ದಿನಕ್ಕೊಂದು ಕಥೆ 846

*🌻ದಿನಕ್ಕೊಂದು ಕಥೆ🌻                                         ಅಹಂಕಾರ ಸಲ್ಲ*

ರಾಜಸೂಯ ಯಾಗ ಆಗಷ್ಟೇ ಸಂಪನ್ನಗೊಂಡಿತ್ತು. ‘ಇಂಥ ಯಾಗವನ್ನು ಹಿಂದೆ ಯಾರೂ ಮಾಡಿಲ್ಲ, ಭವಿಷ್ಯದಲ್ಲೂ ಇದು ಶಕ್ಯವಿಲ್ಲ’ ಎಂಬ ಅಹಂಕಾರ ಅರ್ಜುನನ ತಲೆಗೇರಿತ್ತು. ಇದೇ ಗ್ರಹಿಕೆಯಲ್ಲಿ ಆತ ಹಸ್ತಿನಾವತಿಯಿಂದ ತೆರಳುತ್ತಿದ್ದಾಗ, ಬೆಂಕಿ ಅದಾಗಲೇ ಶಮನಗೊಂಡಿದ್ದ ಯಜ್ಞಕುಂಡದ ಮೇಲೆ ಮುಂಗುಸಿಯೊಂದು ಹೊರಳಾಡುತ್ತ, ‘ಇದೇನು ಮಹಾಯಜ್ಞವೋ…!’ ಎಂದು ಜರಿಯುತ್ತಿತ್ತು. ಅಚ್ಚರಿಗೊಂಡ ಅರ್ಜುನ, ‘ಇದಕ್ಕಿಂತ ದೊಡ್ಡ ಯಜ್ಞವನ್ನು ಹಿಂದೆ ನೋಡಿದ್ದೆಯಾ?’ ಎಂದು ಕೇಳಿದಾಗ ಆ ಮುಂಗುಸಿ, ‘ನೋಡಿದ್ದೆ; ಆದರೆ ಅದನ್ನು ಮಾಡಿದ್ದು ರಾಜನಲ್ಲ, ಓರ್ವ ಬಡವ’ ಎನ್ನುತ್ತ, ಆ ಕತೆ ಹೇಳಲು ಮುಂದಾಯಿತು-

‘ಬಡವನೊಬ್ಬ ಬೆವರು ಸುರಿಸಿ ದುಡಿದು ತಂದಿದ್ದ ಸ್ವಲ್ಪವೇ ಅಕ್ಕಿಯಿಂದ ಅನ್ನ ಮಾಡಿ ಇನ್ನೇನು ಕುಟುಂಬಿಕರೊಡನೆ ಉಣ್ಣಬೇಕೆನ್ನುವಷ್ಟರಲ್ಲಿ, ಅತಿಥಿಯೊಬ್ಬ ಬಂದು ‘ಉಪವಾಸದಿಂದ ಕಂಗೆಟ್ಟಿದ್ದೇನೆ, ಹಸಿವುನೀಗಿ’ ಎಂದು ಬೇಡಿಕೊಂಡ. ಆಗ ಬಡವನ ಮನ ಕರಗಿ, ತನ್ನ ಪಾಲಿನ ಅನ್ನವನ್ನು ನೀಡಿದ. ಆದರೆ ಅತಿಥಿಗೆ ಅಷ್ಟು ಸಾಕಾಗಲಿಲ್ಲವಾದ್ದರಿಂದ, ಅವನ ಹೆಂಡತಿ, ಮಕ್ಕಳು ಕೂಡ ತಮ್ಮ ಪಾಲಿನ ಅನ್ನವನ್ನು ಅತಿಥಿಗೆ ನೀಡಿ ಸತ್ಕರಿಸಿದರು. ಉಂಡು ಸಂತೃಪ್ತನಾದ ಅತಿಥಿ, ಮನಸಾರೆ ಹರಸಿದ. ಬಡವನ ಪ್ರಾಮಾಣಿಕ ದುಡಿಮೆಯ ಫಲದ ಜತೆಗೆ ಅತಿಥಿಯ ಹರಕೆಯ ಫಲವೂ ಸೇರಿಕೊಂಡಿದ್ದಕ್ಕೋ ಏನೋ, ಈ ಕುಟುಂಬದಲ್ಲಿ ಅನ್ನ ಅಕ್ಷಯವಾಗಲಾರಂಭಿಸಿತು. ಹಾಗಂತ ತಾವು ಮಾತ್ರ ಸೇವಿಸದೆ, ದುರ್ಬಲರು, ಅಸಹಾಯಕರು, ಬಡವರ ಹಸಿವು ನೀಗುವಂಥ ಅನ್ನದಾನಕ್ಕೆ ಅವರು ಮುಂದಾದರು, ಯಜ್ಞದೋಪಾದಿಯಲ್ಲಿ ಅದನ್ನು ನಡೆಸತೊಡಗಿದರು. ಕೆಲ ಕಾಲದ ನಂತರ ಆ ಯಜಮಾನ ಅಸುನೀಗಿದ; ಪಾರ್ಥಿವಶರೀರಕ್ಕೆ ಅಗ್ನಿಸ್ಪರ್ಶವಾಯಿತು, ಬೂದಿ ಜಮೆಯಾಯಿತು. ಒಮ್ಮೆ ನಾನು ಈ ಮಾರ್ಗದಲ್ಲಿ ಹೋಗುವಾಗ ಮೈಯೆಲ್ಲ ನವೆಯಾಗಲು ಶುರುವಾಯಿತು. ಆಗ ಈ ಬೂದಿಯ ಮೇಲೆ ಹೊರಳಾಡಲಾಗಿ, ಅದು ತಾಕಿದ ಭಾಗದಲ್ಲಿ ನನ್ನ ಮೈ ಹೊಂಬಣ್ಣಕ್ಕೆ ತಿರುಗಿತ್ತು, ಆದರೆ ಬಾಲದ ಭಾಗಕ್ಕೆ ಬೂದಿ ತಾಕಿರಲಿಲ್ಲ….’ ಎಂದು ಹೇಳಿದ ಮುಂಗುಸಿ ಕತೆ ನಿಲ್ಲಿಸಿ ಅರ್ಜುನನ ಮುಖ ನೋಡಿತು. ಅರ್ಜುನ ‘ಮುಂದೇನಾಯಿತು?’ ಎಂದಾಗ ಮುಂಗುಸಿ, ‘ಅಂದಿನಿಂದ ಬಾಲವನ್ನು ಹೊಂಬಣ್ಣಕ್ಕೆ ಬದಲಿಸಲು ಯತ್ನಿಸಿ ವಿಫಲನಾಗುತ್ತಿದ್ದೆ. ನೀವೆಲ್ಲ ರಾಜಸೂಯ ಯಾಗ ಮಾಡಿದ ಸುದ್ದಿ ಕೇಳಿ, ನಿಮ್ಮಂಥ ಧರ್ಮತ್ಮರು ಮಾಡಿದ ಯಾಗದ ಭೂಮಿಯಲ್ಲಿ ಹೊರಳಾಡಿದರೆ ನನ್ನಾಸೆ ನೆರವೇರೀತು ಎಂದು ಭಾವಿಸಿದ್ದೆ; ಆದರೆ ಎಷ್ಟು ಹೊರಳಾಡಿದರೂ ಪ್ರಯೋಜನವಾಗಲಿಲ್ಲ…’ ಎಂದು ಕೊರಗಿತು. ಅರ್ಜುನನಿಗೆ ತನ್ನ ತಪ್ಪಿನ ಅರಿವಾಯಿತು. ನಮ್ಮಿಂದ ಪರರಿಗಾದ ಸಹಾಯವಾಗಲೀ, ದಾನವಾಗಲೀ ಯಾವ ಪ್ರಮಾಣದಲ್ಲಿತ್ತು ಎಂಬುದು ಮುಖ್ಯವಲ್ಲ; ಅದರ ಹಿಂದಿನ ಮನೋಭಾವ ಮುಖ್ಯ. ಸಂಪನ್ಮೂಲ ಹೆಚ್ಚಿರುವವರು ಹೆಚ್ಚು ನೀಡಿದರೆ, ಕಡಿಮೆ ಇರುವವರು ಶಕ್ತ್ಯಾನುಸಾರ ನೀಡುತ್ತಾರೆ. ಹೆಚ್ಚು ಕೊಟ್ಟವರು ಮೇಲು, ಕಡಿಮೆ ಕೊಟ್ಟವರು ಕೀಳು ಎಂದೇನಲ್ಲ. ನೀಡುವವರ ಶ್ರಮ, ಮಾನವೀಯತೆ, ತ್ಯಾಗ ಮನೋಭಾವವನ್ನು ಗೌರವಿಸಬೇಕು.

ಕೃಪೆ: ಶಿಲ್ಪಾ ಕುಲಕರ್ಣಿ.                             ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097