ದಿನಕ್ಕೊಂದು ಕಥೆ 849
*🌻ದಿನಕ್ಕೊಂದು ಕಥೆ🌻 ಕ್ಷಮಾಗುಣದ ಮಹತ್ವ* ಸಂತ ಸಮರ್ಥ ರಾಮದಾಸರು ಒಮ್ಮೆ ಪ್ರಿಯಶಿಷ್ಯ ಶಿವಾಜಿಯ ಕುಶಲ ವಿಚಾರಿಸಲು ಶಿಷ್ಯರೊಂದಿಗೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದರು. ಬೇಸಿಗೆಯ ಪ್ರಖರ ಬಿಸಿಲು ಸುಡುತ್ತಿತ್ತು. ಜತೆಗೆ ಬಾಯಾರಿಕೆಯಿಂದ ಬಸವಳಿದು ಬೆಂಡಾದ ಶಿಷ್ಯರಿಗೆ ಹಾದಿಯ ಅಕ್ಕಪಕ್ಕ ಸಮೃದ್ಧವಾಗಿ ಬೆಳೆದಿದ್ದ ಕಬ್ಬಿನ ಗದ್ದೆ ಕಂಡಿತು. ನಿಧಿಯೇ ಸಿಕ್ಕಂತಾಗಿ ಗದ್ದೆಗೆ ನುಗ್ಗಿ ಸಾಕಷ್ಟು ಕಬ್ಬು ಕಿತ್ತು ರಸ ಹೀರಿದರು. ಇನ್ನೇನು ಅಲ್ಲಿಂದ ಕಾಲ್ತೆಗೆಯಬೇಕು ಎನ್ನುವಾಗ, ಕಬ್ಬಿನ ಗದ್ದೆಯ ಮಾಲೀಕ ಆಗಮಿಸಿದ. ಅಪ್ಪಣೆಯಿಲ್ಲದೆ ನುಗ್ಗಿದ್ದು ಮಾತ್ರವಲ್ಲದೆ ಕಬ್ಬನ್ನು ಮನಸೋಇಚ್ಛೆ ಕಿತ್ತಿದ್ದಕ್ಕಾಗಿ ರಾಮದಾಸರೂ ಸೇರಿದಂತೆ ಎಲ್ಲ ಶಿಷ್ಯರಿಗೂ ತನ್ನ ಆಳುಗಳ ಮೂಲಕ ಥಳಿಸಿದ. ಕೆಲ ಹೊತ್ತಿನ ನಂತರ ಅವರೆಲ್ಲ ಶಿವಾಜಿಯ ಅರಮನೆ ತಲುಪಿದರು. ಎಲ್ಲರನ್ನೂ ಸ್ವಾಗತಿಸಿದ ಶಿವಾಜಿ, ಸಮರ್ಥ ರಾಮದಾಸರಿಗೆ ಸ್ವತಃ ಎಣ್ಣೆ ಹಚ್ಚಿ ಅಭ್ಯಂಜನ ಮಾಡಿಸಲು ಮುಂದಾದಾಗ, ಅವರ ಮೈಮೇಲಿನ ಬಾಸುಂಡೆಗಳನ್ನು ಕಂಡು ದಿಗ್ಭŠಮೆಗೊಂಡ. ಶಿಷ್ಯರಿಂದ ವಿಷಯ ತಿಳಿದು ಕಬ್ಬಿನ ಗದ್ದೆಯ ಮಾಲೀಕನನ್ನು ಆಸ್ಥಾನಕ್ಕೆ ಕರೆಸಿದ. ತನ್ನಿಂದ ಥಳಿತಕ್ಕೊಳಗಾದ ಸ್ವಾಮೀಜಿ ಮತ್ತು ಶಿಷ್ಯರು ಶಿವಾಜಿಯಿಂದ ಗೌರವಿಸಲ್ಪಡುತ್ತಿರುವುದನ್ನು ಕಂಡು ಕಂಗಾಲಾದ ಆತ, ತನ್ನ ತಪ್ಪನ್ನು ಕ್ಷಮಿಸುವಂತೆ ರಾಮದಾಸರಲ್ಲಿ, ಶಿವಾಜಿಯಲ್ಲಿ ಮೊರೆಯಿಟ್ಟ.