ದಿನಕ್ಕೊಂದು ಕಥೆ 839

*🌻ದಿನಕ್ಕೊಂದು ಕಥೆ🌻                                               ಭಗತ್ ಸಿಂಗ್ ಚಿಕ್ಕಮ್ಮನ ಕಣ್ಣೀರಿನ ಕಥೆ*
     
23ನೆಯ ವರ್ಷದಲ್ಲೇ ಇಹಲೋಕ ತ್ಯಜಿಸಿದ ಭಗತ್ ಸಿಂಗ್​ನ ಎರಡನೆಯ ಚಿಕ್ಕಪ್ಪ ಸ್ವರ್ಣ ಸಿಂಹನ ಪತ್ನಿ ಹುಕುಮ್ ಕೌರ್​ಳದ್ದು ಅಪ್ಪಟ ತ್ಯಾಗದ ಬದುಕು. ಜೀವನದಲ್ಲಿ ಅಂಧಕಾರವೇ ಘನೀಭವಿಸಿದ್ದರೂ ಈ ತ್ಯಾಗಮಯಿಯಲ್ಲಿ ಕೆನೆಗಟ್ಟಿದ್ದ ದೇಶಪ್ರೇಮಕ್ಕೆ ಒಂದಿನಿತೂ ಧಕ್ಕೆಯಾಗಲಿಲ್ಲ ಎಂಬುದು ಹೆಮ್ಮೆಯ ಸಂಗತಿ.

ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಕಲಿಗಳನ್ನು ಕುರಿತು ನೂರಾರು ಲೇಖನಗಳನ್ನು ಬರೆದಿದ್ದಾಯಿತು. ಒಬ್ಬೊಬ್ಬರೂ ಅನುಭವಿಸಿದ ಘೊರ ಶಿಕ್ಷೆಗಳನ್ನು, ನರಕಯಾತನೆಯನ್ನು ವಿವರಿಸಿದ್ದಾಯಿತು. ಇನ್ನೂ ನೂರಾರು ವೀರರು ಈ ಅಂಕಣದಲ್ಲಿ ಕಾಣಿಸಿಕೊಳ್ಳಲು ಸಾಲುಗಟ್ಟಿ ನಿಂತಿದ್ದಾರೆ. ಎಲ್ಲವೂ ಸರಿಯೇ. ಆದರೆ ರಣರಂಗದಲ್ಲಿ ಹೋರಾಡಲು ಹೋಗಿ ಜೀವಾವಧಿ ಶಿಕ್ಷೆ ಅನುಭವಿಸಿದವರ, ಮಡಿದು ಹುತಾತ್ಮರಾದವರ ತಾಯಿ, ಪತ್ನಿ, ಸೋದರಿಯರನ್ನು ಕುರಿತು ಒಂದು ಉಲ್ಲೇಖವೂ ಆಗಿಲ್ಲದಿರುವುದು, ಮೌನವಾಗಿ ಊರ್ವಿುಳೆಯಂತೆ, ಸೀತೆಯಂತೆ ಕಷ್ಟ ಸಹಿಸಿಕೊಂಡ ವೀರ ಸತಿಮಣಿಯರಿಗೆ ಆಗಿರುವ ಅನ್ಯಾಯ ಎಂದೇ ಹೇಳಬೇಕು. ಮತ್ತೇನು. ವಾಸುದೇವ ಬಲವಂತ ಫಡಕೆಯ ಹೆಂಡತಿ, ವೀರ ಸಾವರ್​ಕರರ ಪತ್ನಿ, ಅಜಿತ್ ಸಿಂಹನ ಪತ್ನಿ, ಸ್ವರ್ಣ ಸಿಂಹ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ ಕೈ ಹಿಡಿದ ಹೆಣ್ಣುಮಕ್ಕಳು ಮಾಡಿರುವ ತ್ಯಾಗ ಬೇರಾರಿಗಿಂತಲೂ ಕಡಿಮೆಯಲ್ಲ. ಅವರು ಆಂತರ್ಯದಲ್ಲಿ ಜೀವನಪರ್ಯಂತ ಅನುಭವಿಸಿದ ನೋವು, ಸಂಕಟ ಮತ್ತು ಬಹಿರಂಗದಲ್ಲಿನ ಅನುಚಿತ ಟೀಕೆಗಳು, ಚುಚ್ಚುಮಾತುಗಳು ಅಸಹನೀಯವಾದಂಥವು.

ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ದಾಂಪತ್ಯದ ಸುಖ ಸಂತೋಷಗಳನ್ನು ಅನುಭವಿಸಬೇಕೆಂದು ಆಸೆಯಿಂದಿರುವಾಗಲೇ ಗಂಡನ ಮರಣವಾಗಿ ಆ ಹೆಣ್ಣುಮಗಳು 56 ವರ್ಷಗಳ ಕಾಲ ಒಬ್ಬಂಟಿ ಜೀವನ ನಡೆಸಿ, ಇತರರ ಸೇವೆಯಲ್ಲಿ ಬಾಳನ್ನು ಸವೆಸಿದ್ದು ನೋಡಿದಾಗ ಆಕೆ ದೇಶಕ್ಕೆ ನೀಡಿದ ಕೊಡುಗೆಗೆ ಸಮಾನವಾದುದು ಇನ್ನಾವುದಿದ್ದೀತು ಅನ್ನಿಸುತ್ತದೆ. ಇಂಥ ಲಕ್ಷ ಲಕ್ಷ ಮಹಿಳಾಮಣಿಗಳು ತಮ್ಮವರನ್ನು ಯುದ್ಧಭೂಮಿಗೆ ಕಳುಹಿಸಿ ತಾವು ಮೌನವಾಗಿ ಕಷ್ಟಗಳ ಪರಂಪರೆಯನ್ನೇ ಅಪ್ಪಿಕೊಂಡು ನಡೆಸಿದ ಜೀವನ ಎಲ್ಲೂ ದಾಖಲಾಗಿಲ್ಲ. ಅಲ್ಲೊಂದು ಇಲ್ಲೊಂದು ಉದಾಹರಣೆ ಮಾತ್ರ ದೊರೆತೀತು.

ಭಗತ್ ಕುಟುಂಬ ಸೇರಿದ ಆ ಹುಡುಗಿ: ಈಗ ನಾನು ಹೇಳ ಹೊರಟಿರುವುದು ತನ್ನ 23ನೆಯ ವರ್ಷದಲ್ಲೇ ಇಹಲೋಕ ತ್ಯಜಿಸಿದ ಭಗತ್ ಸಿಂಗ್​ನ ಎರಡನೆಯ ಚಿಕ್ಕಪ್ಪ ಸ್ವರ್ಣ ಸಿಂಹನ ಪತ್ನಿ ಹುಕುಮ್ ಕೌರ್​ಳನ್ನು ಕುರಿತು. ಅವಳ ಜೀವನವೆಂದರೆ ‘ಘನೀಭೂತ ಅಂಧಕಾರ’ ಎಂದು ಲೇಖಕರೊಬ್ಬರು ವರ್ಣಿಸಿದ್ದಾರೆ.

ಪಂಜಾಬಿನ ಬಡ ಸಿಖ್ ಮನೆತನದಲ್ಲಿ ಜನ್ಮ ತಾಳಿದ ಹುಕುಮ್ ಕೌರ್ ಘನತೆವೆತ್ತ ಸರ್ದಾರ್ ಅರ್ಜುನ ಸಿಂಹನ ಮನೆಯ ಸೊಸೆಯಾಗಿ ಬಂಗಾ ಗ್ರಾಮದ ವಿಶಾಲವಾದ ಮನೆಗೆ ಕಾಲಿಟ್ಟಳು. ಪತಿಯಾದವನು ಮನೆಮಂದಿಯ ಎಲ್ಲರ ಅಚ್ಚುಮೆಚ್ಚಿನ ಕಿರಿಯ ಮಗ ಸ್ವರ್ಣ ಸಿಂಹ. ಅವನು ಅಣ್ಣಂದಿರಾದ ಕಿಶನ್ ಮತ್ತು ಅಜಿತ್ ಸಿಂಹರ ಪಾಲಿನ ಲಕ್ಷ್ಮಣ. ಅವರಿಬ್ಬರ ಬಲಗೈ ಬಂಟ.

ಆದರೆ ಅಣ್ಣಂದಿರಿಬ್ಬರೂ ದುಡಿಯುತ್ತಿದ್ದುದು ಕುಟುಂಬ ಪೋಷಣೆಗಾಗಿ ಅಲ್ಲ. ಭಾರತದ ಬಿಡುಗಡೆಯ ಮಹಾಯಜ್ಞದಲ್ಲಿ ಸಮಿತ್ತುಗಳಾಗಿದ್ದರು. ಇವನೂ ಹಿಂದೆ ಬೀಳಲಿಲ್ಲ. ಮನೆ, ಹೆಂಡತಿಯನ್ನು ಮರೆತು ದೇಶಸೇವೆಯ ಸಲುವಾಗಿ ಟೊಂಕಕಟ್ಟಿದ್ದ ಸ್ವರ್ಣ ಸಿಂಹ ಕೊನೆಗೆ ಹೆಂಡತಿಗೆ ನೀಡಿದ್ದು ಐವತ್ತಾರು ವರ್ಷಗಳ ನೋವು, ಕಣ್ಣೀರು, ಸಂಕಷ್ಟಗಳ ಜೀವನ.

ಸ್ವರ್ಣ ಸಿಂಹನ ಪಾಲಿಗೆ ಮದುವೆ ಹೆಸರಿಗಷ್ಟೆ. ಆದರೆ ಹುಕುಮ್ ಕೌರ್ ಹೊಂಗನಸುಗಳ ಗೋಪುರಗಳನ್ನೇ ಕಟ್ಟಿಕೊಂಡು ಬಂದಿದ್ದಳು. ಗಂಡ ಸತ್ತಾಗ ಅವಳ ವಯಸ್ಸು ಇಪ್ಪತ್ತು! ಮನೆಯಲ್ಲಿ ಹೋಮ ಹವನಗಳ ಆರ್ಯ ಸಮಾಜದ ವಾತಾವರಣ. ಅವಳೋ ಶುದ್ಧ ಸಿಖ್ ಸಂಪ್ರದಾಯದಲ್ಲಿ ಬೆಳೆದವಳು. ಕೆಲವೇ ದಿನಗಳಲ್ಲಿ ಆ ವಾತಾವರಣಕ್ಕೆ ಹೊಂದಿಕೊಂಡು ಅತ್ತೆ ಮಾವಂದಿರ ಕೈಯಲ್ಲಿ ಭೇಷ್ ಅನ್ನಿಸಿಕೊಂಡಳು.

ಗಂಡನಿಗೆ ಅವನದೇ ಕೆಲಸಗಳು, ಆಲೋಚನೆಗಳು, ಸಭೆ, ಮೆರವಣಿಗೆ, ಪ್ರತಿಭಟನಾ ಕಾರ್ಯಕ್ರಮಗಳು. ಅವುಗಳ ಪ್ರಚಾರ ಆಗಬೇಕು. ಕರಪತ್ರಗಳನ್ನು ಬರೆದು ವಿತರಿಸಬೇಕು. ಅಣ್ಣಂದಿರಿಬ್ಬರು ಹೇಳಿದ ಕೆಲಸಗಳನ್ನು ಮಾಡಬೇಕು. ಹೀಗೆ ಅವನ ತಲೆನೋವುಗಳು ಒಂದೇ ಎರಡೇ. ಇಂಥ ಸನ್ನಿವೇಶದಲ್ಲಿ ಪತ್ನಿಯತ್ತ ಗಮನ ಕೊಡಲಿಕ್ಕೆ ಸಮಯವಾದರೂ ಎಲ್ಲಿ ಸಿಗಬೇಕು ಅವನಿಗೆ! ಈ ಚಟುವಟಿಕೆಗಳ ಪರಿಣಾಮ ಸ್ವರೂಪವೇ ಒಂದೂವರೆ ವರ್ಷಗಳ ಜೈಲುವಾಸ. ಜೈಲಿನಲ್ಲೇ ಅಡರಿಕೊಂಡಿತು ಭಯಂಕರ ಕ್ಷಯರೋಗ. ಬ್ರಿಟಿಷ್ ಜೈಲು ಆತಿಥ್ಯ ಅವನಿಗೆ ನೀಡಿದ ಕೊಡುಗೆ!

ಅವನು ನೀಡಿದ ಕೊಡುಗೆ ವೈಧವ್ಯ: ಆ ದಿನಗಳಲ್ಲಿ ಅವನು ಬದುಕಬಹುದೆಂಬ ಆಸೆಯ ಒಂದು ಕಿರಣವೂ ಇರಲಿಲ್ಲ. ವೈದ್ಯರು, ಹಕೀಮರು ಎಲ್ಲರೂ ಕೈಚೆಲ್ಲಿದ್ದರು. ಅದು ನಿವಾರಣೆಯಾಗದ ರೋಗ ಎಂದಿದ್ದರು. ಅವನ ಮಂಚದ ತುದಿಯಲ್ಲಿಯೇ ಹೆಡೆ ಬಿಚ್ಚಿ ಕುಳಿತಿದ್ದ ಸಾವು ತನ್ನ ಸಮಯವನ್ನು ಎದುರು ನೋಡುತ್ತಿತ್ತು.

ಪತಿಯ ಈ ಶರಶಯ್ಯೆಯ ಸ್ಥಿತಿಯ ಕಾರಣ ಹುಕುಮ್ ಕೌರ್​ಳ ಜೀವನದಲ್ಲಿ ಕತ್ತಲು ಆವರಿಸಿತ್ತು. ಒಂದೂವರೆ ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ಜೀವನ ಸಂಗಾತಿಯ ಸೇವೆ ಮಾಡಿದ ಹುಕುಮ್ ಕೌರಳಿಗೆ ಒಂದು ದಿನ ಗಂಡನೆಂಬ ಜ್ಯೋತಿ ಆರಿಹೋದದ್ದು ತಿಳಿದಾಗ ಆವರಿಸಿದ್ದೇ ಘನೀಭೂತ ಗಾಢಾಂಧಕಾರ! ಶುರುವಾಯಿತು ಅವಳ ಅರ್ಧ ಶತಮಾನದ ಮೇಲಾರು ವರ್ಷಗಳ ವಿಧವಾ ಜೀವನ! ಆ ನಿರಾಶಮಯ ಸ್ಥಿತಿಯಲ್ಲಿ ಅವಳಿಗೆ ಸಾಂತ್ವನ ನೀಡುತ್ತಿದ್ದವನು ಕುಲತಾರ್ ಸಿಂಗ್; ಭಗತ್ ಸಿಂಗನ ತಮ್ಮ. ಕುಲ್​ತಾರ್ ಎಂದರೆ ಅವಳಿಗೆ ಸ್ವಂತ ಮಗನಿಗಿಂತಲೂ ಹೆಚ್ಚು. ಕುಲ್​ತಾರ್ ಏನು ಕಡಮೆಯೇ. ಅವನೂ ಕ್ರಾಂತಿಕಾರಿಯೇ. ಅವನನ್ನು ಬ್ರಿಟಿಷರು ಮಾಂಟ್​ಗೋಮರಿ ಎಂಬಲ್ಲಿನ ಜೈಲಿನಲ್ಲಿ ಬಂಧಿಸಿಟ್ಟಿದ್ದರು.

ಅವನನ್ನು ನೋಡಬೇಕೆಂಬ ಹುಕುಮ್ ಕೌರ್​ಳ ತವಕ ಮುಗಿಲು ಮುಟ್ಟಿದಾಗ ಮನೆಯವರೊಂದಿಗೆ ತಾನೂ ಜೈಲಿಗೆ ಹೋದಳು. ಆದರೆ ಅವನ ಸಂದರ್ಶನಕ್ಕೆ ಅನುಮತಿ ಇದ್ದಿದ್ದು ತಂದೆ, ತಾಯಿ, ಪತ್ನಿ, ಸಹೋದರ, ಸಹೋದರಿಯರಿಗೆ ಮಾತ್ರ. ಹುಕುಮ್ ಕೌರ್ ಅವನ ಚಿಕ್ಕಮ್ಮ. ಅವಳಿಗೆ ಅನುಮತಿ ಸಿಗಲಿಲ್ಲ. ಅವಳಿಗೆ ಭಾವನೆಗಳು ಒತ್ತರಿಸಿ ಬಂದವು. ಗೋಡೆಗೆ ತಲೆ ಚಚ್ಚಿಕೊಂಡಳು. ‘ಕುಲ್​ತಾರ್! ನನ್ನನ್ನು ಒಳಕ್ಕೆ ಬಿಡುತ್ತಿಲ್ಲ. ನಾನು ನಿನ್ನನ್ನು ಸಾಕಿ ಸಲಹಿದವಳಲ್ಲವೇನೋ. ನೀನು ನನ್ನ ಮಗ. ನನಗೂ ನಿನಗೂ ಸಂಬಂಧ ಇಲ್ಲ ಎನ್ನುತ್ತಿದ್ದಾರಲ್ಲ. ಇದು ಹೇಗೆ ಸಾಧ್ಯ?’ ಎಂದು ಗಟ್ಟಿಯಾಗಿ ಅತ್ತಳು.

ಅವಳನ್ನು ನೋಡಿ ಸುತ್ತಲಿದ್ದವರೆಲ್ಲ ಕಣ್ಣೀರು ಸುರಿಸಿದರು. ಅವಳ ಆಕ್ರಂದನ ಜೈಲು ಅಧಿಕಾರಿಗಳಂತಹ ಕಠಿಣ ಹೃದಯಿಗಳ ಮನಸ್ಸನ್ನೂ ಕರಗಿಸಿತು. ಜೈಲು ಅಧಿಕಾರಿಗಳು ನಿಯಮಗಳನ್ನು ಮುರಿದು ಹುಕುಮ್ ಕೌರಳನ್ನು ಕುಲ್​ತಾರನೊಂದಿಗೆ ಭೇಟಿ ಮಾಡಿಸಿದಾಗ ಅವಳು ಅವನೊಂದಿಗೆ ಕೇಳಿಕೊಂಡಿದ್ದು ಒಂದೇ. ಅದು- ಕುಲ್​ತಾರ್​ನ ಹೆಂಡತಿ ಸತೀಂದ್ರ ಕೌರಳ ಯೋಗಕ್ಷೇಮ ಕುರಿತು. ಅವನು ಹುಕುಮ್ ಯೋಗಕ್ಷೇಮ ವಿಚಾರಿಸಿದಾಗ, ‘ಅದು ಬಿಡು. ನನ್ನ ಜೀವನ ಹೇಗೋ ಕಳೆದುಹೋಯಿತು. ಇನ್ನು ನನಗೆ ಬೇರಾವ ದಾರಿಯೂ ಇಲ್ಲ. ನಿನ್ನ ಚಿಕ್ಕಪ್ಪ ನನಗೆ ಮಾಡಿದಂತೆ ನೀನು ನಿನ್ನ ಹೆಂಡತಿಗೆ ಮಾಡಬೇಡ ಕುಲ್​ತಾರ್!’ಎಂದಳು. ಅವಳ ಮಾತಿನಲ್ಲಿ ತನ್ನ ದಾರುಣ ಸ್ಥಿತಿ ಬೇರಾರಿಗೂ ಬರಬಾರದೆಂಬ ಇಂಗಿತ ಇತ್ತು.

ಮನೆಯ ಹಿರಿಯರು ಅವಳನ್ನು ಕನಿಕರದಿಂದ ನೋಡುತ್ತಿದ್ದರೂ ಇತರರ ಬಗ್ಗೆ ಅದನ್ನೇ ಹೇಳುವಂತಿರಲಿಲ್ಲ. ಅವಳು ಮನೆಯ ಎಲ್ಲ ಕೆಲಸಗಳನ್ನೂ ಒಂದು ಕ್ಷಣ ವಿರಾಮವಿಲ್ಲದೆ ಮಾಡುತ್ತಿದ್ದರೂ ಅನವಶ್ಯಕ ಚುಚ್ಚುಮಾತುಗಳು, ವ್ಯಂಗ್ಯನುಡಿಗಳು ತಪ್ಪುತ್ತಿರಲಿಲ್ಲ. ಗಂಡ ಸತ್ತಿದ್ದಕ್ಕೆ ಕಾರಣ ಅವಳ ಕಾಲಗುಣವೇ ಎಂದು ಗೂಬೆ ಕೂರಿಸುವ ಮಾತುಗಳಿಗೇನೂ ಬರ ಇರಲಿಲ್ಲ.

ಅವಳ ಓರಗಿತ್ತಿ ಅಜಿತ್ ಸಿಂಹನ ಹೆಂಡತಿ ಹರ್​ನಾಮ್ ಕೌರ್ ಕೂಡ ಗಂಡನಿಂದ ದೂರವಿದ್ದವಳೇ ತಾನೇ. ಆ ಮಟ್ಟಿಗೆ ಇವಳಂತೆ ಅವಳೂ ಏಕಾಕಿ. ಆದರೆ ಮನೆಯಲ್ಲಿ ಅವಳಿಗೆ ಸಿಗುತ್ತಿದ್ದ ಮರ್ಯಾದೆ ಇವಳಿಗೆ ಸಿಗುತ್ತಿರಲಿಲ್ಲ. ಹರ್​ನಾಮ್ ಕೌರ್ ಧನಿಕ ಕುಟುಂಬದಿಂದ ಬಂದಿದ್ದಳು. ಇವಳದು ಸಾಧಾರಣ ಕುಟುಂಬ. ಹರ್​ನಾಮ್ ಅಕ್ಷರಸ್ಥಳು. ಜೊತೆಗೆ ಜನದ ಮುರಿದ ಮೂಳೆ ಜೋಡಿಸಿ ವಾಸಿ ಮಾಡುವುದು, ಅಕ್ಕಪಕ್ಕದ ಹೆಣ್ಣುಮಕ್ಕಳಿಗೆ ಪಾಠ ಹೇಳುವುದು, ಉಳುಕು ವಾಸಿ ಮಾಡುವುದು, ಸಣ್ಣ ಪುಟ್ಟ ಕಾಯಿಲೆಗೆ ಮನೆಮದ್ದು ನೀಡುವುದೇ ಮುಂತಾದ ಕಾರ್ಯಗಳಿಂದ ಎಲ್ಲರ ಗೌರವ ಗಳಿಸಿದ್ದಳು. ಅವಳೊಂದಿಗೆ ಎಲ್ಲರೂ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದರು. ಎಲ್ಲರಿಂದಲೂ ಉಪೇಕ್ಷೆಗೆ ಒಳಗಾದವಳೆಂದರೆ ಹುಕುಮ ಕೌರ್. ಇತರರ ಉಪೇಕ್ಷೆ ಅವಳನ್ನು ಭಾವರಹಿತಳನ್ನಾಗಿ ಮಾಡಿತ್ತು. ಅದರಿಂದ ಅವಳ ಸಿಟ್ಟು ನೆತ್ತಿಗೇರುತ್ತಿತ್ತು. ಮನಸ್ಸಿನಲ್ಲಿದ್ದುದೆಲ್ಲ ಬಾಯಿಂದ ಹೊರಬರುತ್ತಿತ್ತು. ಯಾರಾದರೂ ನಿಂದಿಸಿದರೆ ಪ್ರತಿಯಾಗಿ ನಿಂದಿಸುತ್ತಿದ್ದಳು. ಮೊದಲೇ ಅವಳೆಂದರೆ ನಿಕೃಷ್ಟ ಭಾವನೆ. ಜೊತೆಗೆ ಅವಳ ಬಾಯಿಂದ ಕೋಪದ ಮಾತುಗಳು ಹೊರಟಾಗ ಅವಳ ಮೇಲಿನ ತಿರಸ್ಕಾರಕ್ಕೆ ಮತ್ತಷ್ಟು ಪುಷ್ಟಿ. ಎಷ್ಟು ಉಪೇಕ್ಷಿತಳಾಗಿದ್ದರೂ ದಿನನಿತ್ಯದ ಅವಳ ಕರ್ತವ್ಯ ನಿರ್ವಹಣೆ ಮಾತ್ರ ಚಾಚೂ ತಪ್ಪದೆ ನಡೆಯುತ್ತಿತ್ತು. ಬೆಳಗಿನ ಜಾವ ನಾಲ್ಕು ಗಂಟೆಗೆ ಬೀಸುವ ಕಲ್ಲಿನ ಬಳಿ ಇರುತ್ತಿದ್ದಳು. ಏಳು ಗಂಟೆಗೆ ಒಲೆಯ ಹತ್ತಿರ ಇದ್ದರೆ ಹನ್ನೊಂದು ಘಂಟೆಗೆ ಅರೆಯುವ ಕಲ್ಲಿನ ಬಳಿ ಹಾಜರ್. ಅನಂತರ ಚರಕಾದಲ್ಲಿ ನೂಲು ತೆಗೆಯುವ ಕೆಲಸ. ಕೆಲಸವೇ ಅವಳ ಧರ್ಮ ಆಗಿತ್ತು. ಮನೆಯಲ್ಲಿ ಎಲ್ಲರೂ ಅವಳು ಮಾಡಿದ ರೊಟ್ಟಿಯನ್ನೇ ತಿನ್ನುತ್ತಿದ್ದರು. ಅವಳು ನೇಯ್ದ ವಸ್ತ್ರಗಳನ್ನೇ ಉಡುತ್ತಿದ್ದರು. ಆದರೂ ಅವಳನ್ನು ಕಂಡರೆ ಅಸಡ್ಡೆ.

ಸ್ವಾತಂತ್ರ್ಯ ಯಜ್ಞದ ಸಮಿತ್ತು: ಹುಕುಮ್ ಕೌರ್​ಳಲ್ಲಿ ದೇಶಪ್ರೇಮ ಮಡುಗಟ್ಟಿತ್ತು. ದೇಶಕ್ಕಾಗಿ ತನ್ನ ಗಂಡ ನಿಧಾನವಾಗಿ ಜೀವ ತೊರೆದದ್ದನ್ನು ಕಂಡಿದ್ದಳು. ತನ್ನ ಪ್ರೀತಿಯ ಭಗತ್ ಸಿಂಗ್ ಗಲ್ಲಿಗೇರಿದ್ದನ್ನು ಕಂಡಿದ್ದಳು. ತನ್ನ ಮನೆಯ ಎಲ್ಲರೂ ದೇಶದೊಂದಿಗೆ ತಮ್ಮ ಜೀವನವನ್ನು ಸಾಮರಸ್ಯಗೊಳಿಸಿದ್ದರು.

ಗಂಡ ಮತ್ತು ಭಗತ್ ಸಿಂಗ್​ರ ಸಾವುಗಳ ಅನಂತರ ಅವಳನ್ನು ಕಾಡಿದ್ದು 1966ರ ಜನವರಿ 11ರಂದು ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಅಕಾಲಿಕ ಮರಣ. ಅವಳಿಗೂ ಅವರಿಗೂ ವೈಯಕ್ತಿಕವಾಗಿ ಎಂಥ ಸಂಬಂಧವಿರಲು ಸಾಧ್ಯ? ಆದರೆ ಅವರು ದೇಶದ ಪ್ರಧಾನಿ ಎಂಬ ಸಂಗತಿ ಅವಳಿಗೆ ಮುಖ್ಯವಾಗಿತ್ತು. ಪಾಕಿಸ್ತಾನ ಆದದ್ದು ಹುಕುಮ್ ಕೌರ್​ಳಿಗೆ ಬಹಳ ದುಃಖದ ಸಂಗತಿಯಾಗಿತ್ತು. ಅವಳಿಗೆ ಪ್ರಜಾಪ್ರಭುತ್ವ ಮಂತ್ರಿಮಂಡಲ ಇವುಗಳ ಪರಿಜ್ಞಾನ ಇರಲಿಲ್ಲ. ಅವಳ ಪಾಲಿಗೆ ಶಾಸ್ತ್ರೀಜಿ ಭಾರತದ ಮಹಾರಾಜ! ತಾಷ್ಕೆಂಟ್​ನಲ್ಲಿ ಅವರ ಸಾವಾಯಿತೆಂದು ತಿಳಿದಾಗ, ‘ಅಯ್ಯೋ! ನಮ್ಮ ರಾಜನನ್ನು ಪಾಕಿಸ್ತಾನದ ರಾಜ ಕೊಂದುಬಿಟ್ಟ’ ಎಂದು ಉದ್ಗರಿಸಿದಳು. ಅದೇ ಉದ್ಗಾರ ಪದೇಪದೆ ಬರುತ್ತಿತ್ತು.

ಹುತಾತ್ಮನ ಪತ್ನಿಯಾಗಿದ್ದ ಅವಳಿಗೆ ತಿಳಿದೋ ತಿಳಿಯದೆಯೋ ರಾಷ್ಟ್ರೀಯ ಭಾವನೆ ಮೈಗೂಡಿತ್ತು. ತನ್ನ ಜೀವನದ ದುಃಸ್ಥಿತಿಗೆ ಕಾರಣವಾಗಿದ್ದು ದೇಶ ಎಂಬುದರ ಅರಿವೂ ಚೆನ್ನಾಗಿತ್ತು. ದೇಶದ ಸಲುವಾಗಿಯೇ ತಾನೇ ಗಂಡ ಸತ್ತಿದ್ದು. ತಾನು ಸಂತಾನವಿಲ್ಲದ ವಿಧವೆಯಾಗಿದ್ದು. ಮನೆ, ಸಮಾಜದಲ್ಲಿ ತಿರಸ್ಕಾರದ ವಸ್ತುವಾಗಿದ್ದು.

ಆದರೆ ಅಂಥ ಪರಿಸ್ಥಿತಿಯಲ್ಲೂ ಅವಳ ತ್ಯಾಗವನ್ನು ಅರ್ಥಮಾಡಿಕೊಂಡಿದ್ದ ವ್ಯಕ್ತಿ ಒಬ್ಬನಿದ್ದ. ಆದರೆ ಅವನೂ ಜೈಲಿನಲ್ಲಿದ್ದ. ಅವನಿಗೆ ಗಲ್ಲು ಶಿಕ್ಷೆಯ ಘೊಷಣೆಯಾಗಿತ್ತು. ಅವನೇ ಭಗತ್ ಸಿಂಗ್! ಆ ಸಂದರ್ಭದಲ್ಲಿ ಅವನನ್ನು ಸಂದರ್ಶಿಸಲು ಜೈಲಿಗೆ ಹೋಗಿದ್ದಳು. ಅವಳು ಅವನ ಚಿಕ್ಕಮ್ಮ ತಾನೇ. ಪ್ರೀತಿ ವಾತ್ಸಲ್ಯಗಳಿಂದ ಭಾವನೆಗಳು ತುಂಬಿ ಬಂದು ಬಿಕ್ಕುತ್ತಾ, ‘ಮಗೂ, ಈ ಸರ್ಕಾರ ತುಂಬ ಕ್ರೂರವಾದದ್ದು. ನಿನ್ನನ್ನು ಭಯಂಕರವಾಗಿ ಹಿಂಸಿಸುತ್ತಿದೆಯಲ್ಲವೇ? ಹೇಗಪ್ಪಾ ಆ ಹಿಂಸೆಯನ್ನು ತಡೆದುಕೊಳ್ಳುತ್ತಿದ್ದೀಯಾ?’ ಎಂದು ಕೇಳಿದಳು. ಭಗತ್ ಸಿಂಗ್​ನೂ ಭಾವಗರ್ಭಿತನಾಗಿದ್ದ. ಆದರೆ ಅದು ತನ್ನನ್ನು ಕುರಿತಾಗಿ ಅಲ್ಲ. ಚಿಕ್ಕಮ್ಮನ ಕುರಿತಾಗಿತ್ತು. ‘ಚಿಕ್ಕಮ್ಮಾ, ಈ ಸರ್ಕಾರ ನೀನಿರುವ ಸಮಾಜಕ್ಕಿಂತಲೂ ಕಡಮೆ ಕ್ರೂರತನದ್ದಾಗಿದೆ. ಆದ್ದರಿಂದ ಅದರ ದೌರ್ಜನ್ಯವನ್ನು ತಡೆದುಕೊಳ್ಳುವುದು ನನಗೆ ಅಸಾಧ್ಯವೇನಲ್ಲ. ಆದರೆ ನೀನು ಈ ಸಮಾಜದ ಕ್ರೌರ್ಯವನ್ನು ಹೇಗೆ ತಡೆದುಕೊಳ್ಳುತ್ತಿರುವೆ?’ ಎಂದು ಪ್ರಶ್ನಿಸಿದ್ದ. ಮೌನವೇ ಅವಳ ಉತ್ತರವಾಗಿತ್ತು.

ಗಂಡ ಸ್ವರ್ಣ ಸಿಂಹ ಹುತಾತ್ಮನಾಗಿ ಐವತ್ತಾರು ವರ್ಷಗಳು ಕಳೆದಿದ್ದವು. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಂಶಯಾಸ್ಪದ ಮರಣವಾಗಿ ಮೂರು ದಿನ ಮಾತ್ರ ಕಳೆದಿತ್ತು. 1966ರ ಜನವರಿ 14ರಂದು ಹುಕುಮ್ ಕೌರ್​ಳ 56 ವರ್ಷಗಳ ನರಕಸದೃಶ ಬಾಳಿಗೆ ಅಂತ್ಯ ದೊರೆತಿತ್ತು. ಅವಳೂ ದೇಶದ ಸ್ವಾತಂತ್ರ್ಯಯಜ್ಞದಲ್ಲಿ ಅರ್ಪಿತವಾದ ಒಂದು ಸಮಿತ್ತಲ್ಲವೆ?

ಕೃಪೆ:ಡಾ.ಬಾಬು ಕೃಷ್ಣ ಮೂರ್ತಿ.                    ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059