಮೇಲೆ ಇದ್ದ ಒಂದು ಕಾಗದದೆಡೆಗೆ ಕೈ ತೋರಿಸುತ್ತಾ, "ಅದರಲ್ಲಿರುವುದನ್ನು ಓದು" ಎಂದರು.
"ಮೇಡಂ, ನಾನು ಅನಕ್ಷರಸ್ತ, ನನಗೆ ಇಂಗ್ಲಿಷ್ ಓದಲು ಬರುವುದಿಲ್ಲ. ಮೇಡಂ, ನಾನೇನಾದರೂ ತಪ್ಪು ಮಾಡಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ, ಮುಂದೆ ನಾನು ತಪ್ಪು ಮಾಡುವುದಿಲ್ಲ, ನನಗೆ ಮತ್ತೊಂದು ಅವಕಾಶವನ್ನು ನೀಡಿ..... ನನ್ನ ಮಗಳು ಈ ಶಾಲೆಯಲ್ಲಿ ಯಾವುದೇ ಖರ್ಚಿಲ್ಲದೇ ಓದುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾನು ಆಜೀವ ಪರ್ಯಂತ ಕೃತಜ್ಞನಾಗಿರುವೆ. ನನ್ನ ಮಗಳಿಗೆ ಈ ವಿಧದ ಸೌಕರ್ಯವು ದೊರೆಯುವುದೆಂದು ನಾನು ಕನಸಿನಲ್ಲೂ ಯೋಚೋಸಿರಲಿಲ್ಲ....." ಹೀಗೆ ಬಡಬಡಿಸುತ್ತಾ ಗಂಗಾದಾಸನು ಕಣ್ಣೀರು ಸುರಿಸತೊಡಗಿದನು.
"ನಿಲ್ಲಿಸು ನಿನ್ನ ಅಸಂಬದ್ಧ ಮಾತುಗಳನ್ನು. ನೀನು ಏನೇನೋ ಊಹಿಸಿಕೊಳ್ಳುತ್ತಿರುವೆ. ನಿನ್ನ ಮಗಳಿಗೆ ನಮ್ಮ ಶಾಲೆಯಲ್ಲಿ ಓದುವುದಕ್ಕೆ ಅವಕಾಶ ಮಾಡಿಕೊಟ್ಟದ್ದು ಅವಳು ಬುದ್ಧಿವಂತೆ ಹಾಗೂ ನೀನು ನಿಷ್ಠಾವಂತ ನೌಕರನೆಂದು ಮಾತ್ರ. ಮಾಸ್ತರನ್ನು ಕರೆಯುವೆ. ಅವರೇ ನಿನ್ನ ಮಗಳು ಬರೆದಿರುವ ಕಾಗದವನ್ನು ಓದಿ ನಿನಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸುತ್ತಾರೆ, ನೀನು ಅದರಲ್ಲಿರುವುದನ್ನು ಅರ್ಥ ಮಾಡಿಕೊಳ್ಳಬೇಕು".
ಕೂಡಲೇ ಮಾಸ್ತರರು ಬಂದು ಕಾಗದದಲ್ಲಿರುವುದನ್ನು ಓದಿ ಅದರಲ್ಲಿದ್ದ ಪ್ರತಿಯೊಂದು ಸಾಲುಗಳನ್ನೂ ಹಿಂದಿಯಲ್ಲಿ ಗಂಗಾದಾಸನಿಗೆ ವಿವರಿಸಿದರು. ಕಾಗದಲ್ಲಿದ್ದದ್ದೇನೆಂದರೆ ........
"ಈ ದಿನ ನಮಗೆ ಮಾತೃ ದಿವಸದ ಮಹತ್ವದ ಬಗ್ಗೆ ಪ್ರಬಂಧವನ್ನು ಬರೆಯಲು ತಿಳಿಸಿದ್ದರು........
ನಾನು ಬಿಹಾರದಲ್ಲಿನ ಒಂದು ಕುಗ್ರಾಮದಿಂದ ಬಂದವಳು. ನಮ್ಮ ಗ್ರಾಮದಲ್ಲಿ ವಿದ್ಯಾಭ್ಯಾಸಕ್ಕೆ ಯಾವುದೇ ಅನುಕೂಲವಿಲ್ಲ ಹಾಗೂ ವೈದ್ಯಕೀಯ ಸೌಲಭ್ಯವೂ ಇಲ್ಲ ಮತ್ತು ಅವುಗಳನ್ನು ಊಹಿಸಿಕೊಳ್ಳುವುದೂ ಒಂದು ಕನಸೇ. ಹೆರಿಗೆಯ ಸಮಯದಲ್ಲಿ ಅನೇಕ ಹೆಂಗಸರು ಸಾಯುತ್ತಾರೆ. ನನ್ನ ತಾಯಿಯೂ ಅವರುಗಳಲ್ಲಿ ಒಬ್ಬಳು. ನನ್ನನ್ನು ತನ್ನ ತೋಳುಗಳಲ್ಲಿ ಅಪ್ಪಿ ಹಿಡಿದುಕೊಳ್ಳುವ ಮೊದಲೇ ಅವಳು ತೀರಿಕೊಂಡಳು. ನನ್ನನ್ನು ಮೊದಲು ತೋಳುಗಳಲ್ಲಿ ಹಿಡಿದುಕೊಂಡವರೆಂದರೆ ನನ್ನ ತಂದೆ ಮತ್ತು ಅವರೊಬ್ಬರೇ. ನನ್ನ ಸುತ್ತ ಮುತ್ತ ಇದ್ದವರೆಲ್ಲರೂ ನಾನು ಹೆಣ್ಣು ಮಗುವೆಂದು ಹಾಗೂ ಹುಟ್ಟುತ್ತಲೇ 'ತಾಯಿಯನ್ನು ತಿಂದುಕೊಂಡವಳೆಂದು' ಹಿಡಿ ಶಾಪವನ್ನು ಹಾಕುತ್ತಿದ್ದರು.ನನ್ನ ತಂದೆಯನ್ನು ಕೂಡಲೇ ಮತ್ತೊಂದು ಮದುವೆಯಾಗೆಂದು ಎಲ್ಲರೂ ಒತ್ತಾಯಿಸತೊಡಗಿದರು. ಆದರೆ ನನ್ನ ತಂದೆಯು ಅದಕ್ಕೆ ಒಪ್ಪಲಿಲ್ಲ. ನನ್ನ ಅಜ್ಜಿ, ತಾತ ಹಾಗೂ ಮತ್ತಿತರರು ನನ್ನ ತಂದೆಯನ್ನು ಮತ್ತೊಂದು ಮದುವೆಯಾಗುವುದೇ ಸರಿಯೆಂದು ತರ್ಕಸಹಿತ, ತರ್ಕರಹಿತ ಹಾಗೂ ಭಾವನಾತ್ಮಕ ರೀತಿಯಲ್ಲಿ ಒತ್ತಾಯಿಸತೊಡಗಿದರು. ಆದರೆ ನನ್ನ ತಂದೆಯು ಅದಕ್ಕೆ ಸುತರಾಂ ಒಪ್ಪಲಿಲ್ಲ. ನನ್ನ ಅಜ್ಜಿ ತಾತರಿಗೆ ಮೊಮ್ಮಗನು ಬೇಕಿದ್ದನು. ಅವರು ನನ್ನ ತಂದೆಯು ಮತ್ತೊಂದು ಮದುವೆಯಾಗದಿದ್ದಲ್ಲಿ ಅವನನ್ನು ಮನೆಯಿಂದ ಹೊರಹಾಕುವುದಾಗಿ ಬೆದರಿಸಿದರು. ನನ್ನ ತಂದೆಯು ಒಂದು ಕ್ಷಣವೂ ಯೋಚಿಸದೆ ಕೂಡಲೇ ಮನೆ, ಆಸ್ತಿ, ಅಂತಸ್ತು, ಜಾಮೀನು ಎಲ್ಲವನ್ನೂ ತೊರೆದು ಕೇವಲ ನನ್ನನ್ನು ತನ್ನ ಎದೆಯಲ್ಲಿ ಅವುಚಿಕೊಂಡು ಹೊರಬಂದರು. ಈ ನಗರಕ್ಕೆ ಬಿಡಿಗಾಸೂ ಇಲ್ಲದೇ ಕೇವಲ ನನ್ನನ್ನು ಮಾತ್ರ ಎತ್ತಿಕೊಂಡು ಬಂದರು. ಜೀವನ ಸಾಗಿಸುವುದು ಅತ್ಯಂತ ಕಠಿಣವಾಗಿತ್ತು. ನನ್ನ ತಂದೆಯು ಹಗಲೂ ರಾತ್ರೆಯೂ ಕಷ್ಟಪಟ್ಟು ದುಡಿದು ನನ್ನನ್ನು ಅತ್ಯಂತ ಪ್ರೀತಿ ಯಿಂದ ಹಾಗೂ ಜತನದಿಂದ ಸಾಕಿದರು.
ಈಗ ನನಗೆ ಎಲ್ಲವೂ ಅರ್ಥವಾಗುತ್ತಿದೆ, ಏನೆಂದರೆ ನಾನು ಯಾವ ತಿಂಡಿಗಳನ್ನು ತಿನ್ನಲು ಇಷ್ಟ ಪಡುತ್ತೇನೋ ಅದನ್ನು ನನ್ನ ತಂದೆಯವರು ಇಷ್ಟಪಡುವುದೇಕಿಲ್ಲವೆಂದು. ಏಕೆಂದರೆ ನಮ್ಮ ಊಟದ ತಟ್ಟೆಗಳಲ್ಲಿ ಕೇವಲ ಒಬ್ಬರು ತಿನ್ನುವಷ್ಟು ಮಾತ್ರ ತಿಂಡಿಯು ಯಾವಾಗಲೂ ಇರುತ್ತಿದ್ದದ್ದು. ಆ ಸಂದರ್ಭಗಳಲ್ಲಿ ಅವರು ಅದನ್ನು ತಿನ್ನಲು ಅಸಹ್ಯವಾಗುತ್ತದೆಂದು ಕಾರಣ ಕೊಡುತ್ತಿದ್ದರು, ಹಾಗೂ ನಾನು ಅದನ್ನು ನಿಜವೆಂದೇ ನಂಬಿ ಇಷ್ಟಪಟ್ಟು ಅದನ್ನು ತಿನ್ನುತ್ತಿದ್ದೆ. ಆದರೆ ನಾನು ದೊಡ್ಡವಳಾದ ಮೇಲೆ ನನಗೆ ಎಲ್ಲವೂ ಅರ್ಥವಾಗತೊಡಗಿತು. ನನ್ನ ತಂದೆಯವರು ನನಗಾಗಿ ಸರ್ವಸ್ವವನ್ನೂ ತ್ಯಾಗಮಾಡಲು ಸಿದ್ದರಾಗಿದ್ದರೆಂದು. ಅವರು ಶಕ್ತಿ ಮೀರಿ ದುಡಿದು ನನಗೆ ಅತ್ಯುತ್ತಮ ಸೌಕರ್ಯಗಳನ್ನು ನೀಡಿದರು. ಈ ಶಾಲೆಯು ಅವರಿಗೆ ಆಶ್ರಯ, ಗೌರವ ಹಾಗೂ ಅತಿ ಹೆಚ್ಚಿನ ಉಡುಗೊರೆಯಾಗಿ ಅವರ ಮಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿತ್ತು....... ಪ್ರೀತಿ ವಾತ್ಸಲ್ಯಗಳು ತಾಯಿಯ ಸಂಕೇತವಾದರೆ, ನನ್ನ ತಂದೆಯವರು ಆ ಚೌಕಟ್ಟಿನಲ್ಲಿ ಕೂಡುತ್ತಾರೆ. ಅನುಕಂಪವು ತಾಯಿಯ ಸಂಕೇತವಾದರೆ, ನನ್ನ ತಂದೆಯವರು ಅದರಲ್ಲಿ ಮೊದಲಿಗರಾಗಿ ಇರುತ್ತಾರೆ...... ತ್ಯಾಗವು ತಾಯಿಯ ಗುಣಕ್ಕೆ ಅತ್ಯುತ್ತಮ ರೀತಿಯಲ್ಲಿ ಹೊಂದುವುದಾದರೆ ನನಗೆ ನನ್ನ ತಂದೆಯು ಆ ವರ್ಗದಲ್ಲಿ ಮೊದಲಿಗರು. ಒಟ್ಟಿನಲ್ಲಿ ಹೇಳುವುದಾದರೆ ತಾಯಿಯು ಪ್ರೀತಿ, ವಾತ್ಸಲ್ಯ, ಆರೈಕೆ, ತ್ಯಾಗ ಮತ್ತು ಅನುಕಂಪಗಳ ಸಾಕಾರ ಮೂರ್ತಿಯಾದರೆ ನನ್ನ ತಂದೆಯವರು ಈ ಪ್ರಪಂಚದಲ್ಲಿನ ಅತ್ಯುತ್ತಮ ಮಮತೆಯ ಸಾಕಾರದ ತಾಯಿ.
ಮಾತೃ ದಿವಸದ ಈ ದಿನ, ನಾನು ಈ ಭೂಮಿಯಲ್ಲಿನ ಅತ್ಯುತ್ತಮ ಪೋಷಕರ ಸಾಲಿನಲ್ಲಿ ಮೊದಲಿಗರಾಗಿ ನನ್ನ ತಂದೆಯವರೆಂದು ಆರಾಧಿಸುವೆನು....... ಅವರಿಗೆ ಹೃದಯಾಂತರಾಳದಿಂದ ನಮಿಸುವೆನು ಹಾಗೂ ಅವರು ಈ ಶಾಲೆಯಲ್ಲಿ ಕಷ್ಟಪಟ್ಟು ದುಡಿಯುವ ತೋಟಗಾರನೆಂದು ಅಭಿಮಾನಪೂರ್ವಕವಾಗಿ ಹೇಳಿಕೊಳ್ಳಲು ನನಗೆ ಅತ್ಯಂತ ಸಂತೋಷವಾಗುತ್ತದೆ. ಈ ಪ್ರಬಂಧವನ್ನು ನಮ್ಮ ಮಾಸ್ತರರು ಓದಿದ ನಂತರ ನಾನು ಸ್ಪರ್ಧೆಯಲ್ಲಿ ಅನುತ್ತೀರ್ಣನಾಗುವೆನೆಂದು ನನಗೆ ಗೊತ್ತಿದ್ದರೂ ಇದು ನನ್ನ ತಂದೆಯ ನಿಸ್ವಾರ್ಥ ಪ್ರೀತಿಗೆ ನಾನು ಕೊಡುತ್ತಿರುವ ಒಂದು ಅಮೂಲ್ಯವಾದ ಬೆಲೆ.
ಧನ್ಯವಾದಗಳು"
ಕೋಣೆಯೊಳಗೆ ನಿಶಬ್ದವಾದ ವಾತಾವರಣವಿತ್ತು..... ಬಿಕ್ಕಿ ಬಿಕ್ಕಿ ಮೆಲ್ಲನೆ ಅಳುತ್ತಿರುವ ಗಂಗಾದಾಸನಿಂದ ಬರುತ್ರಿದ್ದ ಶಬ್ದವನ್ನು ಬಿಟ್ಟು.....
ಹೊರಗಿನ ಸೂರ್ಯ ನಿಂದ ಬರುತ್ತಿದ್ದ ಕಾವೂ ಕೂಡಾ ಗಂಗಾದಾಸನ ಬಟ್ಟೆಯನ್ನು ಒದ್ದೆ ಮಾಡಲು ಅಸಮರ್ಥವಾಗಿದ್ದರೂ ತನ್ನ ಮಗಳ ಹೃದಯದಿಂದ ಹೊರಬಂದ ಅತ್ಯಂತ ಪ್ರೀತಿ ಪೂರ್ವಕ ಮಾತುಗಳು ಅವನ ಹೃದಯವನ್ನು ಸಂಪೂರ್ಣವಾಗಿ ಕಣ್ಣೀರಿನಿಂದ ತೋಯಿಸಿತು. ಕೈಗಳನ್ನು ಮುಗಿದುಕೊಂಡು ಅವನು ಸುಮ್ಮನೆ ಕೋಣೆಯಲ್ಲಿ ನಿಂತಿದ್ದನು. ಸ್ವಲ್ಪ ಸಮಯದ ನಂತರ ಅವನು ಕಾಗದವನ್ನು ಮಾಸ್ತರರಿಂದ ತೆಗೆದುಕೊಂಡು ಅದನ್ನು ತನ್ನ ಹೃದಯದಲ್ಲಿ ಒತ್ರಿ ಹಿಡಿದುಕೊಂಡು ಗದ್ಗದಿತನಾಗಿ ಅಳತೊಡಗಿದನು.
ಪ್ರಾಂಶುಪಾಲರು ತಮ್ಮ ಆಸನದಿಂದ ಎದ್ದು ಗಂಗಾದಾಸನ ಬಳಿ ಬಂದು ಅವನನ್ನು ಕೈಹಿಡಿದು ಕರೆದುಕೊಂಡು ಬಂದು ಒಂದು ಕುರ್ಚಿಯಲ್ಲಿ ಪ್ರೀತಿಯಿಂದ ಕುಳ್ಳಿರಿಸಿ ಮೃದುವಾದ ಧ್ವನಿಯಿಂದ .... "ಗಂಗಾದಾಸ್, ನಿನ್ನ ಮಗಳ ಪ್ರಬಂಧಕ್ಕೆ 10 ಕ್ಕೆ 10 ಅಂಕಗಳನ್ನು ನೀಡಿದ್ದೇವೆ.....
ಮಾತೃ ದಿವಸದ ಪ್ರಬಂಧ ಸ್ಪರ್ಧೆಯಲ್ಲಿ ಇದು ನಮ್ಮ ಶಾಲೆಯ ಚರಿತ್ರೆಯಲ್ಲಿಯೇ ಒಂದು ಅತ್ಯಂತ ಉತ್ತಮ ಪ್ರಬಂಧವಾಗಿದೆ. ನಾಳೆ ನಮ್ಮ ಶಾಲೆಯಲ್ಲಿ ಮಾತೃ ದಿವಸದ ಸಲುವಾಗಿ ಸಂತೋಷಕೂಟವನ್ನು ಹಮ್ಮಿಕೊಂಡಿದ್ದೇವೆ. ಆ ಸಮಾರಂಭದಲ್ಲಿ ನೀನೇ ಮುಖ್ಯ ಅತಿಥಿ.... ಇದು ಯಾರೊಬ್ಬನು ತನ್ನ ಮಕ್ಕಳನ್ನು ಬೆಳೆಸುವ ಸಲುವಾಗಿ ತನ್ನೆಲ್ಲಾ ಪ್ರೀತಿ ತ್ಯಾಗಗಳನ್ನು ಧಾರೆ ಎರೆಯುತ್ತಾನೋ ಅವನನ್ನು ಗೌರವಿಸುವ ಹಾಗೂ ಪರಿಪೂರ್ಣ ಪೋಷಕರಾಗಲು ಕೇವಲ ಹೆಣ್ಣೇ ಆಗ ಬೇಕಿಲ್ಲ...... ಎಲ್ಲಕ್ಕಿಂತ ಅತಿ ಮುಖ್ಯವಾದದ್ದೆಂದರೆ ಈ ಗೌರವ ಸಲ್ಲಿಕೆಯು ನಿನ್ನ ಮಗಳು ನಿನ್ನಲ್ಲಿಟ್ಟಿರುವ ಬಲವಾದ ನಂಬಿಕೆಯನ್ನು ಗುರುತಿಸುವುದು, ಮೆಚ್ಚುವುದು, ಬಲಪಡಿಸಲು...... ಹಾಗೂ ಅವಳು ಹೆಮ್ಮೆ ಪಡಲು, ಅಲ್ಲದೆ ಇಡೀ ಶಾಲೆಯ ಎಲ್ಲರೂ ನಿನ್ನ ಮಗಳು ಗುರುತಿಸಿರುವಂತೆ ನೀನು ಈ ಭೂಮಿಯಲ್ಲಿನ ಅತಿ ಉತ್ತಮ ಪೋಷಕನೆಂದು ಹೆಮ್ಮೆ ಪಡಲು...... ನೀನು ಈ ಶಾಲೆಯ ನಿಜವಾದ ಅರ್ಥದಲ್ಲಿ ತೋಟಗಾರ ...... ನೀನು ಶಾಲೆಯ ತೋಟಗಳನ್ನು ನೋಡಿಕೊಳ್ಳುವುದಲ್ಲದೇ ನಿನ್ನ ಜೀವನದ ಅತಿ ಉತ್ತಮ ಪುಷ್ಪವನ್ನು ಅತ್ಯಂತ ಸುಂದರವಾದ ರೀತಿಯಲ್ಲಿ ಪೋಷಿಸುತ್ತಿದ್ದೀಯ......
ಆದ್ದರಿಂದ ಗಂಗಾದಾಸ್, ನೀನು ನಮ್ಮ ಸಮಾರಂಭದ ಮುಖ್ಯ ಅತಿಥಿಯಾಗುವೆಯಾ?"
ಈಗಿನ ಪರಿಸ್ಥಿತಿಯಲ್ಲಿ ಬಹಳ ಶಾಲೆಗಳು ಅಥವಾ ಅಧಿಕಾರಿಗಳು ಈ ವಿಧದ ಸುಂದರವಾದ ಸದ್ಭಾವಣೆಯನ್ನು ತೋರುವುದು ಅತಿ ವಿರಳವಲ್ಲವೇ?
ಕೃಪೆ :ಎಂ.ಶಂಕರ್. ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment