ದಿನಕ್ಕೊಂದು ಕಥೆ 784

*🌻ದಿನಕ್ಕೊಂದು ಕಥೆ🌻                  ಪವಾಡಗಳು ಮುಖ್ಯವಲ್ಲ*

ಧರ್ಮಕ್ಕೆ ಸಂಬಂಧಿಸಿದ ಕತೆ, ಕಾವ್ಯ, ಪುರಾಣಗಳಲ್ಲಿ ಜನಸಾಮಾನ್ಯರ ಆಸಕ್ತಿ, ಗಮನಗಳನ್ನು ಸೆಳೆಯಲೆಂದು ಕೆಲವೊಂದು ಅದ್ಭುತವಾದ, ಚಮತ್ಕಾರದ, ಪವಾಡದ ಪ್ರಸಂಗಗಳನ್ನು ಜೋಡಿಸುವುದಿದೆ. ಇದರ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳಲು ಅಸಮರ್ಥರಾದ ಕೆಲವು ಅಲ್ಪ ಜ್ಞಾನಿಗಳು ಧಾರ್ಮಿಕ ರಂಗದ ಸಾಧನೆ, ಸಿದ್ಧಿಗಳು ಕೇವಲ ಚಮತ್ಕಾರದ ಶಕ್ತಿ, ಪವಾಡಗಳ ಸಂಪಾದನೆ ಮಾತ್ರವೆಂದು ಭಾವಿಸುವುದಿದೆ. ಅಂಥವರ ಕಣ್ಣು ತೆರೆಯಿಸುವಂತಹ ಒಂದು ಪ್ರಸಂಗ ಇಲ್ಲಿದೆ.

ಸ್ವಾಮಿ ರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ರಂಗದ ಸಾಧನೆಯ ಮೂಲಕ ಇಡೀ ವಿಶ್ವದ ಗಮನವನ್ನು ಸೆಳೆದಿದ್ದರು. ಆದರೆ ಕೆಲವು ಸಂತರಿಗೆ ಈ ಕುರಿತು ಮತ್ಸರ ಉಂಟಾಗಿತ್ತು. ಅಂತಹ ಮತ್ಸರಿಗಳಲ್ಲಿ ಒಬ್ಬ ಯೋಗಿಯೂ ಇದ್ದನು. ಆತನು ಪರಮಹಂಸರ ಬಳಿ ಬಂದು ಹೇಳಿದ- ''ಮಹಾಶಯರೇ, ನೀವು ನನ್ನ ಮುಂದೆ ಒಂದು ಚಮತ್ಕಾರ ಮಾಡಿ ತೋರಿಸಿದರೆ ನಾನು ನಿಮ್ಮನ್ನು ಶ್ರೇಷ್ಠ ಪರಮಹಂಸರೆಂದು ಒಪ್ಪುತ್ತೇನೆ. ಹನುಮಂತನು ಒಂದೇ ಜಿಗಿತದಲ್ಲಿ ಸಮುದ್ರ ದಾಟಿದ್ದ. ನೀವು ಅಂತಹುದೇ ಚಮತ್ಕಾರ ಮಾಡಿ ತೋರಿಸಿರಿ. ನೀರಿನ ಮೇಲೆ ನಡೆಯಿರಿ''.

ಮುಗುಳುನಗುತ್ತಾ ಪರಮಹಂಸರು ನುಡಿದರು- ''ನಿನಗೆ ತಪ್ಪು ಕಲ್ಪನೆ ಉಂಟಾಗಿದೆ. ನಾನು ಅಂತಹ ಚಮತ್ಕಾರ ಮಾಡಲಾರೆನು. ನೀರಿನ ಮೇಲೆ ನಡೆಯಲು ಸಾಧ್ಯವಿಲ್ಲ''. ಆಗ ಯೋಗಿಯು ಸಿಟ್ಟಾಗಿ ಗರ್ಜಿಸಿದ- ''ನಿಮ್ಮಲ್ಲಿ ಅಂತಹ ಚಮತ್ಕಾರಿಕ ಶಕ್ತಿ ಇದೆ ಎಂದು ನಂಬಿ ಕಳೆದ ಹದಿನೆಂಟು ವರ್ಷಗಳಿಂದ ನಿಮ್ಮ ಸೇವೆ ಮಾಡಿದ್ದು ವ್ಯರ್ಥವಾಯಿತು. ಆದರೂ ನಾನು ನದಿಯ ನೀರಿನ ಮೇಲೆ ನಡೆದು ದಾಟಬಲ್ಲೆ''.

ಇದನ್ನು ಕೇಳಿ ಮುಗುಳುನಗುತ್ತಾ ಪರಮಹಂಸರು ನುಡಿದರು- ''ಇದೆಂತಹ ಚಮತ್ಕಾರ? ದೋಣಿ ನಡೆಸುವ ನಾವಿಕನಿಗೆ ಎರಡು ರೂ. ನೀಡಿದರೆ ಆತ ಸಲೀಸಾಗಿ ನದಿ ದಾಟಿಸಬಲ್ಲ. ನಿನ್ನ ಅದ್ಭುತ ಚಮತ್ಕಾರದ ಬೆಲೆ ಕೇವಲ ಎರಡು ರೂಪಾಯಿ! ಇಂತಹ ಚಮತ್ಕಾರ- ಸಿದ್ಧಿಗಳ ಬಗ್ಗೆ ಅಹಂಕಾರ ಬೇಡ. ಭಗವಂತನನ್ನು ಒಲಿಸುವ ಭಕ್ತಿ- ಆರಾಧನೆ ಮುಖ್ಯ,'' ಎಂದರು. ಇದನ್ನು ಕೇಳಿ ಯೋಗಿಗೆ ಸಿಡಿಲು ಬಡಿದಂತಾಯಿತು. ಹದಿನೆಂಟು ವರ್ಷಗಳ ಕಾಲ ಆತ ಸಾಧನೆ ಮಾಡಿ ಪಡೆದ ಸಿದ್ಧಿಯ ಮೌಲ್ಯ ಕೇವಲ ಎರಡು ರೂಪಾಯಿ ಎಂದು ಅರ್ಥವಾದಾಗ ಆತನಿಗೆ ತಲೆ ತಗ್ಗಿಸುವಂತಾಯಿತು. ಯೋಗಿಯು ತಲೆ ಬಾಗಿ ''ನಿಜ ಮಹಾಶಯರೇ, ನನ್ನನ್ನು ಮನ್ನಿಸಿರಿ,'' ಎಂದು ನಮಸ್ಕರಿಸಿ ಹೊರಟು ಹೋದ.

ಇಲ್ಲಿ ಇಡೀ ಪ್ರಪಂಚಕ್ಕೆ ಸೂಕ್ತ ಮಾರ್ಗದರ್ಶನವಿದೆ. ಪ್ರಪಂಚವನ್ನು ಚಮತ್ಕಾರ, ಜಾದೂ, ಮಂತ್ರಗಳಿಂದ ಗೆಲ್ಲಲು ಸಾಧ್ಯವಿಲ್ಲ. ಪರಿಶುದ್ಧ ಅಂತಃಕರಣದಿಂದ ಮಾಡುವ ಧ್ಯಾನ, ಭಕ್ತಿ, ಸಾಧನೆಗಳಿಂದಲೇ ನಾವು ಆತ್ಮೋದ್ಧಾರದ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ. ಸಿದ್ಧಪುರುಷರು ಕೆಲವೊಮ್ಮೆ ಪವಾಡಗಳನ್ನು ಮಾಡುವುದಿದೆ. ಅದು ಭಕ್ತರನ್ನು ಅಧ್ಯಾತ್ಮದ ಮಾರ್ಗಕ್ಕೆ ಸೆಳೆಯುವ ಸನ್ನೆಗೋಲುಗಳಷ್ಟೇ. ಅದೇ ಅಂತಿಮ ಗುರಿಯಲ್ಲ. ಅವುಗಳಿಂದ ಯಾವ ಅಧ್ಯಾತ್ಮಿಕ ಸಾಧನೆಯೂ ಸಾಧ್ಯವಿಲ್ಲ. ನಿಜವಾದ ಯೋಗಿಗಳು ಈ ಚಮತ್ಕಾರದ ಸಿದ್ಧಿಗಳನ್ನು ದೂರ ಇಡುತ್ತಾರೆ. ಪರಮಹಂಸ ಹಂತ ತಲುಪಿದ ಸಿದ್ಧರನ್ನು ಯೋಗಸಿದ್ಧಿಗಳೇ ಹುಡುಕಿಕೊಂಡು ಬರುತ್ತವೆ.

ಕೃಪೆ: ವೀರೇಂದ್ರ ಹೆಗ್ಗಡೆಯವರು.                                 ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059