ದಿನಕ್ಕೊಂದು ಕಥೆ 834

*🌻ದಿನಕ್ಕೊಂದು ಕಥೆ🌻                                  ಅತಿ ನಂಬಿಕೆ ತರವಲ್ಲ*

ವ್ಯಾಪಾರಿಯೊಬ್ಬ ಒಂಟೆ ಸಾಕಿದ್ದ. ಅದರ ಮೇಲೆ ಸರಕು ಹೇರಿಕೊಂಡು ಊರೂರು ಅಲೆದು ವ್ಯಾಪಾರ ಮಾಡಿ ಹೊಟ್ಟೆ ಹೊರೆಯುತ್ತಿದ್ದ. ಒಮ್ಮೆ ಹೀಗೆಯೇ ಪಕ್ಕದೂರಿಗೆ ತೆರಳಿದಾಗ ಭರ್ಜರಿ ವ್ಯಾಪಾರವಾಗಿ ಕೈತುಂಬ ಲಾಭವೂ ದಕ್ಕಿತು. ತನ್ನೂರಿಗೆ ಮರಳುವ ಮಾರ್ಗಮಧ್ಯದಲ್ಲಿ ಮಂದಿರವೊಂದು ಗೋಚರಿಸಿ, ತನಗೆ ಹೆಚ್ಚಿನ ಲಾಭ ದೊರಕುವಂತೆ ಮಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಲು ನಿರ್ಧರಿಸಿದ. ಒಂಟೆಯನ್ನು ಮರದ ಕೆಳಗೆ ಬಿಟ್ಟು ಮಂದಿರ ಪ್ರವೇಶಿಸಿದ. ದೇವರೊಂದಿಗಿನ ಅನುಸಂಧಾನದಲ್ಲಿ ಆತನಿಗೆ ಸಮಯ ಜಾರಿದ್ದೇ ತಿಳಿಯಲಿಲ್ಲ. ಮಂದಿರದಿಂದ ಹೊರಬರುವ ಹೊತ್ತಿಗಾಗಲೇ ಸಂಜೆಗತ್ತಲು ಆವರಿಸಿತ್ತು. ಬೇಗ ಮನೆ ಸೇರುವ ತವಕದಿಂದ ಒಂಟೆಯನ್ನು ಬಿಟ್ಟಿದ್ದ ಜಾಗದತ್ತ ಬಂದರೆ, ಅದು ನಾಪತ್ತೆಯಾಗಿತ್ತು. ಸುತ್ತಮುತ್ತಲೆಲ್ಲ ಹುಡುಕಿ, ಅವರಿವರನ್ನು ವಿಚಾರಿಸಿದರೂ ಏನೂ ಪ್ರಯೋಜನವಾಗಲಿಲ್ಲ. ತನ್ನ ಜೀವನಾಧಾರವಾಗಿದ್ದ ಒಂಟೆ ಕಳೆದುಹೋಗಿದ್ದಕ್ಕೆ ಅವನಿಗೆ ದುಃಖವಾಯಿತು, ಜತೆಗೆ ದೇವರ ಮೇಲೆ ಸಿಟ್ಟೂ ಬಂತು. ಆಕಾಶದೆಡೆಗೆ ಮುಖಮಾಡಿ, ‘ಹೇ ಪರಮಾತ್ಮಾ, ನೀನೊಬ್ಬ ವಂಚಕ; ನಿನ್ನನ್ನೇ ನಂಬಿದ್ದ ನನಗೆ ಎಂಥ ಮೋಸ ಮಾಡಿಬಿಟ್ಟೆ? ನಿನ್ನನ್ನು ಭಕ್ತಿಯಿಂದ ಪ್ರಾರ್ಥಿಸಿದ್ದು ನಿರರ್ಥಕವಾಯಿತು’ ಎಂದು ಹಲುಬತೊಡಗಿದ. ಅದೇ ದಾರಿಯಲ್ಲಿ ಸಾಗುತ್ತಿದ್ದ ಜ್ಞಾನಿಯೊಬ್ಬನಿಗೆ ವ್ಯಾಪಾರಿಯ ಅಳಲು, ಕೂಗಾಟ ಕೇಳಿಸಿತು. ಏನೆಂದು ವಿಚಾರಿಸಲಾಗಿ ನಡೆದಿದ್ದೆಲ್ಲವನ್ನೂ ವ್ಯಾಪಾರಿ ಅರುಹಿದ. ‘ಅಯ್ಯಾ, ದೇವರ ಮೇಲೆ ಭರವಸೆ ಇಡುವುದು, ಭಕ್ತಿಯಿಂದ ಪ್ರಾರ್ಥಿಸುವುದು ತಪ್ಪಲ್ಲ; ಆದರೆ, ನಿನ್ನ ಮೂಲಭೂತ ಹೊಣೆಗಾರಿಕೆಯನ್ನೇ ಮರೆತು ಎಲ್ಲ ತಪ್ಪಿಗೂ ದೇವರನ್ನೇ ಬಾಧ್ಯಸ್ಥನನ್ನಾಗಿಸುವುದು ತರವಲ್ಲ. ಮಂದಿರಕ್ಕೆ ತೆರಳುವ ಮುನ್ನ ಒಂಟೆಯನ್ನು ಮರದ ನೆರಳಿನಲ್ಲಿ ಬಿಟ್ಟೆಯೇ ಹೊರತು, ಮರಕ್ಕೆ ಅದನ್ನು ಕಟ್ಟಿಹಾಕುವ ಯೋಚನೆಯನ್ನೂ ಮಾಡಲಿಲ್ಲ. ಇದು ನಿನ್ನ ತಪು್ಪ. ಇದಕ್ಕೆ ದೇವರೇನು ಮಾಡಿಯಾನು? ಆಪತ್ಕಾಲದಲ್ಲಿ ಭಗವಂತ ನಮ್ಮನ್ನು ರಕ್ಷಿಸುತ್ತಾನೆಂಬುದು ನಿಜವಾದರೂ, ನಾವೇ ಮಾಡಿಕೊಳ್ಳಬಹುದಾದ ಸಣ್ಣಪುಟ್ಟ ಕೆಲಸಕ್ಕೂ ಅವನನ್ನು ನೆಚ್ಚುವುದು ಸಲ್ಲ…’ ಎಂದು ಜ್ಞಾನಿ ಬುದ್ಧಿಮಾತು ಹೇಳಿದ. ವ್ಯಾಪಾರಿಗೆ ತನ್ನ ತಪ್ಪಿನ ಅರಿವಾಯಿತು. ನಂಬಿಕೆ ಎನ್ನುವುದು ಜೀವನ ಸಾಮರಸ್ಯಕ್ಕೆ ಮೂಲಾಧಾರ ಎನ್ನುವುದೇನೋ ಸರಿ. ಆದರೆ ಕೆಲವೊಂದು ವ್ಯಕ್ತಿಗಳಿಗೆ ಅಥವಾ ಸಂದರ್ಭಗಳಿಗೆ ಅಗತ್ಯ ಮೀರಿ ಪ್ರಾಶಸ್ಱ ಕೊಡುವುದರಿಂದ ಅಥವಾ ಅತಿಯಾಗಿ ನಂಬುವುದರಿಂದ ಪ್ರಯೋಜನಕ್ಕಿಂತ ತೊಂದರೆಯೇ ಹೆಚ್ಚು ಎಂಬ ಸರಳಸತ್ಯವನ್ನು ಮರೆಯದಿರೋಣ.                                           *ಕೃಪೆ: ಮಹಾದೇವ ಬಸರಕೋಡ.ಶಿಕ್ಷಕರು.*                             ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059