ದಿನಕ್ಕೊಂದು ಕಥೆ. 494

*🌻ದಿನಕ್ಕೊಂದು ಕಥೆ🌻                                       *ಜಾಣ ಸುಕನ್ಯಾ*

ರಾಜ್ಯವೊಂದರಲ್ಲಿ ಮಹೇಶ್‌ಚಂದ್ರನೆಂಬ ರಾಜನಿದ್ದ. ಅವನಿಗೆ ಸುರೇಶ್ ಚಂದ್ರನೆಂಬ ಮಗನಿದ್ದ. ರಾಜಕುಮಾರ ಪ್ರಾಪ್ತ ವಯಸ್ಕನಾಗಲು, ಅವನಿಗೆ ಪಟ್ಟಾಭಿಷೇಕ ಮಾಡಬೇಕೆಂದು ಮಹಾರಾಜ ನಿರ್ಧರಿಸಿದ. ಅವನ ಪಟ್ಟಾಭಿಷೇಕದ ಸಂಭ್ರಮದಲ್ಲಿ ಇಡೀ ರಾಜ್ಯವೇ ಮದುಮಗಳಂತೆ ಅಲಂಕೃತಗೊಂಡಿತ್ತು. ಆದರೆ, ಅಲಂಕಾರದ ಮಧ್ಯೆ ಕಪ್ಪು ಚುಕ್ಕೆಯಂತೆ, ಪಟ್ಟಾಭಿಷೇಕದ ಸಮಯದಲ್ಲಿ, ಮಹಾರಾಣಿಯು ಒಡವೆಗಳನ್ನಿರಿಸಿದ ಸಂದೂಕ ಕಳುವಾಯಿತು. ಬೇಸರಗೊಂಡ ಮಹಾರಾಜ, ಮಹಾರಾಣಿಯ ಸೇವೆಗೆ ನಿರತರಾದ ಅಂತಃಪುರದ ಪರಿಚಾರಿಕೆಯರನ್ನೆಲ್ಲಾ ಕರೆದು ವಿಚಾರಿಸಿದ.

ಪಟ್ಟಾಭಿಷೇಕದ ಸಮಯದಲ್ಲಿ, ಮಹಾರಾಣಿಯ ಅಂತಃಪುರದೊಳಗೆ ಬಂಧುಗಳಲ್ಲದೆ ಬೇರೆ ಯಾರಿಗೂ ಪ್ರವೇಶವಿರಲಿಲ್ಲವೆಂದು ಅವರು ತಿಳಿಸಿದರು.  ಕೋಪಗೊಂಡ ಮಹಾರಾಜ, ಮಹಾರಾಣಿಯ ಮಹಲನ್ನು ಕಾಯುತ್ತಿದ್ದ ಪಹರೆಯವರನ್ನು ಕರೆದು, ರಕ್ಷಣೆಗಾಗಿ ನೇಮಕಗೊಂಡ ನೀವು ನಿಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ನಿಮ್ಮ ಬೇಜವಾಬ್ದಾರಿಯಿಂದಲೇ ಮಹಾರಾಣಿಯ ಒಡವೆಗಳು ಕಳುವಾಗಿವೆ. ಒಂದು ವಾರದಲ್ಲಿ ಕಳ್ಳನನ್ನು ಹುಡುಕಿದರೆ ಸರಿ ಇಲ್ಲದಿದ್ದರೆ, ನಿಮಗೆ ಜೈಲು ಶಿಕ್ಷೆ ಖಂಡಿತ. ಎಂದು ಗುಡುಗಿದ. ರಾಜಾಜ್ಞೆಯಿಂದ ಪಹರೆಯವರೆಲ್ಲಾ ಭಯಭೀತಗೊಂಡರು. ಮಹಾರಾಣಿಯ ಒಡವೆಗಳನ್ನು ಕಳ್ಳತನ ಮಾಡಿದವರನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಡಂಗುರ ಸಾರಲು ಮಹಾರಾಜನು, ತನ್ನ ಮಂತ್ರಿಯಾದ ಸುಧನ್ವನಿಗೆ ತಿಳಿಸಿದ. ಸೈನಿಕರು, ಸೇನಾಧಿಪತಿಗಳು ಸೇರಿ ಇಡೀ ರಾಜ್ಯದ ತುಂಬೆಲ್ಲಾ ವಿಚಾರಣೆ ಮಾಡಿದರು. ಸಂದೇಹ ಬಂದ ಕಡೆಯೆಲ್ಲಾ ತಪಾಸಣೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಮಹಾರಾಜ ನೀಡಿದ ಏಳು ದಿನಗಳ ಗಡುವಿನಲ್ಲಿ, ಆರು ದಿನಗಳು ಮುಗಿದು ಹೋದವು. ಪಹರೆಯವರೆಲ್ಲಾ ಮಂತ್ರಿಯ ಬಳಿಗೆ ಬಂದು, ನಾವೆಲ್ಲಾ ನಿಷ್ಠೆಯಿಂದ ನಮ್ಮ ಕೆಲಸ ನಿರ್ವಹಿಸಿದ್ದೇವೆ. ಅನುಮತಿಯಿಲ್ಲದೆ, ಮಹಾರಾಣಿಯ ಮಹಲಿನೊಳಗೆ ಯಾರನ್ನೂ ಒಳಗೆ ಬಿಟ್ಟಿಲ್ಲ. ನಮ್ಮ ಮೇಲೆ ವಿನಾಕಾರಣ ಆಪಾದನೆ ಹೊರಿಸಲಾಗಿದೆ. ಒಡವೆಗಳು ನಾಳೆಯೊಳಗೆ ಸಿಕ್ಕದಿದ್ದರೆ, ನಾವು ಜೈಲುಪಾಲಾಗುವುದು ಖಂಡಿತ.’ ಎಂದು ತಮ್ಮ ಅಳಲು ತೋಡಿಕೊಂಡರು.

ಇವರ ಮಾತುಗಳನ್ನು ಕೇಳಿಸಿಕೊಂಡ ಮಂತ್ರಿಯ ಮಗಳು ಸುಕನ್ಯಾ, ನನಗೆ ಅನುಮತಿ ನೀಡಿದರೆ, ನಾನು ಮಹಾರಾಣಿಯ ಒಡವೆ ಕದ್ದವರನ್ನು ಹಿಡಿಯಲು ಪ್ರಯತ್ನಿಸುತ್ತೇನೆ. ಎಂದಳು. ಮಗಳ ಮಾತಿಗೆ ಒಪ್ಪಿಗೆ ನೀಡಿದ ಮಂತ್ರಿ ಸುಧನ್ವ, ಸುಕನ್ಯಾಳನ್ನು ಮಹಾರಾಣಿಯ ಬಳಿಗೆ ಕರೆದೊಯ್ದ. ಸುಕನ್ಯಾ ಮಹಾರಾಣಿಯ ಬಳಿಗೆ ತೆರಳಿ, ಪಟ್ಟಾಭಿಷೇಕದ ಸಮಯದಲ್ಲಿ ಆಗಮಿಸಿದ್ದ ಆಹ್ವಾನಿತರ ಪಟ್ಟಿಯನ್ನು ಪರಿಶೀಲನೆ ಮಾಡಿದಳು. ಮಹಾರಾಣಿಯ ಬಂಧು-ಬಳಗದವರೇ ಹೆಚ್ಚಾಗಿದ್ದ ಪಟ್ಟಿಯಲ್ಲಿ ಯಾರ ಮೇಲೂ ಅನುಮಾನ ಮೂಡಲಿಲ್ಲ. ಕಳ್ಳತನ ಮಾಡಿದವರು ಈ ಮಹಲಿನವರೇ ಆಗಿರಬೇಕು ಎಂದು ಊಹೆ ಮಾಡಿದಳು. ರಾಣಿಯ ಮಹಲಿನ ಹಿಂಭಾಗದಲ್ಲಿ, ಶತ್ರುಗಳ ಆಕ್ರಮಣದ ಸಮಯದಲ್ಲಿ ಅರಮನೆಯಿಂದ ಹೊರಗೆ ಹೋಗಲು ರಹಸ್ಯ ದಾರಿಯೊಂದಿತ್ತು.

ಅಲ್ಲಿ ಮೂಡಿದ ಹೆಜ್ಜೆಗಳ ಗುರುತುಗಳನ್ನು ನೋಡಿದಾಗ, ಸುಕನ್ಯಾಳಿಗೆ ಕಳ್ಳರ ಬಗ್ಗೆ ಸುಳಿವು ದೊರೆಯಿತು.  ತಕ್ಷಣ ಸುಕನ್ಯಾ, ಅರಮನೆಯ ಪಹರೆದಾರರು ಹಾಗೂ ಪರಿಚಾರಿಕೆಯರನ್ನು ಕರೆದು, ಎಲ್ಲರ ಕೈಗೂ ಶ್ಯಾವಿಗೆ ಪಾಯಸವಿದ್ದ ಬಟ್ಟಲೊಂದನ್ನು ಕೊಟ್ಟಳು. ಈ ಪಾಯಸದಲ್ಲಿ ತಪಸ್ವಿಗಳಾದ ನನ್ನ ಗುರುಗಳು ಕೊಟ್ಟ ಮಂತ್ರಿಸಿದ ಪುಡಿ ಸೇರಿಸಿದ್ದೇನೆ. ಸುಳ್ಳು ಹೇಳುವವರು ಹಾಗೂ ಕಳ್ಳತನ ಮಾಡಿದವರು ಈ ಶ್ಯಾವಿಗೆ ಪಾಯಸದ ಬಟ್ಟಲನ್ನು ಕುಡಿದರೆ, ತಕ್ಷಣ ಮೂರ್ಚೆ ಹೋಗುತ್ತಾರೆ, ಇಲ್ಲದಿದ್ದರೆ ಯಾವ ಬದಲಾವಣೆಯೂ ಇರುವದಿಲ್ಲ. ಎಂದು ಹೇಳಿದಳು. ಸುಕನ್ಯಾ ಪಾಯಸದಲ್ಲಿ ಯಾವ ಪುಡಿಯನ್ನೂ ಬೆರೆಸಿರಲಿಲ್ಲ. ಕಳ್ಳತನ ಮಾಡಿದವರು ಭಯಭೀತರಾಗಲೆಂದೇ ಈ ಉಪಾಯ ಮಾಡಿದ್ದಳು. ಮಹಾರಾಣಿಯ ಮಹಲಿನ ಪಹರೆಯವರು, ಪರಿಚಾರಿಕೆಯರೆಲ್ಲರೂ ಬಟ್ಟಲನಲ್ಲಿದ್ದ ಪಾಯಸ ಕುಡಿಯಲು ಆರಂಭಿಸಿದರು. ಆದರೆ, ಮಹಾರಾಣಿಯ ಪರಿಚಾರಿಕೆಯರಲ್ಲೊಬ್ಬಳಾದ ನೀಲಾಂಬಿಕೆ ಮಾತ್ರ, ಪಾಯಸದ ಬಟ್ಟಲನ್ನು ರತ್ನಗಂಬಳಿಯ ಮೇಲೆ ಇರಿಸಿ, ಮೆಲ್ಲಗೆ ರಹಸ್ಯ ದಾರಿಯತ್ತ ಸಾಗಿದಳು.

ಮರವೊಂದರ ಪೊಟರೆಯೊಳಗೆ ಅಡಗಿಸಿರಿಸಿದ್ದ ಒಡವೆಗಳ ಪೆಟ್ಟಿಗೆಯನ್ನು ತೆಗೆದು, ರಹಸ್ಯ ದಾರಿಯ ಮೂಲಕ ಹೊರಗೆ ಓಡಲು ಆರಂಭಿಸಿದಳು. ಸುಕನ್ಯಾಳ ಸೂಚನೆಯಂತೆ, ಅಲ್ಲಿಯೇ ಮರೆಯಾಗಿ ನಿಂತು ಅವಳನ್ನೇ ಗಮನಿಸುತ್ತಿದ್ದ ರಾಜಭಟರು, ತಕ್ಷಣ ನೀಲಾಂಬಿಕೆಯನ್ನು ಹಿಡಿದು, ಮಹಾರಾಜನ ಬಳಿಗೆ ಕರೆತಂದರು. ಒಡವೆಗಳನ್ನು ಕಳ್ಳತನ ಮಾಡಿದ ನೀಲಾಂಬಿಕೆಯನ್ನು ಕಂಡ
ಮಹಾರಾಜ ಕೋಪಗೊಂಡ. ರಾಜಕುಮಾರರ ಪಟ್ಟಾಭಿಷೇಕದ ದಿನ ಮಹಾರಾಣಿಯವರ ಆಭರಣಗಳನ್ನು ನೋಡಿ ನನಗೂ ಅವುಗಳನ್ನು ಧರಿಸಬೇಕೆಂದು ಆಸೆಯಾಯಿತು. ಒಡವೆಗಳಿದ್ದ ಪೆಟ್ಟಿಗೆಯನ್ನು ಹೊರಗೆ ಸಾಗಿಸುವಾಗ ಪಹರೆಯವರ ಕೈಗೆ ಸಿಕ್ಕಿಬೀಳಬಹುದೆಂಬ ಭಯದಲ್ಲಿ ಒಡವೆಗಳನ್ನು ಮರದ ಪೊಟರೆಯೊಳಗೆ ಅಡಗಿಸಿಟ್ಟಿದ್ದೆ.

ಪಹರೆಯವರು ಇಲ್ಲದ ಸಮಯ ನೋಡಿ, ಒಡವೆಗಳನ್ನು ಮನೆಗೆ ಸಾಗಿಸಬೇಕೆಂದುಕೊಂಡಿದ್ದೆ. ಅಷ್ಟರಲ್ಲಿ ಸಿಕ್ಕಿಬಿದ್ದೆ ಎಂದು ಅಳುತ್ತಾ ತಿಳಿಸಿದಳು. ಮಹಾರಾಜನ ಆಜ್ಞೆಯಂತೆ, ರಾಜಭಟರು ತಕ್ಷಣ ನೀಲಾಂಬಿಕೆಯನ್ನು ಕಾರಾಗೃಹಕ್ಕೆ ತಳ್ಳಿ, ಮಹಾ ರಾಣಿಯ ಆಭರಣಗಳನ್ನು ಹಿಂದುರಿಗಿಸಿದರು.  ಸುಕನ್ಯಾಳ ಜಾಣ್ಮೆಯಿಂದ ಒಡವೆಗಳನ್ನು ಮರಳಿ ಪಡೆದ ಮಹಾರಾಜ ಹಾಗೂ ಮಹಾರಾಣಿಗೆ ಅತೀವ ಸಂತಸವಾಯಿತು. ಸುಕನ್ಯಾಳಂತ ಜಾಣೆ ಈ ಅರಮನೆಗೆ ಸೊಸೆಯಾಗಿ ಬಂದರೆ ಚೆನ್ನ ಎಂದು ಕೊಂಡು, ಸರ್ವಸಮ್ಮತಿಯಿಂದ ರಾಜಕುಮಾರ ಮತ್ತು ಸುಕನ್ಯಾಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದರು.

*ಕೃಪೆ:ಜಯಶ್ರೀ ಕಾಲ್ಕುಂದ್ರಿ*
ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059