ದಿನಕ್ಕೊಂದು ಕಥೆ 813

*🌻ದಿನಕ್ಕೊಂದು ಕಥೆ🌻                                      ಇತರರ ನಂಬಿಕೆ ಬಗ್ಗೆ ತೀರ್ಪು ಕೊಡುವ ಮುನ್ನ.*

ಕುತೂಹಲಕಾರಿಯಾದ ಘಟನೆಯೊಂದು ಇಲ್ಲಿದೆ. ನಂಬಿಕೆಗಳ ಬಗ್ಗೆ ಇರುವ ಈ ಘಟನೆಯು ಚಿಂತನಾರ್ಹವೂ ಆಗಿದೆ! ದೊಡ್ಡ ಸಾಹೇಬರೊಬ್ಬರು ಪ್ರತಿದಿನ ಮೈಸೂರಿನಿಂದ ಮಂಡ್ಯಕ್ಕೆ ರೈಲಿನಲ್ಲಿ ಬಂದು ಹೋಗುತ್ತಿದ್ದರು. ಫಸ್ಟ್-ಕ್ಲಾಸ್ ಭೋಗಿಯಲ್ಲಿ ಹೆಚ್ಚೇನೂ ಜನಸಂದಣಿ ಇರುತ್ತಿರಲಿಲ್ಲ. ಹಾಗಾಗಿ ಸಾಹೇಬರು ಆರಾಮವಾಗಿ ಕುಳಿತು, ಸಿಗರೇಟು ಸೇದುತ್ತಾ, ದಿನಪತ್ರಿಕೆಯನ್ನು ಓದುತ್ತಾ, ಪ್ರಯಾಣ ಮಾಡುತ್ತಿದ್ದರು. ಇವರಿದ್ದ ಭೋಗಿಯನ್ನೇ ಹತ್ತಿದ ಹೊಸಬರೊಬ್ಬರು ನಾನೂ ಪ್ರತಿದಿನ ರೈಲಿನಲ್ಲೇ ಪ್ರಯಾಣ ಮಾಡುತ್ತೇನೆ. ಇಂದು ಸಾಮಾನ್ಯ ಭೋಗಿಯಲ್ಲಿ ಬಹಳ ಜನ ಇರುವುದರಿಂದ ಫಸ್ಟ್ ಕ್ಲಾಸ್ ಭೋಗಿಗೆ ಬಂದಿದ್ದೇನೆ. ನನ್ನ ಬಳಿ ಟಿಕೇಟಿದೆ ಎಂದು ಸಮಜಾಯಿಷಿ ನೀಡಿದರು. ಸಾಹೇಬರು ಅವರತ್ತ ನೋಡಿದಂತೆ ಮಾಡಿದರು. ಮತ್ತೆ ತಮ್ಮ ಸಿಗರೇಟಿನತ್ತ ಗಮನ ಹರಿಸಿದರು.

ರೈಲು ಶ್ರೀರಂಗಪಟ್ಟಣದ ಬಳಿಯ ಕಾವೇರಿ ನದಿಯ ಸೇತುವೆ ಮೇಲೆ ಹೋಗುತ್ತಿತ್ತು. ಹೊಸಬರು ಜೇಬಿನಿಂದ ನಾಣ್ಯವೊಂದನ್ನು ತೆಗೆದು ನದಿಗೆಸೆದು ಕೈಮುಗಿದರು. ಸಾಹೇಬರು ಮೌಢ್ಯ ನಿಮ್ಮದು? ನದಿಗೆ ನಾಣ್ಯವನ್ನು ಎಸೆದು ಕೈಮುಗಿಯುತ್ತೀರಲ್ಲ? ಎಂದರು. ಹೊಸಬರು ತಾಯ್ತಂದೆಯರಿಂದ ಬಂದ ಸಂಪ್ರದಾಯ. ನದಿಯು ದೇವರ ಅವತಾರವೆಂಬ ನಂಬಿಕೆ. ಹತ್ತು ವರ್ಷಗಳಿಂದ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ. ಸೇತುವೆ ಬಂದಾಗ ತಪ್ಪದೇ ಐವತ್ತು ಪೈಸೆ ನಾಣ್ಯವನ್ನು ನದಿಗೆ ಹಾಕುತ್ತೇನೆ ಎಂದರು. ಸಾಹೇಬರು ಸಿಗರೇಟಿನ ಹೊಗೆಯ ಮಧ್ಯದಲ್ಲೇ ಅಲ್ರೀ, ಹತ್ತು ವರ್ಷಗಳ ಸಂಪ್ರದಾಯವೇ? ದಿನಕ್ಕೆ ಐವತ್ತು ಪೈಸೆಯಂತೆ, ತಿಂಗಳಿಗೆ ಕನಿಷ್ಟ ಹದಿನೈದು(15) ರೂಪಾಯಿಗಳನ್ನು ನದಿಗೆ ಬಿಸಾಡುತ್ತೀರಿ. ಅಂದರೆ ವರ್ಷಕ್ಕೆ ನೂರ ರೂಪಾಯಿಯಂತೆ, ಹತ್ತು ವರ್ಷಗಳಲ್ಲಿ 1800 ರೂಪಾಯಿಗಳನ್ನು ನದಿಗೆ ಬಿಸಾಡಿದ್ದೀರಿ. ಅದರಲ್ಲಿ ನೀವೊಂದು ಸ್ಕೂರ್ಟ ತೆಗೆದುಕೊಳ್ಳಬಹುದಿತ್ತು. ರೈಲಿನ ಪ್ರಯಾಣದ ಬದಲು ನಿಮ್ಮದೇ ಸ್ಕೂಟರಿನಲ್ಲಿ ಪ್ರಯಾಣ ಮಾಡಬಹುದಿತ್ತು. ವೃಥಾ ಹಣ ಪೋಲು! ಎಂದರು.

ಹೊಸಬರು ಇರಬಹುದು ಸಾಹೇಬರೇ! ತಾವು ದಿನಕ್ಕೆಷ್ಟು ಸಿಗರೇಟು ಸೇದುತ್ತೀರಿ? ಎಂದರು. ಸಾಹೇಬರು ಹೆಮ್ಮೆಯಿಂದ ದಿನಕ್ಕೆರಡು ಪ್ಯಾಕೆಟ್ಟು! ಇಪ್ಪತ್ತೈದು ವರ್ಷಗಳ ಅಭ್ಯಾಸ! ಎಂದರು. ಹೊಸಬರು ಸಾಹೇಬರೇ, ಪ್ಯಾಕೆಟ್ಟಿಗೆ ಹತ್ತು ರೂಪಾಯಿಯಂತೆ ದಿನಕ್ಕೆ ಇಪ್ಪತ್ತು ರೂಪಾಯಿ, ವರ್ಷಕ್ಕೆ ಸುಮಾರು ಏಳು ರೂಪಾಯಿಗಳಿಗೂ ಹೆಚ್ಚು ಹಣ! ಇಪ್ಪತ್ತೈದು ವರ್ಷಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ಸಿಗರೇಟಿಗೇ ಖರ್ಚು ಮಾಡಿದ್ದೀರಿ. ತಾವೂ ಈ ದುಡ್ಡಿನಲ್ಲಿ ಒಂದಲ್ಲ, ಎರಡು ಕಾರು ತೆಗೆದುಕೊಳ್ಳಬಹುದಿತ್ತು. ಮೌಢ್ಯಗಳ ಬಗ್ಗೆ ಚರ್ಚೆ ಮಾಡುವಷ್ಟು ದೊಡ್ದವನು ನಾನಲ್ಲ. ನೀವೂ ಕಾರಿನಲ್ಲಿ ಪ್ರತಿದಿನ ಏಕೆ ಪ್ರಯಾಣ ಮಾಡುವುದಿಲ್ಲ? ಎಂದು ಕೇಳಿದರು.

ಸಾಹೇಬರು ನಿಟ್ಟುಸಿರು ಬಿಡುತ್ತಾ ಕಾರು ತೆಗೆದುಕೊಳ್ಳಬೇಕೆಂಬ ಮನಸ್ಸಿದೆ. ಆದರೆ ಇನ್ನೂ ಅನುಕೂಲವಾಗಿಲ್ಲ ಎಂದರು. ಹೊಸಬರು ಹೌದಾ ಸ್ವಾಮಿ? ಅದಿರಲಿ, ನನ್ನ ಬಳಿ ಎರಡು ಸ್ಕೂಟರುಗಳಿವೆ. ಮೈಸೂರಿನಲ್ಲಿರುವ ನನ್ನ ಮಗ ಉಪಯೋಗಿಸುತ್ತಾನೆ. ಆತನೇ ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ರೈಲೇ ಸ್ಟೇಷನ್ನಿಗೆ ನನ್ನನ್ನು ಕರೆದುಕೊಂಡು ಬರುತ್ತಾನೆ. ಮಂಡ್ಯದಲ್ಲಿರುವ ನನ್ನ ತಂಗಿಯ ಮಗನಿಗೆ ಒಂದು ಸ್ಕೂರ್ಟ ಕೊಡಿಸಿದ್ದೇನೆ. ಅವನೂ ಪ್ರತಿದಿನ ರೈಲ್ವೇ ನಿಲ್ದಾಣಕ್ಕೆ ಬೆಳಿಗ್ಗೆಯೇ ಬಂದು ನನ್ನನ್ನು ಕರೆದೊಯ್ಯುತ್ತಾನೆ. ಮತ್ತು ಸಂಜೆ ರೈಲ್ವೇ ನಿಲ್ದಾಣಕ್ಕೆ ಬಿಡುತ್ತಾನೆ. ನದಿಗೆ ನಾಣ್ಯ ಎಸೆಯುವುದು ನಂಬಿಕೆಯ ಪ್ರಶ್ನೆ! ಅವುಗಳಿಗೆ ಮೌಢ್ಯದ ಹಣೆಪಟ್ಟಿ ಹಚ್ಚುವುದು ಸರಿಯಲ್ಲ ಅಲ್ಲವೇ? ಎಂದರು. ಸಾಹೇಬರು ಏನೂ ಮಾತನಾಡದೆ, ಮುಖಕ್ಕೆ ಅಡ್ಡವಿಟ್ಟುಕೊಂಡು ಓದಲು ಮೊದಲು ಮಾಡಿದರು. ಮಂಡ್ಯ ಬರುವವರೆಗೂ ಪತ್ರಿಕೆ ಕೆಳಕ್ಕಿಳಿಸಲಿಲ್ಲ. ಮತ್ತೆ ಸಿಗರೇಟನ್ನೂ ಹಚ್ಚಲಿಲ್ಲ. ಇತರರ ನಂಬಿಕೆಗಳ ಬಗ್ಗೆ ತೀರ್ಪು ಕೊಡುವುದು ಸುಲಭ. ಆದರೆ ನಮ್ಮ ಆಚರಣೆಗಳ ಬಗ್ಗೆ ಬೇರೆಯವರು ತೀರ್ಪು ಕೊಟ್ಟರೆ ಒಪ್ಪಿಕೊಳ್ಳುವುದು ಅಷ್ಟು ಸುಲಭವಲ್ಲ ಅಲ್ಲವೇ?

ಕೃಪೆ:ವಿಶ್ವವಾಣಿ.                                ಸಂಗ್ರಹ: ವೀರೇಶ್ ಅರಸಿಕೆರೆ. ***********************************************   *🌻ದಿನಕ್ಕೊಂದು ಕಥೆ🌻*                 
*ತಪ್ಪಾದಲ್ಲಿ ತಿದ್ದಿಕೊಳ್ಳೋಣ.*

ಮಾಲೀಕನೊಬ್ಬ ತನ್ನ ಕೆಲಸಗಾರನಿಗೆ ಹಣವನ್ನೂ ಮಣ್ಣಿನ ಹೂಜಿಯನ್ನೂ ಕೊಟ್ಟು, ಮಾರುಕಟ್ಟೆಗೆ ತೆರಳಿ ಅದರಲ್ಲಿ ಮದ್ಯವನ್ನು ತುಂಬಿಸಿಕೊಂಡು ಬರುವಂತೆ ಸೂಚಿಸಿದ. ಅದರಂತೆಯೇ ಆತ ಮದ್ಯದೊಂದಿಗೆ ಮನೆಯತ್ತ ಮರಳುತ್ತಿದ್ದಾಗ, ದಾರಿಯಲ್ಲಿ ಆಕಸ್ಮಿಕವಾಗಿ ಕಲ್ಲಿಗೆ ತಾಗಿ ಮಣ್ಣಿನಹೂಜಿ ಒಡೆದುಹೋಯಿತು, ಮದ್ಯವೆಲ್ಲ ದಾರಿಯಲ್ಲೇ ಚೆಲ್ಲಿ ಹೂಜಿಯ ಹಿಡಿ ಮಾತ್ರ ಕೆಲಸಗಾರನ ಕೈಯಲ್ಲಿ ಉಳಿಯಿತು. ಅದೇ ಸ್ಥಿತಿಯಲ್ಲಿ ಆತ ಮನೆಗೆ ಬಂದಾಗ, ‘ಇದೇನು, ಹೂಜಿಯಲ್ಲಿ ಮದ್ಯ ತರಲು ಹೇಳಿದ್ದೆ; ಆದರೆ ಮದ್ಯವೂ ಇಲ್ಲ, ಹೂಜಿಯೂ ಇಲ್ಲ. ಹಿಡಿಯನ್ನು ಮಾತ್ರ ಹಿಡಿದುಕೊಂಡು ಬಂದಿರುವೆಯಲ್ಲ?’ ಎಂದು ಮಾಲೀಕ ಪ್ರಶ್ನಿಸಿದ. ಅದಕ್ಕೆ ಕೆಲಸಗಾರ, ‘ಕ್ಷಮಿಸಿ ಯಜಮಾನರೇ, ನೀವು ಹೇಳಿದಂತೆ ನಾನು ಮಾರುಕಟ್ಟೆಯಿಂದ ಮದ್ಯವನ್ನು ಖರೀದಿಸಿ ತರುತ್ತಿದ್ದೆ; ಆದರೆ ದಾರಿಯಲ್ಲಿ ದೇವರ ವಿಗ್ರಹವೊಂದು ಹೂಜಿಯನ್ನು ಕಸಿದುಕೊಂಡಿತು’ ಎಂದ. ಗೊಂದಲಗೊಂಡ ಮಾಲೀಕನಿಗೆ ಇವನ ಅಸಂಬದ್ಧ ಪ್ರಲಾಪ ಅರ್ಥವಾಗದೆ, ‘ದೇವರ ವಿಗ್ರಹ ಹೂಜಿಯನ್ನು ಕಸಿದುಕೊಂಡರೆ, ಹಿಡಿಯನ್ನು ಮಾತ್ರವೇ ತಂದಿದ್ದೇಕೆ?’ ಎಂದು ಮರುಪ್ರಶ್ನಿಸಿದಾಗ, ‘ನಾನು ಹೇಳುತ್ತಿರುವುದು ಸತ್ಯ ಎಂಬುದನ್ನು ನಿಮಗೆ ಮನವರಿಕೆ ಮಾಡಿಸಲೆಂದು…’ ಎಂದು ಉತ್ತರಿಸಿದ ಕೆಲಸಗಾರ!

ತಪ್ಪುಗಳನ್ನು ಒಪ್ಪಿಕೊಳ್ಳುವುದು ಕೂಡ ಬುದ್ಧಿವಂತಿಕೆಯೇ ಆಗಿದೆ. ಅದು ನಮಗೆ ಆ ಕ್ಷಣಕ್ಕೆ ಒಂದಷ್ಟು ನೋವು, ಸಂಕಟಗಳನ್ನು ತಂದೊಡ್ಡಬಹುದಾದರೂ, ಸತ್ಯವನ್ನು ಹೇಳಿ ಸಂಬಂಧಪಟ್ಟವರನ್ನು ಒಪ್ಪಿಸುವ ಧೈರ್ಯ ಮತ್ತು ತಾಳ್ಮೆಯನ್ನು ರೂಢಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ನಮ್ಮ ನೈಜಸಾಮರ್ಥ್ಯವನ್ನು ಅನಾವರಣಗೊಳಿಸುವ ಸುಸಂದರ್ಭವದು ಎಂಬುದನ್ನು ಮನಗಾಣಬೇಕು. ತಪ್ಪನ್ನು ಒಪ್ಪಿಕೊಳ್ಳುವುದು ದೊಡ್ಡತನ ಮಾತ್ರವೇ ಅಲ್ಲ, ಅದರಿಂದಾಗಿ ಮನಸ್ಸು ಭಯದ ಬಂಧನದಿಂದ ಹೊರಬಂದು ಹಗುರಾಗುತ್ತದೆ. ತಪ್ಪೊಪ್ಪಿಕೊಳ್ಳುವುದು ಆ ಕ್ಷಣಕ್ಕೆ ಸೋಲುವಿಕೆ ಎನಿಸಿದರೂ, ದೀರ್ಘಕಾಲಿಕವಾಗಿ ಅದೊಂದು ಅನುಗ್ರಹವಾಗಬಲ್ಲದು. ಆದರೆ, ನಮಗರಿವಿಲ್ಲದಂತೆ ತಪ್ಪು ಗಳು ಸಂಭವಿಸಿದಾಗ, ‘ದೊಡ್ಡ ಪ್ರಮಾದವಾಯಿತು’ ಎಂಬ ಗ್ರಹಿಕೆಯಲ್ಲಿ ಅದನ್ನು ಅರಗಿಸಿಕೊಳ್ಳದೆ ಒದ್ದಾಡುತ್ತೇವೆ. ಅಧೀರತೆ ಆವರಿಸಿ ವಿವೇಚನಾರಹಿತವಾಗಿ ವರ್ತಿಸತೊಡಗುತ್ತೇವೆ. ಮುಜುಗರದಿಂದ ಪಾರಾಗಲು ಸಬೂಬು-ಸುಳ್ಳಿನ ಸರಮಾಲೆಯನ್ನೇ ಹೆಣೆಯುತ್ತೇವೆ. ನಾವು ಮಾಡಿದ್ದು ತಪ್ಪು ಎಂದು ಅಂತರಂಗ ಹೇಳುತ್ತಿದ್ದರೂ, ಅದಕ್ಕೆ ಬೆಲೆಗೊಡದೆ ತಪ್ಪನ್ನು ಸಮರ್ಥಿಸಿಕೊಳ್ಳುವ ವ್ಯರ್ಥಪ್ರಯತ್ನದಲ್ಲಿ ತೊಡಗುತ್ತೇವೆ. ವ್ಯಕ್ತಿತ್ವಕ್ಕೆ ಕಳಂಕ ತರುವಂಥ ಇಂಥ ನಡೆ ಸಲ್ಲ. ‘ತಪ್ಪು ಮಾಡೋದು ಸಹಜ, ತಿದ್ದಿ ನಡೆಯೋನು ಮನುಜ’ ಎಂಬುದನ್ನು ಮರೆಯದಿರೋಣ.

ಕೃಪೆ :ಮಹಾದೇವ ಬಸರಕೊಡ್.                          ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097