ದಿನಕ್ಕೊಂದು ಕಥೆ. 556
Veeresh Arssikere:
🌻🌻 *ದಿನಕ್ಕೊಂದು ಕಥೆ*🌻🌻 💐 *ಅಪ್ರಾಮಾಣಿಕತೆಯ ಸದ್ದು*💐
ಒಂದು ಊರಿನಲ್ಲಿ ಒಬ್ಬ ಮುಗ್ಧ ಹಾಗೂ ಪ್ರಾಮಾಣಿಕನಾದ ಗೃಹಸ್ಥನಿದ್ದ. ಆತನಿಗೆ ದೇವರ ಮೇಲೆ, ಸಾಧು ಸಂತರ ಮೇಲೆ ತುಂಬ ನಂಬಿಕೆ. ಒಬ್ಬ ಕಟು ಹೃದಯದ ಕಪಟ ತಪಸ್ವಿ ಅವನ ಮನೆಗೆ ಬಂದ. ಅವನ ಮಾತಿನ ಧಾಟಿ, ತೋರಿಕೆಗಳಿಂದ ಈ ಗೃಹಸ್ಥ ತುಂಬ ಪ್ರಭಾವಿತನಾದ. ಹತ್ತಿರದ ಕಾಡಿನಲ್ಲಿ ಅವನಿಗೊಂದು ಪರ್ಣಶಾಲೆಯನ್ನು ಕಟ್ಟಿಕೊಟ್ಟು ಅವನ ಸಂತೋಷಕ್ಕಾಗಿ ಹಗಲು ರಾತ್ರಿ ದುಡಿದು ಸೇವೆ ಮಾಡುತ್ತಿದ್ದ. ಸನ್ಯಾಸಿಯನ್ನು ಬಹುದೊಡ್ಡ ತಪಸ್ವಿ ಎಂದು ಭಾವಿಸಿ ಅವನಿಗೆ ಏನೂ ಕಡಿಮೆಯಾಗದಂತೆ ನೋಡಿಕೊಂಡ.
ಈ ಸಮಯದಲ್ಲಿ ಊರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಯಿತು. ದಿನ ಬಿಟ್ಟು ದಿನ ಮನೆಮನೆಗಳಲ್ಲಿ ಕಳ್ಳತನದ ಸುದ್ದಿಗಳು ಬರತೊಡಗಿದವು. ಗೃಹಸ್ಥ ತನ್ನ ಮನೆಯಲ್ಲಿದ್ದ ಎಲ್ಲ ಒಡವೆಗಳನ್ನು, ಬಂಗಾರದ ನಾಣ್ಯಗಳನ್ನು ಬಟ್ಟೆಯಲ್ಲಿ ಗಂಟುಕಟ್ಟಿಕೊಂಡು ತಪಸ್ವಿಯ ಪರ್ಣಕುಟಿಗೆ ಹೋದ. ಸನ್ಯಾಸಿಗೆ ಸಮಸ್ಕಾರ ಮಾಡಿ ಹೇಳಿದ, ‘ಸ್ವಾಮಿ, ಊರಿನಲ್ಲಿ ಭದ್ರತೆ ಇಲ್ಲ. ಅದಕ್ಕೆ ನಿಮ್ಮ ಪರ್ಣಕುಟಿಯಲ್ಲಿ ಇವುಗಳನ್ನು ಮುಚ್ಚಿಡಲೇ? ಇಲ್ಲಿ ಕಳ್ಳರು ಬರುವುದು ಸಾಧ್ಯವಿಲ್ಲ’. ಸನ್ಯಾಸಿ ಮೃದುವಾಗಿ ನಕ್ಕು ಹೇಳಿದ, ‘ಅಯ್ಯಾ, ನಮ್ಮಂತಹ ಸನ್ಯಾಸಿಗಳಿಗೆ ಬಂಗಾರವೂ ಅಷ್ಟೇ, ಮಣ್ಣೂ ಅಷ್ಟೇ. ನೀನು ಅದನ್ನು ಎಲ್ಲಿ ಬೇಕಾದರೂ ಇಡು’. ಗೃಹಸ್ಥ ಪರ್ಣಕುಟಿಯ ಮೂಲೆಯಲ್ಲಿ ನೆಲವನ್ನು ಅಗೆದು ಅಲ್ಲಿ ತನ್ನ ಸಾಮಾನುಗಳನ್ನೆಲ್ಲ ಇಟ್ಟು ಮುಚ್ಚಿದ.
ಇಂಥ ಮಹಾನ್ ಸನ್ಯಾಸಿಗೆ ಆಸೆ, ಲೋಭ ಬರುವುದು ಸಾಧ್ಯವೇ ಇಲ್ಲ ಎಂಬ ನಂಬಿಕೆಯಿಂದ ಮನೆಗೆ ಬಂದ. ನಾಲ್ಕಾರು ದಿನಗಳ ನಂತರ ಕಳ್ಳ ಸನ್ಯಾಸಿ ನೆಲವನ್ನು ಅಗೆದು ಎಲ್ಲ ಬಂಗಾರವನ್ನು ತೆಗೆದುಕೊಂಡು ಮತ್ತೊಂದು ಪರಿಚಿತವಾದ ಜಾಗೆಯಲ್ಲಿ ಇಟ್ಟು ಗೃಹಸ್ಥನ ಮನೆಗೆ ಬಂದ. ‘ಅಯ್ಯಾ, ನಾವು ಎಲ್ಲವನ್ನೂ ತ್ಯಾಗ ಮಾಡಿದವರು. ಒಂದೇ ಜಾಗೆಯಲ್ಲಿ ಬಹಳಷ್ಟು ದಿನ ಇರುವುದು ಸರಿಯಲ್ಲ. ಇಂದು ಮಧ್ಯಾಹ್ನವೇ ಇಲ್ಲಿಂದ ಹೊರಟು ಬಿಡುತ್ತೇವೆ. ನೀನು ಮಾಡಿದ ಸೇವೆ ನಮಗೆ ತೃಪ್ತಿ ತಂದಿದೆ. ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ ಎಂದ. ಗೃಹಸ್ಥ ಎಷ್ಟು ಹೇಳಿದರೂ ಒಪ್ಪಲಿಲ್ಲ. ಅನಿವಾರ್ಯವಾಗಿ ಗೃಹಸ್ಥ ಒಪ್ಪಿ ಮಧ್ಯಾಹ್ನ ಅವನನ್ನು ಊರ ಹೊರಗಿನವರೆಗೂ ಹೋಗಿ ಕಳುಹಿಸಿ ಬಂದ.
ಒಂದು ಗಂಟೆಯೊಳಗೆ ಸನ್ಯಾಸಿ ಮರಳಿ ಗೃಹಸ್ಥನ ಮನೆಗೆ ಬಂದ. ಅವನ ಜೊತೆಯಲ್ಲಿ ಒಂದು ಹುಲ್ಲುಕಡ್ಡಿ. ಸನ್ಯಾಸಿ ಹೇಳಿದ, ‘ನಿನ್ನ ಗುಡಿಸಲಿನಿಂದ ಹೊರಡುವಾಗ ನಮ್ಮ ಜಟೆಯಲ್ಲಿ ನಿನ್ನ ಪರ್ಣಕುಟಿಯ ಒಂದು ಹುಲ್ಲುಕಡ್ಡಿ ಸೇರಿ ಹೋಗಿದೆ. ನನ್ನದಲ್ಲದ್ದನ್ನು ನಾವು ಎಂದಿಗೂ ತೆಗೆದುಕೊಳ್ಳಲಾರೆವು. ದಯವಿಟ್ಟು ಅದನ್ನು ತೆಗೆದುಕೋ’ ಎಂದು ಕಡ್ಡಿ ತೆಗೆದು ಕೊಟ್ಟ. ಸನ್ಯಾಸಿಯ ಈ ಪ್ರಾಮಾಣಿಕ ನಿಲುವನ್ನು ಕಂಡು ಗೃಹಸ್ಥ ರೋಮಾಂಚಿತನಾದ. ಇದನ್ನು ನೋಡುತ್ತಿದ್ದ ಗೃಹಸ್ಥನ ತಾಯಿ, ‘ಮಗೂ ಈ ಸನ್ಯಾಸಿಗೆ ಏನಾದರೂ ಕೊಟ್ಟಿದ್ದೀಯಾ? ಅಥವಾ ಅವನ ಬಳಿ ಯಾವುದಾದರೂ ವಸ್ತುವನ್ನು ಬಿಟ್ಟಿದ್ದೀಯಾ?’ ಎಂದು ಕೇಳಿದಳು.
‘ಹೌದಮ್ಮ, ಕಳ್ಳತನದ ಹೆದರಿಕೆಯಿಂದ ಮನೆಯ ಒಡವೆಗಳನ್ನೆಲ್ಲ ಸನ್ಯಾಸಿಯವರ ಪರ್ಣಕುಟಿಯಲ್ಲೇ ಮುಚ್ಚಿ ಇಟ್ಟಿದ್ದೇನೆ’ ಎಂದ ಮಗ. ತಾಯಿ ಹೇಳಿದಳು, ‘ತಕ್ಷಣವೇ ಅಲ್ಲಿಗೆ ಹೋಗು, ಇದೆಯಾ ನೋಡು. ಇಲ್ಲದಿದ್ದರೆ ಹೋಗಿ ಸನ್ಯಾಸಿಯನ್ನು ಹಿಡಿ. ಅವನೇ ಕಳವು ಮಾಡಿರಬೇಕು’. ಆತನಿಗೆ ನಂಬಿಕೆಯಾಗದಿದ್ದರೂ ಓಡಿಹೋಗಿ ನೋಡಿದ.
ಆಭರಣಗಳು ಇಲ್ಲದಿದ್ದನ್ನು ನೋಡಿ ಹೇಳಿದಂತೆ ನಾಲ್ಕು ಜನರನ್ನು ಕರೆದುಕೊಂಡು ಹೋಗಿ ಸನ್ಯಾಸಿಯನ್ನು ತದುಕಿದರೆ ಎಲ್ಲವೂ ಸಿಕ್ಕವು. ತಾಯಿಗೆ ಕೇಳಿದ, ‘ಅಮ್ಮಾ, ನಿನಗೆ ಸನ್ಯಾಸಿಯ ಮೇಲೆ ಹೇಗೆ ಸಂಶಯ ಬಂತು?’ ‘ಅವನು ಹುಲ್ಲುಕಡ್ಡಿಯನ್ನು ಮರಳಿ ತಂದಾಗಲೇ ಅವನು ಕಪಟಿ ಎನ್ನಿಸಿತು.
ಯಾರು ಅತಿಯಾದ ಪ್ರಾಮಾಣಿಕತೆ ತೋರಲು ಬಯಸುತ್ತಾರೋ ಅವರು ಆಂತರ್ಯದಲ್ಲಿ ಕಪಟಿಗಳಾಗಿರುತ್ತಾರೆ’. ಪ್ರಾಮಾಣಿಕತೆ ಒಳ್ಳೆಯದು. ನಾನು ತುಂಬ ಪ್ರಾಮಾಣಿಕ, ತನ್ನಷ್ಟು ಪ್ರಾಮಾಣಿಕರು ಯಾರೂ ಇಲ್ಲ ಎಂದು ಮೇಲಿಂದ ಮೇಲೆ ಪ್ರದರ್ಶನ ಮಾಡುವವರಲ್ಲಿ ಅಪ್ರಾಮಾಣಿಕತೆ ಇರುತ್ತದಂತೆ. ನಿಜವಾಗಿಯೂ ಪ್ರಾಮಾಣಿಕವಾಗಿರುವವರು ನಗಾರಿ ಹೊಡೆಯುವುದಿಲ್ಲ, ಕಹಳೆ ಊದುವುದಿಲ್ಲ, ತಮ್ಮ ಪಾಡಿಗೆ ತಾವು ಪ್ರಾಮಾಣಿಕರಾಗಿ ಬದುಕುತ್ತಾರೆ. ಹಾಗಿಲ್ಲದಿದ್ದವರು ಬಹಳ ಸದ್ದು ಮಾಡುತ್ತಾರೆ. ಕೃಪೆ : ಮುಖ ಪುಸ್ತಕ. ಸಂಗ್ರಹ ವೀರೇಶ್ ಅರಸಿಕೆರೆ.ದಾವಣಗೆರೆ.
Comments
Post a Comment