ದಿನಕ್ಕೊಂದು ಕಥೆ. 523

*🌻ದಿನಕ್ಕೊಂದು ಕಥೆ🌻                        ಪ್ರತಿಕ್ಷಣವೂ ಸಂತೋಷದಿಂದ ಇರುವುದನ್ನು ಕಲಿಯಬೇಕು*

‘ನಿಮ್ಮಲ್ಲಿ ಎಷ್ಟು ಜನರಿಗೆ ತಿನ್ನುವುದೆಂದರೆ ಇಷ್ಟ?’ ಎಂದು ನಾನು ಕೇಳಿದರೆ ‘ಅರೆ ಇದೆಂಥ ಪ್ರಶ್ನೆ! ತಿನ್ನದೆ ಬದುಕಲು ಸಾಧ್ಯವೇ?’ ಅಂತ ನೀವು ನನ್ನನ್ನೇ ಮರು ಪ್ರಶ್ನಿಸಬಹುದು. ಹೌದು ನಾವೆಲ್ಲ ಬದುಕುವುದಕ್ಕಾಗಿ ತಿನ್ನುವವರಲ್ಲ. ಕೆಲವೊಮ್ಮೆ ತಿನ್ನುವುದಕ್ಕಾಗಿಯೇ ಬದುಕುತ್ತಿದ್ದೇವೇನೋ ಎಂಬಂತೆ ಆಡುವವರು. ನಾವು ಪ್ರತಿದಿನ ಬೆಳಗ್ಗೆ ಚಪಾತಿ, ತರಕಾರಿ ಪಲ್ಯ, ಮಧ್ಯಾಹ್ನ ಅನ್ನ-ಸಾಂಬಾರ್, ರಾತ್ರಿ ರೊಟ್ಟಿ-ಸಬ್ಜಿ ತಿಂದು ಬದುಕಬಹುದು. ಇವನ್ನಷ್ಟೆ ತಿಂದರೂ ನಮಗೆ ಬೇಕಾಗುವಷ್ಟು ಪೌಷ್ಟಿಕಾಂಶ ದೊರೆಯುತ್ತದೆ. ಆದರೂ ನಮಗೆ ಪಿಜ್ಜಾ, ಬರ್ಗರ್ ಬೇಕು. ವೀಕೆಂಡ್ ಬಂತೆಂದರೆ ರೆಸ್ಟೋರೆಂಟ್‌ನಲ್ಲೇ ತಿನ್ನಬೇಕು. ಅದಕ್ಕೆ ನಾನು ಹೇಳಿದ್ದು ನಾವು ತಿನ್ನುವುದಕ್ಕಾಗಿ ಬದುಕುತ್ತಿರುವವರೇನೋ ಅಂತ. ‘ಅಯ್ಯೋ ದಿನಾ ಅದನ್ನೇ ಯಾರು ತಿಂತಾರೆ ಸ್ವಾಮೀಜಿ? ನಾಲಗೆಗೆ ರುಚಿ ಬೇಡವೆ?’ ಅಂತ ಕೇಳುತ್ತೀರಲ್ಲವೆ.

ನಿಮ್ಮಲ್ಲಿ ಎಷ್ಟು ಜನರಿಗೆ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುವುದೆಂದರೆ ಇಷ್ಟ? ಮಾನ ಮುಚ್ಚುವುದಕ್ಕಷ್ಟೇ ಬಟ್ಟೆ ಹಾಕುವುದಾದರೆ ಇಷ್ಟೊಂದು ಬ್ರಾಂಡೆಂಡ್ ಕಂಪನಿಗಳು, ಫ್ಯಾಷನ್ ಡಿಸೈನರ್‌ಗಳು ಕೆಲಸವಿಲ್ಲದೆ ಇರಬೇಕಿತ್ತು. ನಮಗೆ ನಾಲ್ಕು ಜನರೆದುರು ಸುಂದರವಾಗಿ ಕಾಣಿಸಬೇಕೆಂಬ ಆಸೆ. ಯಾವುದಾದರೂ ಸಮಾರಂಭಕ್ಕೆ ಹೋದಾಗ ‘ ವಾಹ್, ಎಷ್ಟು ಚೆನ್ನಾಗಿ ಕಾಣ್ತಿದ್ದೀರಿ ನೀವು’ ಅಂತ ಒಂದು ನಾಲ್ಕು ಮಂದಿಯಾದರೂ ನಿಮ್ಮನ್ನು ಹೊಗಳಬೇಕು. ಇಲ್ಲದಿದ್ದರೆ ‘ಛೆ ನನ್ನನ್ನು ಯಾರೂ ಗಮನಿಸಲಿಲ್ಲ’ ಎಂದು ಮನಸ್ಸು ಮುದುಡುತ್ತದಲ್ಲವೆ?

ನೀವೊಂದು ಸಿನಿಮಾಕ್ಕೆ ಹೋಗ್ತುತೀರಿ. ಸಿನಿಮಾ ಚೆನ್ನಾಗಿರಬೇಕು. ನೋಡಿ ಬಂದ ನಂತರ ನಿಮಗೆ ಖುಷಿಯಾಗಬೇಕು. ಇಲ್ಲದಿದ್ದರೆ ನೀವು ‘ಥೂ ಅದೆಂಥಾ ಸಿನಿಮಾ. ಇಂಟರ್‌ವಲ್‌ನಲ್ಲಿ ಎದ್ದು ಬಂದೆ. ಸುಮ್ಮನೆ ದುಡ್ಡು ವೇಸ್ಟ್‌ ಆಯಿತು’ ಎಂದು ಗೊಣಗುತ್ತೀರಿ. 150 ರುಪಾಯಿ ಕೊಟ್ಟು ನೋಡಿದ ಸಿನಿಮಾದಲ್ಲೂ ನಮಗೆ ಮಜಾ ಸಿಗಬೇಕು ಎಂದು ಬಯಸುತ್ತೇವೆ. ನನ್ನನ್ನು ಹಲವರು ಭಾಷಣಕ್ಕೆಂದು ಕರೆಯುತ್ತಾರೆ. ಮೊನ್ನೆಯಷ್ಟೇ ಒಂದು ಖಾಸಗಿ ಕಂಪನಿಯ ಸಿಇಒ ಒಬ್ಬರು ನನ್ನನ್ನು ಭೇಟಿ ಮಾಡಿ ತಮ್ಮ ಕಂಪನಿಯಲ್ಲಿ ಮುಂದಿನವಾರ ನಡೆಯಲಿರುವ ಸಮಾರಂಭದಲ್ಲಿ ಮಾತನಾಡಿ ಎಂದು ಕೇಳಿಕೊಂಡರು. ನಾನೂ ಒಪ್ಪಿಕೊಂಡೆ. ಕೊನೆಯಲ್ಲಿ ಅವರು ಹೇಳಿದರು ‘ಸ್ವಾಮೀಜಿ, ನಿಮ್ಮನ್ನು ಭಾಷಣಕ್ಕೆಂದು ಕರೆಯ್ತುತಿದ್ದೇವೆ. ಆದರೆ ಭಾಷಣ ಬೋರಿಂಗ್ ಆಗುವುದು ಬೇಡ. ನಿಮ್ಮ ಮಾತನ್ನು ಕೇಳಿದ ನಂತರ ಜನರಿಗೆ ಮಜಾ ಬರಬೇಕು’ ಎಂದು ಕೇಳಿಕೊಂಡರು. ಹೇಗಿದೆ ನೋಡಿ, ಒಬ್ಬ ಸನ್ಯಾಸಿಯಿಂದ ಕೂಡ ಜನರು ಬಯಸುವುದು ಮಜಾ ಹಾಗೂ ಸಂತೋಷವನ್ನು.

ನಾನು ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತೆಂದರೆ ನೀವೇ ಯೋಚನೆ ಮಾಡಿ ನಾವು ಮಾಡುವ ಪ್ರತಿ ಕೆಲಸದಿಂದಲೂ ನಾವು ಬಯಸುವುದು ಸಂತೋಷ ಮತ್ತು ತೃಪ್ತಿಯನ್ನು. ರುಚಿಕರವಾದ ತಿಂಡಿ, ಒಳ್ಳೆಯ ಸಿನಿಮಾ, ಚಂದದ ಡ್ರೆಸ್ ಎಲ್ಲವೂ ಕೂಡ ನಮ್ಮ ಮನಸ್ಸಿಗೆ ಸಂತೋಷ ಕೊಡಬೇಕು ಎಂದೇ ನಾವು ಬಯಸುವುದು. ಜಗತ್ತಿನಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಮತ್ತು ಬೆಲೆಬಾಳುವಂಥದ್ದು ಸಂತೋಷ. ಇಂಗ್ಲಿಷ್‌ನಲ್ಲಿ ಒಂದು ಮಾತಿದೆ There is no ‘y’ in happiness. there is ‘I’ in happiness. ಅಂದರೆ ಸಂತೋಷ ಪಡಲು ಕಾರಣ ಹುಡುಕಬಾರದು. ನಿನ್ನೊಳಗೇ ನೀನು ಸಂತಸ ಪಡುವುದನ್ನು ಕಲಿಯಬೇಕು ಅಂತ.  ಬದುಕಿನಲ್ಲಿ ಖುಷಿ ಪಡುವುದಕ್ಕೆ ಸಾವಿರಾರು ಕಾರಣಗಳಿವೆ. ನಾವು ಬದುಕನ್ನು ಕಾಂಪ್ಲಿಕೇಟ್ ಮಾಡಿಕೊಳ್ಳದಿದ್ದರೆ ಅಷ್ಟೆ ಸಾಕು. ಹಲವಾರು ಬಾರಿ ಸಂತೋಷ ಪಡುವುದಕ್ಕೆ ಸಾವಿರ ಕಾರಣಗಳಿದ್ದರೂ ನಾವು ದುಃಖ ಕೊಡುವ ಒಂದು ಸಂಗತಿಯನ್ನೇ ತಲೆಯಲ್ಲಿಟ್ಟುಕೊಂಡು ಚಿಂತಿಸುತ್ತಿರುತ್ತೇವೆ. ನಿಮ್ಮ ಬಳಿ ಸ್ಯಾಮ್‌ಸಂಗ್ ಸ್ಮಾರ್ಟ್ ಫೋನ್ ಇದೆ. ಆದರೂ ನೀವು ‘ಅಯ್ಯೋ ನನ್ನ ಹತ್ತಿರ ಐ ಫೋನ್ ಇಲ್ಲ’ ಎಂದು ದುಃಖಿಸುವುದು ಮೂರ್ಖತನ.

ನನ್ನ ಬಳಿ ಬ್ರಾಂಡೆಂಡ್ ಶೂ ಇಲ್ಲ ಎಂದು ಹಲುಬುವ ಮೊದಲು ಚಪ್ಪಲಿಯೇ ಇಲ್ಲದವನನ್ನು ನೋಡಿ, ಆತ ಬರಿಗಾಲಿನಲ್ಲೂ ಸಂತೋಷದಿಂದಿರುತ್ತಾನೆ. ನಿಮ್ಮ ಬಳಿ ಚಪ್ಪಲಿಯಿಲ್ಲವೇ ಹಾಗಾದರೆ ಕಾಲೇ ಇಲ್ಲದವನನ್ನು ನೋಡಿ ಆತನಿಗಿಂತ ನೀವು ಎಷ್ಟೋ ಅದೃಷ್ಟವಂತರು. ಈ ಸಂತೋಷ ಎಂಬುದು ಒಂದು ಮನಸ್ಥಿತಿ. ನಾನು ಏನಾದರೂ ಖುಷಿ ಖುಷಿಯಾಗಿರುತ್ತೇನೆ ಅಂದುಕೊಂಡವನಿಗೆ “life is beau full” ಅನ್ನಿಸುತ್ತದೆ. ಉಳಿದವರಿಗೆ ‘ಅಯ್ಯೋ ಇದೆಂಥ ಹಾಳು ಜೀವನ’ ಎಂಬ ಚಿಂತೆ ಕಾಡುತ್ತದೆ. ನನ್ನನ್ನೊಬ್ಬ ವ್ಯಕ್ತಿ ಭೇಟಿ ಮಾಡಿದ. ಆತನಿಗೆ ತಲೆಗೂದಲು ಉದುರುವ ಸಮಸ್ಯೆಯಿತ್ತು. ನನ್ನ ಬಳಿ ಬಂದು ‘ಸ್ವಾಮೀಜಿ, ನಾನು ನಿಮ್ಮಂತೆಯೇ ಬಾಲ್ಡ್‌ ಆಗಿ ಬಿಡುತ್ತೇನೆ ಎಂಬ ಭಯ ಶುರುವಾಗಿದೆ. ಪ್ರತಿದಿನ ಕನ್ನಡಿ ಮುಂದೆ ನಿಂತಾಗಲೂ ನನಗೆ ಭಯ ಕಾಡುತ್ತದೆ. ತಲೆಗೂದಲ ಕುರಿತು ಚಿಂತಿಸಿ, ಚಿಂತಿಸಿಯೇ ತಲೆಗೂದಲು ಉದುರುವುದು ಇನ್ನಷ್ಟು ಹೆಚ್ಚುತ್ತಿದೆ. ನಿಮಗೆ ನನ್ನಂತೆ ಚಿಂತೆ ಕಾಡಿರಲಿಲ್ಲವೇ?’ ಎಂದು ಕೇಳಿದ.

ಅವನ ಮಾತು ಕೇಳಿ ನನಗೆ ನಗಬೇಕೋ ಅಥವಾ ನನ್ನ ತಲೆ ಪರಿಸ್ಥಿತಿ ನೆನೆದು ಅಳಬೇಕೋ ತಿಳಿಯಲಿಲ್ಲ. ನಾನು ಹೇಳಿದೆ ‘ಅಯ್ಯೋ ಅದಕ್ಕೇಕೆ ಚಿಂತಿಸಬೇಕು. ತಲೆಗೂದಲು ಉದುರುವುದೂ ಒಂದು ವರ’ ಎಂದೆ. ಅವನಿಗೆ ಆಶ್ಚರ್ಯ! ‘ಅದು ಹೇಗೆ?’ ಎಂಬಂತೆ ನನ್ನನ್ನು ನೋಡಿದ. ಅದಕ್ಕೆ ನಾನು ‘ಇನ್ನೇನು ಮತ್ತೆ. ನನಗೆ ಇತರರಂತೆ ಹೇರ್‌ಸ್ಟೈಲ್ ಬಗ್ಗೆ ಶಾಂಪೂ ಬಗ್ಗೆ ಯೋಚಿಸುವುದೇ ಬೇಡ. ಅದಕ್ಕೆಲ್ಲ ಹಣ ಖರ್ಚು ಮಾಡುವುದೂ ಉಳಿಯುತ್ತದೆ. ಇನ್ನೂ ಒಂದು ಲಾಭದ ವಿಷಯವೆಂದರೆ ನನಗೆ ಕೂದಲು ಉದುರಿ ಬಾಲ್ಡ್‌ ಆಗಿಬಿಡಬಹುದೇನೋ ಎಂಬ ಚಿಂತೆ ಕಾಡಲೂ ಸಾಧ್ಯವಿಲ್ಲ’ ಎಂದು ನಕ್ಕೆ. ಅವನು ನನ್ನನ್ನು ‘ಅಯ್ಯೋ ಹೀಗೆಯೂ ಯೋಚಿಸಬಹುದೆಂದು ತಿಳಿದಿರಲಿಲ್ಲ ಸ್ವಾಮೀಜಿ’ ಎಂದ. ಬದುಕೆಂಬುದು ಹಾಗೆಯೇ ನಾವು ಯೋಚಿಸಿದಂತೆ, ನಾವು ಪ್ರತಿಕ್ರಿಯಿಸಿದಂತೆ.

ಒಂದು ಜೋಕ್ ಅನ್ನು ನೀವು ಮೊದಲ ಬಾರಿಗೆ ಕೇಳಿದಾಗ ಹತ್ತು ನಿಮಿಷ ನಗುತ್ತೀರಿ. ಅದೇ ಜೋಕ್ ಅನ್ನು ಇನ್ನೊಮ್ಮೆ ಕೇಳಿದರೆ ನಿಮಗೆ ನಗು ಬರುತ್ತದೆಯೇ? ಇಲ್ಲ ತಾನೆ. ಹಾಗಾದರೆ ಜೀವನದಲ್ಲಿ ಎದುರಾಗುವ ಯಾವುದೋ ಒಂದು ಪ್ರಾಬ್ಲಮ್ ಅಥವಾ ನೋವನ್ನು ನೆನಪಿಸಿಕೊಂಡು ಪದೇ ಪದೆ ದುಃಖಿಸುವುದೇಕೆ. ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ನಾವು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ನಮ್ಮವರೆಂದು ನಾವು ಭಾವಿಸಿದ್ದವರೇ, ಕೆಲವೊಮ್ಮೆ ಸಾಕಿ ಬೆಳೆಸಿದ ಮಕ್ಕಳೆ ನಮಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಅವರನ್ನೇ ನಾವು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಹಾಗಾದರೆ ನಮ್ಮದಲ್ಲದ ತಪ್ಪಿನಿಂದ ಘಟಿಸಿಹೋದ ಸಂಗತಿಗಳಿಗೆ ನಾವು ಪ್ರತಿಕ್ರಿಯಿಸುವುದೇಕೆ. ಅದರಿಂದ ಏನು ಪ್ರಯೋಜನ? ನಮ್ಮ ಮೆದುಳಿನ 70% ಭಾಗ ಇಂಥ ಸಿಲ್ಲಿ ಚಿಂತೆಗಳಿಂದ ತುಂಬಿಕೊಂಡಿರುತ್ತವೆ. ನಾವು ಎಷ್ಟೇ ಚಿಂತಿಸಿದರೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಕೈಯಲ್ಲಿ ಇರುವುದಿಲ್ಲ ಎಂದ ಮೇಲೆ ಚಿಂತೆ ಮಾಡಿ ಫಲವೇನು?

ನೀವೊಂದು ದಿನ ಕಾರಿನಲ್ಲಿ ಆಫೀಸಿಗೆ ಹೋಗುತ್ತಿರುತ್ತೀರಿ. ಅಚಾನಕ್ಕಾಗಿ ಮುದುಕನೊಬ್ಬ ಕಾರಿಗೆ ಅಡ್ಡ ಬಂದು, ಆ್ಯಕ್ಸಿಡೆಂಟ್ ಆಗಿಬಿಡುತ್ತದೆ. ಗುಂಪು ಸೇರುತ್ತದೆ. ಜನ ನಿಮ್ಮನ್ನು ಬಾಯಿಗೆ ಬಂದಂತೆ ಬೈಯಲು ಶುರು ಮಾಡುತ್ತಾರೆ. ನೀವು ದನಿ ಏರಿಸಿ ಮಾತನಾಡಿದರೆ ಜನ ಇನ್ನಷ್ಟು ಸಿಟ್ಟಿಗೇಳುತ್ತಾರೆ. ಆಗ ಏನು ಮಾಡುತ್ತೀರಿ? ನಿಮಗೂ ಗೊತ್ತು ತಪ್ಪು ಮುದುಕನದ್ದೇ, ಅವರೇ ರಸ್ತೆ ದಾಟುವ ಅವಸರದಲ್ಲಿ ಕಾರಿಗೆ ಅಡ್ಡ ಬಂದವರೆಂದು. ಆದರೂ ನೀವು ಸಾರಿ ಕೇಳಬೇಕು. ಪರಿಸ್ಥಿತಿಯನ್ನು ನಿಭಾಯಿಸಲು ಸಾವಧಾನದಿಂದ ಮಾತನಾಡಬೇಕು. ಆಗ ಜನರಿಗೂ ನಿಮ್ಮ ವರ್ತನೆಯಿಂದ ತಪ್ಪು ನಿಮ್ಮದಲ್ಲವೆಂದು ಅನ್ನಿಸಿ ಪರಿಸ್ಥಿತಿ ತಣ್ಣಗಾಗಿ ಬಿಡುತ್ತದೆ. ನೀವು ಸಿಟ್ಟಿಗೆದ್ದು ಜಗಳಕ್ಕಿಳಿದಿರೋ ಕತೆ ಕೆಟ್ಟಿತು ಎಂದೇ ಅರ್ಥ. ನೀವೂ ಕೂಗಾಡುತ್ತೀರಿ, ಅವರೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ನೆಮ್ಮದಿ ಹಾಳಾಗುತ್ತದೆ. ನಂತರ ದಿನವಿಡೀ ಅದೇ ಘಟನೆ ಕಣ್ಮುಂದೆ ಸುಳಿದು ಆಫೀಸಿನ ಕೆಲಸದಲ್ಲೂ ಏರುಪೇರಾಗುತ್ತದೆ. ಮುದುಕ ನಿಮ್ಮ ಕಾರಿಗೆ ಅಡ್ಡ ಬರುವುದನ್ನು ತಡೆಯುವ ಶಕ್ತಿ ನಿಮಗಿರಲಿಲ್ಲ. ಆದರೆ ಆ ಘಟನೆಯಿಂದ ನಿಮ್ಮ ಸಂತೋಷ, ನೆಮ್ಮದಿ ಹಾಳಾಗದಂತೆ ನೋಡಿಕೊಳ್ಳುವುದು ನಿಮ್ಮದೇ ಕೈಯಲ್ಲಿರುತ್ತದೆ ಅಲ್ಲವೇ? ಹಾಗೆಯೇ ಕೆಟ್ಟ ಘಟನೆಗಳು ಸಂಭವಿಸಿದಾಗ ‘ನನಗೇ ಯಾಕೆ ಹೀಗಾಯಿತು?’ ಎಂದು ಮರುಗುತ್ತಾ ಕೂರಬೇಡಿ. ‘ನಾನ್ಹೇಗೆ ಈ ತೊಂದರೆಯಿಂದ ಪಾರಾಗಲಿ’ ಎಂದು ಪ್ರಶ್ನಿಸಿಕೊಳ್ಳಿ ಆಗ ಖಂಡಿತಾ ನಿಮಗೆ ಪರಿಹಾರ ದೊರಕುತ್ತದೆ.

ಅಷ್ಟಕ್ಕೂ ನಿಮ್ಮ ಸಂತೋಷದ ಕೀಲಿಕೈಯನ್ನು ಇನ್ನೊಬ್ಬರ ಕೈಯಲ್ಲಿಡುವುದೇಕೆ? ನಮ್ಮ ಬದುಕಿಗೆ, ನಮ್ಮ ಸಂತೋಷಕ್ಕೆ ನಾವೇ ವಾರಸುದಾರರಾಗಬೇಕು. ಯಾವುದೋ ಒಂದು ವಸ್ತು, ಯಾರೋ ಒಬ್ಬ ವ್ಯಕ್ತಿ, ಇನ್ಯಾರದೋ ಮಾತು ನಿಮ್ಮ ನೆಮ್ಮದಿಯನ್ನು ಕಸಿದುಕೊಳ್ಳಬಾರದು. ‘ “Happiness is a journey, not desnaon’ ’ ಪ್ರತಿದಿನವೂ, ಪ್ರತಿಕ್ಷಣವೂ ಸಂತೋಷದಿಂದ ಇರುವುದನ್ನು ಕಲಿಯಬೇಕು. ಆಗ ಬದುಕಿಡೀ ಸಂತಸಮಯವಾಗಿರಬಹುದು.  ಹಡಗು ಸಮುದ್ರದ ಮೇಲೆ ತೇಲುತ್ತದೆ. ತೇಲುತ್ತಾ, ತೇಲುತ್ತಾ ದಡ ತಲುಪುತ್ತದೆ. ಆದರೆ ಯಾವಾಗ ಹಡಗಿನ ಹೊರಗಿದ್ದ ನೀರು ಒಳ ಸೇರುತ್ತದೋ ಆಗ ಹಡಗು ಮುಳುಗಿ ಹೋಗುತ್ತದೆ. ಹಾಗೆಯೇ ನಮ್ಮ ಜೀವನ ಕೂಡ. ಯಾವಾಗ ಚಿಂತೆ ಎಂಬುದು ನಮ್ಮ ಜೀವನವೆಂಬ ಹಡಗಿನ ಒಳ ಸೇರುತ್ತದೋ ಆಗ ಬದುಕು ದಡ ಸೇರುವುದಿಲ್ಲ. ಎಲ್ಲರಿಗೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಯಾರೂ ಸಮಸ್ಯೆಯಿಂದ ಮುಕ್ತರಲ್ಲ…

ಚಿಕ್ಕ ಮಕ್ಕಳಿಗೆ ಚಿಕ್ಕ ಚಿಕ್ಕ ಸಮಸ್ಯೆಗಳು, ಕೆಲಸ ಮಾಡುವವರಿಗೆ ಡೆಡ್‌ಲೈನ್ ಸಮಸ್ಯೆ. ಕೆಲಸವನ್ನು ಡೆಡ್‌ಲೈನ್ ಒಳಗೆ ಮುಗಿಸದಿದ್ದರೆ ಎನ್ನುವ ಚಿಂತೆ, ಮದುವೆಯಾದವರಿಗೆ ಯಾವ ತಲೆ ಬಿಸಿ ಇರುವುದಿಲ್ಲ ಎಂದು ಹೆಕ್ಕಿ ಹೇಳುವುದಕ್ಕೇ ಆಗುವುದಿಲ್ಲ, ಅತ್ತೆ ಮಾವನನ್ನು ನೋಡಿಕೊಳ್ಳಬೇಕು, ಸಾಲ ಮರುಪಾವತಿ ಮಾಡಬೇಕು. ನಾನು ಒಂದು ಘಟನೆಯನ್ನು ಹೇಳುತ್ತೇನೆ ಕೇಳಿ, ಒಮ್ಮೆ ನಾನು ಲಂಡನ್ ಹೀತ್ರೋ ವಿಮಾನ ನಿಲ್ದಾಣಕ್ಕೆ ಬಂದಿಳಿದೆ, ಅಲ್ಲಿದ್ದ ಅಧಿಕಾರಿಯೊಬ್ಬರು ನನ್ನನ್ನು ನೋಡುತ್ತಲೇ ಇದ್ದರು. ನನಗೂ ಯಾಕೆ ಎಂದು ಗೊತ್ತಾಗದೇ ಸುಮ್ಮನೆ ಒಂದು ನಗೆ ಬೀರಿದೆ. ನನಗಿಂತ ಬಹಳ ವಯಸ್ಸಾಗಿರುವವರ ರೀತಿ ಕಾಣುತ್ತಿದ್ದರು. ನನ್ನ ಬಳಿ ಬಂದು ಕೇಳಿದರು – ‘ಸರ್, ನೀವು ಇಲ್ಲಿಗೆ ಯಾಕಾಗಿ ಬಂದಿದ್ದೀರಿ?’ ಎಂದರು. ‘ನಾನು ಮಾತಾಡುತ್ತೇನೆ. ಅದೇ ಕಾರ್ಯಕ್ರಮಕ್ಕಾಗಿ ಬಂದಿದ್ದೇನೆ’ ಎಂದೆ. ಅವರು ಮಾತು ಮುಂದುವರಿಸಿದರು. ‘ನೀವು ಇನ್ನು ಎಷ್ಟು ದಿನಗಳ ಕಾಲ ಇಲ್ಲಿರುತ್ತೀರಿ?’ ಎಂದು ಕೇಳಿದಾಗ ‘ಎರಡು ವಾರ ಇರಬೇಕೆಂದಿದ್ದೇನೆ ಸರ್’ ಎಂದೆ. ಅವರ ಮನಸ್ಸಲ್ಲಿ ಏನಿತ್ತೋ ಗೊತ್ತಿಲ್ಲ, ‘ಸರ್, ನಾನು ನಿಮಗೆ ಒಂದು ವೈಯಕ್ತಿಕ ಪ್ರಶ್ನೆ ಕೇಳಲಾ?’ ಎಂದರು.

‘ಕೇಳಿ’ ಎಂದೆ. ‘ನಿಮಗೆ ಮದುವೆಯಾಗಿದೆಯಾ’!? ಅರ್ರೇ, ಇದೇನಿದು ಈ ಥರ ಪ್ರಶ್ನೆ ಕೇಳುತ್ತಿದ್ದಾರೆ ಅನಿಸಿತು, ಆ ಗೊಂದಲದಲ್ಲೇ ‘ಸರ್, ನಾನು ಸನ್ಯಾಸಿ!!’ ಎಂದಾಗ, ಅಧಿಕಾರಿ ‘ಅಲ್ಲ, ಹಾಗಲ್ಲ, ತಪ್ಪು ತಿಳಿಬೇಡಿ.. ಸುಮ್ನೆ ಒಮ್ಮೆ ಕೇಳಿ ಖಾತ್ರಿ ಪಡಿಸಿಕೊಂಡೆಯಷ್ಟೇ’ ಎನ್ನುತ್ತಾ ನಿಟ್ಟುಸಿರು ಬಿಟ್ಟು, ಒಮ್ಮೆ ನನ್ನನ್ನು ಮೇಲಿಂದ ಕೆಳಗೆ ನೋಡುತ್ತಾ, ‘ನಾನು ಮತ್ತೊಂದು ಪ್ರಶ್ನೆ ಕೇಳಲಾ? ನಿಮಗೆ ಮದುವೆಯಾಗಿಲ್ಲವಲ್ಲ, ನಿಮ್ಮ ಜೀವನದಲ್ಲಿ ನೀವು ಏನನ್ನೋ ಮಿಸ್ ಮಾಡಿಕೊಳ್ಳುತ್ತಿದ್ದೀರ ಅಂತ ನಿಮಗೆ ಅನಿಸುತ್ತಿಲ್ಲವಾ?’ ಎಂದು ಕೇಳಿ, ಸರಿಯಾಗಿ ಸಿಕ್ಕಿಬಿದ್ದ ಅಂತ ಮನಸ್ಸಲ್ಲೇ ಅಂದುಕೊಂಡವರಂತೆ ನೋಡುತ್ತಿದ್ದರು. ನನ್ನ ಉತ್ತರಕ್ಕಾಗಿ ಕಾಯುತ್ತಿದ್ದರು. ನಾನು ಹೇಳಿದೆ – ‘ಯಾರಿಲ್ಲ ಎಂದಿದ್ದು? ನಾನು ಬಹಳವೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ’! ಹುಬ್ಬೇರಿಸಿದ ಅಧಿಕಾರಿ ‘ಏನದು?’ ಎಂದರು. ‘ಸಮಸ್ಯೆಗಳು!, ನಾನು ಮದುವೆಯಾಗಿಲ್ಲವಲ್ಲ ಅದಕ್ಕೆ ಸಮಸ್ಯೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದೆ.

ನನ್ನ ಉತ್ತರಕ್ಕೆ ಆತನಿಗೆ ಕುಣಿದಾಡುವಷ್ಟು ಖುಷಿಯಾಯ್ತು. ಅದೇ ಖುಷಿಯಲ್ಲಿ ನನ್ನ ಪಾಸ್‌ಪೋರ್ಟ್ ಮೇಲೆ ಒಂದು ಸ್ಟ್ಯಾಂಪ್ ಒತ್ತಿದರು. ಅದನ್ನು ತೆಗೆದುಕೊಂಡು ನಾನು ಹೊರಗೆ ಹೋಗುವಾಗ ಅವರೇ ನನ್ನ ಹಿಂದೆ ಬಂದು, ನನ್ನ ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡುತ್ತಾ ‘ಮಗನೇ ಹಿಂಗೇ ಇದ್ದುಬಿಡು, ಆರಾಮಾಗಿ ಇದ್ದುಬಿಡು. ನಿನಗೆ ಯಾವುದೂ ಸಮಸ್ಯೆಗಳೇ ಬಾರದಿರಲಿ. ಯಾವಾಗ್ಲೂ ಖುಷಿಯಾಗಿರು. ನಮ್ಮದೇನೋ ಆಗೋಯ್ತು!’ ಎಂದರು. ನಾನು ಅವರ ಮಾತಿಗೆ ಸಮ್ಮತಿಸುತ್ತಾ ಹೇಳಿದೆ ‘ನಾನು ನಿಮಗೆ ಒಂದು ಮಾತು ಹೇಳಲೇಬೇಕು, ಅದರ ಕಾಲ ಈಗ ಬಂದಿದೆ. ನೋಡಿ ಸರ್, ಒಬ್ಬ ಸನ್ಯಾಸಿಯಾಗಿ ನನಗೆ ಸಮಸ್ಯೆಗಳೇ ಇಲ್ಲವೆಂದೇನಿಲ್ಲ. ಆದರೆ ನನಗೆ ಮದುವೆಯಾದವರಿಗಿರುವ ಸಮಸ್ಯೆಗಳಿಲ್ಲವಷ್ಟೇ. ಒಬ್ಬ ಸನ್ಯಾಸಿಗೆ ಯಾವ ರೀತಿಯ ಕಷ್ಟಗಳು ಇರುತ್ತವೆಯೋ ಅದೇ ರೀತಿ, ಅದೇ ಚಕ್ರದಲ್ಲಿ ನಾನೂ ಇದ್ದೇನೆ’ ಎಂದೆ.

ಜನರು ಮೋಸ ಹೋಗುವುದೇ ಇಲ್ಲಿ. ಬಡವನೊಬ್ಬ ಶ್ರೀಮಂತನನ್ನು ನೋಡಿದ ಕೂಡಲೇ, ‘ಆಹಾ ಇವನಿಗೆ ಏನೂ ಕಷ್ಟವಿಲ್ಲ ಅನಿಸುತ್ತೆ. ಕಾರು, ಬಂಗಲೆ. ಬಂಗಲೆ ತುಂಬ ಕೆಲಸ ಮಾಡುವುದಕ್ಕೆ ಆಳುಕಾಳುಗಳಿದ್ದಾರೆ. ಒಳಗಿದ್ದವರು ಹಾಯಾಗಿ, ತಿಂದು ನಿದ್ರೆ ಮಾಡುತ್ತಿರಬಹುದು’ ಎಂದುಕೊಳ್ಳುತ್ತಾನೆ. ಆದರೆ, ಪರಿಸ್ಥಿತಿ ಬೇರೆಯೇ ಇರುತ್ತದೆ. ಒಂದೊಮ್ಮೆ ಇವರು ಶ್ರೀಮಂತರಾದಾಗ ಎಲ್ಲವೂ ಅನುಭವಕ್ಕೆ ಬರುತ್ತದೆ. ನಾವು ಚಿಕ್ಕವರಾಗಿದ್ದಾಗ ಹೇಗಿದ್ವಿ ಅಂತ ಒಮ್ಮೆ ನೆನಪು ಮಾಡಿಕೊಳ್ಳಿ. ಬಾಲ್ವಾಡಿ ಓದಬೇಕಿದ್ದರೆ ನಮಗೆ ಇಂಥದ್ದೊಂದು ಆಲೋಚನೆ ಬರದೇ ಹೋಗುವುದಕ್ಕೆ ಸಾಧ್ಯವೇ ಇಲ್ಲ – ‘ಛೇ, ದೊಡ್ಡವರೆಲ್ಲ ಎಷ್ಟು ಆರಾಮಾಗಿದ್ದಾರಲ್ಲವಾ? ನನಗೋ, ಎಲ್ಲರೂ ಬೈತಾರೆ, ಗಣಿತ ಬರಲಿಲ್ಲ ಅಂದ್ರೆ, ತಲೆ ಮೇಲೇ ಹೊಡೀತಾರೆ. ಇವರಿಗೆಲ್ಲ ನಮ್ ಮೇಡಮ್ಮು ಬೈಯೋದು ಇಲ್ಲ’ ಅಂತ.

ನಾವು ಮೂರನೇ ಕ್ಲಾಸು, ನಾಲ್ಕನೇ ಕ್ಲಾಸು ಓದುವಾಗ ‘ಹೈಸ್ಕೂಲು ಬಹಳ ಚೆನ್ನಾಗಿರುತ್ತೆ. ನೋಡು, ಎಲ್ಲರೂ ಪ್ಯಾಂಟ್ ಹಾಕ್ಕೊಂಡು ತಿರುಗುತ್ತಾರೆ. ನಾವು ಮಾತ್ರ ಇಲ್ಲಿ ಚಡ್ಡಿ ಹಾಕ್ಕೊಂಡ್ ಬರ್ಬೇಕು. ಅವರಿಗೆ ಏನೂ ಕಷ್ಟನೇ ಇರಲ್ಲ ಅನ್ಸುತ್ತೆ, ಎಷ್ಟು ಖುಷಿಯಿಂದಿದ್ದಾರಲ್ಲ’ ಎನಿಸುತ್ತದೆ. ಇನ್ನು ಹೈಸ್ಕೂಲಿಗೆ ಬಂದಾಗ ಕಾಲೇಜಿನವರೇ ಸುಖ ಜೀವಿಗಳು ಎನಿಸುತ್ತಿತ್ತಲ್ಲವೇ? ಕಾಲೇಜಿಗೆ ಬಂದಾಗ ಹಣ ಇರುವುದಿಲ್ಲ, ಕೆಲಸ ಮಾಡುತ್ತಿರುವವರ ಬಾಳೇ ಸುಂದರ ಎಂದು ಕನಸು ಕಂಡಿದ್ದರೂ ಅದು ಅಚ್ಚರಿಯಿಲ್ಲ. ಇದು ಸಹಜ ಕೂಡ. ಜೀವನದ ಕಾಲ ಚಕ್ರ ಇರುವುದೇ ಹಾಗೆ, ಕಾಲೇಜಿನಲ್ಲಿ ಬಹಳ ಸಮಯವಿರುತ್ತದೆ ಆದರೆ ಕಾಸಿರಲ್ಲ. ಕೆಲಸಕ್ಕೆ ಹೋಗುವಾಗ ಕಾಸಿರುತ್ತದೆ ಆದ್ರೆ, ರಜೆ ಕೇಳಿದ್ರೆ ಬಾಸ್ ಗುರ್ ಅಂತಾನೆ. ಕೊನೆಗೆ ಏನೂ ಮಾಡುವುದಕ್ಕಾಗದೇ, ನಾನು ಕಾಲೇಜು ದಿನಗಳಲ್ಲೇ ಚೆನ್ನಾಗಿದ್ದೆ. ಹಣವೊಂದಿರಲಿಲ್ಲ ಎನ್ನುವುದನ್ನು ಹೊರತು ಪಡಿಸಿದರೆ ನನಗೆ ಬೇರೆ ಏನೂ ಸಮಸ್ಯೆ ಇರುತ್ತಿರಲಿಲ್ಲ ಎಂಬ ಅರಿವಾಗುತ್ತದೆ.

ಕೃಪೆ :ವಿಶ್ವವಾಣಿ.                                  ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059