ದಿನಕ್ಕೊಂದು ಕಥೆ. 659
*🌻ದಿನಕ್ಕೊಂದು ಕಥೆ🌻 ಆತ್ಮ ನಿಯಂತ್ರಣ ಬಹು ಮುಖ್ಯ.*
ಈ ಜಗತ್ತಿನಲ್ಲಿ ಜನರು ತುಂಬಾ ಆಸೆ-ಆಕಾಂಕ್ಷೆಗಳುಳ್ಳವರಾಗಿದ್ದು ಅವನ್ನು ಪೂರೈಸುವಂತೆ ದೇವರನ್ನು ಪ್ರಾರ್ಥಿಸುತ್ತಿರುತ್ತಾರೆ. ಸಾಕಷ್ಟು ಪ್ರಯತ್ನ ಕೂಡ ಮಾಡುತ್ತಿರುತ್ತಾರೆ. ಅಕಸ್ಮಾತ್ತಾಗಿ ತಮ್ಮ ನಿರೀಕ್ಷೆಗಳು ಪೂರೈಸದಿದ್ದರೆ ನಿರಾಶರಾಗುವವರು ಇದ್ದಾರೆ; ನಿರಾಶೆಯು ವೈರಾಗ್ಯ ಮತ್ತು ಆತ್ಮಹತ್ಯೆಯಂಥ ಕೃತ್ಯಗಳಿಗೆ ಕಾರಣವಾಗಬಾರದು. ಆಶಾವಾದಿಗಳಾಗಿ, ಭಗವಂತನನ್ನು ನಂಬಿ ಮರಳಿ ಯತ್ನವ ಮಾಡಿದರೆ, ಯಶಸ್ವಿಯಾಗಲು ಸಾಧ್ಯ ಎಂಬ ಸಂದೇಶ ನೀಡುವ ಒಂದು ಉದ್ಬೋಧಕ ಪ್ರಸಂಗ ಇಲ್ಲಿದೆ.
ಮಹಾರಾಷ್ಟ್ರದ ರೋಜನ್ ಎಂಬ ನಗರದಲ್ಲಿ ಒಬ್ಬ ಬ್ರಾಹ್ಮಣನಿದ್ದ. ಈತನ ಪತ್ನಿಯು ಆದರ್ಶ ಗೃಹಿಣಿಯಾಗಿದ್ದರೂ ಪ್ರತಿದಿನವೂ ಪತಿ-ಪತ್ನಿಯರ ನಡುವೆ ಜಗಳವಾಗುತ್ತಿತ್ತು. ಸಿಟ್ಟು ಬಂದಾಗ ಬ್ರಾಹ್ಮಣ ತನ್ನ ಪತ್ನಿಯೊಡನೆ ''ನೀನು ನಾನು ಹೇಳಿದ ಹಾಗೆ ಕೇಳದಿದ್ದರೆ ನಾನು ಸಂತ ಶ್ರೀ ಸಂತೋಬಾ ಗುರುಗಳ ಶಿಷ್ಯನಾಗಿ ಸನ್ಯಾಸಿಯಾಗಿ ಬಿಡುತ್ತೇನೆ,'' ಎಂದು ಹೆದರಿಸುತ್ತಿದ್ದ. ಪತ್ನಿ ಗಾಬರಿಯಾಗಿದ್ದಳು. ಆದರೆ ಒಂದು ದಿನ ಆ ಗಂಡನಿಲ್ಲದಿರುವಾಗಲೇ ಆ ಮನೆಗೆ ಸುಪ್ರಸಿದ್ಧ ಸಂತ ಶ್ರೀ ಸಂತೋಬಾ ಗುರುಗಳು ಭಿಕ್ಷೆಗೆಂದು ದಯಮಾಡಿಸಿದರು. ಆಗ ಬ್ರಾಹ್ಮಣ ಪತ್ನಿಯು ''ಸಂತ ಮಹಾರಾಜರೆ, ನನ್ನ ಗಂಡ ಆಗಾಗ ನಾನು ಸಂತರ ಶಿಷ್ಯನಾಗಿ ಸನ್ಯಾಸಿಯಾಗುತ್ತೇನೆಂದು ಹೆದರಿಸುತ್ತಾರೆ. ನಾನೇನು ಮಾಡಲಿ?,'' ಎಂದು ಪ್ರಶ್ನಿಸಿದಳು. ಆಗ ಸಂತ ಮಹಾರಾಜರು ಮುಗುಳ್ನಕ್ಕು ನುಡಿದರು- ''ಮಗಳೇ, ಅಂಜಬೇಡ. ಇನ್ನೊಮ್ಮೆ ಹೆದರಿಸಿದರೆ, ಸನ್ಯಾಸಿಯಾಗಿ ಬಿಡಿ ಅಂದು ಬಿಡು. ನಾನು ಆತನಿಗೆ ಎಂದೂ ಮನೆ ಬಿಡಲಾರದಂಥ ಮಂತ್ರ ಪ್ರಯೋಗಿಸುತ್ತೇನೆ,'' ಎಂದರು.
ಮರುದಿನ ಅದೇ ಬ್ರಾಹ್ಮಣ ಊಟ ಬಡಿಸುವಾಗ ತಡವಾಯಿತೆಂದು ಸಿಟ್ಟಿನಿಂದ ''ನಾನು ಮನೆ ತ್ಯಜಿಸಿ ಸನ್ಯಾಸಿಯಾಗಿ ಬಿಡುತ್ತೇನೆ,'' ಎಂದು ಹೆದರಿಸಿದಾಗ, ಆ ಪತ್ನಿಯು ''ಆಯ್ತು, ಹೋಗಿ ಬಿಡಿ,'' ಅಂದಳು. ಬ್ರಾಹ್ಮಣ ನೇರವಾಗಿ ಸಂತ ಮಹಾರಾಜರ ಕುಟೀರಕ್ಕೆ ಹೋಗಿ, ''ಸಂತ ಮಹಾರಾಜರೆ, ನನಗೆ ವೈರಾಗ್ಯವುಂಟಾಗಿದೆ. ನನ್ನನ್ನು ಶಿಷ್ಯನಾಗಿ ಸ್ವೀಕಾರ ಮಾಡಿರಿ,'' ಅಂದಾಗ ಅವರು ಆತನಿಗೆ ''ಸರಿ, ಈ ಕುಟೀರದಲ್ಲೇ ವಾಸಮಾಡು, ಬಟ್ಟೆ ಕಳಚಿ, ಲಂಗೋಟಿ ಧಾರಣೆ ಮಾಡು,'' ಅಂದರು. ನದಿಯಲ್ಲಿ ಸ್ನಾನ ಮಾಡಿ ಬಂದಾಗ ಚಳಿಗೆ ನಡುಗಹತ್ತಿದ. ಮಧ್ಯಾಹ್ನದ ಊಟಕ್ಕೆ ಹಸಿ ಗಡ್ಡೆ-ಗೆಣಸು ನೀಡಿದರು. ಮನೆಯಲ್ಲಿ ನಿತ್ಯವೂ ರುಚಿಕರ ಭೋಜನ ಸವಿಯುತ್ತಿದ್ದ ಬ್ರಾಹ್ಮಣನಿಗೆ ಹಸಿ ಗಡ್ಡೆ- ಗೆಣಸು ಗಂಟಲೊಳಗೆ ಇಳಿಯಲೇ ಇಲ್ಲ. ಹಸಿವೆಯಿಂದ ಆತ ಬಿಕ್ಕಳಿಸತೊಡಗಿದ. ಅವನ ವೇದನೆಯನ್ನು ಅರಿತ ಸಂತ ಮಹಾರಾಜರೆಂದರು- ''ಮಗೂ, ವೈರಾಗ್ಯದ ಮೊದಲ ಹೆಜ್ಜೆ ನಾಲಗೆಯ ನಿಯಂತ್ರಣವಾಗಿದೆ, ಅದರಲ್ಲೇ ಸೋತು ಅಳುವ ನೀನೆಂತು ಸನ್ಯಾಸಿಯಾಗಬಲ್ಲೆ? ಸದ್ಯ ನೀನು ಮನೆಗೆ ಹಿಂದಿರುಗಿ ಕುಟುಂಬದ ಜತೆಗೆ ಸ್ನೇಹದಿಂದ ಬಾಳು. ಸಮಾಜ ಸೇವೆ ಕೂಡಾ ಮಾಡು. ನಿನಗೆ ಗೃಹಸ್ಥ ಸಂತನೆಂಬ ಕೀರ್ತಿ ಸಿಗಲಿ.'' ಆ ಉಪದೇಶ ಆ ಬ್ರಾಹ್ಮಣನ ಬಾಳ್ವೆಯನ್ನೇ ಬದಲಿಸಿತು. ಮುಂದಕ್ಕೆ ಸಂತನೆಂದು ವಿಖ್ಯಾತರಾದರು.
ಮಾನವನು ಈ ಪ್ರಪಂಚದಲ್ಲಿ ಗೆಲುವನ್ನು ಸಾಧಿಸಬೇಕೆಂದಾದರೆ ಬುದ್ಧಿಯನ್ನು ಹತೋಟಿಯಲ್ಲಿರಿಸಿಕೊಳ್ಳಲು ಕಲಿಯಬೇಕು. ಆತ್ಮ ನಿಯಂತ್ರಣವಿಲ್ಲದೆ ಆವೇಶದಿಂದ ಇತರರ ಜತೆಗೆ ವ್ಯವಹರಿಸುವವರು ಎಂದೂ ಉತ್ತಮ ಸಾಧನೆ ಮಾಡಲಾರರು. ಇಹಪರಗಳಲ್ಲಿ ಯಶಸ್ವಿಯಾಗಲಾರರು. ಈ ದೃಷ್ಟಿಯಿಂದ ಆತ್ಮ ನಿಯಂತ್ರಣ ಮತ್ತು ಸೂಕ್ತ ನಿರ್ಣಯ ಬಹು ಮುಖ್ಯ.
ಕೃಪೆ:ಡಾ. ಡಿ. ವೀರೇಂದ್ರ ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳ. ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment