ದಿನಕ್ಕೊಂದು ಕಥೆ. 749
*🌻ದಿನಕ್ಕೊಂದು ಕಥೆ🌻 ಬೊಂಬೇ ಹೇಳತೈತೆ! ಕಂಬ ಹೇಳತೈತೆ!*
ಬೊಂಬೆ ಏನು ಹೇಳತೈತೆ? ಕಂಬ ಏನು ಹೇಳತೈತೆ? ಇದನ್ನು ತಿಳಿದುಕೊಳ್ಳ ಬೇಕಾದರೆ ಇಲ್ಲಿರುವ ಕತೆಯನ್ನು ಓದಬೇಕು!
ನಮ್ಮ ನೆರೆ ರಾಷ್ಟ್ರವಾದ ನೇಪಾಳದ ರಾಜಧಾನಿಯ ಹೆಸರು. ಆ ಊರಿಗೆ ಕಠ್ಮಂಡುವೆಂಬ ಹೆಸರು ಬರಲು ಕಾರಣವೇನೆಂದರೆ ಬಹಳ ಹಿಂದೆ ಅಲ್ಲೊಂದು ದೇವಸ್ಥಾನವಿತ್ತಂತೆ. ಇಡೀ ದೇವಸ್ಥಾನ ಕಟ್ಟಿಗೆಯಲ್ಲಿ ಕಟ್ಟಲ್ಪಟ್ಟಿ ತ್ತಂತೆ. ಸಂಸ್ಕೃತದಲ್ಲಿ ಕಟ್ಟಿಗೆ ಯನ್ನು ’ಕಾಷ್ಟಾ’ ಎಂದು ಕರೆಯುತ್ತಾರಾದ್ದರಿಂದ ದೇವಸ್ಥಾನಕ್ಕೆ ’ಕಾಷ್ಟಮಂಡಪ’ ಎನ್ನುತ್ತಿದ್ದರಂತೆ. ಆ ದೇವಸ್ಥಾನವಿದ್ದ ಊರಿಗೂ ’ಕಾಷ್ಟಮಂಡಪ’ ಎಂಬ ಹೆಸರು ಬಂತು. ಕಾಲಕ್ರಮೇಣ ಜನರ ಬಾಯಲ್ಲಿ ಕಾಷ್ಟಮಂಡಪವೆಂಬುದು ’ಕಠ್ಮಂಡು’ ಎಂದಾಯಿತು!
ಈ ಕಾಷ್ಟಮಂಡಪ ದೇವಸ್ಥಾನದ ವಿಶೇಷವೇನೆಂದರೆ, ಇಡೀ ದೇವಸ್ಥಾನ ಅಂದರೆ ಮೂಲ ವಿಗ್ರಹದಿಂದ ಮೊದಲುಗೊಂಡು ಕಟ್ಟಡ, ಅದರ ಮೆಟ್ಟಿಲುಗಳೂ, ಗೋಪುರಗಳೂ ಕಟ್ಟಿಗೆಯಲ್ಲೇ ಮಾಡಲ್ಪಟ್ಟಿದ್ದವು. ಪೂಜಾವಿಗ್ರಹದ ಮುಂದಿದ್ದ ಬಲಿಗಂಬ ಕೂಡ ಕಟ್ಟಿಗೆಯಲ್ಲೇ ಮಾಡಲ್ಪಟ್ಟಿತ್ತು. ಅಲ್ಲಿನ ಜನರಿಗೆ ದೇವಸ್ಥಾನದ ಬಗ್ಗೆ ಬಹಳ ಭಯ-ಭಕ್ತಿಗಳಿದ್ದವು. ದೇವಸ್ಥಾನ ಹಗಲೆಲ್ಲ ಜನಜಂಗುಳಿಯಿಂದ ತುಂಬಿರುತ್ತಿತ್ತು. ಮಧ್ಯರಾತ್ರಿಯಲ್ಲಿ ಸಂಪೂರ್ಣ ಮೌನ ನೆಲೆಸಿದ ನಂತರ ಆ ಬಲಿಗಂಬ ಮತ್ತು ದೇವರ ವಿಗ್ರಹಗಳು ಪರಸ್ಪರ ಮಾತನಾಡಿಕೊಳ್ಳುತ್ತಿದ್ದವಂತೆ.
ಒಮ್ಮೊಮ್ಮೆ ಬಲಿಗಂಬ ನಾನು ಮತ್ತು ನೀನು ಇಬ್ಬರು ಒಂದೇ ಕಾಡಿನಲ್ಲಿ ಬೆಳೆದ ಮರಗಳಿಂದ ತಯಾರಿಸಲ್ಪಟ್ಟಿದ್ದೇವೆ. ಆದರೆ ನಾನು ಕೇವಲ ಬಲಿಗಂಬವಾಗಿ ನೆಡಲ್ಪಟ್ಟಿದ್ದೇನೆ. ನನ್ನ ಮೇಲೆ ಕುರಿಕೋಳಿಗಳನ್ನು ದಿನವೆಲ್ಲ ನನಗೆ ರಕ್ತದ ಅಭಿಷೇಕ. ಆದರೆ ವಿಗ್ರಹವಾದ ನಿನಗೆ ಹಾಲಿನ ಅಭಿಷೇಕ-ಹೂವಿನಲಂಕಾರ-ನೈವೇದ್ಯ-ಮಂಗಳಾರತಿ. ನಿನ್ನ ಅದೃಷ್ಟವೇ ಅದೃಷ್ಟ. ನನ್ನದು ದುರಾದೃಷ್ಟ ಎನ್ನುತ್ತಿತ್ತು. ದೇವರ ವಿಗ್ರಹವು ಈ ಮಾತುಗಳನ್ನಾಲಿಸಿ ನಸುನಕ್ಕು ಸುಮ್ಮನಾಗುತ್ತಿತ್ತು.
ಆದರೆ ಹತ್ತಾರು ಬಾರಿ ಇದೇ ಅದೃಷ್ಟ-ದುರಾದೃಷ್ಟದ ಮಾತುಗಳನ್ನು ಕೇಳಿ ಕೇಳಿ ದೇವರ ವಿಗ್ರಹದ ಕಟ್ಟಿಗೆಗೆ ಬೇಸರವಾಯಿತು. ಅದು ತಮ್ಮಾ! ನಾವಿಬ್ಬರೂ ಒಂದೇ ಕಾಡಿನಿಂದ ಬಂದ ಮರಗಳ ದಿಮ್ಮಿಗಳೆಂಬುದು ನಿಜ. ವಿಗ್ರಹವನ್ನು ಕೆತ್ತುವ ಶಿಲ್ಪಿ ಮೊದಲು ನಿನ್ನನ್ನೇ ಆಯ್ಕೆ ಮಾಡಿಕೊಂಡ. ಮೊದಲು ಮಾಡಿದ. ಆದರೆ ನಿನ್ನ ಮೈತುಂಬ ಗಂಟುಗಳಿದ್ದವು. ಶಿಲ್ಪಿಯ ಉಳಿಯ ಏಟು ಗಳನ್ನು ತಡೆದುಕೊಳ್ಳಲಾಗದೆ ನೀನು ಮೂರ್ನಾಲ್ಕು ಚೂರುಗಳಾಗಿ ಚಿಮ್ಮಿಹೋದೆ. ಆಗ ಶಿಲ್ಪಿ ನಿನ್ನನ್ನು ಪಕ್ಕಕ್ಕಿಟ್ಟು ನನ್ನನ್ನು ಕೆತ್ತಲಾರಂಭಿಸಿದ. ನನ್ನಲ್ಲೂ ಗಂಟುಗಳಿದ್ದವು. ಆದರೆ ನಾನು ಅವನ್ನು ಒಳಗೇ ಹುದುಗಿಸಿಟ್ಟುಕೊಂಡೆ.
ಶಿಲ್ಪಿಯ ಉಳಿಗಳ ಏಟಿಗೆ ನಾನು ಚೂರು-ಚೂರಾಗಲಿಲ್ಲ. ಏಟುಗಳ ನೋವನ್ನೆಲ್ಲ ಸಹಿಸಿಕೊಂಡೆ. ಕೊನೆಗೆ ವಿಗ್ರಹವಾಗಿ ರೂಪು ಗೊಂಡೆ. ಆಗಲೂ ನನ್ನ ಕಷ್ಟ ಮುಗಿಯಲಿಲ್ಲ. ಉಪ್ಪುಕಾಗದದಿಂದ ನನ್ನನ್ನುಜ್ಜಿ ನಯಗೊಳಿಸಲಾಯಿತು. ಆ ನೋವನ್ನೂ ನಾನು ಸಹಿಸಿಕೊಂಡೆ. ನನ್ನನ್ನು ಇಲ್ಲಿ ವಿಗ್ರಹವಾಗಿ ಪ್ರತಿಷ್ಠಾಪಿಸಲಾಯಿತು. ಅಲ್ಲಿಯೇ ನಿರುಪಯುಕ್ತವಾಗಿ ಬಿದ್ದಿದ್ದ ನಿನ್ನನ್ನು ಬಲಿ ಗಂಬವಾಗಿ ನೆಡಲಾಯಿತು. ನೀನೀಗ ಬಲಿಗಂಬ. ನಾನೀಗ ಪೂಜೆಯ ಬೊಂಬೆ. ಸಹಜವಾಗಿಯೇ ಪೂಜೆಯ ವಿಗ್ರಹಕ್ಕೆ ಎಲ್ಲ ರೀತಿಯ ಅಭಿಷೇಕ-ಅಲಂಕಾರ-ನೈವೇದ್ಯಗಳು ನಡೆಯುತ್ತವೆ. ಬಲಿಗಂಬವನ್ನು ಬಲಿ ಕಡಿಯಲು ಬಳಸಲಾಗುತ್ತದೆ. ಇದರಲ್ಲಿ ಅದೃಷ್ಟ-ದುರಾದೃಷ್ಟದ ಆಟ ಎಷ್ಟಿದೆಯೋ ಗೊತ್ತಿಲ್ಲ.
ಆದರೆ ಕೆತ್ತಲಾರಂಭಿಸಿದಾಗ ನೀನು ಗಂಟುಗಳನ್ನು ಹೊರತೋರ್ಪಡಿಸದೆ, ಉಳಿಯ ಏಟಿಗೆ ಚೂರುಚೂರಾಗದಿದ್ದರೆ ಬಹುಶಃ ನೀನೂ ವಿಗ್ರಹವಾಗುತ್ತಿದ್ದೆಯೇನೋ? ನಿನಗೂ ಪೂಜೆ ಸಲ್ಲಿಸುತ್ತಿದ್ದರೇನೋ? ಯಾರಿಗೆ ಗೊತ್ತು? ಎಂದಾಗ ಬಲಿಗಂಬ ಅರ್ಥ ಮಾಡಿಕೊಂಡಿತಂತೆ. ಅಂದಿನಿಂದ ಅದೃಷ್ಟ-ದುರಾದೃಷ್ಟವೆಂಬ ನಿಷ್ಠೂರದ ಮಾತುಗಳನ್ನಾಡುವುದನ್ನು ನಿಲ್ಲಿಸಿತಂತೆ.
ನಾವೂ ನಮ್ಮ ಬದುಕಿನಲ್ಲಿ ಗೌರವಾದರಗಳನ್ನು ಪಡೆಯುವ ಜನರನ್ನು ಕಂಡರೆ, ಅವರನ್ನು ಕಂಡು ಕರುಬಬೇಕಿಲ್ಲ. ಅದರ ಬದಲು ಗೌರವಾದರಗಳನ್ನು ಪಡೆಯುವ ಮುಂಚೆ ಅವರೂ ಎಷ್ಟು ಕಷ್ಟಪಟ್ಟಿರಬಹುದು. ಎಷ್ಟು ಪೆಟ್ಟುಗಳನ್ನು ತಿಂದಿರ ಬಹುದು ಎಂಬುದನ್ನು ಊಹಿಸಿಕೊಳ್ಳಬಹುದು! ಆಗ ನಾವೂ ಅವರ ಅದೃಷ್ಟ, ನಮ್ಮ ದುರಾದೃಷ್ಟದ ಬಗೆಗೆ ಮಾತುಗಳ ನ್ನಾಡುವುದಿಲ್ಲ ಅಲ್ಲವೇ?
ಕೃಪೆ:ವಿಶ್ವವಾಣಿ.
ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment