ದಿನಕ್ಕೊಂದು ಕಥೆ 746

*🌻ದಿನಕ್ಕೊಂದು ಕಥೆ🌻                                ಆದರ್ಶಮಯ ಬದುಕು…

ಹರಿದುಹೋದ ಉಡುಪು ಧರಿಸಿದ್ದ ಪುಟ್ಟ ಬಾಲಕನೊಬ್ಬ ಅಂಗಡಿಯ ಹೊರಗೆ ನಿಂತು ಅದರ ಷೋಕೇಸನ್ನೇ ನೋಡುತ್ತಿದ್ದ. ಇದನ್ನು ಗಮನಿಸಿದ ಹಿರಿಯರೊಬ್ಬರು, ‘ಏನು ನೋಡುತ್ತಿರುವೆ ಮಗೂ…?’ ಎಂದು ಪ್ರೀತಿಯಿಂದ ಕೇಳಿದರು. ‘ಆ ಸುಂದರ ಗೊಂಬೆಯನ್ನು…. ಅದಕ್ಕೆಷ್ಟು ಬೆಲೆ ಇರಬಹುದು ಎಂದು ಯೋಚಿಸುತ್ತಿರುವೆ’ ಎಂದ ಆ ಬಾಲಕ. ಹಿರಿಯರು ಕೂಡಲೆ ಆತನನ್ನು ಅಂಗಡಿಯೊಳಗೆ ಕರೆದುಕೊಂಡು ಹೋಗಿ ಗೊಂಬೆ ಕೊಡಿಸಿದರು. ಅದನ್ನು ಪಡೆದ ಬಾಲಕ, ಅದುವರೆಗೂ ಕೈಯಲ್ಲಿ ಬಚ್ಚಿಟ್ಟುಕೊಂಡಿದ್ದ, ಆಗಲೇ ಹರಿದು ಜೀರ್ಣವಾಗಿದ್ದ ಐದು ರೂಪಾಯಿ ನೋಟನ್ನು ಆ ಹಿರಿಯರಿಗೆ ಕೊಟ್ಟ. ಮಗುವಿನ ಬದ್ಧತೆ ಕಂಡು ಅವರ ಕಂಗಳಲ್ಲಿ ನೀರು ಜಿನುಗಿತು. ‘ಹಣ ಬೇಡ ಮಗು, ನೀನೇ ಇಟ್ಟುಕೋ, ಗೊಂಬೆಯ ಜತೆ ಆಡಿಕೋ’ ಎನ್ನುತ್ತ ಅವರು ಬಾಲಕನ ತಲೆ ನೇವರಿಸಿದಾಗ, ‘ತಾತಾ, ಈ ಗೊಂಬೆ ನನಗಲ್ಲ; ನಾಳೆ ನನ್ನ ತಂಗಿಯ ಹುಟ್ಟುಹಬ್ಬ. ಅವಳಿಗೆ ಕೊಡುತ್ತೇನೆ’ ಎಂದು ನುಡಿದ ಆ ಮುಗ್ಧಬಾಲಕ. ಆ ಪುಟ್ಟ ವಯಸ್ಸಿನಲ್ಲೇ ಅವನಲ್ಲಿ ಕೆನೆಗಟ್ಟಿರುವ ಪ್ರೀತಿ-ಮಮಕಾರ ಕಂಡು ಹಿರಿಯರ ಮನಸ್ಸು ಪ್ರಫುಲ್ಲಗೊಂಡಿತು. ಆತನ ಪುಟ್ಟಬೆರಳು ಹಿಡಿದು ರಸ್ತೆಯಲ್ಲಿ ಹೆಜ್ಜೆಹಾಕುತ್ತಿರುವಾಗ, ‘ನೀವು ದೇವರೇ?’ ಎಂದು ಅವರನ್ನು ಆ ಬಾಲಕ ಮುಗ್ಧವಾಗಿ ಪ್ರಶ್ನಿಸಿದ. ‘ಇಲ್ಲ ಮಗೂ… ನಾನು ದೇವರಲ್ಲ. ದೇವರ ಮಗ!’ ಎಂದುತ್ತರಿಸಿದರು ಹಿರಿಯರು.

ಒಬ್ಬರು ಮತ್ತೊಬ್ಬರಿಗೆ ಏನನ್ನೇ ಕೊಡಲಿ, ತೆಗೆದುಕೊಂಡವರಿಗಾಗುವ ಸಂತಸಕ್ಕಿಂತ ನೀಡಿದ್ದಕ್ಕೆ ಸಿಗುವ ಆನಂದಾನುಭೂತಿಯೇ ಹೆಚ್ಚು ಮತ್ತು ಅದು ತೂಕವುಳ್ಳದ್ದು ಕೂಡ. ದುಃಖದಲ್ಲಿರುವವರಿಗೆ ಹೇಳುವ ಸಾಂತ್ವನ, ಸೋತಾಗ ಆಡುವ ಧೈರ್ಯತುಂಬುವ ಮಾತು, ಸಂಕಷ್ಟದ ವೇಳೆ ಚಾಚುವ ಸ್ನೇಹಹಸ್ತ, ನಿರಾಶ್ರಿತರಿಗೆ ಸಿಗುವ ಅಭಯಹಸ್ತ…. ಇವೆಲ್ಲ ಮೇಲ್ನೋಟಕ್ಕೆ ನಗಣ್ಯ ಎನಿಸಿದರೂ ಸಾಕಷ್ಟು ಉತ್ತೇಜನ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡಬಲ್ಲವು. ನೊಂದಜೀವಿಗಳಿಗೆ ಸದ್ದಿಲ್ಲದೆ-ಸುದ್ದಿಯಿಲ್ಲದೆ ಮಮಕಾರದ ಮದ್ದು ನೀಡುವುದರಲ್ಲಿಯೇ ದೇವರಿದ್ದಾನೆ.

ಈ ಜಗದಲ್ಲಿ ಒಂದು ಜೀವಿ ಮತ್ತೊಂದಕ್ಕೆ ಆಧಾರ. ಒಂದನ್ನು ಬಿಟ್ಟು ಇನ್ನೊಂದು ಇಲ್ಲ, ಇರಬಾರದು ಕೂಡ. ಒತ್ತಾಸೆಯಿರದೆ ಸೊರಗುತ್ತಿರುವ ನಮ್ಮ ಸುತ್ತಮುತ್ತಲಿನವರ ಬದುಕೆಂಬ ಗಿಡಕ್ಕೆ ಉತ್ತೇಜನದ ನೀರೆರೆದು ಪ್ರೀತಿಯ ಹೂಗಳನ್ನು ಅರಳಿಸುವುದೇ ಸಾರ್ಥಕತೆ. ಇದು ನಮ್ಮ ಜೀವನ ಪ್ರೀತಿಗೆ, ಬದುಕನ್ನು ಸಾಗಿಸಬೇಕಾದ ರೀತಿಗೆ ಆದರ್ಶವೂ ಹೌದು. ಈ ಆದರ್ಶ ಪಾಠವನ್ನು ಕಲಿತು ನಾವಿಂದು ನಿಜಾರ್ಥದಲ್ಲಿ ದೇವರ ಮಕ್ಕಳಾಗಬೇಕಿದೆ.

ಕೃಪೆ:ಜಯಶ್ರೀ ಅಬ್ಬಿಗೇರಿ.ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ
ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097