ದಿನಕ್ಕೊಂದು ಕಥೆ 814

*🌻ದಿನಕ್ಕೊಂದು ಕಥೆ🌻                         ಕುದುರೆಗಿಲ್ಲ ಬೆಲೆ! ಕುದುರೆಯ ಚಿತ್ರಕಲೆಗೆ ಮಾತ್ರ ಬೆಲೆ?*

ಕುದುರೆ ಯಾವುದು, ಅದರ ಚಿತ್ರಕಲೆ ಎಂದರೇನು, ಅವಕ್ಕೇಕೆ ಬೆಲೆ ಕಟ್ಟಬೇಕು ಎನ್ನುವ ಜಟಿಲ ಪ್ರಶ್ನೆಗಳಿಗೆ ಸರಳ ಉತ್ತರ ಕೊಡುವ ಕುತೂಹಲಕಾರೀ ಪ್ರಸಂಗವೊಂದು ಇಲ್ಲಿದೆ. ಮೆಕ್ಸಿಕೋ ದೇಶದ ಹಳ್ಳಿಯೊಂದರಲ್ಲಿ ಒಬ್ಬ ಕುದುರೆಗಾಡಿ ಬಾಡಿಗೆಗೆ ಕೊಟ್ಟು ಬದುಕು ಸಾಗಿಸುತ್ತಿದ್ದ ಒಬ್ಬರಿದ್ದರು. ಅವರ ಬಳಿ ಒಳ್ಳೆಯ ಮೈಕಟ್ಟಿನ, ಗಟ್ಟಿಮುಟ್ಟಾದ, ಮುದ್ದಾದ ಕುದುರೆಯೊಂದಿತ್ತು. ಒಮ್ಮೆ ಅಲ್ಲಿಗೆ ಬಂದ ವರ್ಣಚಿತ್ರ ಒಬ್ಬರಿಗೆ ಆ ಕುದುರೆ ಬಹು ಮೆಚ್ಚುಗೆಯಾಯಿತು. ಅವರು ಕುದುರೆಗಾಡಿಯಾತನಿಗೆ ಐದು ಡಾಲರ್ ಹಣವನ್ನು ಕೊಟ್ಟು ಕುದುರೆಯನ್ನು ಬಾಡಿಗೆಗೆ ಪಡೆದರು. ದಿನವಿಡೀ ಕುಳಿತು ಕುದುರೆಯ ನಾಲ್ಕು ವರ್ಣಚಿತ್ರಗಳನ್ನು ಬಿಡಿಸಿದರು. ಗಾಡಿಯಪ್ಪನವರಿಗೆ ಆಶ್ಚರ್ಯ! ಕುದುರೆಗಾಡಿ ಬಾಡಿಗೆಗೆ ಕೊಟ್ಟರೆ ದಿನಕ್ಕೆರಡು ಡಾಲರ್ ಸಿಕ್ಕುತ್ತಿತ್ತು. ಆದರೆ ಅದರ ವರ್ಣಚಿತ್ರ ಬಿಡಿಸಿದವ ಐದು ಡಾಲರ್ ಕೊಟ್ಟರಲ್ಲ ಎಂಬ ಆಶ್ಚರ್ಯ! ಐದು ಡಾಲರ್ ಜೇಬಿಗಿಳಿಸಿ ಸುಮ್ಮನಾದರು.

ಕೆಲವು ತಿಂಗಳುಗಳ ನಂತರ ಕುದುರೆಗಾಡಿಯವರು ನಗರಕ್ಕೆ ಹೋದರು. ಅವರು ನಗರಕ್ಕೆ ಅಪರೂಪ. ಹಾಗಾಗಿ ಕುತೂಹಲದಿಂದ ಅತ್ತಿತ್ತ ನೋಡುತ್ತಿದ್ದರು. ಅಲ್ಲೊಂದು ಕಟ್ಟಡವೊಂದರ ಮುಂದೆ ಜನ ಸಾಲಾಗಿ ನಿಂತಿದ್ದರು. ಹಣ ಕೊಟ್ಟು ಒಳಗಡೆ ಹೋಗುತ್ತಿದ್ದರು. ಕುದುರೆಗಾಡಿಯವರು ಅಲ್ಲೇನು ನಡೆಯುತ್ತಿದೆ? ಎಂದು ಕೇಳಿದರು. ಅಲ್ಲಿದ್ದವರು ಒಳಗಡೆ ಕುದುರೆಗಳ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ ಎಂದರು. ’ಕುದುರೆಗಳ ಚಿತ್ರಗಳನ್ನು ನೋಡಲು ಇಷ್ಟೊಂದು ಜನಜಂಗುಳಿಯೇ? ನೋಡಿಯೇ ಬಿಡೋಣ’ ಎಂದುಕೊಂಡ ಅವರೂ ಪ್ರವೇಶಧನ ಕೊಟ್ಟು ಒಳಗೆ ಹೋದರು. ಅಲ್ಲಿ ಕುದುರೆಯೊಂದರ ನಾಲ್ಕು ಭಂಗಿಗಳ ವರ್ಣಚಿತ್ರಗಳ ಪ್ರದರ್ಶನವಾಗುತ್ತಿತ್ತು. ದಿಟ್ಟಿಸಿ ನೋಡಿದರೆ ಅವು ಕುದುರೆಯ ಚಿತ್ರಗಳು! ಅದರ ಪಕ್ಕದಲ್ಲಿ ವರ್ಣಚಿತ್ರಕಾರರೂ ನಿಂತಿದ್ದರು. ಅದರ ವಿವರಣೆಯನ್ನೂ ಕೊಡುತ್ತಿದ್ದರು.

ಅವರನ್ನು ಕುದುರೆಗಾಡಿಯವ ಮಾತನಾಡಿಸಿ ಇದೆಂತಹ ವಿಚಿತ್ರ! ನನ್ನ ಕುದುರೆಯ ಚಿತ್ರಗಳನ್ನು ಬರೆದು ನೀವಿಲ್ಲಿ ಪ್ರದರ್ಶಿಸುತ್ತಿದ್ದೀರಿ. ನೀವು ಸಾವಿರಾರು ಡಾಲರ್ ಸಂಪಾದಿಸುತ್ತಿದ್ದೀರಿ. ತಲಾ ಐದು ಡಾಲರ್ ಪ್ರವೇಶಧನ ಕೊಟ್ಟು ಜನ ನೋಡುತ್ತಿದ್ದಾರೆ. ಆದರೆ ಚಿತ್ರಗಳಿಗೆ ಸ್ಫೂರ್ತಿಯಾದ ನನ್ನ ಕುದುರೆ ಜೀವಂತವಾಗಿ ಹೊರಗಡೆ ನಿಂತಿದೆ. ಅದನ್ನು ಕೇಳುವವರಿಲ್ಲ, ನೋಡುವವರಿಲ್ಲ! ಈ ಪಠದಲ್ಲಿ ಅಂತಹದ್ದೇನಿದೆ? ಈ ಬಣ್ಣದಲ್ಲಿ ಅಂತಹದ್ದೇನಿದೆ? ನನಗೆ ಎಂದರು.

ಆಗ ಚಿತ್ರಕಾರ ಅರ್ಥಗರ್ಭಿತ ನಗೆಬೀರಿ ಚಿತ್ರ ಬಿಡಿಸಿರುವ ಕಾಗದದಲ್ಲಿ ಅಥವ ಬಳಸಿರುವ ಬಣ್ಣದಲ್ಲಿ ಮಹತ್ವವಿಲ್ಲ. ನನ್ನ ಕೈಗಳಿಗೂ ಮಹತ್ವವಿಲ್ಲ. ಆದರೆ ಇವೆಲ್ಲವನ್ನೂ ಸಂಯೋಜಿಸಿ ಮೂಡಿ ಬರುವ ಚಿತ್ರಕ್ಕೆ ಅದರದ್ದೇ ಆದ ಬೆಲೆಯಿದೆ. ಏಕೆಂದರೆ ಕುದುರೆ ಇಂದು ಇರುತ್ತದೆ, ನಾಳೆ ಅಳಿಯುತ್ತದೆ. ಆದರೆ ಅದರ ಚಿತ್ರ ಚಿರಕಾಲ ಉಳಿದು ಹೋಗುತ್ತದೆ. ಅದೇ ಕಲೆಯ ಮಹತ್ವ ಎಂದು ಹೇಳಿದರು. ಆತನ ಮಾತುಗಳು ಎಷ್ಟರ ಮಟ್ಟಿಗೆ ಅರ್ಥವಾಯಿತೋ ಇಲ್ಲವೋ, ಆದರೆ ಕುದುರೆಗಾಡಿಯಾತ  ಕಲೆ, ಕವಿತೆಗಳ ಮಹತ್ವವೇ ಹಾಗಲ್ಲವೇ? ಮನಮೋಹಕವಾದ ಮೈಸೂರು ದಸರಾದ ವರ್ಣಚಿತ್ರಗಳನ್ನು ನಾವೆಲ್ಲ ನೋಡಿದ್ದೇವೆ. ಆ ಮೆರವಣಿಗೆಯಲ್ಲಿದ್ದ ಜನರೂ, ಆನೆ-ಕುದುರೆಗಳೂ ಇಂದಿಲ್ಲ, ಮಹಾರಾಜರೂ ಇಂದಿಲ್ಲ. ಆದರೆ ವರ್ಣಚಿತ್ರಗಳು ಮಾತ್ರ ಚಿರಂಜೀವಿಯಾಗಿ ಉಳಿದಿವೆ.

ಕೆ.ಎಸ್.ನರಸಿಂಹಸ್ವಾಮಿಯವರು ಮೈಸೂರು ಮಲ್ಲಿಗೆಯಲ್ಲಿ ಬರೆದ ‘ಶಾನುಭೋಗರ ಮಗಳು’ ಕವನವನ್ನು ನಾವೆಲ್ಲ ಓದಿದ್ದೇವೆ. ಕೇಳಿದ್ದೇವೆ. ಇಂದು ಆ ಶಾನುಭೋಗರಿಲ್ಲ, ಅವರ ಮಗಳಿಲ್ಲ. ಕವನ ಬರೆದ ನರಸಿಂಹಸ್ವಾಮಿಯವರೂ ಇಲ್ಲ. ಆದರೆ ‘ಶಾನುಭೋಗರ ಮಗಳು’ ಕನ್ನಡಿಗರ ಮನಗಳಲ್ಲಿ ಚಿರಂಜೀವಿಯಾಗಿ ಉಳಿದಿದ್ದಾಳೆ. ಇದು ಕವಿತೆಯ ಮಹತ್ವ.
ಆದರೆ ಕವನವನ್ನೋ, ಚಿತ್ರವನ್ನೋ ನೋಡಿ ಆನಂದಿಸುವ, ಮೆಚ್ಚುಗೆ ಸೂಚಿಸುವ ಪ್ರವೃತ್ತಿ ನಮ್ಮೆಲ್ಲರಲ್ಲೂ ಹೆಚ್ಚಾಗಬೇಕಲ್ಲವೇ? ಆಗ ಬದುಕಿಗೂ ಬೆಲೆ ಬರುತ್ತದಲ್ಲವೇ?

ಕೃಪೆ:ವಿಶ್ವವಾಣಿ.
ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097