ದಿನಕ್ಕೊಂದು ಕಥೆ 837

*🌻ದಿನಕ್ಕೊಂದು ಕಥೆ🌻                        ಸ್ವಾಭಿಮಾನಿಗಳಾಗಿ ಬದುಕಬೇಕು*

ಸ್ವಾಮಿ ವಿವೇಕಾನಂದರ ಪರಮಶಿಷ್ಯರಲ್ಲಿ ಒಬ್ಬರು ಸಹೋದರಿ ನಿವೇದಿತಾ. ತಮ್ಮ ಗುರುಗಳ ಆಶಯದಂತೆ ಅವರು ಬಾಲಕಿಯರಿಗಾಗಿ ಸ್ವದೇಶಿ ಚಿಂತನೆಯುಳ್ಳ ಶಾಲೆಯನ್ನು ಆರಂಭಿಸಿದರು. ಆದರೆ ಅದನ್ನು ನಡೆಸಲು ನಿವೇದಿತಾರಿಗೆ ಆರಂಭದಲ್ಲಿಯೇ ಆರ್ಥಿಕ ಸಂಕಷ್ಟ ಎದುರಾಯಿತು. ಈ ಸಮಯದಲ್ಲಿ ಕಾಶ್ಮೀರ ಮಹಾರಾಜರು ಕಿಂಚಿತ್ತು ಧನಸಹಾಯ ಮಾಡಿದರಾದರೂ ಅದು ನಾಲ್ಕೈದು ತಿಂಗಳ ನಿರ್ವಹಣೆಗಷ್ಟೇ ಸಾಕಾಯಿತು. ಮುಂದೇನು ಮಾಡಬೇಕೆಂದು ಚಿಂತಿಸುತ್ತಲೇ ನಿವೇದಿತಾ ತಾವು ನಂಬಿದ್ದ ದೈವ ಹಾಗೂ ತಮ್ಮ ಪರಿಶ್ರಮದ ಮೇಲೆ ಭಾರ ಹಾಕಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಹೀಗಿರುವಾಗ ಒಮ್ಮೆ ಅವರ ಶ್ರೀಮಂತ ಗೆಳತಿ ಹೆನ್ರಿಯೇಟಾ ಮುಲ್ಲರ್ ಭೇಟಿಯಾಗಿ ಶಾಲೆಯ ಬಗ್ಗೆ ಪ್ರಸ್ತಾಪಿಸಿ ‘ನನ್ನೆಲ್ಲ ಸಂಪತ್ತನ್ನು ನಿನ್ನ ಶಾಲೆಗೆ ಧಾರೆಯೆರೆಯುತ್ತೇನೆ’ ಎಂದು ಹೇಳಿಕೊಂಡರು. ಆ ಕ್ಷಣಕ್ಕೆ ನಿವೇದಿತಾರಿಗೆ ಆದ ಸಂತಸಕ್ಕೆ ಪಾರವೇ ಇರಲಿಲ್ಲ; ಕಾರಣ, ಅದು ಕಷ್ಟಕಾಲದಲ್ಲಿ ಬಂದೊದಗಿದ ಭಾಗ್ಯ. ಹೆನ್ರಿಯೇಟಾ ಮಾತು ಮುಂದುವರಿಸುತ್ತ, ‘ನಾನೇನೋ ಧನಸಹಾಯ ಮಾಡುತ್ತೇನೆ; ಆದರೆ ಶಾಲೆಯ ಸಂಪೂರ್ಣ ಶಿಕ್ಷಣಕ್ರಮವನ್ನು ಆಂಗ್ಲಪದ್ಧತಿಗೆ ಬದಲಿಸಬೇಕು’ ಎಂದಾಗ ನಿವೇದಿತಾರಿಗೆ ತಮ್ಮ ಹುಮ್ಮಸ್ಸಿನ ಮಹಲು ಅರೆಕ್ಷಣದಲ್ಲಿ ಕುಸಿದಂತಾಯಿತು.

‘ನಿನ್ನ ಬಿಡಿಗಾಸೂ ನನಗೆ ಬೇಡ. ಶಿಕ್ಷಣ ಪದ್ಧತಿಯನ್ನು ಬದಲಿಸಲಾರೆ. ನಾನು ಆರಾಧಿಸುವ ಕಾಳಿಕೆ ನನ್ನ ಕೈ ಹಿಡಿಯುತ್ತಾಳೆ’ ಎಂದು ನಿವೇದಿತಾ ಅಚಲದನಿಯಲ್ಲಿ ಗೆಳತಿಯ ಸಹಾಯವನ್ನು ನಿರಾಕರಿಸಿದರು.

ಎಷ್ಟೋ ಸಲ, ಯಾವುದೋ ಕಾರ್ಯ ಮಾಡಬೇಕಾದರೆ ಹಣ, ಅಂತಸ್ತು, ಅಧಿಕಾರ ಹೀಗೆ ನಾನಾ ಬಗೆಯ ಪ್ರಲೋಭನೆಗೆ ಒಳಗಾಗುತ್ತೇವೆ. ಹೀಗಾದಾಗಲೆಲ್ಲ ಸ್ವಂತಿಕೆಯನ್ನು ಕಳೆದುಕೊಳ್ಳುತ್ತ ಹೋಗುತ್ತೇವೆ ಮತ್ತು ಕೊನೆಗೊಮ್ಮೆ ನಮ್ಮ ಕಾರ್ಯದ ಯಶಸ್ಸನ್ನು ಅನ್ಯರಿಗೇ ಬಿಟ್ಟುಕೊಡಬೇಕಾಗುತ್ತದೆ. ತನ್ನ ಹೊಟ್ಟೆಯನ್ನಷ್ಟೇ ತುಂಬಿಸಿಕೊಳ್ಳುವ ಚಿಕ್ಕ ಜಂತು ಕೂಡ ಸ್ವಾಭಿಮಾನವನ್ನು ಬಿಟ್ಟು ಬದುಕುವುದಿಲ್ಲ. ಹೀಗಿರುವಾಗ ಲೋಕೋಪಕಾರ ಮಾಡಬಯಸುವ ನಾವು ಪರರ ಹಂಗಿನಲ್ಲಿ ಬಾಳಿದರೆ ಮೌಲ್ಯವೆಂತು? ಉದ್ದೇಶಿತ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಸ್ವಾಭಿಮಾನವನ್ನು ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯ. ಸ್ವಾಭಿಮಾನವು ನಮಗೆ ಸ್ವಾಯತ್ತತೆ, ಸಬಲತೆ, ಪರಿಪೂರ್ಣತೆಯನ್ನು ತಂದುಕೊಡುತ್ತದೆ ಎಂಬುದನ್ನು ಮರೆಯಬಾರದು.                               ಕೃಪೆ:ಡಾ.ಗಣಪತಿ ಆರ್ ಭಟ್.              ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097