ದಿನಕ್ಕೊಂದು ಕಥೆ. 561
*🌻ದಿನಕ್ಕೊಂದು ಕಥೆ🌻 ಭಾವನೆಗಳ ತುಡಿತ ಮಿಡಿತಗಳಿಗೆ ಕಿವಿಗೊಡದಿದ್ದರೆ ?*
ಭಾವವೆಂಬ ಹಕ್ಕಿ ಗರಿಗೆದರಿದರೆ ಗುಡಿಸಲು ಮಹಲಾಗುವುದು. ಭಾವ ಹೀನರಾದರೆ ಮಹಲೂ ಗುಡಿಸಲಾಗುವುದು.
ಹುಟ್ಟೋದು ಒಂದು ದಿನ ಸಾಯೋದು ಒಂದು ದಿನ. ನಡುವಿರುವುದೇ ಮೂರು ದಿನದ ಜೀವನ ಅನ್ನೋದು ಜೀವನದ ಸಾಮಾನ್ಯ ನುಡಿ. ಈ ಮೂರು ದಿನದ ಜೀವನ ಹೇಗೆ ಕಳೆಯುತ್ತೇವೆ? ಏನೆಲ್ಲ ಕಳೆದುಕೊಂಡು ಏನು ಪಡೆದುಕೊಳ್ಳುತ್ತೇವೆ. ಪಡೆದು ಕೊಂಡ ದ್ದನ್ನು ಅದೆಷ್ಟು ಪ್ರಮಾಣದಲ್ಲಿ ಅನುಭವಿಸುತ್ತೇವೆ? ಜೀವನದ ಪಯಣದಲ್ಲಿ ಸಹ ಪಯಣಿಗರಿಗೆ ಎಷ್ಟು ಪ್ರೀತಿ ಅನುಕಂಪ ಖುಷಿ ನೀಡುತ್ತೇವೆ? ಪರರ ಕಷ್ಟಕ್ಕೆ ಮಂಜಿನಂತೆ ಕರಗಿ ನೆರವಿಗೆ ಧಾವಿಸುತ್ತೇವೆ ಇವೆಲ್ಲ ನಮ್ಮ ಬದುಕಿನ ಸಾರ್ಥಕತೆಯನ್ನು ಸಾರಿ ಹೇಳುತ್ತವೆ.
ಹುಟ್ಟು ಸಾವು ಎರಡು ಸೇತುವೆಗಳ ನಡುವೆ ಇರುವ ಕಾಲವೇ ಬದುಕು. ದೈವ ಸೃಷ್ಟಿಯ ಎಲ್ಲ ಜೀವ ಸಂಕುಲಗಳು ಬದುಕುತ್ತವೆ ಆದರೆ ಸರ್ವಶ್ರೇಷ್ಠ ಪ್ರಾಣಿಗಳಾದ ನಾವು ಬರೀ ಬದುಕಬಾರದು ಜೀವಿಸಬೇಕು. ಹಾಗಾದಾಗಲೇ ಬದುಕಿಗೊಂದು ನಿಜವಾದ ಅರ್ಥ. ಜೀವಿಸಬೇಕೆಂದರೆ ಭಾವಗಳ ನದಿಯಲ್ಲಿ ಈಸಬೇಕು. ಬಾಳಿಗೂ ಭಾವಕೂ ಅವಿನಾಭಾವ ಸಂಬಂಧವಿದೆ ಅದಕ್ಕೆಂತಲೇ ಕವಿಯೊಬ್ಬ ಬಾಳೊಂದು ಭಾವಗೀತೆ ಆನಂದ ತುಂಬಿದ ಕವಿತೆ ಎಂದು ಹಾಡಿ ಹೊಗಳಿ ಬಾಳಿನಲ್ಲಿ ಭಾನೆಗಳ ಮಹತ್ವ ಸಾರಿ ಹೇಳಿದ್ದಾನೆ.
ಮೈಕೆಲ್ ಡಾಗ್ಲಸ್‌ನ ಹೆಸರು ಕೇಳದೇ ಇರುವವರು ತುಂಬಾ ಕಮ್ಮಿ. ಆತ ಪ್ರಸಿದ್ಧ ನಟ ಮತ್ತು ನಿರ್ದೇಶಕ. ಆತನ ಐದು ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆಯ ಹಣ ಸಂಗ್ರಹಿಸಿ ಆತನಿಗೆ ಎಲ್ಲಿಲ್ಲದ ಜನ ಮನ್ನಣೆ ಮತ್ತು ಕೀರ್ತಿಯನ್ನು ತಂದು ಕೊಟ್ಟಿದ್ದನ್ನೆಲ್ಲ ಕಂಡ ಆತನ ತಂದೆ ಮತ್ತು ಖ್ಯಾತ ನಟ ಕಿರ್ಕ್ ಡಾಗ್ಲಸ್ ಒಂದೇ ಒಂದು ಸಾಲಿನ ಪತ್ರವನ್ನು ಮಗನಿಗೆ ಬರೆಯು ತ್ತಾನೆ. ಅದು ನಿಜಕ್ಕೂ ಚೆಂದದ್ದು ಮತ್ತು ಅರ್ಥವುಳ್ಳದ್ದು. ಮೈಕೆಲ್, ನಾನು ನಿನ್ನ ಯಶಸ್ಸನ್ನು ನಿಭಾಯಿಸಿದ್ದಕ್ಕಿಂತ ಚೆನ್ನಾಗಿ ನೀನು ನನ್ನ ಯಶಸ್ಸನ್ನು ನಿಭಾಯಿಸಿದ್ದನ್ನು ಕಂಡು ಹೆಮ್ಮೆಯೆನಿಸಿದೆ.
ಹೀಗೆ ಜೀವನದಲ್ಲಿ ಯಶ ಗಳಿಸುವುದು ಎಷ್ಟು ಮುಖ್ಯವೊ ಅದನ್ನು ಸಾಧಿಸಿದಾಗ ಜಂಭದಿಂದ ಬೀಗದೇ ನಮ್ಮ ಬಗೆಗೆ ಇತರರು ಹೆಮ್ಮೆ ಪಡುವಂತೆ ನಿಭಾಯಿಸುವುದು ಮುಖ್ಯ. ನಮಗಾಗಿ ನಾವು ಬದುಕುವುದು ಬದುಕಲ್ಲ. ಇತರರಿಗೆ ಹಿತ ನೀಡುವುದು ಒಳ್ಳೆಯದನ್ನು ಬಯಸುತ್ತ ಪ್ರೀತಿ ಕಾಳಜಿ ತೋರುವುದು ನಿಜ ಬದುಕು. ಪರರಿಗೆ ದುರ್ಭರ ಕ್ಷಣದಲ್ಲಿ ನೆರವಿನ ಹಸ್ತ ಚಾಚಿದರೆ ನಮಗೇನು ಲಾಭ ನಮಗೆ ದುಃಖದ ಪರಿಸ್ಥಿತಿಯಲ್ಲಿ ಯಾರೂ ಬಳಿ ಬಂದು ಅನುಕಂಪ ತೋರುವವರಿಲ್ಲ ಎನ್ನುತ್ತಿರೇನು? ಒಳ್ಳೆ ತನಕ್ಕೆ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆ ಇದ್ದೇ ಇದೆ ಒಂದು ವೇಳೆ ಆ ನಂಬಿಕೆ ನೀವು ಕಳೆದುಕೊಂಡಿ ದ್ದರೂ ಅಂಥ ಕಷ್ಟದ ಸ್ಥಿತಿಯಲ್ಲಿರುವಾಗ ನೀವು ಅವರಿಗೆ ತೋರಿದ ಪ್ರೀತಿ ಕಾಳಜಿ ನಿಮ್ಮ ಜೀವನದ ಆ ಗಳಿಗೆಯನ್ನು ಸುಂದರ ಗೊಳಿಸಿ ತಲ್ಲವೇ? ಸಮಾಧಾನ ನೀಡಿತಲ್ಲವೇ? ಸಂತೃಪ್ತಿ ಭಾವ ಮೂಡಿಸಿತಲ್ಲವೇ? ಇಂಥ ದಿವ್ಯ ಆನಂದಕ್ಕೆ ಸಮವುಂಟೇ? ಇಂಗ್ಲಿಷ್‌ನ ಸುಪ್ರಸಿದ್ಧ ಲೇಖಕ ಸಾಮರ್ ಸೆಟ್ ಬರೆದ ಜನಪ್ರಿಯ ಕಥೆ ನೀವು ಕೇಳಿರಬಹುದು.
ಲಂಡನ್ನಿನ ಸೇಂಟ್ ಪೀಟರ್ಸ್ ಚರ್ಚ್‌ನಲ್ಲಿ ಒಬ್ಬ ಕೆಲಸಗಾರನಿದ್ದ ಚರ್ಚ್‌ನ ಕಸಗೂಡಿಸಿ ಅದರ ಪ್ರಾಂಗಣವನ್ನು ಅಂದ ಚೆಂದವಾಗಿಡುವುದು ಅವನ ಕೆಲಸವಾಗಿತ್ತು ಅದನ್ನು ಅತೀ ಶೃದ್ಧೆಯಿಂದಲೇ ಅವನು ಮಾಡುತ್ತಿದ್ದ. ಅದೇ ಚರ್ಚಿನಲ್ಲಿದ್ದ ತರಲೆ ಪಾದ್ರಿಯೊಬ್ಬ ದಿನವೂ ಆತನ ಕೆಲಸದಲ್ಲಿ ತಪ್ಪುಗಳನ್ನು ಹುಡು ಕುತ್ತ ಕಿರುಕುಳ ನೀಡುತ್ತ ಕೊನೆಗೊಂದು ದಿನ ಆತನಿಗೆ ಅಕ್ಷರ ಓದಲು ಬರೆಯಲು ಬಾರದು ಎಂಬ ಸಲ್ಲದ ಕಾರಣ ನೀಡಿ ಕೆಲಸದಿಂದಲೇ ತೆಗೆದು ಹಾಕಿದ. ಅಕ್ಷರಶಃ ನಿರುದ್ಯೋಗಿಯಾದ ಆತ ಕಷ್ಟದ ಕಾಲಕ್ಕಿರಲಿ ಎಂದು ಕೂಡಿಟ್ಟ ಹಣದಿಂದ ಒಂದು ಚಹದ ಅಂಗಡಿಯನ್ನು ತೆರೆದ ಆತನ ಶ್ರದ್ಧೆ ಮತ್ತು ನಿರಂತರ ಶ್ರಮ ದಿಂದ ಆತನಿಗೆ ಲಾಭವು ದೊರೆಯುವದರೊಂದಿಗೆ ಚಹದ ಅಂಗಡಿಯೂ ಜನಪ್ರಿಯವಾಯಿತು.
ಜನಪ್ರಿಯತೆಯನ್ನು ಮನ್ನಿಸಿ ಆತ ಲಂಡನ್ನಿನ ಹಲವೆಡೆ ಚಹದಂಗಡಿಗಳನ್ನು ತೆರೆಯಲು ಬ್ಯಾಂಕಿನಲ್ಲಿ ಸಾಲ ಪಡೆದ ಆತ ತೆರೆದ ಚಹದಂಗಡಿಗಳು ಲಾಭವನ್ನೇ ತರಹತ್ತಿದವು. ಆತ ಶ್ರೀಮಂತನಾದುದಲ್ಲದೇ ಹೆಸರನ್ನೂ ಗಳಿಸಿದ. ಆತನಿಗೆ ಹಣ ನೀಡಿದ ಬ್ಯಾಂಕರ್ ಒಂದು ದಿನ, ಕೇವಲ ಚಹದಂಗಡಿಗಳನ್ನು ತೆರೆದು ಇಷ್ಟು ಹಣ ಹೆಸರು ಗಳಿಸಿದಿರಿ ನಿಮ್ಮ ಸಾಧನೇಯೇನೋ ಅತ್ಯದ್ಭುತ. ಆದರೆ ನಿಮಗೆ ಓದಲು ಬರೆಯಲು ಬಾರದು ಒಂದು ವೇಳೆ ಅಕ್ಷರ ಬಂದಿದ್ದರೆ ನೀವು ಎಲ್ಲಿರುತ್ತಿದ್ದಿರೋ ಏನೇನು ಸಾಧಿಸುತ್ತಿದ್ದಿರೋ? ಎಂದು ಆಶ್ಚರ್ಯ ವ್ಯಕ್ತಪಡಿಸಿದ. ಆಗ ಚಹದಂಗಡಿ ಮಾಲಿಕ ಕೊಟ್ಟ ದಿಟ್ಟ ಉತ್ತರ ಅಕ್ಷರ ಬಂದಿದ್ದರೆ ಸೇಂಟ್ ಪೀಟರ್ಸ್ ಚರ್ಚಿನಲ್ಲಿ ಕಸ ಗುಡಿಸುತ್ತಾ ಇರುತ್ತಿದ್ದೆ.
ಈ ದೃಷ್ಟಾಂತ ಅವಮಾನಗಳಿಗೆ ನಾವು ಹೇಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಕೆಂಬುದನ್ನು ನಮಗೆಂಥ ಸ್ಥಿತಿ ಬಂದರೂ ಅಶಕ್ತ ಭಾವನೆಗಳಿಗೆ ಬಲಿಪಶುವಾಗದೇ ಜೀವನೋತ್ಸಾಹ ಹೆಚ್ಚಿಸಿಕೊಂಡು ಇತರರಿಗೆ ಮಾದರಿಯಾಗಿ ಬಾಳುವುದನ್ನು ಹೇಳುವುದು. ಭಾವವೆಂಬ ಹಕ್ಕಿ ಗರಿಗೆದರಿದರೆ ಗುಡಿಸಲು ಮಹಲಾಗುವುದು. ಭಾವ ಹೀನರಾದರೆ ಮಹಲೂ ಗುಡಿಸಲಾಗುವುದು. ಬಹಳಷ್ಟು ಬಾರಿ ಟೀಕೆ ಕುಹಕದ ನುಡಿಗಳಿಗೆ ಬಳಲಿ ಬೆಂಡಾಗಿ ಹತಾಶರಾಗಿ ನಿರ್ಭಾವುಕರಾಗಿ ಬಿಡುತ್ತೇವೆ ಇಲ್ಲವೇ ಜೀವನದ ಮೇಲಿನ ಆಸೆ ಯನ್ನೇ ಕಳೆದುಕೊಂಡು ಬಿಡುತ್ತೇವೆ. ಜೀವನವೇ ಭಾವನೆಗಳ ಸಾಗರ. ಇಲ್ಲಿ ಅತಿಯಾದ ಭಾವುಕತೆಯಾಗಲಿ ಇಲ್ಲವೇ ನಿರ್ಭಾವುಕತೆಯೂ ಕೆಲಸಕ್ಕೆ ಬಾರದು. ಒಮ್ಮೊಮ್ಮೆ ಭಾವನೆಗಳಿಗೆ ಮನಸ್ಸು ಒದ್ದೆಯಾಗಬೇಕು. ಅಂತರಂಗದ ಅಂತಃಕರಣ ತಟ್ಟಿ ಒಂದಷ್ಟು ನೆಮ್ಮದಿ ಸಂತಸ ಅರಳಿಸಬೇಕು. ಹಾಗಾಗಬೇಕೆಂದರೆ ನಾವು ಮಾಡುವ ಕೆಲಸದಲ್ಲಿ ಭಾವನೆಗಳನ್ನು ಬೆರೆಸಬೇಕು.
ಕೃಪೆ:ಜಯಶ್ರೀ ಜೆ.ಅಬ್ಬಿಗೇರಿ, ಬೆಳಗಾವಿ
ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment