ದಿನಕ್ಕೊಂದು ಕಥೆ. 691

*🕉ಮಾಯೆಯ ಜಿಂಕೆ🕉*

ಒಮ್ಮೊಮ್ಮೆ ನಮ್ಮ ಪರಿಸ್ಥಿತಿ ಹೇಗಿರುತ್ತೆಂದರೆ, ‘ಛೇ, ಹೀಗೆ ಮಾಡಬಾರದು ಎಂದುಕೊಂಡಿದ್ದೆ. ಗೊತ್ತಿಲ್ಲದೇ ಆಗಿಬಿಟ್ಟಿತು’ ಎಂದು ಹಲುಬುತ್ತಿರುತ್ತೇವೆ. ಒಂದು ಕ್ಷಣ, ಎಚ್ಚರಿಕೆ ತಪ್ಪಿದರೂ ಜೀವನದುದ್ದಕ್ಕೂ ಸಂಕಟ. ಹೀಗೆ ಎಚ್ಚರ ತಪ್ಪಿ ಎಡವಿ ಬೀಳುವುದನ್ನು ‘ಮಾಯೆ’ ಅಂತಾರೆ! ಈ ಮಾಯೆಯ ಪ್ರಭಾವ ಅದೆಷ್ಟು ಗಹನ ಎಂದರೆ ಭಗವಂತನನ್ನೂ ಅದು ಬಿಡಲಿಲ್ಲ.
ಸೀತೆ ಮಾಯಾ ಜಿಂಕೆ ಕಂಡು ನನಗದು ಬೇಕು ಎಂದಳಲ್ಲ ಆಗ ರಾಮ ಸುಮ್ಮನಿರಬಹುದಿತ್ತು. ಅದೇನಾಯಿತೋ ರಾಮನಿಗೆ. ಜೀವಂತ ಸಿಕ್ಕರೆ ಆಟವಾಡಲು ಸರಿ, ಸತ್ತರೆ ಚರ್ಮ ಉಪಯೋಗವಾದೀತೆಂದು ಸೀತೆಯ ಮೋಹದ ಮಾತಿಗೆ ತಲೆದೂಗಿ ಆ ಜಿಂಕೆ ಅಟ್ಟಿಸಿಕೊಂಡು ಹೊರಟ. ಭಗವಂತನೂ ಒಂದು ಕ್ಷಣ ಮೈಮರೆತ. ಕೊಲವೊಮ್ಮೆ ಮೈ ಮರೆತದ್ದೂ ಲಾಭವಾಗುತ್ತದೆಂಬುದಕ್ಕೆ ಈ ಘಟನೆಯೇ ಸಾಕ್ಷಿ. ಈ ಘಟನೆಯ ನಂತರ ರಾಮ ಶೋಕ ಸಾಗರದಲ್ಲಿ ತಿಂಗಳುಗಟ್ಟಲೆ ಮುಳುಗಿದ್ದನೆಂಬುದು ಬೇರೆ ಮಾತು. ಆದರೆ ಅನಂತರ ಸೀತೆಯನ್ನು ಮರಳಿ ಪಡೆಯಲೋಸುಗ ರಾಮ ಲಂಕೆಗೆ ದಾಂಗುಡಿ ಇಟ್ಟು ರಾವಣನ ಸಂಹಾರ ಮಾಡಿದ! ಹೀಗೆ ರಾಮನ ಮೈಮರೆವು ಶ್ರೇಷ್ಠ ಕಾರ್ಯವೊಂದಕ್ಕೆ ನಾಂದಿಯಾಗಿದ್ದು ಏಕೆ ಗೊತ್ತೆ? ರಾಮ ಸದಾ ಸಚ್ಚಿಂತನೆಯಲ್ಲಿದ್ದ. ಒಂದು ಕ್ಷಣವೂ ಪರಮ ಪುರುಷನ ಸಖ್ಯ ತೊರೆದು ಅವನಿರಲಿಲ್ಲ. ಹೀಗಾಗಿ ಅವನ ಎಚ್ಚರಿಕೆ ತಪ್ಪುವ ಕ್ರಿಯೆಯೂ ಪರಬ್ರಹ್ಮನ ಲೀಲೆಯಾಯ್ತು!
ಹೀಗಾಗಿಯೇ ಶ್ರೀ ಕೃಷ್ಣ ಗೀತೆಯಲ್ಲಿ ವಿಶ್ವರೂಪ ದರ್ಶನ ನೀಡಿದ ನಂತರ ಒಂದು ಮಾತು ಹೇಳುತ್ತಾನೆ. ‘ಮನಸ್ಸು ನನ್ನೊಳಗೆ ಇಡು, ಬುದ್ಧಿಯೂ ನನ್ನೊಳಗೆ ಇರಲಿ. ಆಗ ಔನ್ನತ್ಯ ಪಡೆಯುವುದರಲ್ಲಿ ಸಂಶಯವೇ ಇಲ್ಲ’. ಮನಸ್ಸು ಹೇಗೆ ಪ್ರಾಪಂಚಿಕ ಸುಖ-ಭೋಗಗಳೊಂದಿಗೆ ರಮಿಸುವುದೋ ಹಾಗೆಯೇ ಭಗವಂತನೊಂದಿಗೆ ರಮಿಸುವಂತಾಗಬೇಕೆಂಬುದು ಪರಮಾತ್ಮನ ಮಾತು. ಅಕಸ್ಮಾತ್ ಅದೂ ಸಾಧ್ಯವಾಗಲಿಲ್ಲವೆಂದು ನಾವು ಕೈ ಚೆಲ್ಲಿ ಕುಳಿತರೆ ಮಾಡುವುದೇನು? ಶ್ರೀ ಕೃಷ್ಣ ಮುಂದುವರೆಸುತ್ತಾನೆ ‘ಚಿಂತೆ ಮಾಡಬೇಡ. ಆಗ ನನಗಾಗಿಯೇ ಇರುವ ಕರ್ಮಗಳಲ್ಲಿ ನಿರತನಾಗಿ ಬಿಡು’ ಎನ್ನುತ್ತಾನೆ. ಸ್ವಂತಕ್ಕೋಸ್ಕರ ಏನನ್ನೂ ಮಾಡದೇ ಅವನ ಕೈಂಕರ್ಯ ಮಾಡುತ್ತ ಉಳಿಯಬೇಕೆಂಬುದು ಅವನಿಚ್ಛೆ. ‘ಅದೂ ಸಾಧ್ಯವಿಲ್ಲವಪ್ಪ ಹೆಂಡತಿ ಮಕ್ಕಳಿದ್ದಾರೆ. ನಿನ್ನ ಕೆಲಸ ಮಾಡುತ್ತ ಉಳಿದರೆ ಕರ್ತವ್ಯದ ಹೊಣೆ ಯಾರದು?’ ಎಂದು ಕೇಳಿದಿರಾದರೆ ಕೃಷ್ಣ ಹೇಳುತ್ತಾನೆ ‘ಅಂದ ಮೇಲೆ ಚಿಂತೆ ಬೇಡ. ನಿಮಗೋಸ್ಕರ ಮಾಡಿಕೊಂಡ ಕೆಲಸಗಳನ್ನು ನನಗೆ ಅಪಿ೯ಸಿಬಿಡಿ.’ ಕರ್ಮ ಮಾತ್ರ ನಿಮ್ಮದು. ಫಲವೇನೇ ಇದ್ದರೂ ಅದು ಭಗವಂತನದೆಂದು ಸಮಪರ್ಿಸಿ. ಆಗ ತಪ್ಪು ಹೆಜ್ಜೆ ದುಃಖ ಕೊಡಲಾರದು ಅಷ್ಟೇ ಅಲ್ಲ ಆ ಹೆಜ್ಜೆಯಿಂದಾಗಿಯೇ ಲೋಕೋಪಕಾರವೂ ಆದೀತು.. *ಮಾಯೆಯನ್ನು ಹಿಡಿತಕ್ಕೆ ತಂದುಕೊಳ್ಳುವ ಏಕೈಕ ಮಾರ್ಗ ಇದು.*

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097