ದಿನಕ್ಕೊಂದು ಕಥೆ. 592

*🌻ದಿನಕ್ಕೊಂದು ಕಥೆ🌻                                   ಇದೊಂದು ಹಿಜಡಾ ಜೀವನ ಚರಿತ್ರೆ.! ಆತನದ್ದೇ ನಿಜವಾದ ಗಂಡಸುತನ.*

ಗಂಡು ಮಗು ಹುಟ್ಟಿದಾಕ್ಷಣ… ದೊಡ್ಡವನಾದಮೇಲೆ ನನ್ನ ಮಗನಿಗೆ ನಿನ್ನ ಮಗಳನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಆ ಹುಡುಗನ ತಂದೆ ತನ್ನ ತಂಗಿಗೆ ಮಾತುಕೊಟ್ಟ. ಮಗ ಬೆಳೆದು ದೊಡ್ಡವನಾಗುತಿದ್ದಾನೆ. ಅಷ್ಟರಲ್ಲೇ ಹುಡುಗನ ಅತ್ತೆಗೆ ಮಗಳು ಹುಟ್ಟುತ್ತಾಳೆ. ಬೆಳೆದು ದೊಡ್ಡವಳಾಗುತ್ತಾಳೆ. ಇನ್ನೇನಿದೆ ಮೊದಲೇ ಮಾತು ಕೊಟ್ಟಾಗಿದೆ. ಈಗ ನೇರವಾಗಿ ಹೇಳುತ್ತಿದ್ದಾರೆ ನೀನು ಮದುವೆಯಾಗುವುದು ನಿನ್ನ ಮಾವನನ್ನೇ ಎಂದು ಹುಡಿಗಿಯೊಡನೆ,ನಿನ್ನ ಸೋದರತ್ತೆಯ ಮಗಳನ್ನೇ ಎಂದು ಹುಡುಗನಿಗೆ ಹೇಳಿ ಎಲ್ಲರೂ ತಮಾಷೆ ಮಾಡುತ್ತಿದ್ದಾರೆ. ಹುಡುಗಿಗೆ ಹುಡುಗ ಕೂಡಾ ಇಷ್ಟವಾಗಿದ್ದಾನೆ.ಇನ್ನುಳಿದಿರುವುದು ಕೇವಲ ಮದುವೆ ಮಾತ್ರ.

ಆದರೆ…ಹುಡುಗ ಮಾತ್ರ ನನಗೆ ವಯಸ್ಸಾಗುತ್ತಿದ್ದರೂ ಶರೀರದಲ್ಲಿ ಬದಲಾವಣೆಗಳು ಆಗದಿರುವುದನ್ನು ಗಮನಿಸಿದ. ತನ್ನ ಸಹಪಾಟಿಗಳ ಪ್ರವರ್ತನೆಗೂ ತನ್ನ ಪ್ರವರ್ತನೆಗೂ ವ್ಯತ್ಯಾಸವಿರುವುದನ್ನು ಗಮನಿಸುತ್ತಾನೆ. ಕೊನೆಗೆ ತಾನೊಬ್ಬ ಹಿಜಡಾ ಎಂದು ಆತನಿಗೆ ತಿಳಿಯುತ್ತದೆ. ಈ ವಿಷಯವನ್ನು ಇತರರಿಗೆ ಹೇಳದೆ ತನ್ನಲ್ಲೇ ಅದುಮಿಟ್ಟುಕೊಂಡು ನರಕಯಾತನೆಯನ್ನು ಅನುಭವಿಸುತ್ತಿದ್ದಾನೆ. ಹೇಗಾದರೂ ಸರಿ,ತನ್ನ ತಂದೆ ತಾಯಿಗಳಿಗೆ ಈ ವಿಷಯವನ್ನು ತಿಳಿಸಬೇಕೆಂದುಕೊಳ್ಳುತ್ತನೆ. ಆದರೆ,ಅವರದು ಸಂಪ್ರದಾಯ ಕುಟುಂಬ… ಇದು ಸಾಲದೆಂಬಂತೆ,ಹುಡುಗನ ಮದುವೆ ತಯಾರಿಯಲ್ಲಿ ನಿರತರಾಗಿದ್ದಾರೆ. ಹೇಳಬೇಕು…ಹೇಳಲೇಬೇಕು ಎಂದುಕೊಳ್ಳುತ್ತಿರುವಷ್ಟರಲ್ಲಿಯೇ… ಈ ಹಿಂದೆ ತೀರ್ಮಾನಿಸಿದಂತೆ ಆ ಹುಡುಗಿಯೊಡನೆ ಈತನ ಮದುವೆ ನಡೆದೇ ಹೋಯಿತು.

ಮೊದಲರಾತ್ರಿ… ವಿಷಯವನ್ನು ಹೆಂಡತಿಗೆ ಹೇಳಲಾಗದೆ ಆ ರಾತ್ರಿಯನ್ನು ಹೇಗೋ ನಿಭಾಯಿಸಿದ. ಕೊನೆಗೆ ಒಂದು ದಿನ ತನ್ನ ಹೆಂಡತಿಯನ್ನು,ತಂದೆ ತಾಯಿಯರನ್ನು ಒಟ್ಟಿಗೆ ಕೂರಿಸಿ ಪರಿಸ್ಥಿತಿಯನ್ನು ವಿವರಿಸಿದ. ತಾನು ಸಂಸಾರ ಮಾಡಲು ಆಗದಿರುವ ಕಾರಣವನ್ನು ವಿವರವಾಗಿ ತಿಳಿಸಿದ. ತನ್ನ ಹೆಂಡತಿಗೆ ಬೇರೊಂದು ಮದುವೆ ಮಾಡಿರೆಂದು ತಂದೆ ತಾಯಿಗೆ ಹೇಳಿ ಮನೆಯಿಂದ ಹೊರಟು ಹೋದ.

ಕೈಯಲ್ಲಿ ಕಾಸಿಲ್ಲ.ಎಲ್ಲಿಗೆ ಹೋಗಬೇಕೊ ತಿಳಿಯದು. ಕೊನೆಗೆ ತನ್ನ ಹಾಗೆ ಇರುವವರ ಬಳಿ ಸೇರಿಕೊಂಡ. ಈಗ ಅಲ್ಲಿ ನಿಜವಾದ ಆನಂದವನ್ನು ಪಡೆಯುತ್ತಿದ್ದಾನೆ. ಯಾರೇನು ಅಂದುಕೊಳ್ಳುತ್ತಾರೆಂಬ ಹೆದರಿಕೆಯಿಲ್ಲ. ತನಗೆ ತೋಚಿದ ರೀತಿಯಲ್ಲಿ ಇರುತ್ತಾನೆ. ಬಹಳಷ್ಟು ಜನ ಗೃಹಪ್ರವೇಶಗಳಿಗೆ, ಹುಟ್ಟಿದ ಹಬ್ಬಗಳ ಆಚರಣೆಗೆ, ಮದುವೆ ಸಮಾರಂಭಗಳಿಗೆ ಹಿಜಡಾಗಳು ಬಂದು ನೃತ್ಯಮಾಡಿದರೆ ಶುಭವಾಗುತ್ತದೆಂದು ಭಾವಿಸುತ್ತಾರೆ. ಈ ನಿಟ್ಟಿನಲ್ಲಿ ಇವರಿಗೆ ಭಾರೀ ಬೇಡಿಕೆಯಿತ್ತು. ಅವನೂ ಸಹ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚೆನ್ನಾಗಿ ಹಣ ಸಂಪಾದಿಸುತ್ತಿದ್ದಾನೆ.

ಒಂದು ದಿನ ಆತ ವಾಸವಾಗಿದ್ದ ಕೋಣೆಯ ಬಾಗಿಲನ್ನು ಯಾರೋ ಬಡಿದ ಶಬ್ದವಾಯಿತು. ಬಾಗಿಲು ತೆರೆದು ನೋಡಿದಾಗ… ಕಂಕುಳಲ್ಲಿ ಒಂದು ಮಗುವನ್ನು ಎತ್ತಿಕೊಂಡಿರುವ ತನ್ನ ಹೆಂಡತಿ ಕಾಣುತ್ತಾಳೆ.! ವಿಚಾರಿಸಿದಾಗ ‘ನೀನು ಹೊರಟು ಹೋದಮೇಲೆ,ಅತ್ತೆ ಮಾವ ನನ್ನನ್ನು ಒಬ್ಬನಿಗೆ ಕೊಟ್ಟು ಮದುವೆ ಮಾಡಿದರು.ಅವನು ಶುದ್ಧ ಕುಡುಕ. ವೇಶ್ಯೆಯರ ಸಹವಾಸವನ್ನು ಮಾಡುತ್ತಾನೆ.ದಿನಾಲೂ ಕುಡಿದು ಬಂದು ಹೊಡೆಯುತ್ತಿದ್ದ. ಮಗುವನ್ನು ಸಹ ಸರಿಯಾಗಿ ನೋಡಿಕೊಳ್ಳಿತ್ತಿಲ್ಲ’ ಎಂದು ತನ್ನ ಕಷ್ಟವನ್ನು ಹೇಳಿಕೊಂಡಳು.

ಆ ರಾತ್ರಿ ಅವಳನ್ನು ತನ್ನೊಡನೆ ಇರಿಸಿಕೊಂಡು, ಮಾರನೆಯ ದಿನ ಒಂದು ಫ್ಲ್ಯಾಟ್ ಬಾಡಿಗೆಗೆ ಪಡೆದುಕೊಂಡು ಅದರಲ್ಲಿ ಇರಿಸಿದ. ಗಂಡನಿಗೆ ವಿಚ್ಛೇದನ ನೀಡಲು ಬೇಕಾದ ಕೆಲಸಗಳನ್ನು ತಾನೇ ವಹಿಸಿಕೊಂಡ ಮತ್ತು ಆ ಮಗುವನ್ನು ತನ್ನ ಸ್ವಂತ ಮಗುವನ್ನಾಗಿ ನೋಡಿಕೊಳ್ಳತೊಡಗಿದ. ಮನೆ ವೆಚ್ಚ,ಮಗನ ವಿದ್ಯಾಭ್ಯಾಸಕ್ಕೆಂದು ಪ್ರತೀ ತಿಂಗಳು 20 ಸಾವಿರ ರೂಪಾಯಿಗಳನ್ನು ಅವಳಿಗೆ ಕೊಡುತ್ತಿದ್ದಾನೆ… ಈ ರೀತಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದ ಆ ಹುಡುಗ MBA ಪೂರ್ಣಗೊಳಿಸಿ ಉದ್ಯೋಗ ಗಳಿಸಿ ಜೀವನದಲ್ಲಿ ಸ್ಥಿರವಾದ. ಇತ್ತಿಚೆಗೆ ಆ ಹುಡುಗನಿಗೆ ಮದುವೆಯಾಯಿತು, ಪ್ರೇಮ ವಿವಾಹ… ಹಿಜಡಾ ಆಗಿ ಪರಿವರ್ತನೆಯಾದ ಆ ವ್ಯಕ್ತಿಯೇ ಮುಂದೆ ನಿಂತು ಮದುವೆ ಮಾಡಿಸಿದ.

ಈಗ ಹೇಳಿ… ನಿಜವಾದ ಹಿಜಡಾ ಯಾರು? ಮದುವೆ ಮಾಡಿಕೊಂಡು, ಹೆಂಡತಿಯನ್ನು ಪೋಷಿಸಲಾಗದವನಾ? ಹೆಂಡತಿಯಿದ್ದೂ.. ವೇಶ್ಯೆಯರ ಸಂಬಂಧವಿರಿಸಿಕೊಂಡವನಾ ? ಅಥವ ಈ ಕತೆಯಲ್ಲಿರುವವನಾ?

ಕೃಪೆ: kannada+.                                 ಸಂಗ್ರಹ :ವೀರೇಶ್ ಅರಸಿಕೆರೆ.***********************************************  *🌻🌻ದಿನಕ್ಕೊಂದು ಕಥೆ*🌻🌻
*ಶುಚಿ_ರುಚಿ*
  ಒಂದು ಚಿಕ್ಕಗ್ರಾಮ ಇತ್ತು. ಆ ಗ್ರಾಮದ ಮಧ್ಯದಲ್ಲಿ ಒಂದು ಪ್ರಮುಖ ದಾರಿ ಇತ್ತು. ಆ ದಾರಿಯ ಮಧ್ಯದಲ್ಲಿ ಬಹಳ ದಿನಗಳಿಂದ ಒಂದು ದೊಡ್ಡ ಬಂಡೆಗಲ್ಲು ಬಿದ್ದಿತ್ತು. ಹೋಗ ಬರುವುದಕ್ಕೆ ಅದು ತುಂಬಾ ಅಡಚಣೆಯಾಗಿತ್ತು. ಜನರೆಲ್ಲ ಅದರ ಬದಿಯಿಂದ ಹೋಗುತ್ತಿದ್ದರೇ ವಿನಾ ಅದನ್ನು ತೆಗೆಯುವ ಮನಸ್ಸು ಮಾಡಿರಲಿಲ್ಲ.
  ಒಂದು ದಿನ ಒಬ್ಬ ಪ್ರಾಮಾಣಿಕ ಬಡಮನುಷ್ಯನು ತುಂಬಾ ಪ್ರಯಾಸದಿಂದ ಆ ಬಂಡೆಗಲ್ಲನ್ನು ತೆಗೆದು ಬದಿಗಿಟ್ಟು ದಾರಿಯನ್ನು ಸ್ವಚ್ಛಗೊಳಿಸಿದ. ಅಷ್ಟರಲ್ಲಿ ಅವನಿಗೆ ಆ ಬಂಡೆಗಲ್ಲಿನ ಕೆಳಗಿದ್ದ ಒಂದು ಪೆಟ್ಟಿಗೆ ಕಂಡಿತು. ಅದನ್ನು ಆ ಗ್ರಾಮದ ರಾಜನಿಗೆ ಒಪ್ಪಿಸಿದ. ರಾಜನು ಅದನ್ನು ಒಡೆದು ನೋಡಿದ, ಅದರಲ್ಲಿ ನೂರು ಚಿನ್ನದ ನಾಣ್ಯಗಳ ನಿಧಿ ಜೊತೆಗೊಂದು ಪತ್ರ ಇತ್ತು! ಕುತೂಹಲದಿಂದ ರಾಜನು ಪತ್ರವನ್ನು ಓದಿದ. ಅದರಲ್ಲಿ ಹೀಗೆ ಬರೆದಿತ್ತು. “ಯಾರು ಈ ಬಂಡೆಗಲ್ಲನ್ನು ತೆಗೆದು ದಾರಿಯನ್ನು ಶುಚಿಗೊಳಿಸುವರೋ ಅವರೇ ಈ ನಿಧಿಯ ಒಡೆಯರು!” ನಂತರ ರಾಜನು ಆ ನಿಧಿಯನ್ನು ಬಡವನಿಗೆ ಒಪ್ಪಿಸಿದ. ಆ ನಂತರ ಆ ಗ್ರಾಮದ ಸುತ್ತಮುತ್ತಲಿನ ರಸ್ತೆಗಳೆಲ್ಲ ತಮಗೆ ತಾವೇ ನಿರ್ಮಲವಾದವು! ಜನಜೀವನವು ಸುಗಮವಾಗಿತ್ತು. ಹಿಂದಿನ ರಾಜನು ಪ್ರಜೆಗಳಿಗೆ ಬಾಹ್ಯಶುಚಿಯನ್ನು ಕಲಿಸುವುದಕ್ಕೆ ಮಾಡಿದ ಉಪಾಯ ಅದಾಗಿತ್ತು!!

ಕೃಪೆ:ಶ್ರೀ_ಸಿದ್ಧೇಶ್ವರ_ಸ್ವಾಮೀಜಿ, ವಿಜಯಪುರ.                                    ಸಂಗ್ರಹ :ವೀರೇಶ್ ಅರಸಿಕೆರೆ .ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097