ದಿನಕ್ಕೊಂದು ಕಥೆ. 631
*🌻ದಿನಕ್ಕೊಂದು ಕಥೆ🌻 ಸಿರಿಯ ಅಸಲಿ ಬೆಲೆ ಎಷ್ಟು?*
ಇಂದಿದ್ದು ನಾಳೆ ಇಲ್ಲದಂತಾಗುವ ಈ ನಶ್ವರ ಪ್ರಪಂಚದ ಮೋಹವನ್ನು ಅಳೆದವರು ಸಂತರು, ಶರಣರು, ಮಹಂತರು. ಅವರಿಗೆ ಈ ಪ್ರಪಂಚದ ಸಿರಿ ಸಂಪದವೆಲ್ಲವೂ ಒಂದು ಹುಲ್ಲುಕಡ್ಡಿಯಂತೆ. ನಮಗಾದರೂ ಈ ಪ್ರಪಂಚವೇ ಸರ್ವಸ್ವ. ಧನಕನಕಾದಿಕಗಳಿಗಾಗಿ ನಾವು ಪ್ರಾಣ ಪಣಕ್ಕಿಟ್ಟು ಹೋರಾಡುತ್ತೇವೆ. ಅಮೂಲ್ಯವಾದ ಆಯುಷ್ಯವನ್ನು ವ್ಯರ್ಥ ಕಳೆಯುತ್ತೇವೆ. ಒಂದು ಗೇಣು ಭೂಮಿಗಾಗಿ ಮಹಾಭಾರತದಂಥ ಘನಘೋರ ಯುದ್ಧವೇ ನಡೆಯಿತು. ಅಣ್ಣ-ತಮ್ಮಂದಿರಾದ ಕೌರವರು, ಪಾಂಡವರು ಬದ್ಧ ವೈರಿಗಳಂತೆ ಹೋರಾಡಿ ಮಡಿದರು. ಒಂದು ಕ್ಷಣ ರೂಪದ ಆಕರ್ಷಣೆ ಒಳಗಾಗಿ ರಾಮಾಯಣ ನಡೆದುಹೋಯಿತು. ಸುಂದರವಾದ ಲಂಕಾ ಪಟ್ಟಣ ಬೂದಿಯಾಯ್ತು. ಮಹಾ ಶಿವಭಕ್ತನಾದ ರಾವಣ ಅಸುನೀಗಿದೆ. ಅಪಾರ ಜೀವಹಾನಿ ಸಂಭವಿಸಿತು. ಇಂಥಾ ನಶ್ವರ ಸಂಪತ್ತಿನ ಮೋಹವು ಸಂತರು, ಶರಣರ ಬಳಿ ಎಂದೂ ಸುಳಿಯಲಿಲ್ಲ.
ಚೀನಾ ದೇಶದ ಸಂತ ಲಾವೋತ್ಸೆ ನಾವೆಯಲ್ಲಿ ಕುಳಿತು ನದಿ ದಾಟುತ್ತಿದ್ದ . ಅದೇ ನಾವೆಯಲ್ಲಿ ಒಬ್ಬ ಸಿರಿವಂತನಿದ್ದ . ಸಂತನನ್ನು ಕಂಡು ವಂದಿಸಿ ಚಿನ್ನದ ಸರವನ್ನು ಕಾಣಿಕೆಯಾಗಿ ಕೊಟ್ಟ. ತಕ್ಷಣ ಸಂತ ಆ ಸರವನ್ನು ನದಿಗೆ ಎಸೆದ. ಸಿರಿವಂತನು ನೀರಿಗಿಳಿದು ಅದನ್ನು ತಂದ. 'ಸಂತರೆ ಇದು ಚಿನ್ನದ ಸರ. ಇದರ ಬೆಲೆ ಎಷ್ಟು ನಿಮಗೆ ಗೊತ್ತೇ?' ಎಂದು ಕೇಳಿದ. ಸಂತ ಲಾವೋತ್ಸೆ ಹೇಳಿದ, ''ಅದರ ಬೆಲೆ ನಿನ್ನನ್ನು ನೀರಿಗೆ ಜಿಗಿಸುವಷ್ಟು ! ಈ ನದಿಯು ಸಾವಿರಾರು ಬಣ್ಣ ಬಣ್ಣದ ಮೀನುಗಳಿಗೆ, ಮೊಸಳೆಗಳಿಗೆ, ಅಸಂಖ್ಯ ಜಲಚರ ಪ್ರಾಣಿಗಳಿಗೆ ಆಶ್ರಯ ಕೊಟ್ಟಿದೆ. ಈ ಜೀವಂತ ಸಿರಿಯ ಎದುರು ನಿನ್ನ ಈ ನಿರ್ಜೀವ ಚಿನ್ನದ ಸರಕ್ಕೆ ಏನು ಬೆಲೆ ?,'' ಸಂತರ ಈ ನುಡಿಗಳ ಕೇಳಿದಾಗ ಸಿರಿವಂತನ ಕಣ್ಣು ತೆರೆಯಿತು.
ಹಸಿವನ್ನು ಇಂಗಿಸಿಕೊಳ್ಳುವುದಕ್ಕಾಗಿ ಒಂದು ಕೋಳಿಯು ಸಿರಿವಂತರ ತಿಪ್ಪೆಯನ್ನು ಕೆದರುತ್ತಿತ್ತು. ಅಲ್ಲಿ ಆಕಸ್ಮಿಕವಾಗಿ ಅದಕ್ಕೆ ಒಂದು ರತ್ನದ ಹರಳು ದೊರೆಯಿತು. ಅದನ್ನು ನೋಡಿದ ಕೂಡಲೇ ಕೋಳಿಯು ಕಾಲಿನಿಂದ ದೂರ ಎಸೆದು ಹೇಳಿತು- ''ನೀನು ರಾಜಮಹಾರಾಜರನ್ನು ಮರಳು ಮಾಡಿರಬಹುದು. ನಿನಗಾಗಿ ಅವರು ಹೋರಾಡಿ ಪ್ರಾಣವನ್ನೂ ಕಳೆದುಕೊಂಡಿರಬಹುದು. ಆದರೆ ನಾನು ಮಾತ್ರ ನಿನಗೆ ಮರುಳಾಗಲಾರೆ. ಏಕೆಂದರೆ ನಿನ್ನಿಂದ ನನ್ನ ಹಸಿವನ್ನು ನೀಗಿಸಲು ಸಾಧ್ಯವಿಲ್ಲ,'' ಇಷ್ಟು ಹೇಳಿ ಕೋಳಿಯು ಮತ್ತೆ ತಿಪ್ಪೆಯನ್ನು ಕೆದರತೊಡಗಿತು. ಆಗ ಅದಕ್ಕೆ ಒಂದು ಜೋಳದ ಕಾಳು ಸಿಕ್ಕಿತು. ಅದನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡು 'ನೀನು ದೇವರಿಗೂ ದೇವರು ಅನ್ನಬ್ರಹ್ಮ, ನೀನು ಮಾತ್ರ ನನ್ನ ಹಸಿವನ್ನು ನೀಗಿಸಬಲ್ಲೆ ' ಎಂದು ಕಾಳನ್ನು ಸೇವಿಸಿ ಕುಣಿಯುತ್ತಾ ಹೊರಟಿತು. ಅಷ್ಟರಲ್ಲೇ ಅಲ್ಲಿಗೆ ಬಂದ ಒಬ್ಬ ಮನುಷ್ಯ ಕೋಳಿ ಎಸೆದಿದ್ದ ರತ್ನದ ಹರಳನ್ನು ಎತ್ತಿಕೊಂಡ. ಇದನ್ನು ನೋಡಿದ ಸಿರಿವಂತರ ಮನೆಯುವರು ಬಂದು ಆತನನ್ನು ಹಿಡಿದು ಶಿಕ್ಷಿಸಿದರು. ಕೋಳಿಯಷ್ಟು ಬುದ್ಧಿ ಮಾನವರಿಗೆ ಇರುವುದಾದರೆ ರಾಮಾಯಣ, ಮಹಾಭಾರತದಂಥ ಅನಾಹುತ ನಡೆಯುತ್ತಿತ್ತೆ? ಇದಕ್ಕೆಲ್ಲ ಕಾರಣ ಮನುಷ್ಯನಲ್ಲಿರುವ ನಶ್ವರ ಸಿರಿಯ ವ್ಯಾಮೋಹ.
ಆಧಾರ: ಕಥಾಮೃತ.
ಕೃಪೆ:ಶ್ರೀ ಸಿದ್ದೇಶ್ವರ ಸ್ವಾಮೀಜಿ. ಸಂಗ್ರಹ ವೀರೇಶ್ ಅರಸಿಕೆರೆ .ದಾವಣಗೆರೆ. ***************************** *🌻ದಿನಕ್ಕೊಂದು ಕಥೆ🌻 ಪ್ರೀತಿಯ ಬಂಧನ*
ಒಂದೂರಿತ್ತು. ಆ ಊರಿನಲ್ಲಿ ತುಂಬಾ ದಿನಗಳ ಕಾಲ ಮಳೆ ಬರಲಿಲ್ಲ. ಜನರೆಲ್ಲ ನೀರು, ಆಹಾರವಿಲ್ಲದೆ ಆ ಊರು ಬಿಟ್ಟು ಗುಳೇ ಹೋದರು. ಹೀಗೆ ಗುಳೇ ಹೋದವರಲ್ಲಿ ತಾಯಿ, ಮಗ, ತಂಗಿಯರಿದ್ದರು. ಇವರೊಂದಿಗೆ ಒಂದು ಹಸು ಕೂಡ ಇತ್ತು. ಅದನ್ನು ಪ್ರೀತಿಯಿಂದ ಗೌರಿ ಎಂದು ಕರೆಯುತ್ತಿದ್ದರು. ಎಲ್ಲಿಗೆ ಹೋಗುವುದು? ತಿಳಿಯದು, ಹೊರಟಿದ್ದಾಗಿದೆ. ಮೂರು ನಾಲ್ಕು ದಿನಗಳು ಕಳೆದಿವೆ. ತಾವು ತಂದಿದ್ದ ಆಹಾರ ಪದಾರ್ಥಗಳು ಮುಗಿದಿದ್ದವು. ಮುಂದಿನ ದಿನಗಳು ದುಸ್ತರವಾಗಿದ್ದವು. ಎಲ್ಲರಿಗೂ ಹಸಿವಾಗತೊಡಗಿತು. ಹಸಿವು ನೀಗಿಸಿಕೊಳ್ಳಲು ಏನು ಮಾಡುವುದೆಂದು ತಿಳಿಯದೆ ಯೋಚನೆಗೀಡಾದರು. ತಮ್ಮಲ್ಲಿದ್ದ ಗೌರಿಯನ್ನು ಮಾರಿಬಿಡಲು ಅಮ್ಮ ಮಗನಿಗೆ ಹೇಳಿದಳು. ಅವರೆಲ್ಲರಿಗೂ ಪ್ರೀತಿಯ ಗೌರಿಯನ್ನು ಮಾರಲು ಇಷ್ಟವಿಲ್ಲದಿದ್ದರೂ ಆಕೆಯನ್ನು ಮಾರಲು ಮಗ ಮನಸ್ಸು ಮಾಡಿದ್ದ. ಗೌರಿಯನ್ನು ಕರುವಾಗಿದ್ದಾಗಿನಿಂದ ಮುದ್ದಿನಿಂದ ಸಾಕಿದ್ದರು. ತಂಗಿಯು ಗೌರಿಯೊಡನೆ ಖುಷಿಯಾಗಿ ಆಡುತ್ತಿದ್ದಳು. ಅದು ಚಿಗರಿ ಹಾಂಗ ನೆಗೆದಾಡುತ್ತಿತ್ತು. ಅವರೆಲ್ಲರ ನಡುವೆ ಇಪ್ಪತ್ತು ವರ್ಷಗಳಿಂದ ಅದು ಪ್ರೀತಿಯಿಂದ ಬೆಳೆದಿತ್ತು. ಗೌರಿ ಸೇರಿ ಅವರು ನಾಲ್ಕು ಜನರು ಒಂದೇ ಕುಟುಂಬದವರಂತೆ ಇದ್ದರು. ಈಗ ದೊಡ್ಡದಾದ ಮೇಲೆ ಗೌರಿ ತಮ್ಮ ದೈವ ಎಂದು ತಿಳಿದಿದ್ದರು. ಮಗ ಗೌರಿಯ ಕಡೆಗೊಮ್ಮೆ ನೋಡಿದ. ಗೊತ್ತಿಲ್ಲದಂತೆ ಅವನಿಗೆ ಕಣ್ಣೀರು ಒತ್ತರಿಸಿತು. ಗೌರಿಯನ್ನು ಬಿಗಿದಪ್ಪಿದ. ತಂಗಿಯೂ ಗೌರಿಯನ್ನು ತಬ್ಬಿಕೊಂಡು ಅಳಲಾರಂಭಿಸಿದಳು. ಗೌರಿಯನ್ನು ಮಾರು ಎಂದು ಅಮ್ಮ ಹೇಳಿದ್ದು ಎಲ್ಲರನ್ನೂ ತಲ್ಲಣಗೊಳಿಸಿತ್ತು. ತನ್ನನ್ನು ಯಾರಿಗೋ ಮಾರುತ್ತಾರೆ ಎಂದು ಗೌರಿಗೂ ಕಣ್ಣೀರು ಬರತೊಡಗಿತು. ಅಗಲಿಕೆ ಎನ್ನುವುದು ಹೃದಯ ವಿದ್ರಾವಕ ಅಲ್ಲವೆ? ಅಮ್ಮನನ್ನ ನೋಡುವುದು, ಮಗನ ಕಡೆಗೊಮ್ಮೆ, ತಂಗಿಯ ಕಡೆಗೊಮ್ಮೆ ನೋಡುವುದು. ಕಡೆಗೊಮ್ಮೆ ಅಮ್ಮನ ಕಡೆಗೆ ದೈನ್ಯತೆಯಿಂದ ಗೌರಿ ನೋಡುತ್ತ, ಮೂಕ ವೇದನೆಯನ್ನು ಅನುಭವಿಸುತ್ತಿತ್ತು. ನಾನು ಇವರಿಗೆ ಭಾರವಾದೆನೆ? ತಾಯಿಗೆ ಮಗು ಭಾರವೇ ಎಂದು ಅದರ ಮುಖಭಾವದಿಂದ ತಿಳಿಯುತ್ತಿತ್ತು. 'ಅದಕ್ಕೂ ತಿನ್ನಲು ಮೇವಿಲ್ಲ. ನಮಗೂ ಹಸಿವೆ ಹಾಗಾಗಿ ಅನಿವಾರ್ಯತೆಯಿಂದ, ಬೇರೆ ಮಾರ್ಗ ಇಲ್ಲದೇ ಗೌರಿಯನ್ನು ಮಾರಿಬಿಡುವುದು' ಎಂದು ಯೋಚಿಸಿದ್ದರು. ಮಗ ಪಟ್ಟಣದ ರಸ್ತೆಯ ಒಂದು ಭಾಗದಲ್ಲಿ ಗೌರಿಯನ್ನು ಹಿಡಿದುಕೊಂಡು ನಿಂತ. ಅದರ ಬೆಲೆಯನ್ನು ಕೂಗಲಾರಂಭಿಸಿದ. ಅವನ ಸುತ್ತ ಜನರು ಸೇರಲಾರಂಭಿಸಿದರು. 'ಒಳ್ಳೆಯ ಬೆಲೆ ಬಂದರೆ ಕೊಟ್ಟು ಬಿಡು' ಎಂದಳು ಅಮ್ಮ. ಗೌರಿ ತಮ್ಮ ಕೈಬಿಡುವಳೆಂದು ಆಕೆಯ ಕಡೆಗೊಮ್ಮೆ ನೋಡಿದ. ತಂಗಿಯ ಕಡೆಗೊಮ್ಮೆ ನೋಡಿದ. ಅವರ ಸ್ಥಿತಿ ಮನಮಿಡಿಯುವಂತಿತ್ತು. ಗೌರಿಯನ್ನು ಮಾರಲೋ ಬಿಡಲೋ ಎಂದು ಆತನ ಮನಸ್ಸು ಹೊಯ್ದಾಡುತ್ತಿತ್ತು. ಆದರೂ ಅದರ ಬೆಲೆಯನ್ನು ಕೂಗಲಾರಂಭಿಸಿದ. ಸೇರಿದ್ದ ಜನರಲ್ಲಿ ಕೆಲವರು ಎರಡು ಸಾವಿರ ಎಂದರು. ಇನ್ನು ಕೆಲವರು ಮೂರು ಸಾವಿರ ಐದುನೂರು ಎಂದು ಕೂಗಿದರು. ಕಡೆಯದಾಗಿ ಗೌರಿಯನ್ನು ಹರಾಜಿನಲ್ಲಿ ಕೂಗಿದ್ದ ವ್ಯಕ್ತಿ ಮಗನ ಕಿಸೆಯಲ್ಲಿ ಐದು ಸಾವಿರ ರೂಪಾಯಿಗಳನ್ನು ತುರುಕಿದ. 'ಒಳ್ಳೆಯ ಬೆಲೆ ಬಂದಿದೆ ಕೊಟ್ಟುಬಿಡು' ಎಂದಳು ಅಮ್ಮ. ಮಗನಿಗೆ ಇಷ್ಟವಿರಲಿಲ್ಲ. ಹಣ ತುರುಕಿದ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ಏನನ್ನೋ ಗುಸುಗುಸು ಮಾತನಾಡುತ್ತಿದ್ದ. ಇದನ್ನು ಹತ್ತಿರದಿಂದ ಆಲಿಸಿದಾಗ ಅವನು ಕಟುಕನೆಂದು ಗೊತ್ತಾಯಿತು. 'ಎಲ್ಲಾದರೂ ಉಂಟೆ, ತಿಳಿದೂ ತಿಳಿದೂ ಕಟುಕನ ಕೈಗೆ ಗೌರಿಯನ್ನು ಕೊಡುವುದುಂಟೆ' ಎಂದು ಯೋಚಿಸಿದವನೇ ತಕ್ಷ ಣ ತನ್ನ ಕಿಸೆಗೆ ತುರುಕಿದ್ದ ಹಣವನ್ನು ತೆಗೆದವನೇ ಗೌರಿ ಹಿಡಿದವನ ಮುಖದ ಮೇಲೆ ಎಸೆದು ಬಿಟ್ಟ. ಹೇಗಾದರಾಗಲಿ ಗೌರಿಯನ್ನು ನೋಡಿಕೊಳ್ಳುತ್ತೇವೆ, ಎಂದು ಧೈರ್ಯದಿಂದ ತಂಗಿಯ ಮುಖವನ್ನೊಮ್ಮೆ ನೋಡಿದ. ಗೌರಿಯನ್ನೆಳೆದುಕೊಂಡು ಅಮ್ಮನೊಂದಿಗೆ ನಡೆದ. ಮಂದಹಾಸದೊಂದಿಗೆ ಗೌರಿ ಅವರೊಂದಿಗೆ ಕಾಲುಹಾಕಿದಳು.
ಆಧಾರ : ವಿಕೆ
ಕೃಪೆ :ಕಿಶೋರ್. ಸಂಗ್ರಹ: ವೀರೇಶ್ ಅರಸಿಕೆರೆ .ದಾವಣಗೆರೆ.
Comments
Post a Comment