ದಿನಕ್ಕೊಂದು ಕಥೆ 810
*🌻ದಿನಕ್ಕೊಂದು ಕಥೆ🌻 ಪ್ರಯತ್ನದ ಧ್ಯೇಯ ಅದೃಷ್ಟದ ಒಲವು*
ಹಾವಾಡಿಗನೊಬ್ಬ ವಿಷಪೂರಿತ ಹಾವನ್ನು ಕಷ್ಟಪಟ್ಟು ಹಿಡಿದು ಬಿದಿರುಬುಟ್ಟಿಗೆ ಹಾಕಿ ಮನೆಯ ಮೂಲೆಯಲ್ಲಿಟ್ಟ. ಅದರ ವಿಷದ ಮದ ಇಳಿಸಲು ವಾರಗಟ್ಟಲೆ ಆಹಾರವನ್ನೇ ಕೊಡದೆ ಹಾಗೇ ಬಿಟ್ಟಿದ್ದ. ಹೀಗೆ ಆಹಾರವಿಲ್ಲದೆ, ಬಿಡುಗಡೆಯೂ ಇಲ್ಲದೆ ಬದುಕುವಾಸೆ ಬಿಟ್ಟು ಸತ್ತಂತೆ ಮುದ್ದೆಯಾಗಿ ಬಿದ್ದಿತ್ತು ಹಾವು. ಒಂದು ರಾತ್ರಿ ಇಲಿಯೊಂದು ಆಹಾರಕ್ಕೆಂದು ಹಾವಾಡಿಗನ ಮನೆ ಪ್ರವೇಶಿಸಿತು. ಎಷ್ಟು ಹುಡುಕಿದರೂ ಆಹಾರ ಸಿಗದೆ, ಇನ್ನೇನು ಹೊರಡಬೇಕೆಂದಿದ್ದಾಗ ಹಾವನ್ನಿರಿಸಲಾಗಿದ್ದ ಬುಟ್ಟಿ ಕಾಣಿಸಿತು. ಇದರಲ್ಲಿ ಧಾನ್ಯವೇ ಇರಬೇಕು ಎಂದು ಭಾವಿಸಿ ಕನ್ನ ಕೊರೆದು ಒಳಹೊಕ್ಕರೆ ಆಗಿದ್ದೇನು? ಆಹಾರ ಹುಡುಕಿ ಹೋದ ಇಲಿಯೇ, ಆ ಬುಟ್ಟಿಯಲ್ಲಿದ್ದ ಹಾವಿಗೆ ಆಹಾರವಾಯಿತು. ಅಷ್ಟೇ ಅಲ್ಲ, ಹೊಟ್ಟೆ ತುಂಬಿಸಿಕೊಂಡ ಹಾವು ಆ ಇಲಿ ಕೊರೆದಿದ್ದ ಕಿಂಡಿಯಿಂದಲೇ ತೂರಿ ಕೊಂಡು ಪಲಾಯನ ಮಾಡಿತು. ಹಾವಿನ ಉಳಿಗಾಲಕ್ಕೂ, ಇಲಿಯ ಜೀವನಾಶಕ್ಕೂ ಒಂದೇ ಸಂದರ್ಭ ಸಾಕ್ಷಿಯಾಗಿ ಹೋಯಿತು.
ಹಾವಿಗೊದಗಿದ ಅದೃಷ್ಟ ಅಥವಾ ಇಲಿಗೊದಗಿದ ದುರದೃಷ್ಟದಂಥ ಸಂದರ್ಭ ಬದುಕಿನಲ್ಲಿ ಯಾರಿಗೆ ಬೇಕಾದರೂ ಒದಗಬಹುದು. ಜೀವನದಲ್ಲಿ ಅದೃಷ್ಟದ ಪಾತ್ರ ಬಹಳವಿದೆ; ಹಾಗಂತ ಅದನ್ನೇ ನಂಬಿ ಕೂರುವಂತಿಲ್ಲ.
ಹಾಗೆ ನಿರೀಕ್ಷೆಯಿಟ್ಟುಕೊಂಡಲ್ಲಿ ಮುಂದೊಂದು ದಿನ ಪರಿತಪಿಸಬೇಕಾದೀತು. ಕೆಲವೊಮ್ಮೆ ಹೆಚ್ಚು ಪ್ರಯತ್ನ-ಪರಿಶ್ರಮವನ್ನು ವಿನಿಯೋಗಿಸಿದಾಗಲೂ ಅಂದುಕೊಂಡ ಫಲಿತಾಂಶ ಸಿಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ನೊಂದುಕೊಳ್ಳದೆ ಹತಾಶರಾಗದೆ, ನಾವು ಎಡವಿದ್ದೆಲ್ಲಿ, ಯತ್ನವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳುವ ಅವಕಾಶವಿದೆಯೇ ಎಂಬುದರ ಅವಲೋಕನವಾಗಬೇಕು. ಹಾಗಂತ, ಪ್ರಯತ್ನವಿಲ್ಲದೆ ಅದೃಷ್ಟದ ಬಲದಿಂದ ಸಿಕ್ಕ ವಸ್ತುವಿಗೂ ಅಷ್ಟೊಂದು ಬೆಲೆಯಿರದು. ಆದ್ದರಿಂದ ಪ್ರಯತ್ನದ ಜತೆಜತೆಗೆ ಅದೃಷ್ಟವೂ ಸೇರಿಕೊಂಡಾಗ ಒದಗುವ ಫಲಿತಾಂಶವು ಗೌರವಾದರಗಳಿಗೆ ಪಾತ್ರವಾಗುವುದರ ಜತೆಗೆ ಖುಷಿಯನ್ನೂ ನೀಡುತ್ತದೆ. ಮೇಲೆ ನೀಡಿರುವ ನಿದರ್ಶನದಲ್ಲಿ ಇಲಿಯು ಆಹಾರವನ್ನು ಪಡೆಯುವ ಯತ್ನವನ್ನೇನೋ ಮಾಡಿತು, ಆದರೆ ಅದೃಷ್ಟ ಕೈಕೊಟ್ಟು ಪ್ರಾಣ ಕಳೆದುಕೊಳ್ಳುವಂಥ ಸ್ಥಿತಿ ಬಂತು. ಹಾಗೆ ನೋಡಿದರೆ, ಅದೃಷ್ಟ-ದುರದೃಷ್ಟಗಳ ಸರಮಾಲೆಯೇ ನಮ್ಮ ಬದುಕು. ಅದೃಷ್ಟ ಬಂದಾಗ ಅತಿಯಾಗಿ ಹಿಗ್ಗದೆ, ದುರದೃಷ್ಟ ಅಪ್ಪಳಿಸಿದಾಗ ಪಾತಾಳಕ್ಕೆ ಕುಸಿಯದೆ, ಸಮತ್ವವನ್ನು ಕಾಯ್ದುಕೊಳ್ಳುವವನೇ ವಿವೇಕಿ.
ಕೃಪೆ: ಗಣಪತಿ ಭಟ್. ಸಂಗ್ರಹ :ವೀರೇಶ್ ಅರಸಿಕೆರೆ.7975307743
Comments
Post a Comment