ದಿನಕ್ಕೊಂದು ಕಥೆ. 716
ದಿನಕ್ಕೊಂದು ಕಥೆ
ನಿಮ್ಮ ಬದುಕಿಗೊಂದು ಬೆಳಕು....
*ಉಪದೇಶಕ್ಕಿಂತ ಅನುಭವ ಮಿಗಿಲು*
ಒಂದು ಅನುಭವ ನೂರು ಉಪದೇಶಕ್ಕಿಂತ ಮಿಗಿಲು. ಯಾವುದೇ ಜ್ಞಾನ ಕೇವಲ ಜ್ಞಾನವಾಗಿಯಷ್ಟೇ ಉಳಿದರೆ ಪ್ರಯೋಜನವಿಲ್ಲ. ಅದು ಅನುಭವವಾಗಿ ಪರಿವರ್ತನೆ ಹೊಂದಬೇಕು. ಜ್ಞಾನ ಪಡೆಯುವುದರ ಮುಖ್ಯ ಉದ್ದೇಶ, ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಅನುಭವ ಪಡೆಯುವುದು.
ತಾಯಿಯೊಬ್ಬಳಿಗೆ ಸುಮಾರು ಒಂದೂವರೆ ವರ್ಷದ ಮಗುವಿತ್ತು. ಮಗು *ಎಲ್ಲಾದರೂ ಬಿದ್ದುಬಿಟ್ಟರೆ? ಕಾಲು ಜಾರಿದರೆ? ಮೈಕೈಗಳಿಗೆ ಗಾಯವಾಗಿಬಿಟ್ಟರೆ?* ಎಂಬುದಾಗಿ ಆಕೆ ಮಗುವಿನ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದಳು. ಆದರೆ ಮಗುವಿನ ಮನಸ್ಸಿನಲ್ಲಿ ಹಾಗಿಲ್ಲ; ತಾನು ಮನೆತುಂಬ ಓಡಾಡಬೇಕು, ಸಿಕ್ಕಿದ್ದರ ಜತೆ ಆಟವಾಡಬೇಕೆಂಬುದು ಅದರಾಸೆ. ಆದರೆ ತಾಯಿ ಅದಕ್ಕೆ ಅವಕಾಶ ನೀಡುತ್ತಿಲ್ಲ.
*‘ಮಗು, ಹುಷಾರಾಗಿರು. ದೇವರ ಮನೆಯಲ್ಲಿ ಉರಿಯುತ್ತಿರುವ ದೀಪವನ್ನು ಮುಟ್ಟಬೇಡ, ಸುಡುತ್ತದೆ’* ಎಂದು ತಾಯಿ ಮಗುವಿಗೆ ಹೇಳುತ್ತಾಳೆ. ಮಗುವಿಗಾದರೋ ಆ ನಂದಾದೀಪ ನಿತ್ಯಾಕರ್ಷಕ ವಸ್ತು. ಜತೆಗೆ, *‘ಅದೇನಿರಬಹುದು?’* ಎಂಬ ಕುತೂಹಲ ಬೇರೆ. ಇಷ್ಟಾಗಿಯೂ ಅಮ್ಮ ಅದನ್ನು ಮುಟ್ಟದಂತೆ ಅದೇಕೆ ತಡೆಯುತ್ತಾಳೆ ಎಂಬುದು ಮಗುವಿಗೆ ಅರ್ಥವಾಗುತ್ತಿಲ್ಲ. ದೀಪದ ಬಣ್ಣ, ಅದು ಅತ್ತಿಂದಿತ್ತ ಆಡುವುದನ್ನು ನೋಡಿದ ಮಗುವಿಗೆ ಅದನ್ನು ಮುಟ್ಟಬೇಕೆಂಬ ಆಸೆ ಹೆಚ್ಚಾಯಿತು, ಅದಕ್ಕಾಗಿ ಹೊಂಚುಹಾಕುತ್ತಿತ್ತು. ಅಮ್ಮ ಕೊಂಚ ನಿಮಿಷದ ಮಟ್ಟಿಗೆ ಆಚೆ ಹೋಗುವುದನ್ನೇ ಕಾದಿದ್ದು, ದೇವರ ಮನೆ ಪ್ರವೇಶಿಸಿ ನಂದಾದೀಪವನ್ನು ಮುಟ್ಟಿದ್ದೇ ತಡ ಕಿಟಾರನೆ ಕಿರುಚಿ ಜೋರಾಗಿ ಅಳತೊಡಗಿತು. ತರುವಾಯದಲ್ಲಿ ಮಗು- *‘ಇನ್ನು ಮುಂದೆ ಬೆಂಕಿಯನ್ನು ಮುಟ್ಟಬಾರದು, ಮುಟ್ಟಿದರೆ ಕೈಸುಡುತ್ತದೆ’* ಎಂಬ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತು.
ಸುಡುವುದು ಅಂದರೆ ಏನು ಎಂಬುದು ಮಗುವಿಗೆ ಅರ್ಥವಾಗಿದ್ದು, ಆ ದೀಪದಿಂದ ಸುಟ್ಟ ಅನುಭವವಾದ ಮೇಲೆಯೇ ವಿನಾ, ತಾಯಿ ಅದಕ್ಕೂ ಮುಂಚೆ ನೂರು ಸಲ ಉಪದೇಶ ಮಾಡಿದಾಗ ಅಲ್ಲ. ಉಪದೇಶ ಜ್ಞಾನಕ್ಕಿಂತ ಅನುಭವ ಜ್ಞಾನ ಬಹಳ ದೊಡ್ಡದು ಅಂತ ಹಿರಿಯರು ಹೇಳಿರುವುದು ಈ ಕಾರಣಕ್ಕೇ. ಹಾಗಾಗಿ, ಯಾವುದೇ ಜ್ಞಾನವನ್ನು ನಾವು ಪಡೆದುಕೊಂಡಾಗ, ಅದನ್ನು ಅನುಭವಪಥದಲ್ಲಿ ತಂದು, ಅದರ ಸತ್ಯಾಸತ್ಯತೆಗಳನ್ನು ವಿವೇಚನೆ ಮಾಡಬೇಕಾಗುತ್ತದೆ. ಅಂತಹ ವಿವೇಚನೆ ಮಾಡುವ ಕುತೂಹಲಾತ್ಮಕವಾದ ಬುದ್ಧಿ ನಮ್ಮದಾಗಿರಲಿ.
*ಡಾ. ಗಣಪತಿ ಹೆಗಡೆ* ಕೃಪೆ: ಸಣ್ಣ ಕಥೆ ವಾಟ್ಸ್ ಆಪ್ ಗ್ರೂಪ್.ಸಂಗ್ರಹ: ವೀರೇಶ್ ಅರಸಿಕೆರೆ.
Comments
Post a Comment