ದಿನಕ್ಕೊಂದು ಕಥೆ. 658

🌻 *ದಿನಕ್ಕೊಂದು ಕಥೆ*🌻                    *ದೇಶಪ್ರೇಮಿಗಳ ಆದರ್ಶ ಪಥ*

ಮಾನವನ ಜೀವನದಲ್ಲಿ ಅನೇಕ ಬಗೆಯ ಅವಕಾಶಗಳು ದೊರೆಯುತ್ತವೆ. ಬಾಲ್ಯ ಮತ್ತು ಕಿಶೋರಾವಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವಾಗ ನಾನಾ ಬಗೆಯ ಕಲೆ, ಸಾಹಿತ್ಯ, ಸಂಸ್ಕೃತಿ, ಶಾಸ್ತ್ರ, ಗಣಿತ, ವಿಜ್ಞಾನ, ಕ್ರೀಡೆ ಇತ್ಯಾದಿ ಪರಿಚಯದೊಂದಿಗೆ ವ್ಯಕ್ತಿತ್ವದ ಸರ್ವಾಂಗೀಣ ವಿಕಸನಕ್ಕೆ ಸೂಕ್ತ ಅವಕಾಶಗಳು ಒದಗಿಬರುತ್ತವೆ.

ಸೂಕ್ತ ಸಂದರ್ಭ ಸನ್ನಿವೇಶಗಳಿಂದ ಪ್ರೇರಣೆ, ಸ್ಪೂರ್ತಿ ದೊರೆತರೆ, ಒಬ್ಬ ವ್ಯಕ್ತಿಯನ್ನು ಕಲಾವಿದನೋ, ಕ್ರೀಡಾಪಟುವೋ, ಕವಿಯೋ, ವಿಜ್ಞಾನಿಯೋ, ವಿದ್ವಾಂಸನೋ ಆಗುವಂತೆ ಮಾಡಲು ಸಾಧ್ಯ. ಆದರೆ, ಒಬ್ಬ ವ್ಯಕ್ತಿಗೊಂದು ಉದ್ದೇಶ, ಗುರಿ, ಲಕ್ಷ್ಯವಿದ್ದಾಗ ಅದಕ್ಕೆ ಅನುಗುಣವಾದ ಹಾಗೂ ತನ್ನ ಅಭಿರುಚಿಗೆ ಹೊಂದಿಕೆಯಾದ ಹವ್ಯಾಸವನ್ನೇ ಅವನು ಆಯ್ದುಕೊಳ್ಳುತ್ತಾನೆ ಎಂಬುದಕ್ಕೆ ಖ್ಯಾತ ವಿದ್ವಾಂಸರಾದ ಶ್ರೀಪಾದ ದಾಮೋದರ ಸಾತವೇಲಕರ್ ಅವರ ಉದಾಹರಣೆಯೇ ಜ್ವಲಂತ ಸಾಕ್ಷಿ.

ಮಹಾರಾಷ್ಟ್ರದಲ್ಲಿ ವೈದಿಕ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದ ಶ್ರೀಪಾದ ದಾಮೋದರ ಸಾತವೇಲಕರ್ ಅವರು ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತದ ಬಗ್ಗೆ ವಿಶೇಷವಾದ ಆಸಕ್ತಿ ಉಳ್ಳವರು ಹಾಗೂ ವೇದ ಶಾಸ್ತ್ರ ಪುರಾಣಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು. ಇದರ ಜತೆಗೇ ಚಿತ್ರಕಲೆಯಲ್ಲಿ ವಿಶೇಷ ಸಾಧನೆ ಮಾಡಿದ ಕಲಾವಿದರೂ ಆಗಿದ್ದರು. ಪ್ರಕೃತಿ ಪ್ರೇಮಿಯಾಗಿದ್ದ ಅವರು ನಿಸರ್ಗದ ಸೌಂದರ್ಯವನ್ನು, ವರ್ಣಚಿತ್ರಗಳಲ್ಲಿ ಅತ್ಯಂತ ಕಲಾತ್ಮಕವಾಗಿ ಸೆರೆ ಹಿಡಿಯುತ್ತಲಿದ್ದು, ಕಲಾಪ್ರೇಮಿಗಳ ಮನಸೂರೆಗೊಂಡಿದ್ದರು. ಅವರು ರಚಿಸಿದ ಅಮೂಲ್ಯ ಚಿತ್ರಗಳನ್ನು ಧನಿಕರು ಖರೀದಿಸಿ, ತಮ್ಮ ಡ್ರಾಯಿಂಗ್ ರೂಮನ್ನು ಸಿಂಗರಿಸುತ್ತಿದ್ದರು.

ಶ್ರೀಪಾದ ಸಾತವೇಲಕರ್ ಕಲಾಪ್ರೇಮಿಯಾಗಿದ್ದಂತೆಯೇ ದೇಶಪ್ರೇಮಿಯೂ ಆಗಿದ್ದರು. ಬ್ರಿಟಿಷರ ಆಡಳಿತದ ದಿನಗಳಲ್ಲಿ ಗಾಂಧೀಜಿ, ಗೋಖಲೆ, ತಿಲಕ್ ಮೊದಲಾದವರ ಚಳವಳಿಯಿಂದ ಪ್ರೇರಿತರಾದ ಸಾತವೇಲಕರರು ಭಾರತ ಮಾತೆಯ ಸೇವೆಗಾಗಿ ತನ್ನ ಬದುಕನ್ನು ಮುಡುಪಾಗಿಡಲು ನಿರ್ಧರಿಸಿ, ತನ್ನ ಕಲಾಸೇವೆಯನ್ನು ಬದಿಗೊತ್ತಿ, ವೇದ ವಿದ್ಯಾಪ್ರಸಾರ ಮಾಡತೊಡಗಿದರು. ಜನರಲ್ಲಿ ದೇಶಪ್ರೇಮದ ಬೀಜವನ್ನು ಬಿತ್ತತೊಡಗಿದರು. ಆದರೆ, ಇದರಿಂದಾಗಿ ಅವರು ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು. ಆಗ ಅವರ ಕಲಾಭಿಮಾನಿಯೊಬ್ಬನು ಅವರ ಬಳಿಗೆ ಬಂದು ನೂರಾರು ರೂಪಾಯಿಗಳ ಮೊತ್ತವನ್ನು ಮುಂಗಡವಾಗಿ ನೀಡಿ, ನಗರದ ಗಣ್ಯ ಶ್ರೀಮಂತ ರಾವ್ ಸಾಹಬ್ ಸೇಠ್‌ರ ವರ್ಣಚಿತ್ರವನ್ನು ತಯಾರಿಸುವ ಪ್ರಸ್ತಾಪ ಇರಿಸಿದನು. ಆದರೆ, ಸಾತವೇಲಕರರು ಈ ಪ್ರಸ್ತಾಪವನ್ನು ತಿರಸ್ಕರಿಸುತ್ತಾ ನುಡಿದರು. ಭಾರತ ಮಾತೆಯ ದಾಸ್ಯಕ್ಕೆ ಕಾರಣರಾದ ಬ್ರಿಟಿಷರಿಂದ ರಾವ್ ಸಾಹಬ್ ಎಂಬ ಬಿರುದನ್ನು ಸ್ವೀಕರಿಸಿದ ಈ ಸೇಠ್‌ಜಿಗೆ ಧಿಕ್ಕಾರವಿರಲಿ. ನನ್ನಂಥ ದೇಶಪ್ರೇಮಿಯು ಆ ದೇಶದ್ರೋಹಿಯ ಚಿತ್ರಕ್ಕಾಗಿ ತನ್ನ ಕುಂಚವನ್ನು ಅಪವಿತ್ರಗೊಳಿಸಲಾರ ಎಂದಾಗ ಅವರ ಕಲಾಭಿಮಾನಿಯು ತಲೆ ತಗ್ಗಿಸಿ ಹೊರಟು ಹೋದ.

ಇದು ದೇಶಭಕ್ತರು ನಡೆಯುವ ಆದರ್ಶ ಪಥವಾಗಿದೆ. ದೇಶಕ್ಕಾಗಿ ತಮ್ಮ ತನು, ಮನ, ಧನ, ಪ್ರಾಣ ಇತ್ಯಾದಿ ಸರ್ವಸ್ವವನ್ನೂ ಸಮರ್ಪಿಸಲು ಸನ್ನದ್ಧರಾದವರಿಗೆ ಆರ್ಥಿಕ ಸಂಕಟವೆಂಬುದು ನಗಣ್ಯವೇ ಸರಿ. ಇಂಥ ದೇಶಭಕ್ತರ ತ್ಯಾಗ ಬಲಿದಾನದಿಂದ ನಮ್ಮ ರಾಷ್ಟ್ರಕ್ಕೆ ದೊರೆತ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಿಕೊಳ್ಳುವುದಕ್ಕಾಗಿ, ದೇಶದ ಉನ್ನತಿಗಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ?

ಕೃಪೆ:ಡಾ. ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ
ಸಂಗ್ರಹ:ವೀರೇಶ್ ಅರಸಿಕೆರೆ.ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059