ದಿನಕ್ಕೊಂದು ಕಥೆ. 721
*🌻ದಿನಕ್ಕೊಂದು ಕಥೆ🌻 ನುಡಿದರೆ ಮಾಣಿಕ್ಯದ ದೀಪ್ತಿ!* ಮಾಣಿಕ್ಯದ ದೀಪ್ತಿಯಂಥ ಮೂರು ಮಾತುಗಳಿಂದ ಕಳ್ಳನೊಬ್ಬನ ಬದುಕು ಬದಲಾದ ಪವಾಡಸದೃಶ ಜೆನ್ ಕತೆಯೊಂದು ಇಲ್ಲಿದೆ! ಶತಮಾನಗಳ ಹಿಂದೆ ಜಪಾನಿನಲ್ಲಿ ಒಬ್ಬ ಜೆನ್ ಗುರುಗಳಿದ್ದರು. ಸಣ್ಣದೊಂದು ಕುಟೀರದಲ್ಲಿ ವಾಸವಿದ್ದವರು. ಸದಾ ಅಧ್ಯಯನ ಮತ್ತು ಧ್ಯಾನಮಗ್ನರು. ಒಂದು ರಾತ್ರಿ ಅವರು ಅಧ್ಯಯನದಲ್ಲಿದ್ದಾಗ ಕುಟೀರದೊಳಕ್ಕೆ ಒಬ್ಬ ಕಳ್ಳ ನುಗ್ಗಿದ. ಆತ ಕೈಯಲ್ಲಿದ್ದ ಕತ್ತಿಯಿಂದ ಗುರುಗಳ ಎದೆಗೆ ತಾಕಿಸಿ ‘ನಿಮ್ಮಲಿರೋ ಹಣವನ್ನೆಲ್ಲ ಕೊಟ್ಟುಬಿಡಿ. ಇಲ್ಲದಿದ್ದರೆ ನಿಮ್ಮನ್ನು ಕೊಂದು ಹಾಕುತ್ತೇನೆ’ ಎಂದು ಅಬ್ಬರಿಸಿದ. ಗುರುಗಳು ಪುಸ್ತಕದಿಂದ ತಲೆಯೆತ್ತಿ ನೋಡಲಿಲ್ಲ. ಶಾಂತವಾದ ದನಿಯಲ್ಲಿ ‘ತಮ್ಮಾ! ನಿನಗೆ ಕಾಣುವುದಿಲ್ಲವೇ? ನಾನು ಓದಿನಲ್ಲಿ ಮಗ್ನನಾಗಿದ್ದೇನೆ. ನಿನಗೆ ಬೇಕಿರುವುದು ಹಣವಲ್ಲವೇ? ಆ ಮೇಜಿನ ಮೇಲೆ ಹಣವಿದೆ. ಅದನ್ನು ತೆಗೆದುಕೊಂಡು ಹೋಗು. ನನ್ನ ಓದಿಗೆ ಭಂಗ ತರಬೇಡ’ ಎಂದರು. ಆಶ್ಚರ್ಯಗೊಂಡ ಕಳ್ಳ ಕತ್ತಿಯನ್ನು ಎತ್ತಿಟ್ಟುಕೊಂಡ. ಮೇಜಿನ ಮೇಲಿದ್ದ ನಾಣ್ಯಗಳನ್ನೆಲ್ಲಾ ಬಾಚಿಕೊಂಡ. ಆಗಲೂ ಗುರುಗಳು ತಲೆಯೆತ್ತದೆಯೇ ‘ಎಲ್ಲವನ್ನೂ ತೆಗೆದುಕೊಂಡು ಹೋಗಬೇಡಯ್ಯಾ. ನಾಳೆ ನನಗೆ ಕಂದಾಯ ಕಟ್ಟಬೇಕಿದೆ. ಅದಕ್ಕೆ ಹತ್ತು ನಾಣ್ಯಗಳು ಬೇಕು. ಅಷ್ಟನ್ನು ಅಲ್ಲಿಟ್ಟು ಉಳಿದುದನ್ನು ತೆಗೆದುಕೊಂಡು ಹೋಗು. ನಾನೇ ಅದನ್ನು ನಿನಗ