ದಿನಕ್ಕೊಂದು ಕಥೆ. 660
*ಪ್ರಾಮಾಣಿಕತೆ*
ಒಂದು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು. ಆ ಹುದ್ದೆಗೆ ಸಾವಿರಾರು ಅರ್ಜಿಗಳು ಬಂದದ್ದವು. ಸಂದರ್ಶಕ್ಕೆ ಕೇವಲ ನೂರು ಅಭ್ಯರ್ಥಿಗಳನ್ನು ಕರೆದಿದ್ದರು. ಅಂದು ಸಂದರ್ಶನ ನಡೆಸಿಕೊಡಲು ನೊಬೆಲ್ ಪ್ರಶಸ್ತಿ ವಿಜೇತ ಸರ್ ಸಿ ವಿ ರಾಮನ್ ಇದ್ದರು . ಸಂದರ್ಶನದಲ್ಲಿ ಉತ್ತಮವಾದ ಪ್ರಶ್ನೆಗಳನ್ನು ಕೇಳಲಾಯಿತು. ಸರಿಯಾದ ಉತ್ತರವನ್ನು ನೀಡಲಾದ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಮಿಕ್ಕ ಅಭ್ಯರ್ಥಿಗಳಿಗೆ ನಿರಾಶೆ ಎನಿಸಿದರು ಸರ್ ಸಿ ವಿ ಅವರೊಡನೆ ಮಾತನಾಡುವ ಮತ್ತು ಅವರ ಜೊತೆ ಕೂತ ಸಮಾಧಾನ ಇತ್ತು.
ಸಂದರ್ಶನ ಮುಗಿಸಿ ಹೊರ ಬಂದ ಸರ್ ಸಿ ವಿ ಯವರ ಕಣ್ಣಿಗೆ ಒಬ್ಬ ಯುವಕ ತಮಗೆ ಕಾಯುತ್ತಿರುವಂತೆ ಬಾಸವಾಯಿತು. ನೇರ ನೋಡುವಾಗ ಸಂದರ್ಶನಕ್ಕೆ ಬಂದ ಯುವಕ ಎಂದು ತಕ್ಷಣ ಅರ್ಥವಾಯಿತು. ತಾವೇ ಹತ್ತಿರ ಹೋಗಿ ಆ ಯುವಕನ ಬೆನ್ನು ಸವರುತ್ತ " ಚಿಂತಿಸ ಬೇಡ, ಮುಂದಿನ ಸಾರಿ ಚನ್ನಾಗಿ ತಯಾರಿ ನಡೆಸು. ಖಂಡಿತವಾಗಿ ಆಯ್ಕೆಯಾಗುತ್ತಿಯ." ಎಂದು ಸಮಾಧಾನ ಮಾಡಿದರು. ಆದರೆ, ಆ ಯುವಕ " ಸರ್, ನಾನು ಅದಕ್ಕಾಗಿ ನಿಂತಿಲ್ಲ. ನನಗೆ ನನ್ನ ಪ್ರಯಾಣ ಭತ್ಯೆ ಕೊಡುವಾಗ ತಪ್ಪು ಲೆಕ್ಕಾಚಾರ ಹಾಕಿ ಏಳು ರೂಪಾಯಿ ಹೆಚ್ಚಿಗೆ ಕೊಟ್ಟಿದ್ದಾರೆ. ಇದನ್ನು ಆಫೀಸಿನಲ್ಲಿ ತಿಳಿಸುವಾಗ ಕೌಂಟರ್ ಮುಚ್ಚಲಾಗಿದೆ, ನೀವೇ ಇಟ್ಟುಕೊಳ್ಳಿ ಎಂದು ಹೇಳಿದರು. ಆದರೆ, ನನಗೆ ಈ ಹೆಚ್ಚಿನ ಬೇಡ ಸಾರ್. " ಎಂದು ಪ್ರಾಮಾಣಿಕನಾಗಿ ಹೇಳಿದ. ಸರ್ ಸಿ ವಿ ಒಮ್ಮೆ ಯುವಕನನ್ನು ದಿಟ್ಟಿಸಿ ನೋಡುತ್ತಾ ಮುಗುಳುನಕ್ಕು " ಹಾಗಾದರೆ ನನಗೆ ಕೊಡು " ಎಂದರು. ಯಾವುದೇ ಪ್ರತಿಉತ್ತರ ನೀಡದೆ ಏಳು ರೂಪಾಯಿಯನ್ನು ಅವರ ಕೈಗಿತ್ತ ಯುವಕ. ಜೇಬಿಗೆ ಇಳಿಸಿಕೊಂಡ ಸರ್ ಸಿ ವಿ ನಾಲ್ಕಾರು ಹೆಜ್ಜೆ ಹಾಕಿದರು. ಯುವಕ ಬೆನ್ನು ಮಾಡುತ್ತಾ ಹೊರಟ. ತಿರುಗಿ ಸರ್ ಸಿ ವಿ ಯವರು ಯುವಕನನ್ನು ಕರೆಯುತ್ತ, " ಇಲ್ಲಿ ನೋಡು, ನಾಳೆ ಬೆಳಿಗ್ಗೆ ನೀನು ನನ್ನನ್ನು ಆಫೀಸಿನಲ್ಲಿ ಕಾಣು." ಎಂದು ಹೊರಟು ಹೋದರು.
ಯುವಕನಿಗೆ ಏನೂ ಅರ್ಥವಾಗಲಿಲ್ಲ. ಮಾರನೆ ಬೆಳಿಗ್ಗೆ ಆಫೀಸಿಗೆ ಹೋಗಿ ಸರ್ ಸಿ ವಿ ಯವರನ್ನು ಕಂಡ. ಆತ್ಮೀಯವಾಗಿ ಸ್ವಾಗತಿಸುತ್ತಾ " ಮಗು, ನೀನು ಭೌತ ಶಾಸ್ತ್ರದಲ್ಲಿ ಉತ್ತೀರ್ಣನಾಗದೆ ಇರಬಹುದು. ಆದರೆ ನೀನು ಪ್ರಾಮಾಣಿಕತೆಯ ಪರೀಕ್ಷೆಯಲ್ಲಿ ಪಾಸಾಗಿದ್ದಿಯ. ನನಗೆ ಇದೆ ಮುಖ್ಯ. ಆದ್ದರಿಂದ ನಿನಗೆ ಒಂದು ಹುದ್ದೆಯನ್ನು ವಿಶೇಷವಾಗಿ ಸೃಷ್ಟಿಸಿದ್ದೇನೆ. ಹೋಗಿ ಸೇರಿಕೋ " ಎಂದು ನುಡಿಯುತ್ತ ಕೆಲಸದ ಆಜ್ಞಾಪತ್ರವನ್ನು ಆ ಯುವಕನ ಕೈಗಿತ್ತರು ಮುಂದೆ ಆ ಯುವಕ ವಿಜ್ಞಾನದಲ್ಲಿ ಹೆಸರುಮಾಡಿದ.
ನಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ ಅದು ನಮ್ಮ ಜೀವನದ ಗತಿಯನ್ನೇ ಬದಲಿಸುತ್ತದೆ. ಸ್ವಲ್ಪ ನಿಧಾನವಾಗಬಹುದು ಅಷ್ಟೇ.
Comments
Post a Comment