ದಿನಕ್ಕೊಂದು ಕಥೆ 838

*🌻ದಿನಕ್ಕೊಂದು ಕಥೆ🌻                                     ಉದಾತ್ತರ ಲಕ್ಷಣ*

ಯುದ್ಧಕಾಲದಲ್ಲಿ ಶಿವಾಜಿಯ ಸೈನಿಕರು ಮುಸಲ್ಮಾನ ತರುಣಿಯೊಬ್ಬಳನ್ನು ಸೆರೆ ಹಿಡಿದು ಶಿವಾಜಿಯ ಮುಂದೆ ತಂದು ನಿಲ್ಲಿಸಿದ್ದರು. ಇಂಥ ಸೌಂದರ್ಯವತಿಯನ್ನು ಕರೆತಂದದ್ದಕ್ಕೆ ತಮಗೆಲ್ಲ ಬಹುಮಾನ ಸಿಗಲಿದೆ ಎಂದೇ ಅವರು ಭಾವಿಸಿದ್ದರು. ತಲೆತಗ್ಗಿಸಿ ನಿಂತಿದ್ದ ಆಕೆಯನ್ನು ದಿಟ್ಟಿಸಿ ನೋಡಿದ ಶಿವಾಜಿ ಒಮ್ಮೆ ಮುಗುಳ್ನಕ್ಕು, ಆಕೆಯೆಡೆಗೆ ನಡೆದ. ಆ ತರುಣಿ ಶಿವಾಜಿಯ ಶೀಲ, ಕರುಣೆ, ಮಮತೆ, ಚಾರಿತ್ರ್ಯದ ಬಗ್ಗೆ ಕೇಳಿದ್ದಳು. ಗೋವು, ಸ್ತ್ರೀ, ಜ್ಞಾನಿಗಳು ಮತ್ತು ಮಕ್ಕಳ ಬಗ್ಗೆ ಆತ ಅತೀವ ಪ್ರೀತಿ-ಗೌರವ ಹೊಂದಿದ್ದಾನೆಂದೂ, ಇವರ ರಕ್ಷಣೆಗಾಗಿ ಎಂಥದ್ದೇ ಕಷ್ಟ ಎದುರಿಸಲೂ ಆತ ಸಿದ್ಧನೆಂದೂ ಆಕೆಗೆ ತಿಳಿದಿತ್ತು. ಆದರೂ ಆತ ಮುಗುಳ್ನಗುತ್ತ ತನ್ನೆಡೆಗೆ ಬರುತ್ತಿರುವುದನ್ನು ಕಂಡು ಆ ಯುವತಿ ಒಮ್ಮೆ ಬೆವರಿದಳು. ಇತ್ತ ಸೇವಕರು, ತಾವು ಕರೆತಂದ ಯುವತಿ ಮಹಾರಾಜರಿಗೆ ಇಷ್ಟವಾಗಿದ್ದಾಳೆಂದು ಭಾವಿಸಿ ಖುಷಿಪಟ್ಟರು. ಆಗ ಶಿವಾಜಿ ಸೈನಿಕರ ಕಡೆಗೆ ತಿರುಗಿ ‘ಈ ತರುಣಿಯನ್ನು ಆಕೆಯ ನಿವಾಸಕ್ಕೆ ಗೌರವಾದರಗಳೊಂದಿಗೆ ಬಿಟ್ಟುಬನ್ನಿ; ಆಕೆಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಿ’ ಎಂದು ಆಜ್ಞಾಪಿಸಿದ. ನಂತರ ಆ ಯುವತಿಯನ್ನು ಕುರಿತು ಶಿವಾಜಿ, ‘ನನ್ನ ಸೈನಿಕರ ಪ್ರಮಾದವನ್ನು ಮನ್ನಿಸು ತಾಯಿ; ನನಗೆ ಶತ್ರುತ್ವವಿರುವುದು ನಿಮ್ಮ ಸುಲ್ತಾನರೊಡನೆಯೇ ಹೊರತು, ಅವರ ಸಾಮ್ರಾಜ್ಯದ ಹೆಣ್ಣುಮಕ್ಕಳ ಮೇಲಲ್ಲ. ನಿಮ್ಮ ಅಪ್ರತಿಮ ಸೌಂದರ್ಯ ಕಂಡು ಸಂತೋಷವೆನಿಸುತ್ತಿದೆ ಎನ್ನುತ್ತ ಆಕೆಯ ಸೌಂದರ್ಯಕ್ಕೆ ಮೆಚ್ಚುಗೆ ಸೂಚಿಸಿದ. ಶಿವಾಜಿಯ ಬಗ್ಗೆ ತಪ್ಪಾಗಿ ಯೋಚಿಸಿದ್ದ ಆ ಮುಸಲ್ಮಾನ ತರುಣಿ ಲಜ್ಜಿತಳಾದಳು. ಹೃದಯತುಂಬಿ ಆತನಿಗೆ ನಮಸ್ಕರಿಸಿದಳು. ಸಾಧಾರಣ ವ್ಯಕ್ತಿಯೊಬ್ಬ ಒಂದು ಸಾಮ್ರಾಜ್ಯ ಸ್ಥಾಪಿಸಬೇಕಾದರೆ ಶ್ರೇಷ್ಠ ಚಾರಿತ್ರ್ಯ ಉಳ್ಳವನಾಗಿರಬೇಕೆಂಬ ಸತ್ಯ ಆಕೆಯ ಗಮನಕ್ಕೆ ಬಂದಿತ್ತು. ಶಿವಾಜಿಯ ಸೈನಿಕರು ಆಕೆಯನ್ನು ಗೌರವಾದರದೊಂದಿಗೆ ಅಲ್ಲಿಂದ ಕರೆದೊಯ್ದರು.

ವೀರನಾದವನು ಪ್ರತಿ ಹೆಣ್ಣಿನ ಸೌಂದರ್ಯದಲ್ಲಿ ಮಾತೃತ್ವ ಕಾಣುತ್ತಾನೆ ಎಂಬುದನ್ನು ನಮ್ಮ ಶಾಸ್ತ್ರಗಳು ದೃಢಪಡಿಸಿವೆ. ಶ್ರೇಷ್ಠವ್ಯಕ್ತಿಯ ಲಕ್ಷಣವನ್ನು ನಮ್ಮ ಪ್ರಾಚೀನರು ಸುಂದರ ಶ್ಲೋಕವೊಂದರಲ್ಲಿ ಹೀಗೆ ವಿವರಿಸಿದ್ದಾರೆ-

ಮಾತೃವತ್ ಪರದಾರೇಶು ಪರದ್ರವ್ಯಾಣಿ ಲೋಷ್ಠವತ್ |

ಆತ್ಮವತ್ ಸರ್ವಭೂತಾನಿ ಯಃ ಪಶ್ಯತಿ ಸ ಪಂಡಿತಃ ||

ಅಂದರೆ- ಪರರ ಹೆಣ್ಣನ್ನು ತಾಯಿಯಂತೆಯೂ ಇನ್ನೊಬ್ಬರ ಹಣವನ್ನು ಮಣ್ಣಿನ ಹೆಂಟೆಯಂತೆಯೂ ಸಕಲ ಪ್ರಾಣಿಗಳನ್ನು ತನ್ನಂತೆಯೂ ಯಾರು ಭಾವಿಸುತ್ತಾನೋ ಆತನೇ ನಿಜವಾದ ಜ್ಞಾನಿ ಎಂದರ್ಥ. ಸುಂದರ ಸಮಾಜ ನಿರ್ವಣವಾಗುವುದು ಈ ಮಾನಸಿಕತೆ ನಮ್ಮಲ್ಲಿ ಗಟ್ಟಿಯಾದಾಗಲೇ, ಅಲ್ಲವೇ?

*ಕೃಪೆ: ಡ್ಯಾನಿ ಪಿರೇರಾ.*                         ಸಂಗ್ರಹ; ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097