ದಿನಕ್ಕೊಂದು ಕಥೆ 785

*🌻ದಿನಕ್ಕೊಂದು ಕಥೆ🌻                               ಷೋರೂಮ್ ಮಾಲೀಕನಾದ ಗ್ಯಾರೇಜ್ ಸೀನ*

ಈತನ ಹೆಸರು ಶ್ರೀನಿವಾಸ್ ರಾವ್ ಜಾಧವ್. ಆದರೆ ಅಷ್ಟುದ್ದ ಹೆಸರು ಹೇಳಿದರೆ, ಬಹುಶಃ ಯಾರಿಗೂ ಈತನ ಪರಿಚಯ ಸಿಗುವುದಿಲ್ಲ. ಅದೇ ‘ಗ್ಯಾರೇಜ್ ಸೀನ’ ಎಂದರೆ ನಮ್ಮ ಏರಿಯಾದಲ್ಲೆಲ್ಲ ಚಿರಪರಿಚಿತ. ಏಕೆಂದರೆ, ಮೈಸೂರಿನ ಸಿದ್ಧಾರ್ಥ ಬಡಾವಣೆಯ ಬಹುತೇಕ ಎಲ್ಲರ ಮನೆಯಲ್ಲೂ ದ್ವಿಚಕ್ರ ವಾಹನ ಇದ್ದೇ ಇರುತ್ತದೆ. ಕಳೆದ 30 ವರ್ಷಗಳಲ್ಲಿ ಅಂಥ ವಾಹನಗಳು ಯಾವ ಸಣ್ಣ ದೊಡ್ಡ ತೊಂದರೆ ಅನುಭವಿಸಿದ್ದರೂ, ಶೇ. 90 ಪ್ರಕರಣಗಳಲ್ಲಿ ಅದನ್ನು ಸರಿ ಮಾಡಿಕೊಟ್ಟಿರಬಹುದಾದ ವ್ಯಕ್ತಿ ನಮ್ಮ ಗ್ಯಾರೇಜ್ ಸೀನ.

ಸೀನ ನನಗೆ ಪರಿಚಯವಾದದ್ದು ಕ್ರಿಕೆಟ್ ಮೈದಾನದಲ್ಲಿ. ನಾವವನನ್ನು ಹತ್ತು ಬಾರಿ ಆಡಲು ಕರೆದರೆ, ಅವನು ನಾಲ್ಕೈದು ಬಾರಿ ಮಾತ್ರ ಬರುತ್ತಿದ್ದ. ಏಕೆಂದರೆ, ನಾವೆಲ್ಲ ಪೆನ್ನು ಹಿಡಿಯಲು ಕಲಿಯುತ್ತಿದ್ದ ವಯಸ್ಸಿಗಾಗಲೇ ಸೀನ ಸ್ಪ್ಯಾನರ್ ಹಿಡಿದಿದ್ದ. ನಾವೆಲ್ಲರೂ ಕಾಲೇಜು ಮೆಟ್ಟಿಲೇರುವ ಹೊತ್ತಿಗೆ ಸೀನ ಪರಿಣತ ಟೂವೀಲರ್ ಮೆಕ್ಯಾನಿಕ್ ಆಗಿ ಹೆಸರು ಸಂಪಾದಿಸಿದ್ದ. ಕಾಲೇಜು ಮೆಟ್ಟಿಲನ್ನು ಅರ್ಧ ಮಾತ್ರವೇ ಏರಿದ್ದರೂ, ಸನ್ನಡತೆ-ಕಾರ್ಯಕೌಶಲದಿಂದ ಎಲ್ಲರ ಗೌರವ, ಪ್ರೀತಿ ಸಂಪಾದಿಸಿದ.

ನಾನು ನನ್ನದೇ ವೃತ್ತಿಪಯಣದಲ್ಲಿ ಬಿಜಿಯಾಗಿದ್ದ ಕಳೆದೆರಡು ದಶಕಗಳಲ್ಲಿ ಸೀನನನ್ನು ಭೇಟಿ ಮಾಡಿದ್ದೆನಾದರೂ ದೀರ್ಘವಾದ ಸಂಭಾಷಣೆ ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ನಾನು ಮೈಸೂರಿಗೆ ಮರಳಿದ ಹೊಸದರಲ್ಲಿ ಮದುವೆಯೊಂದರಲ್ಲಿ ಸೀನ ಅಚಾನಕ್ ಸಿಕ್ಕ. ಅದೇ ನಯ-ವಿನಯದ ಸೀನನೊಡನೆ ಉಭಯ ಕುಶಲೋಪರಿ ಮಾತನಾಡುತ್ತಿರುವಾಗ ಜತೆಯಲ್ಲಿದ್ದ ಸ್ನೇಹಿತರು ನನ್ನನ್ನು ಕೇಳಿದರು- ‘ನಿನಗೆ ಸೀನನ ವಿಷಯ ಗೊತ್ತಿಲ್ಲ ಅಂತ ಕಾಣುತ್ತೆ! ಇವನೀಗ ಬರೀ ಮೆಕ್ಯಾನಿಕ್ ಅಲ್ಲ, ಟೂವೀಲರ್ ಷೋರೂಮ್ ಒಂದರ ಒಡೆಯ. ಸಾಹುಕಾರ ಸೀನ’. ಸೀನ ಷೋರೂಮ್ ಒಡೆಯನೇ? ‘ಹೌದೇನೋ? ಅಷ್ಟು ಹೊತ್ತಿನಿಂದ ಮಾತನಾಡುತ್ತಿದ್ದರೂ ಏಕೆ ಹೇಳಲಿಲ್ಲ?’ ಎಂದು ಕೇಳಿದೆ. ‘ಅಯ್ಯೋ ಅದೇನೂ ದೊಡ್ಡ ವಿಷಯವಲ್ಲ. ಎಲ್ಲ ದೇವರು ಕೊಟ್ಟದ್ದು…’ ಎಂದು ಅರೆನಾಚಿಕೆಯಲ್ಲಿ ವಿಷಯವನ್ನು ಮುಂದೆ ಪ್ರಸ್ತಾಪಿಸದೆ ಜಾರಿಕೊಂಡ. ಇವನ ಕತೆಯನ್ನು ಪೂರ್ತಿಯಾಗಿ ತಿಳಿದುಕೊಳ್ಳಬೇಕೆಂದು ನಾನೂ ಪಟ್ಟುಹಿಡಿದೆ…

ಸೀನನ ಕತೆ ತಿಳಿದುಕೊಳ್ಳುವ ಮೊದಲು ಅಷ್ಟೇ ಕುತೂಹಲಕರವಾದ ಅವರಪ್ಪನ ಕತೆ ಕೇಳಿ.

ಎಂ. ಸುಬ್ಬರಾವ್, ಮೂಲತಃ ಮಂಡ್ಯದ ಕಾಸವಾಡಿಯವರು. ಒಮ್ಮೆ ಮೈಸೂರಿಗೆ ದಸರಾ ವೈಭವ ನೋಡಲು ಬಂದರು. ಆಗ ದಸರಾ ನೋಡಲು ಬಂದವರಿಗೆ ಮೈಸೂರಿನ ಅನೇಕ ಜನರ ಮನೆಗಳಲ್ಲಿ ಉಚಿತವಾಗಿ ಒಳ್ಳೆಯ ಊಟ ದೊರೆಯುತ್ತಿತ್ತಂತೆ. ಅದರ ರುಚಿ ಕಂಡ ಸುಬ್ಬರಾವ್ ಊರಿಗೆ ಹಿಂದಿರುಗದೆ ಮೈಸೂರಿನಲ್ಲಿಯೇ ಉಳಿದುಬಿಡಲು ನಿರ್ಧರಿಸಿದರು! ಶಾಶ್ವತವಾಗಿ ಮೈಸೂರಿಗರಾಗಿಬಿಟ್ಟರು.

ಹೊಟ್ಟೆಪಾಡಿಗಾಗಿ ಮೊದಲು ಎರಡು ವರ್ಷ ಪೇಂಟಿಂಗ್ ಕೆಲಸ ಮಾಡಿದರು. ನಂತರ, ಆಗಿನ ಪ್ರಸಿದ್ಧ ಜಾವಾ ಷೋರೂಮ್ ಎಸ್​ಸಿವಿಡಿಎಸ್​ಗೆ ಸೇರಿ ಅಲ್ಲಿ 3 ವರ್ಷ ಕೆಲಸ ಕಲಿತ ಬಳಿಕ ಸ್ವಂತ ಗ್ಯಾರೇಜ್ ಸ್ಥಾಪಿಸಲು ಮುಂದಾದರು. 1966ರಲ್ಲಿ ಸ್ಥಾಪನೆಯಾದ ಜಾವಾ ಮೆಕ್ಯಾನಿಕ್ ಸುಬ್ಬರಾವ್ ಅವರ ಗ್ಯಾರೇಜ್ ಇಡೀ ಮೈಸೂರಿಗೇ ಎರಡನೆಯ ಗ್ಯಾರೇಜ್! ಈಗದನ್ನು ಅವರ ಇಬ್ಬರು ಪುತ್ರರು (ನಮ್ಮ ಸೀನನ ಅಣ್ಣಂದಿರು) ನಡೆಸಿಕೊಂಡು ಹೋಗುತ್ತಿದ್ದಾರೆ.

ಇಂಥ ಸುಬ್ಬರಾವ್ ಮೈಸೂರಿನ ಸಿದ್ಧಾರ್ಥ ಬಡಾವಣೆಯಲ್ಲಿ ಮನೆ ಕೊಂಡರು. ಮೆಕ್ಯಾನಿಕ್ ಮನೆ ಎಂದು ಗೊತ್ತಾಗುತ್ತಲೇ ಜನರು ಸಣ್ಣ ಪುಟ್ಟ ರಿಪೇರಿ ಮಾಡಿಸಿಕೊಳ್ಳಲು ಮನೆಯ ಬಳಿ ಬರುತ್ತಿದ್ದರು. ಅವರಿಗೆ ಇಲ್ಲ ಎನ್ನಲಾಗದೆ ಅಪ್ಪ-ಮಕ್ಕಳು ರಿಪೇರಿ ಮಾಡಿ ಕಳುಹಿಸುತ್ತಿದ್ದರು. ಕೊನೆಗೆ ಮನೆಯ ಮುಂದೇ ಒಂದು ಸಣ್ಣ ಗ್ಯಾರೇಜ್ ತೆರೆಯುವಷ್ಟು, ಈ ರಿಪೇರಿಗೆ ಬರುವವರ ಸಂಖ್ಯೆ ಏರಿತು. ಮೊದಲಿಗೆ ಸೀನನ ಅಣ್ಣ ಅದನ್ನು ನೋಡಿಕೊಳ್ಳುತ್ತಿದ್ದರು. ನಂತರ ಅವರ ಮೂಲ ಗ್ಯಾರೇಜ್ ನೋಡಿಕೊಳ್ಳಲು ಈ ಮನೆ-ಗ್ಯಾರೇಜ್ ಬಿಟ್ಟಾಗ, ಕೆಲಸಕ್ಕೆ ಬೇರೆಯವರನ್ನು ಇಟ್ಟುಕೊಳ್ಳಲಾಯಿತು. ಕೆಲಸ ಕಲಿತ ಹುಡುಗರು ಸೀನನ ತಂದೆಯ ಗ್ಯಾರೇಜ್ ಬಿಟ್ಟು ತಮ್ಮದೇ ಗ್ಯಾರೇಜ್​ಗಳನ್ನು ತೆರೆಯಲು ಆರಂಭಿಸಿದರು! ಇದನ್ನು ಕಂಡ ಚಿಕ್ಕಹುಡುಗ ಸೀನ, ತಮ್ಮ ಗ್ಯಾರೇಜಿನಲ್ಲಿ ಕೆಲಸ ಮಾಡಿ ಈಗ ಸ್ವಂತ ಮಾಡುತ್ತಿದ್ದ ಒಬ್ಬರನ್ನು ‘ಏಕೆ ನಮ್ಮ ಗ್ಯಾರೇಜ್ ಬಿಟ್ಟು ನಮ್ಮ ಜತೆಗೇ ಸ್ಪರ್ಧೆಗಿಳಿದಿದ್ದೀರಿ?’ ಎಂದು ಕೇಳಿದಾಗ, ಅವನ ಕೆನ್ನೆ ತಟ್ಟಿ ‘ತೂ ಅಭಿ ಬಚ್ಚಾ ಹೈ…’ ಎಂದು ಉತ್ತರಿಸಲೂ ನಿರಾಕರಿಸಿದರಂತೆ.

ಇದು ಸೀನನ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರಿತು. ನನಗೆ ಸಮರ್ಪಕ ಉತ್ತರವನ್ನೂ ನೀಡದಷ್ಟು ನಾನಿನ್ನೂ ‘ಬಚ್ಚಾ’ನಾ? ಸರಿ ತಾನೇ ತಂದೆಯ ಗ್ಯಾರೇಜಿನಲ್ಲಿ ಕೆಲಸ ಮಾಡಲು ಆರಂಭಿಸಿದ. ನಿತ್ಯವೂ ಆರು ಗಂಟೆಗೆ ಎದ್ದು ಶಾಲೆ ಶುರುವಾಗುವವರೆಗೆ ಅಪ್ಪನ ಉಸ್ತುವಾರಿಯಲ್ಲಿ ವಾಹನಗಳ ರಿಪೇರಿ. ಕಷ್ಟಪಟ್ಟು ಮುಂದೆ ಬಂದಿದ್ದ ಅಪ್ಪನಾದರೋ ಶಿಸ್ತಿನ ಸಿಪಾಯಿ. ಅವರು ಸೀನನಿಗೆ ವಾಹನಗಳ ರಿಪೇರಿ ಕಲಿಸುವ ಜತೆಜತೆಗೇ ಜೀವನಪಾಠವಾಗುವಂಥ ಕೆಲವು ಟಾರ್ಗೆಟ್​ಗಳನ್ನೂ ಕೊಟ್ಟಿದ್ದರು. ಅಪ್ಪನ ಅಂದಿನ ಪಾಠಗಳನ್ನು ನೆನೆಯುವ ಸೀನ, ಅವರ ಮಾತುಗಳಲ್ಲಿಯೇ ಅದನ್ನು ಹೇಳುತ್ತಾನೆ-

ಮೊದಲು ಗಾಡಿ ಒರೆಸುವುದನ್ನು ಕಲಿ. ಯಾವ ಚಿಕ್ಕ ಭಾಗವನ್ನೂ ಬಿಡದೆ ಒರೆಸು. ಅದರಿಂದ ಅದರ ವಿನ್ಯಾಸ ಮತ್ತು ಸಣ್ಣ-ದೊಡ್ಡ ಭಾಗಗಳ ಪರಿಚಯವಾಗುತ್ತದೆ.  ಬಿಡುವಿನ ವೇಳೆ ವಾಹನದ/ಎಂಜಿನ್​ನ ಭಾಗಗಳನ್ನು ಬಿಚ್ಚಿ, ಒಂದು ಸ್ಕೂ› ಕೂಡ ಆಚೀಚೆ ಆಗದಂತೆ ಮರುಜೋಡಣೆ ಮಾಡಬೇಕು.ಸುಮ್ಮನೆ ಕೆಲಸ ಮಾಡುವುದಲ್ಲ. ಉದ್ದೇಶ ಸ್ಪಷ್ಟವಾಗಿರಬೇಕು. ನಿತ್ಯವೂ ಶಾಲೆಗೆ ಹೋಗುವ ಮೊದಲು ಕನಿಷ್ಠ 500 ರೂಪಾಯಿಯಷ್ಟು ಸಂಪಾದನೆ ಆಗಿರಬೇಕು. ತಿಂಗಳಿಗೆ 5000 ರೂಪಾಯಿ ಮನೆಗೆ ಕೊಡಬೇಕು (25 ವರ್ಷಗಳ ಹಿಂದೆ, ಅದು ಬಹುದೊಡ್ಡ ಮೊತ್ತ).

ಈ ಎಲ್ಲ ಕಟ್ಟುಪಾಡುಗಳ ನಡುವೆಯೇ ಸೀನ ಓದನ್ನೂ ಕೆಲಸವನ್ನೂ ಸಮತೋಲನದಲ್ಲಿಡಲು ಯತ್ನಿಸಿದ. ಕೆಲಸದ ಒತ್ತಡ ಅತಿಯಾದಾಗ, ಪಿಯುಸಿ ಮುಗಿಸದೆಯೇ ಕಾಲೇಜು ತ್ಯಜಿಸಿ ಶಾಶ್ವತವಾಗಿ ವಾಹನಗಳ ಲೋಕಕ್ಕೆ ಧುಮುಕಿದ.

ಇಲ್ಲಿಂದ ಮುಂದಕ್ಕೆ ಸೀನನನ್ನು ಕೊಂಡೊಯ್ದದ್ದು ಕೆಲಸದ ಬಗೆಗಿನ ಅವನ ಅಪರಿಮಿತವಾದ ಶ್ರದ್ಧೆ ಮತ್ತು ಗ್ರಾಹಕರ ಬಗೆಗಿನ ಬದ್ಧತೆ. ಸೀನ, ಎಲ್ಲರನ್ನೂ ಮೀರಿಸುವ ಎಕ್ಸ್​ಪರ್ಟ್ ಮೆಕ್ಯಾನಿಕ್ ಆಗಲು ನಿರ್ಧರಿಸಿದ. ಶಾಲಾ ಪುಸ್ತಕಗಳನ್ನು ಎಂದೂ ಓದಿರದಷ್ಟು ಶಿಸ್ತು-ಶ್ರದ್ಧೆಯಿಂದ ಹತ್ತಾರು ದ್ವಿಚಕ್ರ ವಾಹನಗಳ ಮ್ಯಾನ್ಯುಯಲ್​ಗಳನ್ನು ಓದಿದ. ಸ್ವಲ್ಪ ಬಿಡುವು ಸಿಕ್ಕರೂ ಎಂಜಿನ್​ಗಳನ್ನು ಬಿಡಿಬಿಡಿಯಾಗಿ ಬಿಚ್ಚಿ ಮರುಜೋಡಿಸುವುದನ್ನೇ ಮನರಂಜನೆಯಾಗಿಸಿಕೊಂಡ. ಸ್ವಂತದ ಕಲಿಕೆ ಸಾಲದೆನಿಸಿದಾಗ ಗುರುವನ್ನು ಹುಡುಕಿಕೊಂಡ. ಬೆಂಗಳೂರಿನ ಚೆಕ್​ಪಾಯಿಂಟ್ ಜನಾರ್ಧನ್ ಬಾಬು ಅವರ ಬಳಿ ಪ್ರತಿ ಭಾನುವಾರ ಯಾವುದೇ ಸಂಭಾವನೆಯಿಲ್ಲದೆ ಕೆಲಸ ಮಾಡುತ್ತಿದ್ದ. ವಾರವೆಲ್ಲ ತನ್ನ ಗ್ಯಾರೇಜ್​ನಲ್ಲಿ ಕೆಲಸ. ಉಳಿದೊಂದು ದಿನ, ಬೆಂಗಳೂರಿನ ಬಾಬು ಅವರ ಗ್ಯಾರೇಜ್​ನಲ್ಲಿ, ಕೆಲಸ ಮಾಡುತ್ತ ಕಲಿಯುವ ಪರೋಕ್ಷ ತರಬೇತಿ. ಹೀಗೆ ವರ್ಷಗಟ್ಟಲೆ ಪರಿಶ್ರಮ ಪಟ್ಟ, ಪರಿಣತನಾದ. ದ್ವಿಚಕ್ರವಾಹನಗಳ ರಿಪೇರಿ, ಅದರಲ್ಲೂ ಎಂಜಿನ್ ಟ್ಯೂನ್ ಮಾಡುವುದರಲ್ಲಿ ಅಪ್ರತಿಮನಾದ. ಬೇರೆಯವರು ಮಾಡುತ್ತಿದ್ದ ರಿಪೇರಿಗಳಿಗೂ ಮೀರಿದ ಪ್ರಯೋಗಗಳಿಗೂ ಮುಂದಾದ. 100 ಸಿಸಿಯನ್ನು 110ಕ್ಕೆ ಏರಿಸುವುದು, ಹೆಚ್ಚುವರಿ ಗೇರ್ ಜೋಡಣೆ ಮಾಡುವುದು- ಇವೆಲ್ಲವೂ ಉದಾಹರಣೆಗಳು ಮಾತ್ರ. ಅಂತೂ ವಾಹನಗಳೊಡನೆ ಸ್ನೇಹಸಂಬಂಧ ಬೆಳೆಸಿಕೊಂಡ. ಅವನು ಹೇಳಿದಂತೆ ಅವು ಕೇಳುತ್ತಿದ್ದವು!

ಅವನ ಪರಿಣತಿಗೆ ತಕ್ಕ ಮನ್ನಣೆ, ಹಣ ದೊರೆಯಿತು. ಸೀನನ ಕೈಯಲ್ಲಿ ಗಾಡಿ ರಿಪೇರಿ ಮಾಡಿಸಿಕೊಳ್ಳಲು ಬೇರೆ ಊರುಗಳಿಂದೆಲ್ಲ ಜನ ಬರುತ್ತಿದ್ದರು. ಮನೆಮುಂದಿನ ಸಣ್ಣ ಗ್ಯಾರೇಜ್ ಒಂದು ದೊಡ್ಡ ಸರ್ವಿಸ್ ಸೆಂಟರ್​ನ ಸ್ವರೂಪ ಪಡೆಯಿತು.

ಈ ಯಶಸ್ಸು ಸೀನನಲ್ಲಿ ಮತ್ತೊಂದು ಸ್ಪೂರ್ತಿಕಿಡಿಯನ್ನು ಉದ್ದೀಪಿಸಿತು. ಆತ ತನ್ನದೇ ಷೋರೂಮ್​ಆಥರೈಸ್ಡ್ ಸರ್ವೀಸ್ ಸೆಂಟರ್ ಮಾಡುವ ಕನಸು ಕಂಡ. ಇದನ್ನು ಸ್ನೇಹಿತರಾದ ಗೋವಿಂದ ರಾಜ್​ ಮತ್ತು ಸುಚೀಂದ್ರರಲ್ಲಿ ಹಂಚಿಕೊಂಡಾಗ, ಅವರಿಬ್ಬರೂ ಸೀನನಿಗೆ ಬೆನ್ನೆಲುಬಾಗಿ ನಿಂತರು. ಅವನ ಪರವಾಗಿ ಅನೇಕ ದ್ವಿಚಕ್ರ ವಾಹನಗಳ ಉತ್ಪಾದಕರು/ಬ್ರಾ್ಯಂಡ್​ಗಳ ಬಳಿ ಅರ್ಜಿ ಸಲ್ಲಿಸಿದರು. ಹಣಕಾಸು ಸಹಾಯವನ್ನೂ ಮಾಡಿ ಸಲಹಿದರು.

ಹೀಗೆ ಸಲ್ಲಿಸಲಾಗಿದ್ದ ಅರ್ಜಿಯೊಂದು ಸಾಕಾರರೂಪ ಪಡೆಯುವ ಮುನ್ನ, ಪ್ರಖ್ಯಾತ ದ್ವಿಚಕ್ರ ವಾಹನ ಬ್ರಾ್ಯಂಡ್​ನ ನಿರ್ವಾಹಕರೊಬ್ಬರು ಒಮ್ಮೆ ಇವನ ಗ್ಯಾರೇಜ್ ಬಳಿ ಬಂದರು. ಕಾರ್ಯಮಗ್ನನಾಗಿದ್ದ ಸೀನ, ಅವರನ್ನು ಗ್ರಾಹಕರೆಂದು ತಿಳಿದು ಸ್ವಲ್ಪ ಹೊತ್ತು ಕುಳಿತಿರಲು ವಿನಂತಿಸಿದ. ಹಾಗೆ ದೂರದಲ್ಲಿ ಕುಳಿತು ನೋಡುತ್ತಿದ್ದ ನಿರ್ವಾಹಕರು ಸೀನನ ಏಕಾಗ್ರತೆಗೆ ಮಾರುಹೋದರು. ಆದರೆ ಅವರ ಮನಗೆದ್ದದ್ದು ಎರಡು ವಿಷಯಗಳು. ಮೊದಲನೆಯದು ಸೀನನ ಶಿಸ್ತು. ಉದಾಹರಣೆಗೆ, ಇತರ ಗ್ಯಾರೇಜ್​ನವರಂತೆ ಸೀನ, ಭಾಗಗಳಿರುತ್ತಿದ್ದ ಪ್ಲಾಸ್ಟಿಕ್ ಕವರ್​ಗಳನ್ನು ಎಂದಿಗೂ ಹಲ್ಲಿನಲ್ಲಿ ಕಚ್ಚಿ ಹರಿಯುತ್ತಿರಲಿಲ್ಲ. ಬದಲಿಗೆ ಬ್ಲೇಡ್ ಉಪಯೋಗಿಸುತ್ತಿದ್ದ. ಏಕೆಂದು ಕೇಳಿದಾಗ ‘ಅದರಲ್ಲಿ ಕೆಮಿಕಲ್ ಇರುತ್ತದೆ. ನಾನು ಹಲ್ಲಲ್ಲಿ ಕಚ್ಚಿದರೆ, ನನ್ನ ಮಿಕ್ಕ ಕೆಲಸಗಾರರೂ ಹಾಗೇ ಮಾಡುತ್ತಾರೆ. ಅದರಿಂದ ಅವರಿಗೆ ಹಾನಿಯಾಗಬಹುದು’ ಎಂದ. ನಿರ್ವಾಹಕರು ತಲೆದೂಗಿದ್ದರು.

ಅವರ ಮನಗೆದ್ದ ಎರಡನೆಯ ವಿಷಯ, ಟ್ಯೂನಿಂಗ್ ಬಗ್ಗೆ ಸೀನನಿಗಿದ್ದ ಪರಿಣತಿ ಮತ್ತು ಪ್ರೀತಿಯ ಧೋರಣೆ. ಟ್ಯೂನಿಂಗ್ ಮಾಡುತ್ತಿದ್ದ ಸೀನನನ್ನು ಅವರು ಕೇಳಿದರು ‘ಟ್ಯೂನಿಂಗ್ ಮಾಡುವಾಗ ಏನೇನನ್ನು ಗಮನಿಸುತ್ತೀಯೆ?’. ಸೀನ ಹೇಳಿದ ‘ಎಲ್ಲಕ್ಕಿಂತ ಮೊದಲು ಹವಾಮಾನವನ್ನು ಗಮನಿಸುತ್ತೇನೆ. ಟ್ಯೂನಿಂಗ್ ಎನ್ನುವುದು ಯಾವ ಹದದಲ್ಲಿ ಪೆಟ್ರೋಲ್, ಬೆಂಕಿ ಮತ್ತು ಗಾಳಿ ಎಂಜಿನ್​ನೊಳಗೆ ಬೆರೆಯುತ್ತದೆ ಎನ್ನುವುದನ್ನು ಅವಲಂಬಿಸಿರುತ್ತದೆ. ಮೆಕ್ಯಾನಿಕ್ ಅದ ನಾನು ಬೆಂಕಿ ಮತ್ತು ಪೆಟ್ರೋಲ್​ನ ಹದವನ್ನು ನಿಯಂತ್ರಿಸಬಲ್ಲೆ. ಆದರೆ, ಗಾಳಿಯ ಗುಣ ನನ್ನ ನಿಯಂತ್ರಣದಲ್ಲಿರುವುದಿಲ್ಲ. ಅದಕ್ಕೆ ತಕ್ಕನಾಗಿ ನಾನು ಮಿಕ್ಕೆರಡನ್ನು ಬೆರೆಯುವಂತೆ ಮಾಡಬೇಕು. ಹಾಗಾಗಿ ಹವಾಮಾನವನ್ನು ಗಮನಿಸುತ್ತೇನೆ’.

ಓರ್ವ ಸಾಧಾರಣ ಮೆಕ್ಯಾನಿಕ್​ನಿಂದ ಇಂಥ ಉತ್ತರ ನಿರೀಕ್ಷಿಸಿರದ ನಿರ್ವಾಹಕರು, ಆ ಕ್ಷಣವೇ ಸೀನನಿಗೆ ಆಥರೈಸ್ಡ್ ಸರ್ವಿಸ್ ಸೆಂಟರ್ ಕೊಡಲು ನಿರ್ಧರಿಸಿದರು. ಷೋರೂಮ್ ಒಡೆಯನಾಗುವ ಸಿಹಿಸುದ್ದಿ ಅವನ ಗ್ಯಾರೇಜ್ ಬಾಗಿಲಿಗೇ ಬಂದಿತ್ತು. ಸೀನನಿಗೆ ಹೊಸದೊಂದು ಕರ್ಮಭೂಮಿ ಸೃಷ್ಟಿಯಾಯಿತು.

ಷೋರೂಮ್ ಒಡೆಯನೇನೋ ಆದ. ಆದರೆ, ರಿಪೇರಿ ಮಾತ್ರ ಗೊತ್ತಿದ್ದ ಆತನಿಗೆ ವಾಹನಗಳನ್ನು ಮಾರಾಟ ಮಾಡುವುದು ಗೊತ್ತಿರಲಿಲ್ಲ. ಆದರೆ, ಸೀನ ವಿಚಲಿತನಾಗಲಿಲ್ಲ. ತನ್ನ ರಿಪೇರಿ ಪರಿಣತಿಯನ್ನೇ ಶಕ್ತಿಯಾಗಿಸಿಕೊಂಡ. ಹೊಸ ಗಾಡಿ ಕೊಂಡವರಿಗೆ ‘ರಿಪೇರಿಗೆ ಬಾರದಿರುವಂತೆ ಗಾಡಿಯನ್ನು ನೋಡಿಕೊಳ್ಳುವುದು ಹೇಗೆ’ ಎನ್ನುವುದರ ಬಗ್ಗೆ ಖುದ್ದಾಗಿ ಸಲಹೆ ಕೊಡುತ್ತಿದ್ದ. ಇದರಿಂದ ಗ್ರಾಹಕರ ಪ್ರೀತಿಗೆ ಪಾತ್ರನಾಗುತ್ತಿದ್ದ. ‘ಒಬ್ಬ ಗ್ರಾಹಕ ಬಂದರೆ ಹತ್ತು ಗ್ರಾಹಕರನ್ನು ಅವರೇ ಕರೆತರುವಂತೆ ಮಾಡುವುದೇ ನಿಜವಾದ ಮಾರ್ಕೆಟಿಂಗ್’ ಎನ್ನುತ್ತಾನೆ, ಈವರೆಗೂ ಬೇರಾವುದೇ ವಿಧದ ಮಾರ್ಕೆಟಿಂಗ್ ಮಾಡಿರದ ಸೀನ.

ಸೀನನ ಷೋರೂಮ್ ನಲ್ಲಿ 17 ಕೆಲಸಗಾರರಿದ್ದರೂ, ರಿಪೇರಿಗೆ ಬಂದ ಪ್ರತಿ ಗಾಡಿಯ ಫೈನ್​ಟ್ಯೂನಿಂಗ್ ಮಾಡುವುದು ಸ್ವತಃ ಸೀನನೇ. ‘ಒಂದು ವಾಹನವನ್ನು ಫೈನ್​ಟ್ಯೂನ್ ಮಾಡಬೇಕಾದರೆ, ಸಂಗೀತ ವಿದ್ವಾಂಸ ತನ್ನ ವಾದ್ಯವನ್ನು ಹದಗೊಳಿಸುವಂತಿರಬೇಕು. ಮೆಕ್ಯಾನಿಕ್ ವಾಹನದ ಪ್ರತಿಯೊಂದು ಶಬ್ದವನ್ನೂ ಆಲಿಸಬೇಕು, ಹೊಗೆಯ ಬಣ್ಣವನ್ನು ನೋಡಬೇಕು. ಅದರ ವಾಸನೆಯಲ್ಲಿರುವ ವ್ಯತ್ಯಾಸವನ್ನು ಗ್ರಹಿಸಬೇಕು. ಒಟ್ಟಿನಲ್ಲಿ ವಾಹನವನ್ನು ಹದಗೊಳಿಸುವಲ್ಲಿ ಪಂಚೇದ್ರಿಯಗಳೂ ಬೇಕು’. ವಾಹನಗಳ ವಿಷಯದಲ್ಲಿನ ಹುಚ್ಚುಹಂಬಲ ನೋಡಬೇಕೆಂದು ಬಯಸುವವರು ಸೀನನನ್ನು ನೋಡಬೇಕು. ಈ ಹೊತ್ತು ಸೀನ ಆ ಬ್ರಾ್ಯಂಡ್​ನ ಆಥರೈಸ್ಡ್ ಸರ್ವೀಸ್ ಸೆಂಟರ್​ಗಳಲ್ಲೆಲ್ಲ ಅತಿಹೆಚ್ಚು ವಾಹನಗಳ ಮಾರಾಟ ಮಾಡುತ್ತಾನೆ! ಕಳೆದ 3 ವರ್ಷಗಳಿಂದ ಒಂದು ತಿಂಗಳೂ ಅವನು ಈ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ. ಜೀವನದಲ್ಲಲ್ಲದೆ ಕೆಲಸದಲ್ಲೂ ಸಹಧರ್ವಿುಣಿಯಾಗಿರುವ ಪತ್ನಿಯಿಂದ ಹಿಡಿದು, ಕೈಸೇರಿಸಿ ದುಡಿಯುವ ತನ್ನೆಲ್ಲ ಉದ್ಯೋಗಿಗಳ ಬಗ್ಗೆ ಸೀನ ಕೃತಜ್ಞತೆಯಿಂದ ಮಾತನಾಡುತ್ತಾನೆ. ಅವರೇ ಎಲ್ಲ, ತಾನೇನೂ ಅಲ್ಲವೆನ್ನುತ್ತಾನೆ.

ಮುಂದೇನಾಗಬೇಕು ಎಂದು ಕೇಳಿದರೆ, ಸೀನ ಕೊಡುವ ಉತ್ತರ ಅಚ್ಚರಿಗೊಳಿಸುತ್ತದೆ. ಅವನು ದುಡ್ಡಿನ ಬಗ್ಗೆಯೋ ಇನ್ನಷ್ಟು ಷೋರೂಮ್ಳನ್ನು ತೆರೆಯುವ ಬಗ್ಗೆಯೋ ಮಾತನಾಡುವುದಿಲ್ಲ. ‘ಎಲ್ಲರೂ ನನ್ನನ್ನು ಒಳ್ಳೆಯ ಮೆಕ್ಯಾನಿಕ್/ಟ್ಯೂನರ್ ಎಂದು ಗುರುತಿಸಬೇಕು’ ಎನ್ನುತ್ತಾನೆ ಈ ಕರ್ಮಯೋಗಿ!

ಈ ದಿನ ಕಾರ್ವಿುಕರ ದಿನ. ನನಗೆ ಸೀನನ ಬಗ್ಗೆ ಬರೆಯಬೇಕೆನಿಸಿದ್ದು ಆ ಕಾರಣಕ್ಕಾಗಿಯೇ! ಸೀನ, ಸಾಂಪ್ರದಾಯಿಕ ಅರ್ಥದಲ್ಲಿ ಕಾರ್ವಿುಕನಲ್ಲದಿದ್ದರೂ, ಕೆಲಸದಲ್ಲಿ ನಂಬಿಕೆಯುಳ್ಳವನು ಎನ್ನುವ ಅರ್ಥದಲ್ಲಿ ಮಹಾಕಾರ್ವಿುಕ! ಮಾಡುವ ಕೆಲಸದಲ್ಲಿ ಶ್ರದ್ಧೆಯಿದ್ದರೆ ಪರಿಣತಿ ಹಿಂಬಾಲಿಸುತ್ತದೆ. ಪರಿಣತಿ ಇರುವೆಡೆ ಆತ್ಮವಿಶ್ವಾಸ ಮನೆಮಾಡುತ್ತದೆ. ಆತ್ಮವಿಶ್ವಾಸ ಇದ್ದಲ್ಲಿ ಸವಾಲುಗಳನ್ನು ಎದುರಿಸುವುದು ಸುಲಭವಾಗುತ್ತದೆ. ಸಾಧಾರಣನೂ ಸೀನನಂತೆ ಅಸಾಮಾನ್ಯ ಸಾಧನೆಗೈಯುವುದು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸೀನನ ಯಶೋಗಾಥೆ, ಕೆಲವರಿಗಾದರೂ ಪ್ರೇರಣೆಯಾಗಲಿ.

ಕೃಪೆ:ರವಿ ಶಂಕರ್.                               ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097