ದಿನಕ್ಕೊಂದು ಕಥೆ 835

*🌻ದಿನಕ್ಕೊಂದು ಕಥೆ🌻                                       ದುಡುಕು ಬಹು ಕೆಡುಕು*

ಬಡವನೊಬ್ಬ ಬಾಡಿಗೆ ಟ್ಯಾಕ್ಸಿ ಚಲಾಯಿಸುತ್ತಿದ್ದ, ಇದರಿಂದ ಬರುವ ಆದಾಯದಿಂದ ಸಂಸಾರ ಸಾಗಿಸುವುದು ಕಷ್ಟವಾಗುತ್ತಿತ್ತು. ಎಷ್ಟು ದಿನ ಹೀಗೆ ಕಷ್ಟದ ಕಣ್ಣೀರಿನಲ್ಲಿ ಕೈತೊಳೆಯುವುದು ಎಂದು ಸಾಲಮಾಡಿ ಒಂದಷ್ಟು ಹಣವನ್ನು ಹೊಂದಿಸಿ ಸ್ವಂತಕ್ಕೆ ಒಂದು ಹೊಸ ಕಾರನ್ನು ಕೊಂಡು ತಂದು ಮನೆಮುಂದೆ ನಿಲ್ಲಿಸಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಅಷ್ಟರಲ್ಲಿ ಅವನ 5 ವರ್ಷದ ಮಗು ಅಲ್ಲೇ ಬಿದ್ದಿದ್ದ ಕಬ್ಬಿಣದ ಸಲಾಕೆಯಿಂದ ಹೊಡೆದ ಪರಿಣಾಮ ಕಾರಿನ ಗಾಜು ಒಡೆಯಿತು. ಹೊಸಕಾರು ಹೀಗಾಯಿತಲ್ಲ ಎಂದು ಕೋಪಗೊಂಡು ಮಗುವಿನ ಕೈಯಲ್ಲಿದ್ದ ಸಲಾಕೆಯನ್ನು ಕಿತ್ತುಕೊಂಡು ಕೈಗೆ ಬಲವಾಗಿ ಬಾರಿಸಿದ. ಆ ನಂತರ ನೋವಿನಿಂದ ನರಳಾಡುತ್ತಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ದ. ವೈದ್ಯರು ಉಪಚರಿಸಿ, ‘ಬಲವಾದ ಪೆಟ್ಟು ಬಿದ್ದಿರುವುದರಿಂದ ಮಗುವಿನ ಕೈಮೂಳೆ ಮುರಿದಿದೆ. ಆದ್ದರಿಂದ ಸಂಪೂರ್ಣವಾಗಿ ಸರಿಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಮಗುವನ್ನು ಮನೆಗೆ ಬಿಟ್ಟು, ಒಡೆದುಹೋದ ಕಾರಿನ ಗಾಜನ್ನು ಬದಲಾಯಿಸಿ ಮುಂಚಿನ ಹಾಗೆ ಹೊಸದರಂತೆ ಸರಿಪಡಿಸಿಕೊಂಡು ಮನೆಗೆ ತಂದ. ಮಗು ಮನೆಯಿಂದ ಹೊರಬಂದು ಕಾರನ್ನೊಮ್ಮೆ ನೋಡಿ, ‘ಅಪ್ಪ ಕಾರಿನ ಗಾಜು ಈಗ ಸರಿಹೋಗಿದೆ. ಹಾಗಾದ್ರೆ ನನ್ನ ಕೈನೂ ಈಗ ಸರಿಯಾಗುತ್ತಲ್ವ’ ಎಂದಿತು ಮುಗ್ಧತೆಯಿಂದ. ಅಷ್ಟೊತ್ತಿಗಾಗಲೇ ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. ಮಗುವನ್ನು ಬಾಚಿ ತಬ್ಬಿಕೊಂಡು ಬಿಕ್ಕಿಬಿಕ್ಕಿ ಅಳತೊಡಗಿದ.

ಸಿಟ್ಟಿನ ಕೈಗೆ ಬುದ್ಧಿ ಕೊಡದೆ, ಸಂದರ್ಭ, ಪರಿಸ್ಥಿತಿಗಳನ್ನು ತಾಳ್ಮೆಯಿಂದ ನಿರ್ವಹಿಸುವುದರಲ್ಲೇ ನಮ್ಮ ಜಾಣತನ ಅಡಗಿರುತ್ತದೆ. ‘ತಾಳಿದವನು ಬಾಳಿಯಾನು’, ‘ದುಡುಕು ಬಹು ಕೆಡುಕು’ ಎಂಬೆಲ್ಲ ಅನುಭವದ ನುಡಿಗಳು ಧ್ವನಿಸುವುದು ತಾಳ್ಮೆ ಜೀವನ ವಿಧಾನ ಆಗಬೇಕೆಂಬುದನ್ನೇ. ತಾಳ್ಮೆಯ ದಿನಚರಿ ನಮ್ಮದಾದಲ್ಲಿ ಮಾನಸಿಕ ಒತ್ತಡ ದೂರವಾಗಿ ದೇಹಾರೋಗ್ಯ ಸುಧಾರಿಸುತ್ತದೆ. ಅದರಿಂದ ಆನಂದ ಸಿದ್ಧಿಸುತ್ತದೆ ಮತ್ತು ಆಯುಷ್ಯ ವೃದ್ಧಿಸುತ್ತದೆ.

‘ಕಷ್ಟ ಬಂದರೆ ತಾಳು, ಕಂಗೆಡದೆ ತಾಳು, ದುಷ್ಟ ಮನುಜರು ಪೇಳ್ವ ನಿಷ್ಠುರದ ನುಡಿ ತಾಳು ಹಲಧಾರಾನುಜನನ್ನು ಹೃದಯದಲ್ಲಿ ತಾಳು’ ಎಂದು ದಾಸರು ಕರೆನೀಡಿದ್ದಾರೆ. ‘ನಿನ್ನ ಮನದ ಗೊಂದಲಕ್ಕೆಲ್ಲ ಕಾರಣ ತಾಳ್ಮೆಯಿಂದ ವಿವೇಚಿಸದಿರುವುದೇ’ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ್ದು ತಾಳ್ಮೆಯ ಪಾಠವನ್ನೇ. ಏನೇ ಆದರೂ ಕೋಪವನ್ನು ನಿಯಂತ್ರಿಸಿಕೊಂಡು ತಾಳ್ಮೆಯಿಂದ ವ್ಯವಹರಿಸೋಣ ಎಲ್ಲವನ್ನೂ, ಎಲ್ಲರೊಂದಿಗೂ….                                                ಕೃಪೆ: ಶ್ರೀನಿವಾಸ ತೋರಣಗಟ್ಟಿ.             ಸಂಗ್ರಹ :ವೀರೇಶ್ ಅರಸಿಕೆರೆ.

Comments

Post a Comment

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097