ದಿನಕ್ಕೊಂದು ಕಥೆ 812

*🌻ದಿನಕ್ಕೊಂದು ಕಥೆ🌻*                 
*ತಪ್ಪಾದಲ್ಲಿ ತಿದ್ದಿಕೊಳ್ಳೋಣ.*

ಮಾಲೀಕನೊಬ್ಬ ತನ್ನ ಕೆಲಸಗಾರನಿಗೆ ಹಣವನ್ನೂ ಮಣ್ಣಿನ ಹೂಜಿಯನ್ನೂ ಕೊಟ್ಟು, ಮಾರುಕಟ್ಟೆಗೆ ತೆರಳಿ ಅದರಲ್ಲಿ ಮದ್ಯವನ್ನು ತುಂಬಿಸಿಕೊಂಡು ಬರುವಂತೆ ಸೂಚಿಸಿದ. ಅದರಂತೆಯೇ ಆತ ಮದ್ಯದೊಂದಿಗೆ ಮನೆಯತ್ತ ಮರಳುತ್ತಿದ್ದಾಗ, ದಾರಿಯಲ್ಲಿ ಆಕಸ್ಮಿಕವಾಗಿ ಕಲ್ಲಿಗೆ ತಾಗಿ ಮಣ್ಣಿನಹೂಜಿ ಒಡೆದುಹೋಯಿತು, ಮದ್ಯವೆಲ್ಲ ದಾರಿಯಲ್ಲೇ ಚೆಲ್ಲಿ ಹೂಜಿಯ ಹಿಡಿ ಮಾತ್ರ ಕೆಲಸಗಾರನ ಕೈಯಲ್ಲಿ ಉಳಿಯಿತು. ಅದೇ ಸ್ಥಿತಿಯಲ್ಲಿ ಆತ ಮನೆಗೆ ಬಂದಾಗ, ‘ಇದೇನು, ಹೂಜಿಯಲ್ಲಿ ಮದ್ಯ ತರಲು ಹೇಳಿದ್ದೆ; ಆದರೆ ಮದ್ಯವೂ ಇಲ್ಲ, ಹೂಜಿಯೂ ಇಲ್ಲ. ಹಿಡಿಯನ್ನು ಮಾತ್ರ ಹಿಡಿದುಕೊಂಡು ಬಂದಿರುವೆಯಲ್ಲ?’ ಎಂದು ಮಾಲೀಕ ಪ್ರಶ್ನಿಸಿದ. ಅದಕ್ಕೆ ಕೆಲಸಗಾರ, ‘ಕ್ಷಮಿಸಿ ಯಜಮಾನರೇ, ನೀವು ಹೇಳಿದಂತೆ ನಾನು ಮಾರುಕಟ್ಟೆಯಿಂದ ಮದ್ಯವನ್ನು ಖರೀದಿಸಿ ತರುತ್ತಿದ್ದೆ; ಆದರೆ ದಾರಿಯಲ್ಲಿ ದೇವರ ವಿಗ್ರಹವೊಂದು ಹೂಜಿಯನ್ನು ಕಸಿದುಕೊಂಡಿತು’ ಎಂದ. ಗೊಂದಲಗೊಂಡ ಮಾಲೀಕನಿಗೆ ಇವನ ಅಸಂಬದ್ಧ ಪ್ರಲಾಪ ಅರ್ಥವಾಗದೆ, ‘ದೇವರ ವಿಗ್ರಹ ಹೂಜಿಯನ್ನು ಕಸಿದುಕೊಂಡರೆ, ಹಿಡಿಯನ್ನು ಮಾತ್ರವೇ ತಂದಿದ್ದೇಕೆ?’ ಎಂದು ಮರುಪ್ರಶ್ನಿಸಿದಾಗ, ‘ನಾನು ಹೇಳುತ್ತಿರುವುದು ಸತ್ಯ ಎಂಬುದನ್ನು ನಿಮಗೆ ಮನವರಿಕೆ ಮಾಡಿಸಲೆಂದು…’ ಎಂದು ಉತ್ತರಿಸಿದ ಕೆಲಸಗಾರ!

ತಪ್ಪುಗಳನ್ನು ಒಪ್ಪಿಕೊಳ್ಳುವುದು ಕೂಡ ಬುದ್ಧಿವಂತಿಕೆಯೇ ಆಗಿದೆ. ಅದು ನಮಗೆ ಆ ಕ್ಷಣಕ್ಕೆ ಒಂದಷ್ಟು ನೋವು, ಸಂಕಟಗಳನ್ನು ತಂದೊಡ್ಡಬಹುದಾದರೂ, ಸತ್ಯವನ್ನು ಹೇಳಿ ಸಂಬಂಧಪಟ್ಟವರನ್ನು ಒಪ್ಪಿಸುವ ಧೈರ್ಯ ಮತ್ತು ತಾಳ್ಮೆಯನ್ನು ರೂಢಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ನಮ್ಮ ನೈಜಸಾಮರ್ಥ್ಯವನ್ನು ಅನಾವರಣಗೊಳಿಸುವ ಸುಸಂದರ್ಭವದು ಎಂಬುದನ್ನು ಮನಗಾಣಬೇಕು. ತಪ್ಪನ್ನು ಒಪ್ಪಿಕೊಳ್ಳುವುದು ದೊಡ್ಡತನ ಮಾತ್ರವೇ ಅಲ್ಲ, ಅದರಿಂದಾಗಿ ಮನಸ್ಸು ಭಯದ ಬಂಧನದಿಂದ ಹೊರಬಂದು ಹಗುರಾಗುತ್ತದೆ. ತಪ್ಪೊಪ್ಪಿಕೊಳ್ಳುವುದು ಆ ಕ್ಷಣಕ್ಕೆ ಸೋಲುವಿಕೆ ಎನಿಸಿದರೂ, ದೀರ್ಘಕಾಲಿಕವಾಗಿ ಅದೊಂದು ಅನುಗ್ರಹವಾಗಬಲ್ಲದು. ಆದರೆ, ನಮಗರಿವಿಲ್ಲದಂತೆ ತಪ್ಪು ಗಳು ಸಂಭವಿಸಿದಾಗ, ‘ದೊಡ್ಡ ಪ್ರಮಾದವಾಯಿತು’ ಎಂಬ ಗ್ರಹಿಕೆಯಲ್ಲಿ ಅದನ್ನು ಅರಗಿಸಿಕೊಳ್ಳದೆ ಒದ್ದಾಡುತ್ತೇವೆ. ಅಧೀರತೆ ಆವರಿಸಿ ವಿವೇಚನಾರಹಿತವಾಗಿ ವರ್ತಿಸತೊಡಗುತ್ತೇವೆ. ಮುಜುಗರದಿಂದ ಪಾರಾಗಲು ಸಬೂಬು-ಸುಳ್ಳಿನ ಸರಮಾಲೆಯನ್ನೇ ಹೆಣೆಯುತ್ತೇವೆ. ನಾವು ಮಾಡಿದ್ದು ತಪ್ಪು ಎಂದು ಅಂತರಂಗ ಹೇಳುತ್ತಿದ್ದರೂ, ಅದಕ್ಕೆ ಬೆಲೆಗೊಡದೆ ತಪ್ಪನ್ನು ಸಮರ್ಥಿಸಿಕೊಳ್ಳುವ ವ್ಯರ್ಥಪ್ರಯತ್ನದಲ್ಲಿ ತೊಡಗುತ್ತೇವೆ. ವ್ಯಕ್ತಿತ್ವಕ್ಕೆ ಕಳಂಕ ತರುವಂಥ ಇಂಥ ನಡೆ ಸಲ್ಲ. ‘ತಪ್ಪು ಮಾಡೋದು ಸಹಜ, ತಿದ್ದಿ ನಡೆಯೋನು ಮನುಜ’ ಎಂಬುದನ್ನು ಮರೆಯದಿರೋಣ.

ಕೃಪೆ :ಮಹಾದೇವ ಬಸರಕೊಡ್.                          ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059